Article

ಯಂಡಮೂರಿಯ ಸ್ಥಾಯಿ ಭಾವ `ಆನಂದೋ ಬ್ರಹ್ಮ'

"ಮನುಷ್ಯ ಈಗಲೂ ತನ್ನ ಮನಸಿನ ಒಂದು ಭಾಗವನ್ನು ಅಪ್ಯಾಯತೆಗೋಸ್ಕರ ಕಾದಿರಿಸಿಕೊಂಡಿದ್ದಾನೆ. ಸಾಹಿತ್ಯ, ಫಿಕ್ಷನ್ ಗಳನ್ನು ಓದುವುದರಿಂದ ಆ ಮೌಲ್ಯಗಳನ್ನು ತೃಪ್ತಿಪಡಿಸಿಕೊಳ್ಳುತ್ತಿದ್ದಾನೆ. ಆದರಿಂದಲೇ ಉಳಿದೆಲ್ಲಾ ವಿಷಯಗಳೂ ಎಲ್ಲ ಬಗೆಯ ವೇಗದಿಂದ ಮುಂದೂಡಿತ್ತಿದ್ದರೂ ಸಾಹಿತ್ಯವೊಂದೇ ಸ್ಥಾಯಿಯಾಗಿದೆ."

-ಯಂಡಮೂರಿ ವೀರೇಂದ್ರನಾಥ್ 

ಒಬ್ಬ ಲೇಖಕ ತಾನು ಬರೆದ ಕೆಲವು ಕೃತಿಗಳನ್ನು ಮಾತ್ರ ಇಷ್ಟಪಡುತ್ತಾನೆ. ಹಾಗೆಯೇ ತೆಲುಗಿನ ಸುಪ್ರಸಿದ್ಧ ಕಾದಂಬರಿಕಾರ ಯಂಡಮೂರಿ ತುಂಬಾ ಇಷ್ಟಪಟ್ಟ ಕಾದಂಬರಿ "ಆನಂದೋ ಬ್ರಹ್ಮ".

ತಮ್ಮ ಮೂಲ ವೃತ್ತಿಗಿಂತ ಪ್ರವೃತ್ತಿಯಿಂದ ಜಗದ್ವಿಖ್ಯಾತರಾದ ಯಂಡಮೂರಿ ಜಗದ ಸಾರಸ್ವತ ಲೋಕಕ್ಕೆ ಚಿರಪರಿಚಿತ. ಕೋಟ್ಯಂತರ ಓದುಗರನ್ನು ಸೃಷ್ಟಿಸಿಕೊಂಡ ಹೆಗ್ಗಳಿಕೆ. ಕಾದಂಬರಿ ಗುಣಮಟ್ಟ ಮತ್ತು ಮೌಲ್ಯಗಳ ಆಚೆಗೆ ಸೃಷ್ಟಿ ಮಾಡಿಕೊಂಡ ಓದುಗ ಪಡೆ ಅವಿಸ್ಮರಣೀಯ.

ಜನಪ್ರಿಯತೆಯ ವ್ಯಾಪ್ತಿ ಹೆಚ್ಚಾದಂತೆ ಮೌಲ್ಯ ಕುಸಿಯಬಹುದು ಅಥವಾ ಬರಹಗಾರ ಖಾಲಿಯಾಗಬಹುದು. ಕಾಲಕ್ಕೆ ಅನುಗುಣವಾಗಿ ಕಾದಂಬರಿಯಿಂದ ಜೀವನಶೈಲಿ ನಿರ್ವಹಣೆ ಮತ್ತು ವ್ಯಕ್ತಿತ್ವ ವಿಕಸನ ಪುಸ್ತಕ ಮತ್ತು ತರಬೇತಿ ಮೂಲಕ ಯಂಡಮೂರಿ ತಮ್ಮ ಅಸ್ಮಿತೆ ಉಳಿಸಿಕೊಂಡಿದ್ದಾರೆ. 

ಇಂದು ಅವರ ಈ ಜನಪ್ರಿಯ ಕಾದಂಬರಿಯನ್ನು ಎಂದಿನಂತೆ ಒಂದೇ ಓದಿಗೆ ಮುಗಿಸಿದೆ; ಹಾಗೆ ಓದಿಸಿಕೊಂಡು ಹೋಗುವ ಗುಣವೂ ಇದ್ದೇ ಇದೆ.  ಎರಡುನೂರಾ ಐವತ್ತು ಪುಟದ ಕಾದಂಬರಿಯ ಮೂಲ ದ್ರವ್ಯ ನಿಷ್ಕಲ್ಮಶ ಪ್ರೇಮ. ಈ ತರಹದ ನೂರಾರು ಕಾದಂಬರಿಗಳು ಬಂದಿವೆಯಾದರೂ ಸರಳ ನಿರೂಪಣೆಯ ಕಥಾಹಂದರ ಮತ್ತು ಕಾವ್ಯಾತ್ಮಕ ಭಾಷೆಯಿಂದ ಇದು ಹೆಚ್ಚು ಪ್ರಸ್ತುತ ಅನಿಸುತ್ತದೆ.

ಮೂರು ದಶಕ ಕಳೆದ ಮೇಲೆ ಮನುಷ್ಯ ಸಂಪೂರ್ಣ ಟೆಕ್ನಾಲಜಿ ದಾಸನಾಗುತ್ತಾನೆ ಎಂಬ ಕಾಲ್ಪನಿಗೆ ಹೊಸ ಜಗತ್ತಿನಿಂದ ಆರಂಭವಾಗುವ ಕಾದಂಬರಿ, ತನ್ನ ಉತ್ತರಾರ್ಧದಲ್ಲಿ ಇಪ್ಪತ್ತನೇ ಶತಮಾನದ ಪ್ರೀತಿಗೆ ತೆರಳಿದಾಗ ಯಂಡಮೂರಿ ಹೇಳಿದ ಮೇಲಿನ ಸಾಲುಗಳು ಮಹತ್ವ ಪಡೆಯುತ್ತವೆ.

ಮನುಷ್ಯ ಎಷ್ಟೇ ಟೆಕ್ನಾಲಜಿ ಬಳಸಿದರೂ ಅವನಿಗೆ ನಿಜವಾದ ಆನಂದ ಸಿಗುವುದು ಸಂಗೀತ, ಸಾಹಿತ್ಯ ಮತ್ತು ಸಿನೆಮಾದಂತಹ ಕಾಲ್ಪನಿಕ ಲೋಕದ ಫಿಕ್ಷನ್ ಮೂಲಕ ಮಾತ್ರ. ಈಗ ಕೊರೋನಾ ನೆಪದಲ್ಲಿ ಮನೆ ಹಿಡಿದಿರುವ ಅನೇಕರು ಹಾಡು ಕೇಳುತ್ತಾರೆ,ಹಳೆ ಸಿನೆಮಾ ನೋಡುತ್ತಾರೆ. 
ಬೆಲೆ ಬಾಳುವ ಯಾವುದೇ ವೈಜ್ಞಾನಿಕ ಗೆಜೆಟ್ಟು ಸಾಧನಗಳು, ಐಷಾರಾಮಿ ವಸ್ತುಗಳು ಪ್ರಯೋಜನಕ್ಕೆ ಬರುತ್ತಿಲ್ಲ.

ಯಂಡಮೂರಿ ಹೇಳಿದ ಹಾಗೆ ಸಂಗೀತ ಮತ್ತು ಸಾಹಿತ್ಯ ತನ್ನ ವೇಗ ಹೆಚ್ಚಿಸಿಕೊಳ್ಳದೆ ಸ್ಥಾಯಿ ಭಾವ ಉಳಿಸಿಕೊಂಡು‌ ಮನುಷ್ಯನ ನೆಮ್ಮದಿಯ ಪ್ರಬಲ ಅಸ್ತ್ರಗಳಾಗಿ ನಿರಂತರ ಖುಷಿ ಕೊಡುತ್ತವೆ. 

ಓದುವ, ಬರೆಯುವ, ಸಂಗೀತ ಆಲಿಸುವ ಹವ್ಯಾಸ ಇಲ್ಲದವರಿಗೆ ಈಗ ತಲೆ ಕೆಟ್ಟು ಹೋಗಿ ಮನೋವೇದನೆಗೆ ಒಳಗಾಗುತ್ತಿದ್ದಾರೆ. ಕ್ರಿಯೇಟಿವ್ ವ್ಯಕ್ತಿ ಮಾತ್ರ ಏಕಾಂತವನ್ನು ಸಂಭ್ರಮಿಸಬಲ್ಲ.

ಸಾಂಸ್ಕೃತಿಕ ಹುಚ್ಚಿನ ಮಹತ್ವ ಅರ್ಥವಾಗುವ ಹೊತ್ತಿನಲ್ಲಿ ಯಂಡಮೂರಿ ಅವರ ಸಾಲುಗಳು ಮನೋಜ್ಞ ಎನಿಸಿದವು.
ಕೇವಲ ವೈಭೋಗ, ಐಷಾರಾಮಿ ವಸ್ತುಗಳು ಮತ್ತು ಭೌತಿಕ ಸಾಧನಗಳು ನಮ್ಮನ್ನು ಖುಷಿಯಾಗಿ ಇಡಬಲ್ಲವು ಎಂಬ ಭ್ರಮೆ ಬಿಟ್ಟು ಅದರಾಚೆಗಿನ ಸೌಂದರ್ಯ ಅನುಭವಿಸಿ ಅರಿಯಲಿದು ಸಕಾಲ.
ಆನಂದೋ ಬ್ರಹ್ಮವನ್ನು ಸುಂದರವಾಗಿ ಕನ್ನಡಿಕರಿಸಿದ್ದಾರೆ ವಂಶಿ.

ಸಿದ್ದು ಯಾಪಲಪರವಿ