ನಾನು ಎರಡು ನದಿಗಳ ಊರಿನಿಂದ ಬಂದವನು. ಒಂದೇ ಪ್ರದೇಶದ ಎರಡು ನದಿಗಳ ಅಂಚಿನ ಜನಜೀವನದ ವೈವಿಧ್ಯ ನನಗೆ ಒಂಚೂರು ಗೊತ್ತು. ತೇಜೋ- ತುಂಗಭದ್ರಾ ಎಂಬ ಒಂದಕ್ಕೊಂದು ಸಂಬಂಧವಿಲ್ಲದೇ ಸಂಬಂಧಿಸಿದ ಎರಡು ತೋಳುಗಳ ನಡುವೆ ಅದೆಷ್ಟು ಕತೆಗಳು, ಅದೆಷ್ಟು ಕಾವ್ಯ, ಎಷ್ಟೊಂದು ಹಸಿವು ಮತ್ತು ಸಂಭ್ರಮ.
ಇಂಥ ಸುರಳೀತ ಸಾಗುವ ಕೃತಿಯೊಂದನ್ನು ಓದಿ ಬಹಳ ವರ್ಷಗಳೇ ಆಗಿದ್ದವು. ಇತ್ತಿತ್ತಲಾಗಿ ನಾನು ವಾಸ್ತವವಾದಿ ಕಾದಂಬರಿಗಳನ್ನು ಓದುವುದನ್ನೇ ಬಿಟ್ಟಿದ್ದೆ. ಚರಿತ್ರೆಯ ಕತೆಗಳನ್ನೂ ಓದುತ್ತಿರಲಿಲ್ಲ. ಅದೇ ಚಾಳಿ ಮುಂದುವರಿಸಿದ್ದರೆ ನಾನು ಈ ಕಾದಂಬರಿ ಕೊಟ್ಟಿರುವ ಸಂತೋಷವನ್ನು ಕಳೆದುಕೊಳ್ಳುತ್ತಿದ್ದೆ.
ಸುದೀರ್ಘ ವಿವರಣೆಗೆ ಅಂಜುವ ನಾನು, ಎಲ್ಲವನ್ನೂ ಕ್ಲುಪ್ತವಾಗಿ ಹೇಳಬೇಕು, ಬ್ರೀವಿಟಿ ಈಸ್ ದಿ ಆರ್ಡರ್ ಆಫ್ ದಿ ಡೇ ಎಂದು ಭಾವಿಸುವ ನಾನು, ನೀವು ಸಾವಧಾನವಾಗಿ ವಿವರಿಸುವ ಶೈಲಿಗೆ ಮತ್ತು ಧೈರ್ಯಕ್ಕೆ ಮನಸೋತಿದ್ದೇನೆ.
ಒಂದು ಪಾತ್ರವನ್ನು ಬೆನ್ನಟ್ಟಿಕೊಂಡು ಹೋಗಿ ಅವನಿಗೊಂದು ಗತಿ ಕಾಣಿಸುವುದು ಕಾದಂಬರಿ ಅನ್ನುತ್ತಾರೆ. ನೀವಿಲ್ಲಿ ಯಾರನ್ನು ಬೆನ್ನತ್ತಿಕೊಂಡು ಹೋಗಿದ್ದೀರಿ ಎಂದು ಹುಡುಕಾಡಿದೆ. ನಿಜವಾಗಿಯೂ ನೀವು ಬಲೆ ಬೀಸಿರುವುದು ಕಾಲಕ್ಕೆ. ಒಂದು ಕಾಲಾವಧಿಯಲ್ಲಿ ನಡೆದ ಘಟನೆಗಳನ್ನು ಕಲ್ಪಿಸಿಕೊಂಡೂ, ನಡೆಯದ ಘಟನೆಗಳನ್ನು ನಡೆದಂತೆಯೂ ಬರೆದಿರುವ ರೀತಿ ನನ್ನನ್ನು ಮರುಳುಗೊಳಿಸಿದೆ.
ಈ ಸುದೀರ್ಘ ಓದು ಒದಗಿಸಿರುವ ಧ್ಯಾನಸ್ಥ ಸ್ಥಿತಿಯಲ್ಲಿ ನಾನು ಇನ್ನೇನಾದರೂ ಬರೆಯಬಹುದೇನೋ ಎಂಬ ಸಣ್ಣ ಆಸೆ ಹುಟ್ಟಿದೆ.
ಈ ನಿಮ್ಮ ಕಾದಂಬರಿಯಿಂದಾಗಿ ನಾನು ಅರ್ಧ ಓದಿ ನಿಲ್ಲಿಸಿರುವ, ಇನ್ನೂ ಮುಟ್ಟದೇ ಇರುವ, ಕೈಗೆತ್ತಿಕೊಳ್ಳಲು ಅಂಜುತ್ತಿರುವ ಕೆಲವು ಪುಸ್ತಕಗಳನ್ನು ಓದುವುದಕ್ಕೂ ಸ್ಪೂರ್ತಿ ದೊರಕಿದೆ.
ನೀವು ಇದರ ಮಾರಾಟದಲ್ಲಂತೂ ಕನ್ನಡ ಕಾದಂಬರಿ ಜಗತ್ತನ್ನು ಒಂದು ಮೆಟ್ಟಲು ಮೇಲೆ ಏರುವಂತೆ ಮಾಡಿದ್ದೀರಿ. ಯಾರೇ ಕನ್ನಡಕ್ಕೆ ಓದುಗರನ್ನು ತಂದುಕೊಟ್ಟರೂ ಅದರಿಂದ ಕನ್ನಡಕ್ಕೇ ಲಾಭ.
ನಿಮಗೆ ಕೃತಜ್ಞತೆ, ಪ್ರೀತಿ ಮತ್ತು ಮತ್ತೆ ದೇವುಡು ನರಸಿಂಹ ಶಾಸ್ತ್ರಿಗಳನ್ನು ನಿಮ್ಮ ಗದ್ಯದಲ್ಲಿ ಕಣ್ಮುಂದೆ ತಂದಿದ್ದಕ್ಕಾಗಿ ನಮಸ್ಕಾರ.
ಮರೆತ ಮಾತು: ನಿಮ್ಮ ಅಧ್ಯಯನಶೀಲತೆ, ಮಾಡಿಟ್ಟುಕೊಂಡ ಟಿಪ್ಪಣಿ, ಓದು ಮತ್ತು ಸಂಯಮ ನನಗಿಷ್ಟವಾಯಿತು. ನಾನೂ ಅವನ್ನೆಲ್ಲ ರೂಢಿಸಿಕೊಳ್ಳಬೇಕಿದೆ.
ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಬುಕ್ ಬ್ರಹ್ಮಗೆ ಭೇಟಿ ನೀಡಿ : ತೇಜೋ ತುಂಗಭದ್ರಾ