Article

ನೋ  ಪ್ರೆಸೆಂಟ್ಸ್  ಪ್ಲೀಸ್....

ನಾನು ಎಂದೂ ನೋಡಿರದ ಶಹರ. ಅಪ್ಪನನ್ನು ಹಗಲು ರಾತ್ರಿಗಳೆನ್ನದೆ ದುಡಿಸಿಕೊಂಡು ಕಿಸೆಗೊಂದಿಷ್ಟು ಕಾಸು ತುರುಕಿ ನಕ್ಕ ಊರು. ಅಂತಹದೊಂದು ದೊಡ್ಡ ನಗರ ಬೆಳಗಾದರೆ ಸಾಕು ಬದುಕಿನ ಕುರಿತ ಕಥೆಗಳು ಹೇಳಲು ತುದಿಗಾಲಂಚಲಿ ನಿಂತುಬಿಟ್ಟಿರುತ್ತೆ. ಅಂತಹ ದೊಡ್ಡ ನಗರದ ಎತ್ತರೆತ್ತರದ ಕಟ್ಟಡಗಳ ಹತ್ತಿರದ ಜೋಪಡಿಯಂತಹ ಮುಂಬೈನ ಕಥೆ ಹೇಳಲು ಹೊರಟಿದ್ದು ಕಾಯ್ಕಿಣಿ.!

ಜಯಂತ ಕಾಯ್ಕಿಣಿ... ಅವರು ತಮ್ಮ ಪ್ರತಿ ಪುಸ್ತಕದ ಅರ್ಪಣೆಯೇ ವಿಶಿಷ್ಟ ಶೈಲಿಯಲ್ಲಿ ಬರೆದುಬಿಡುತ್ತಾರೆ. ಓದುಗರನ್ನು ಹಿಡಿದು ಕೂರಿಸುವ ತಾಕತ್ತು ಅಲ್ಲಿಂದಲೆ ಹುಟ್ಟಿರುತ್ತೆ!

 

ಸಿಂಗಲ್ ಚಹಾದ ಜೊತೆ

ಯಥೇಚ್ಛ ಗಾಳಿ ಬೆಳಕು ನೀಡಿ

ಎಷ್ಟು ಹೊತ್ತು ಕೂತರು ಸಹನೆಯಿಂದ ಸಲಹಿದ

ಮುಂಬಯಿಯ ಬೀದಿಗಳ ಕೂಟಸ್ಥಾನಗಳ

ತೆರೆದ ಕಣ್ಣುಗಳಂತಿದ್ದ ಇರಾಣಿ ಹೋಟೆಲುಗಳಿಗೆ

ಹೀಗೊಂದು ಆಕರ್ಷಣೆಯ ಒಕ್ಕಣೆ ಶುರುವಾಗೋದು ನೋ  ಪ್ರೆಸೆಂಟ್ಸ್  ಪ್ಲೀಸ್ ಪುಸ್ತಕದಲ್ಲಿ...

ಒಟ್ಟಾರೆ 16 ಕಥೆಗಳ ಗುಚ್ಚ ಒಂದೊಂದು ಎದೆಗಿಳಿಯುವಂತ ಅಂತಃಕರಣ ತುಂಬಿದಂತವು.! ಋತುಚಕ್ರಗಳ ಅಂಚಲ್ಲಿರುವ ಒಂದು ಹೆಣ್ಣಿನ ಕನ್ಯತ್ವದ ಸರ್ಟಿಫಿಕೇಟ್ ಹಿಡಿದುಕೊಂಡು ಕನ್ನಡಿ ಇಲ್ಲದ ಊರಲ್ಲಿ ಮದುವೆ ಆಗದ ಬ್ಯಾಚುಲರ್ ರೂಮಿಗೆ ಬರುವ ವಯಸ್ಸಾದ ತಂದೆಯ ಅಳಲು ಓದುಗನಲ್ಲಿ ತಳಮಳ ಸೃಷ್ಟಿಸುತ್ತದೆ. ಯಾವಾಗಲೊ ಫೋಟೊ ಒಂದಕ್ಕೆ ಫ್ರೇಮ್ ಹಾಕಲು ಕೊಟ್ಟವರು ತಿಂಗಳುಗಳುರುಳಿದರು ಮರುಳದೆ ಇದ್ದಾಗ ಅದನ್ನು ಅವರಿಗೆ ತಲುಪಿಸಲು ಅಂಗಡಿಯವನ ಪ್ರೀತಿ - ಕಾಳಜಿ - ಕಾರ್ಯನಿಷ್ಠೆ - ಚಡಪಡಿಕೆ ಓದುಗನನ್ನು ಆವರಿಸಿಬಿಡುತ್ತದೆ.!

ಒಪೆರಾ ಹೌಸ್...

ಚಿತ್ರಮಂದಿರದೊಳಗಿನ ರಾತ್ರಿ ಎಲ್ಲಾ ಶೋ ಮುಗಿದ ಮೇಲೆ ಸುಮ್ಮನೆ ಹಳದಿ ಬೆಳಕಿನ ಬೀದಿಗಳಲ್ಲಿ ನಡೆಯುವ ಇಂದ್ರನೀಲನಿಗೆ ಇಡೀ ಮುಂಬೈ ಶಹರ ಮಕ್ಕಳನ್ನು ತೊಡೆಯ ಮೆಲೆ ಮಲಗಿಸಿಕೊಂಡು ತಾನು ಮಾತ್ರ ಎಚ್ಚರದಿಂದ ಕಾಯುತ್ತ ಕೂತ ತಾಯಿಯಂತೆ ತೋರುವುದು. ಆ ಚಿತ್ರಮಂದಿರದಲ್ಲಿ ಸಿಕ್ಕ ಪ್ಲಾಸ್ಕಿನ ಒಳಗತ್ತಲನು ನೀಲಿ ಜ್ವಾಲೆಯ ಹೂಗಳ ಮೇಲೆ ಕುದಿಸಿ ಆಕಾಶದೆತ್ತರದಿಂದ ಸುರಿದ ಚಹಾ ಆಕ್ರಮಿಸಿದಾಗ ಅವನಲ್ಲಿ ಎಂಥದೊ ಉತ್ಸಾಹ ಕುತೂಹಲದ ಮೂಟೆ ಬಿಚ್ಚಿಕೊಳ್ಳುವಿಕೆ ಓದುಗನನ್ನು ಆಕರ್ಷಿಸುತ್ತದೆ.

ಕೂದಲಿನ...ಸುರುಳಿಯಂಥ ಕತ್ತಲನ್ನು ಒದೆಯುತ್ತ ನೂರಾರು ಹಳದಿ ಬೀದಿ ದೀಪಗಳ ಕೆಳಗೆ ದಿನಾ ಬೆಳಗಾದರೆ ಬೂಟ್ ಪಾಲಿಶ್ ಮಾಡುವವರು , ಪೋಸ್ಟರ್ ಹಚ್ಚುವವನ ಏಣಿ ಹಿಡಿದವರು , ಭೇಲಪುರಿ ಆಮ್ಲೆಟ್ ಗಾಡಿಗಳಿಗೆ ಕೂಗಿ ಕರೆಯುವರು , ರಾತ್ರಿ ಚಿಟ್ಟೆಗಳು , ಜೀರುಂಡೆಗಳು , ಮಿಂಚು ಹುಳುಗಳು , ಬಾರೀಕು ಚಂದ್ರಮನನ್ನು ಹಿಂಜುವ ಮೋಡಗಳು ,  ರೈಲಿನೊಳಗಿನ ಅಸಂಖ್ಯಾ ಚಹರೆಗಳು , ನಿಗೂಢ ನಸುಕನ್ನು ಸೀಳಿ ಹೋಗುವ ತೂಫಾನ್ ಮೇಲ್ ಎಲ್ಲರನ್ನೂ ಒಂದಿಲ್ಲ ಒಂದು ರೀತಿ ಬೆಸೆಯುವುದು ಈ ಬೆಳಗು. ಈ ನಗರದ ತಿರುವುಗಳಲ್ಲಿ ನಡೆಯುವ ಇವರಿಗೆ ಎಷ್ಟೊ ವರ್ಷಗಳ ಜತೆಗಿದ್ದಂತಿದ್ದ ಸಲುಗೆಯ ದಣಿವು ಇದೆ‌.  ಹೀಗೆ ಇವರೆಲ್ಲ ಎಷ್ಟೆಲ್ಲ ವರುಷಗಳಿಂದ ಗೊತ್ತಿರದೆಯೂ ಗೊತ್ತಿದ್ದಂತಿದ್ದವರು ಅಥವಾ ಗೊತ್ತಿದ್ದೂ ಗೊತ್ತಿರದಂತಿದ್ದವರು.

ಖೇದ ಮತ್ತು ಕ್ರೋಧದ ನಡುವೆ ಅಂತರವೆ ಇರದ ಒಂದಷ್ಟು ಪ್ರಶ್ನೆಗಳಿಗೆ ಜವಾಬು ನೀಡುವ ಅಮಾನುಷ ಶಹರ ತನ್ನೊಳಗೆ ಕುದಿಯುತ್ತೆ , ಕುಣಿಯುತ್ತೆ ಶಾಂತದಿಂದ ನಿಟ್ಟುಸಿರು ಬಿಟ್ಟು ನಗುತ್ತದೆ‌. ಅಳುತ್ತೆ , ಆಳುತ್ತೆ , ತಮ‌ಹಿಂಡುವ ನಸುಕಿನಲಿ ಆಕಳಿಸುತ್ತೆ , ನಿದಿರೆ ಮರೆಯುತ್ತೆ , ಕತ್ತಲ ಸುಟ್ಟು ಮುಖಕ್ಕೆ ಬೆಳಕು ಎರಚಿ ಎಚ್ಚರಾಗಿಸುತ್ತೆ.! ಇಲ್ಲಿ ಹೀರುವ ಚಹಾದ ಪ್ರತಿ ಗುಟುಕು ಖಾಸಗಿ ಯಾನವೊಂದರ ಇಂಧನವಾಗಿ ದಿನ ದೂಗಿಸುತ್ತೆ.! ಭೂಪಾಲ್ ಗ್ಯಾಸ್ ದುರಂತದಂತಹ ಸಂಗತಿಗಳು ಮಕ್ಕಳ ಅಂತಃಕರಣ ಪುಟಿದೇಳಿಸುತ್ತೆ! ಭಗ್ನ ಸೇತುವೆಯ ನೆರಳು ಪೂರ್ವಕ್ಕೆ ಸದ್ದಿಲ್ಲದೆ ಸರಿಯುತ್ತಿದ್ದರೆ ಹಳಿಗಳ ಮೇಲೆ ಮಧ್ಯಾಹ್ನದ ಸೂರ್ಯ ಉದ್ದಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ತುರಾತುರಿಯಲ್ಲಿ ಇರುವನೆಂದೆ ಅರ್ಥ. ಸಂಜೆಯಾದರೆ ಮತ್ತದೆ ಟ್ರಾಫಿಕ್ಕಿನಲ್ಲಿ ಸಿಕ್ಕು ರೆಡಿಯೊ ಒಳಗೆ ಗುನುಗುವ ಹಳೆ ಹಾಡುಗಳನ್ನು ಕೇಳುತ್ತಾ ಸಮಯ ನೂಕಿ ನೂರಾರು ಹಾರ್ನುಗಳ ನಡುವಿನಿಂದ ತನ್ನ ಅಸ್ಥಿತ್ವವನ್ನು ಸಡಿಲಗೊಳಿಸಿಕೊಳ್ಳಬೇಕು.

ಇಲ್ಲಿ...ಶಾಂತ ಧ್ವನಿ ಏಕಚಿತ್ತದಿ ಸಾಗುತ್ತದೆ. ಒಂದಷ್ಟು ನುಂಗಲಾರದಂತ ನೋವುಗಳಿವೆ , ಅರಗಲಾರದ ಸತ್ಯಗಳಿವೆ , ಬಂಗಲೆಗಳಿಗಂಟಿದ ಬಿಡಾರಗಳಿವೆ , ಖಾನಾ - ಮಖಾನಗಳಿಗಾಗಿ ಒದ್ದಾಡೊ ವೃದ್ಧರಿದ್ದಾರೆ , ಮಕ್ಕಳಿದ್ದಾರೆ , ಕಥೆಯೊಳಗಿಳಿದಾಗ ಯಾವುದು ಕಥೆ ಅಲ್ಲ ಎಲ್ಲ ಜೀವನಾನುಭವ ಎಂದು ಹೇಳಿಬಿಡುವಷ್ಟು ನೈಜವಾಗಿ ಕಾಯ್ಕಿಣಿ ಅವರು ಬರೆದಿದ್ದಾರೆ. ಬಳಸಿದ ರೂಪಕ , ಪ್ರತಿಮೆ , ಅಲಂಕಾರ , ಉಪಮೇಯ , ಉಪಮಾನ ಎಲ್ಲವೂ ಕಥೆ ಓದಿ ಮುಗಿಸಿಟ್ಟ ನಂತರವು ಎದೆಯೊಳಗೆ ಪ್ರತಿಧ್ವನಿಸುವಂತವು.!

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮೌನೇಶ ಕನಸುಗಾರ