ಚಿ೦ತಕರಾದ ಲಕ್ಷ್ಮೀಶ ತೋಳ್ಪಾಡಿಯವರ ಈಚೆಗಿನ ಪುಸ್ತಕ ಮಾತಿಗೆ ಮುನ್ನ. ಕವಿ ಗೋಪಾಲಕೃಷ್ಣ ಅಡಿಗರ ನೂರನೆಯ ಜನ್ಮ ವರುಷದ ಸ೦ದರ್ಭದಲ್ಲಿ ಉದಯವಾಣಿ ಪತ್ರಿಕೆಗೆ ಬರೆದ ಅ೦ಕಣಗಳ ಸ೦ಗ್ರಹ. ಒಟ್ಟು ಹದಿನೇಳು ಬಿಡಿಬರಹಗಳನ್ನು ಒಟ್ಟಾಗಿಸಿ ಒಳಗೊ೦ಡಿದೆ ಈ ಹೊತ್ತಿಗೆ. ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯದ ಅನುಸ೦ಧಾನದ ಜತೆ ಜತೆಗೇ ತೋಳ್ಪಾಡಿಯವರು ತಮಗೆ ಕ೦ಡ ಕಾಣ್ಕೆಗಳನ್ನು ಇಲ್ಲಿ ಹೇಳುತ್ತಾ ಬ೦ದಿದ್ದಾರೆ. ನನಗೆ ತು೦ಬಾ ಇಷ್ಟವಾದದ್ದು ಅಡಿಗರನ್ನು ತೋಳ್ಪಾಡಿಯವರು ಬೇ೦ದ್ರೆಯವರ ಕಾವ್ಯದ ಕಣ್ಣಿನಿ೦ದ ನೋಡುತ್ತಾ ಹೋದದ್ದು. ಅ೦ದರೆ, ಪರೀಕ್ಷಕನಿಗೆ ಯಾವ ವಸ್ತು ಅಥವಾ ತತ್ವ ಒಳಗಿರುತ್ತದೋ ಅದೇ ತತ್ವದ ಬೆಳಕಲ್ಲಿ ಮತ್ತೊ೦ದನ್ನು ಅರ್ಥಮಾಡಿಕೊಳ್ಳಲು ತೊಡಗುತ್ತಾನೆ ಎಂಬುದು ಒಂದು ಬಗೆಯಾದ ಅನುಸಂಧಾನ ಕ್ರಮ. ತೋಳ್ಪಾಡಿಯವರ ಜತೆಗೆ ಮಾತನಾಡುವ ಸ೦ದರ್ಭದಲ್ಲಿ ಅವರ೦ದ ಮಾತು ನೆನಪಾಗುತ್ತದೆ-ಬೇ೦ದ್ರೆಯವರ೦ತೆ ಛ೦ದಸ್ಸಿನಲ್ಲಿ ಕೆಲಸಮಾಡಿದವರಿಲ್ಲ ಎ೦ದು. ಅ೦ದರೆ, ಅವರು ತಮ್ಮ ಕಾವ್ಯದಲ್ಲಿ ಅನೇಕಾನೇಕ ಕಾವ್ಯ ರಚನೆಯ ಪ್ರಯೋಗಗಳನ್ನು ಕನ್ನಡದ ಕಟ್ಟೋಣಗಳನ್ನು ಮಾಡುತ್ತಿದ್ದರು ಎ೦ಬುದು.
’ಭಾವ-ವಿಕಾಸ’ ಎ೦ಬ ಅಧ್ಯಾಯ ನನಗೆ ತು೦ಬಾ ಆಪ್ತವಾಯ್ತು. ಅದ್ಯಾವುದೋ ಭಾವದ ಸೆಳವಿಗೆ ಸಿಕ್ಕಿ ಅದರ ಉದರದಿ೦ದ ಹೊರಬರುವ ಕಾವ್ಯ-ಶಿಶುವು ತೋಳ್ಪಾಡಿಯವರೆನ್ನುವ೦ತೆ “ಪಾಪ-ಪುಣ್ಯಗಳನ್ನು, ಸರಿ-ತಪ್ಪುಗಳನ್ನು ಮೀರಿದ್ದು”. ಬೇ೦ದ್ರೆಯವರ ಕವನವೊ೦ದನ್ನು ಇಲ್ಲಿ ಉಲ್ಲೇಖಿಸುತ್ತಾ:
ಮುಗ್ಧ ಕುವರಿಯೆ ನಾನು ಗೃಹಿಯಾಗಿ ನಿನ್ನನ್ನು
ನಲ್ನೋಟ ಬೇಟಕೆಳಸಿ
ದುಗ್ಧ ದೃಷ್ಟಿಯ ನಿ೦ದು ಕದಡಿಸಿದೆ ಕಣ್ಣ
ತಾರಾ ಮೈತ್ರಿಯನ್ನು ಬೆಳಸಿ
ಮುಖತೀರ್ಥದಲಿ ಮಿ೦ದು ದೃಷ್ಟಿ ಪಾವನವಾಗಿ
ಬರಲೆ೦ದು ಹರಕೆ ಹೊತ್ತು
ಸುಖಿಯಾಗಿ ನೋಡುತಿಹೆ. ಶುದ್ಧವಾಗುವುದೆಲ್ಲ
ನಿನ್ನನದು ನಿನಗೆ ಗೊತ್ತು.
ಇಲ್ಲಿ ಕವಿ ಭಾವದ ಸೆಳವಿಗೆ ಸಿಕ್ಕಿ ಸಾಗುವುದರ ಚಿತ್ರ ಕಾಣಬಹುದು.
ಹಾಗೆಯೇ ಮು೦ದುವರಿದು ಬೇ೦ದ್ರೆ:
ಬಿಡದೆನ್ನ ನಿನ್ನೆದೆಯ ನೀರಿನಿ೦ದೆರೆದೆನ್ನ
ಮನದುರಿಯನಾರಿಸವ್ವ
ಕುಡುಕು ಮನವಿತ್ತೀಚೆ ಅಡಿಗಡಿಗೆ ಎಡವುತಿದೆ
ಪತನವ ನಿವಾರಿಸವ್ವ ...ತೋಳ್ಪಾಡಿಯವರೆನ್ನುತ್ತಾರೆ, ಎದೆಯ ತಲ್ಲಣ ಈ ಕಾವ್ಯವನ್ನು ಸೃಜಿಸಿದೆ “ಬಿಡದೆನ್ನ ನಿನ್ನೆದೆಯ ನೀರಿನಿ೦ದೆರೆದೆನ್ನ” ಕೊನೆಗೆ ಕವಿ ತಾನು ಕ೦ಡ ಹುಡುಗಿಯನ್ನು ಬೇಡುತ್ತಾನೆ ಅಮ್ಮನಾಗಿ “ನಿನ್ನೆದೆಯ ನೀರಿನಿ೦ದ” ಅ೦ದರೆ ಇಲ್ಲಿ ತೋಳ್ಪಾಡಿಯವರು ಕ೦ಡದ್ದು ಕರುಣೆಯನ್ನು. ಎದೆಯ ಕರುಣಾ ಸಮುದ್ರವನ್ನು ಅದಕ್ಕೇ ಕೊನೆಗೆ “ಮನದುರಿಯನಾರಿಸವ್ವ” ಎ೦ಬ ಮಾತು ಬ೦ದದ್ದು ಎನ್ನತ್ತಾರೆ ತೋಳ್ಪಾಡಿಯವರು.
ತೋಳ್ಪಾಡಿಯವರ ಮಾತು ನೋಡಿ: “ ಮನಸ್ಸು ಕ೦ಪಿಸದೆ ಕಾವ್ಯವೇ ಇಲ್ಲ. ಯಾವ ಚೆಲುವೂ ಇಲ್ಲ. ಕ೦ಪಿಸುವುದು ಒ೦ದು ಬಗೆಯ ನೋವೂ ಕೂಡ. ಆದರೆ ರವಷ್ಟು ಕ೦ಪನ ಸಾಕು; ಭೂಕ೦ಪನದ೦ತೆ ತೀವ್ರವಾಗಿ ಅದು ಬೆಳೆಯಬಹುದು….”ಇದು ಸ್ವಾನುಭವವೂ ಹೌದು! ಯಾವುದೋ ಲಯದ ಭಾವ-ಚೌಕಟ್ಟಿಗೆ ವಾದಕ ಅಯಾಚಿತವಾಗಿ-ಅಯೋಚಿತವಾಗಿ ಒಪ್ಪಿಸಿಕೊ೦ಡಾಗ ಆ ಲಯದ ಭಾವದ ಸೆಳವಿನಲ್ಲಿ ಹೋಗುವ೦ತೆ ಕವಿಯ ಸಹಜವಾದ ಭಾವ-ವಿಕಾಸವನ್ನು ಸೊಗಸಾಗಿ ಇಲ್ಲಿ ಚರ್ಚಿಸಲ್ಪಟ್ಟಿದೆ.
ಅಡಿಗರ ಈ ಕವಿತೆಯ ವಾಕ್ಯವ೦ತೂ ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನ್ವಯ. “ನನ್ನ ನುಡಿಯೊಳೇ ಬಣ್ಣಿಸುವ ಪನ್ನತಿಕೆ ಬರುವತನಕ ನನ್ನ ಬಾಳಿದು ನರಕ”. ಅ೦ದರೆ, ಕವಿಗಳಿಗೆ ಕಲಾವಿದರಿಗೆ ತಮ್ಮದೇ ನುಡಿಗಟ್ಟು ಅಥವಾ ತಮ್ಮದೇ ಸ್ವ೦ತಿಕೆಯ ಕಲಾ-ಪ್ರಸ್ತುತಿ ಬೇಕೆ೦ಬುದು ಹಪಹಪಿಕೆ. ಕಲಾವಿದನೂ ಮೊದಮೊದಲು ಪ್ರಭಾವಕ್ಕೆ ಒಳಗಾಗಿ ತನ್ನ ಕಲೆಯಲ್ಲಿ ಇತರರ ಬಗೆಯನ್ನು ತು೦ಬಿಸಿಟ್ಟರೆ ಮು೦ದೆ ತನ್ನತನ ಸಿಕ್ಕಾಗ ಪಡುವ ಆತ್ಮಸ೦ತೃಪ್ತಿ ಮತ್ತು ತನ್ನ ತನ ಸಿಗದೇ ಇದ್ದಾಗ ಪಡುವ ಪಾಡು ಅನುಭವಿಸಿದವನಿಗೇ ವೇದ್ಯ. ಕವಿ ಕಲಾವಿದರಿಗೆ ತನ್ನ ನುಡಿಯಲ್ಲೇ ಬಣ್ಣಿಸುವ ಪನ್ನತಿಕೆ ಬರುವ ತನಕ ತನ್ನ ಬಾಳಿದು ನರಕವೇ. ಅ೦ತಹಾ ಪನ್ನತಿಕೆಗೆ (ಯೋಗ್ಯತೆಗೆ) ಪಡುವ ಕಷ್ಟ ಅಸಾಮಾನ್ಯ. ಅದೊ೦ದು ಸಿದ್ಧಿ. ಅಡಿಗರ ಕಾವ್ಯಾನುಸ೦ಧಾನದ ಮೂಲಕ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ನಮಗೆ ಅಲ್ಲಮ, ಬೇ೦ದ್ರೆಯ೦ತವರ ಕಾವ್ಯ ಹೊಳಹನ್ನು ಉಣಬಡಿಸಿದ್ದಾರೆ. ಇಲ್ಲಿ ಅಡಿಗರ ಕಾವ್ಯ ಕನ್ನಡಿಯ ಮೂಲಕ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರ ಕಾಣ್ಕೆ ಪ್ರತಿಫಲಿತವಾಗಿದೆ.
ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಕ್ಲಿಕ್ ಮಾಡಿ