ಅನುಪಮಾ ಪ್ರಸಾದ್ ಅವರ 'ಜೋಗತಿ ಜೋಳಿಗೆ' ಕಥೆಗಳನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿಬಿಟ್ಟೆ. ಆನಂತರ ನನ್ನನ್ನು ಆವರಿಸಿಕೊಂಡ ವಿಸ್ಮಯಕ್ಕೆ ಕಥೆಗಳ ವಸ್ತು ವಿಶೇಷ ಮಾತ್ರ ಕಾರಣವಾಗಿರದೇ ಅವುಗಳ ಮಾಧ್ಯಮವಾದ ತುಳು, ಹವ್ಯಕ, ಮಲೆಯಾಳಂ ಮಿಶ್ರಿತ ಭಾಷೆಯೂ ಕಾರಣ ಮತ್ತು ಸಹಜವಾದ ಸಂಭಾಷಣೆ ನಿರೂಪಣೆಗಳಲ್ಲಿ ಹರಿವ ಅದರ ಸೊಗಡು. ಮಿತ್ರಾ ಮತ್ತು ಮಣಿಮಾಲಿನಿ ನೆನಪಾಗುತ್ತಾರೆ. ಈ ಪ್ರಾದೇಶಿಕ ಗಂಧವೇ ಇಲ್ಲಿನ ಕಥೆಗಳ ಕಸುವನ್ನು ಹಿಡಿದಿಟ್ಟಿದೆ. ಆಶಯ, ಆಕೃತಿಯನ್ನು ಅರಸುತ್ತಾ ಕಡೆಗೆ ತನ್ನ ಸಾರ್ಥಕ್ಯವನ್ನು ಪಡೆಯುವುದು ಇಂತಹ ಮಣ್ಣಿನ ಭಾಷೆಯ ಮೂಲಕವೇ ಎಂದು ನನಗಾದರೂ ಈ ಕತೆಗಳನ್ನು ಓದಿದಾಗ ಎನಿಸಿದೆ. ಮಹಿಳಾ ಲೋಕದೊಳಕ್ಕೆ ಒಂದು ಅಘೋಷಿತ ಯಾತ್ರೆಯನ್ನು ಕೈಗೊಳ್ಳಲು ಇಂತಹ ಪ್ರಾದೇಶಿಕ ಭಾಷೆಗಳಿಗಿಂತ ಉತ್ತಮವಾದ ಇನ್ನೊಂದು ಮಾಧ್ಯಮ ಇಲ್ಲವೇನೋ ಎಂದು ಎನಿಸುವಷ್ಟರ ಮಟ್ಟಿಗೆ ಅದು ಸಫಲವಾಗಿದೆ.
ಪಿತೃಪ್ರಧಾನ ವ್ಯವಸ್ಥೆ, ಪುರುಷ ಪ್ರಧಾನ ಸಮಾಜ ಇಂತಹ ಶಬ್ದಗಳೆಲ್ಲ ಸವಕಲಾಗಿವೆ ಎಂದೆನಿಸಿ ಒಂದು ಸಮ್ಮೇಳನದಲ್ಲಿ ಅಕ್ಕನ ಬಗ್ಗೆ ಒಂದು ಪ್ರಬಂಧವನ್ನು ಮಂಡಿಸುವಾಗ ಮೇಲಿನ ಶಬ್ದಗಳನ್ನು ಹೆಸರಿಸದೇ ಕೇವಲ ವ್ಯವಸ್ಥೆಯೆಂದು ಮಾತ್ರ ಹೇಳಿದ್ದೆ. ಗುರುಗಳಾಗಿದ್ದ ಕಿ.ರಂ ಆ ಸಮ್ಮೇಳನಾಧ್ಯಕ್ಷರಾಗಿದ್ದರು. ನಾನು ಹೊರಗೆ ಬಂದ ಕೂಡಲೇ 'ಏನ್ರೀ ಅದು ವ್ಯವಸ್ಥೆ? ಯಾವ ವ್ಯವಸ್ಥೆ ರೀ?' ಎಂದು ನನ್ನನ್ನು ಕೇಳಿದರು.
'ಅದು ಪಿತೃಪ್ರಧಾನ ವ್ಯವಸ್ಥೆ ಸರ್' ಎಂದೆ.
'ಮತ್ತೆ? ಅದನ್ನು ನೀವು ವಿಶೇಷವಾಗಿ ಹೆಸರಿಸಲೇ ಬೇಕು. ಅದು ಇರೋದು ಸುಳ್ಳೇನ್ರೀ? ಎಂದು ಮೇಷ್ಟ್ರರ ಹಕ್ಕಿನಿಂದ ಜೋರು ಮಾಡಿದ್ದರು.
ಪಿತೃ ಪ್ರಧಾನ ಸಮಾಜ ಇರುವವರೆಗೆ ಮಾತೃ ಪ್ರಾಧಾನ್ಯ ವನ್ನು ಎತ್ತಿಹಿಡಿಯುವ ಕತೆಗಳು ಅವ್ಯಾಹತವಾಗಿ ಬರುತ್ತಲೇ ಇರುತ್ತವೆ. ಅದು ನಮ್ಮ ಸಮಾಜದ ವಿಧಿ. ಮಾತೃಪ್ರಾಧಾನ್ಯವನ್ನು ಎತ್ತಿಹಿಡಿಯುವುದೆಂದರೆ ಗಂಡು ಕುಕ್ಕಿದ ಹಾಗೆ ಅಥವಾ ಅದಕ್ಕಿಂತಲೂ ಮೊನಚಾಗಿ ಹೆಣ್ಣು ಕುಕ್ಕುವುದಲ್ಲ. ಬದಲಾಗಿ ಅವನನ್ನೂ ಒಳಗೊಂಡು ಪ್ರೀತಿ ಆರ್ದ್ರತೆಯ ಲೋಕದಳೊಕ್ಕೆ ಸೆಳೆದುಕೊಂಡು ಮಾನವೀಯತೆಯ ದರ್ಶನ ಮಾಡಿಸುವುದು. ಇಂತಹ 'ಮಾತೃಪ್ರಾಧಾನ್ಯ'ವನ್ನು ಅನುಪಮಾ ಅವರು ತಮ್ಮ ಕಥೆಗಲ್ಲಿ ಎತ್ತಿಹಿಡಿಯುವುದರ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ.
ಪಿತೃಪ್ರಧಾನ ವ್ಯವಸ್ಥೆಯ ಪೂರ್ವ ಗ್ರಹಿಕೆಗಳ ಅನಾವರಣ ನಮ್ಮಲ್ಲಿ ತಿರುಮಲಾಂಬ (ನಭಾ: 1914) ಅವರಿಂದಲೇ ಪ್ರಾರಂಭವಾಗಿದೆ. ಸಮಾಜ ಯಾವುದನ್ನು ಅನೈತಿಕ ಎಂದು ತಪ್ಪಾಗಿ ಗ್ರಹಿಸಿತ್ತೋ ಅದನ್ನು ಸರಿಯಾಗಿ ಕಾಣುವ ಕಣ್ಣು ಅವರಿಗಿತ್ತು. ಅವರ ಮಿತಿಯಲ್ಲಿ ಅದನ್ನು ಚಿತ್ರಿಸಿದರು. ಆದರೂ ಆ ತಪ್ಪನ್ನು ವಿರೋಧಿಸುವ ಧೈರ್ಯ ತೋರಿಸಲು ಅವರಿಗೆ ಸಾಮಾಜಿಕ ಒತ್ತಾಸೆಗಳಿರಲಿಲ್ಲ. ಅವರು ಅಲ್ಲಿ ಎತ್ತಿ ಹಿಡಿದಿದ್ದು ಪಿತೃ ಪ್ರಧಾನ ವ್ಯವಸ್ಥೆ ಎತ್ತಿ ಹಿಡಿದ ಮೌಲ್ಯಗಳನ್ನೇ. ಆದರೂ ಹಾಗೆ ಅವರು ಅನೈತಿಕ ವಾದದ್ದನ್ನು ಚಿತ್ರಿಸಿದ್ದೇ ಮಾಸ್ತಿಯವರಿಗೆ ಮಹಾಪರಾಧವಾಗಿ ಕಂಡಿತು. ಆ ಕಾರಣಕ್ಕಾಗಿಯೇ ತಿರುಮಲಾಂಬ ಅವರ ತೇಜೋವಧೆ ಮಾಡಿದರು.
ಯಾವ ತೇಜೋವಧೆಗೂ ಬಗ್ಗದೇ ಶ್ಯಾಮಲಾ ದೇವಿ, ಕೊಡಗಿನ ಗೌರಮ್ಮ, ಸರಸ್ವತಿ ಬಾಯಿ ರಾಜವಾಡೆ, ವೀಣಾ ಶಾಂತೇಶ್ವರ ಹೀಗೆ ಇನ್ನೂ ನೂರಾರು ಹರಿವುಗಳು ಕಾವೇರಿಯಲ್ಲಿ ಹರಿದು ಹೋಗಿವೆ. ಬಂಡೆಗಲ್ಲು ಎದುರಾಯಿತೆಂದು ಕಾವೇರಿ ಹಿಂದಕ್ಕೆ ಹರಿಯುವುದಿಲ್ಲ. ಹರಿಯುವುದನ್ನು ನಿಲ್ಲಿಸುವುದೂ ಇಲ್ಲ. ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಹರಿದದ್ದು ಇತಿಹಾಸ. ಈ ಹರಿವಿಗೆ ನೇತ್ರಾವತಿ, ಅರ್ಕಾವತಿ, ಅಘನಾಶಿನಿ, ಕಾಳಿ, ಚಂದ್ರಗಿರಿ, ತುಂಗಭದ್ರೆಯರ ವೈವಿಧ್ಯಮಯ ಸತ್ವಯುತ ಮಣ್ಣು, ಘಮಲು ಬಂದು ಸೇರಿಕೊಳ್ಳುತ್ತಿದೆ. ಪರಂಪರೆಯನ್ನು ಗಟ್ಟಿಗೊಳಿಸುತ್ತಿವೆ. ಅನುಪಮಾ ಪ್ರಸಾದ್ ಅವರ ' 'ಜೋಗತಿ ಜೋಳಿಗೆ' ಅಂತಹ ಒಂದು ವಿಶಿಷ್ಟವಾದ ಹರಿವು.
ಹೆಣ್ಣಿನ ದೇಹ ಮತ್ತು ಪಿತೃ ಪ್ರಧಾನ ವ್ಯವಸ್ಥೆಯ ನಡುವಿನ ಸಂಘರ್ಷಗಳನ್ನು, ತಲ್ಲಣಗಳನ್ನು ಬಹಳ ಸೂಕ್ಷ್ಮವಾಗಿ ಸೆರೆಹಿಡಿದಿದ್ದಾರೆ. ಪ್ರಕೃತಿಯೇ ಇಲ್ಲಿ ಮಾನದಂಡ. ಇಲ್ಲಿ ಬರುವ 'ಪಕ್ಷಿ ಜೋಡಿ' ಅದರ ಪ್ರತೀಕವಾಗಿದೆ. ಪ್ರಕೃತಿಯ ಮುಂದೆ ಎಲ್ಲಾ ಸಮಾನ. ಅದನ್ನು ನಮ್ಮ ವ್ಯವಸ್ಥೆ ತಿರುಚಿ ಹಾಕಿರುವ ಬಗೆಯನ್ನು ವಿಶಿಷ್ಟ ವಾಗಿ 'ಯಮುನೆ ನರ್ಮದಾ' (ಜೋಗತಿ...) ಸುಭದ್ರಮ್ಮ (ಇಸಮುಳ್ಳು), ರಕ್ಷಾ, ಫಕೀರಿಚ್ಚ (ಸೈತಾನನ ಬೆಲೆ) ಮುಂತಾದ ಸಶಕ್ತ ಪಾತ್ರಗಳ ಮೂಲಕ ನೈಸರ್ಗಿಕ ಸ್ವಾಮ್ಯದ ಹಕ್ಕೊತ್ತಾಯ ವನ್ನು ಬಹಳ ವಸ್ತುನಿಷ್ಠವಾಗಿ ಅಷ್ಟೇ ಅನನ್ಯವಾಗಿ ಮಂಡಿಸಿದ್ದಾರೆ. ಎಲ್ಲಿಯೂ ಕೂಡ ಅಬ್ಬರವಾಗದೇ ಮೆಲು ದನಿಯಿಂದಲೇ ತಮ್ಮ ನಿರ್ಧಿಷ್ಟ ನಿಲುವನ್ನು ಈ ಕತೆಗಳ ಪಾತ್ರಗಳು ವ್ಯಕ್ತಪಡಿಸುತ್ತವೆ. ಅದನ್ನು ಸಾಧಿಸುವ ಲೇಖಕಿಯ ಕೌಶಲವನ್ನು ನಾನು ಮೆಚ್ಚುತ್ತೇನೆ. ಮುನ್ನುಡಿಯನ್ನು ಬರೆದಿರುವ ಸಬಿತಾ ಬನ್ನಾಡಿಯವರು ಬಹಳ ಸಮರ್ಥವಾಗಿ ಈ ಕತೆಗಳನ್ನು ವಿಶ್ಲೇಷಿಸಿದ್ದಾರೆ.
ಜೋಗತಿ ಎನ್ನುವ ಶಬ್ದವೇ ಜಂಗಮ ಸ್ವರೂಪದ್ದು. ಒಂದು ಪ್ರದೇಶಕ್ಕಾಗಲೀ, ನಿರ್ಧಿಷ್ಟ ಗುರಿಗಾಗಲೀ ಅಂಟಿಕೊಂಡಿರುವಂತಹುದಲ್ಲ. ಇಂತಹುದಕ್ಕೆ ಅಳಿವಿಲ್ಲ. ಜೋಳಿಗೆ ಅನುಭವ ಸ್ವರೂಪಿಯಾದುದು. ಅದಕ್ಕೆ ಬಿದ್ದಷ್ಟು ಮಾತ್ರ ಅಭಿವ್ಯಕ್ತಿಗೆ ದಕ್ಕುತ್ತದೆ. ತಮ್ಮ ಜೋಳಿಗೆಯೊಳಗೆ ಬಿದ್ದವುಗಳಿಗೆ ಸಮರ್ಥವಾದ ಧ್ವನಿಯನ್ನು ಲೇಖಕಿ ಇಲ್ಲಿ ಕೊಟ್ಟಿದ್ದಾರೆ.
ತಿರುಮಲಾಂಬ ಅಂದು ಪಿತೃ ಪ್ರಧಾನ ಮೌಲ್ಯಗಳ ವಕ್ತಾರರಾಗಿ ಬರೆದಿದ್ದಕ್ಕೆ ಅನೇಕ ಸಾಮಾಜಿಕ ಕಾರಣಗಳಿವೆ. ಈಗ ಒಂದು ಚಕ್ರೀಯ ಪ್ರಕ್ರಿಯೆ ಮುಗಿದಿದೆ. (1914-2020) ಸುಮಾರು ನೂರು ವರ್ಷಗಳ ನಂತರ ಹೀಗೆ ವಸ್ತುನಿಷ್ಠವಾಗಿ ಬರೆಯುವ ಧೀಶಕ್ತಿ ಮಹಿಳೆಯರಿಗೆ ಪ್ರಾಪ್ತವಾಗಿದೆ ಎಂಬುದು ಮಹಿಳಾ ಸಾಹಿತ್ಯ ಬೆಳೆದು ಬಂದ ವಿಕಾಸದ ಗಾಥೆಯನ್ನೇ ಹೇಳುತ್ತದೆ. ಅನೇಕ ತಗ್ಗು ತೆವರು ತಿಟ್ಟುಗಳನ್ನು ಹತ್ತಿ ಬಂದ ಕನ್ನಡ ಮಹಿಳಾ ಸಾಹಿತ್ಯ ಇಲ್ಲಿಯವರೆಗೆ ಸಶಕ್ತವಾಗಿ ಹರಿದು ಬಂದಿರುವುದು ಬಹಳ ಸಂತೋಷದ ಸಂಗತಿ. ಇದಕ್ಕೆ ಅನುಪಮಾರವರಂತಹ ಲೇಖಕಿಯರ ದೇಣಿಗೆಗಳು ಅಪಾರ. ಇಂತಹ ಭರಪೂರ ಬರಹಗಳಿಂದ ಕನ್ನಡ ತಾಯಿಗೆ ಅಂಟಿರುವ 'ಮಹಿಳಾ ಸಾಹಿತ್ಯ' ಎನ್ನುವ ಹಣೆಪಟ್ಟಿಯೂ ಕಳಚಿ ಹೋಗುವ ದಿನಗಳು ಬಹಳ ದೂರವೇನಿಲ್ಲ ಎಂಬ ಆಶಾವಾದದೊಂದಿಗೆ ಅನುಪಮಾ ಅವರನ್ನು ಅಭಿನಂದಿಸುತ್ತೇನೆ.
ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ