ಕಲಿಗಣನಾಥರ ಕತೆಗಳು ಇಂಬಳ ಹುಳುಗಳ ಹಾಗೆ, ನಮಗರಿವಿಲ್ಲದೇ ಚರ್ಮಕ್ಕೆ ಅಂಟಿಕೊಂಡು ಬಿಡುತ್ತವೆ, ನಾವೇ ಕಿತ್ತು ಬಿಸಾಕಬೇಕು. ಬಿಸಿಲ ಬಾಗಿನ ಕರ್ನಾಟಕ ಕಥಾಲೋಕದಲ್ಲಿ ಹರಿಬಿಟ್ಟಿದ್ದು ಈ ಬಾಗಿನಕ್ಕೆ ಅರ್ಥ ಬಂದಿದೆ. ಒಟ್ಟು ಮೂವತ್ನಾಲ್ಕು ಕತೆಗಳು, ದೇಶವು, ರಾಜಕೀಯ ವ್ಯವಸ್ಥೆ, ಕೈಗಾರಿಕೀಕರಣ, ತ್ರಿಕರಣಗಳು ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಗ್ರಾಮೀಣರ ಮುಗ್ಧ ಬದುಕಿನ ಜೊತೆಗೆ ಹೇಗೆ ಚಿನ್ನಾಟವಾಡಿದೆ, ಮತ್ತು ಆಡುತ್ತಿದೆ ಎಂದು ನೋಡಲಿಕ್ಕೆ ಕಲಿಗಣನಾಥರ ಕತೆಗಳನ್ನ ಓದಬೇಕು, ಎಲ್ಲಾ ಕಾಲಕ್ಕೂ ಉಸಿರಾಡುವ ಕತೆಗಳು, ಜೀವಪರ ಕಾಳಜಿ ಎಲ್ಲವನ್ನೂ ನಿಷ್ಕಲ್ಮಶ ದಿಂದ ನೋಡುವ ಗುಣ ಎಲ್ಲಾ ಕತೆಗಳಲ್ಲಿ ಇದೆ...
"ಈ ದಾಹ ದೊಡ್ಡದು" ಎಂಬ ಕತೆಯಲ್ಲಿ, ಕ್ಯಾಪಿಟಲಿಸ್ಟಗಳು ಹೇಗೆ ನಮ್ಮ ಬದುಕನ್ನ ಕಿತ್ತುಕೊಂಡು ನರಕವನ್ನಾಗಿಸಿದರು, ಇಡೀ ಹಳ್ಳಿಗೆ ಸಣ್ಣ ಫುಡ್ ಪ್ಯಾಕ್ಟರಿ ಸಂಡಾಸು ತೂಕದಷ್ಟು ಪುಡ್ ಪ್ಯಾಕಿಟನ್ನು ತೂಗಿ ಕೊಟ್ಟು, ಎಳೆಯ ಜೀವವನ್ನ ಬಲಿತೆಗೆದುಕೊಳ್ಳುವದರ ಮೂಲಕ ತನ್ನ ಕರಾಳ ಮುಖವನ್ನು ತೋರಿಸುತ್ತದೆ. ಮುಂದೆ ಇದು, ಹಳ್ಳಿಯಲ್ಲಿ ಕೈಗಾರಿಕ ಕ್ರಾಂತಿಯಾಯಿತೇನು ಅನ್ನುವಸ್ಟರ ಮಟ್ಟಿಗೆ ಕತೆ ಅಂತ್ಯವಾಗುತ್ತದೆ. ಬಂಡವಾಳಶಾಹಿ ವ್ಯವಸ್ಥೆ "ನಮ್ಮ ಹೇಲನ್ನು ಸಹಿತ ನಾವು ಕಾದಿಟ್ಟುಕೊಳ್ಳುವದು ಸಹ್ಯವಾದ ಕೆಲಸ" ಅನ್ನುವಾಗೆ ಮಾಡಿದೆ. ಕ್ಯಾಪಿಟಲಿಸ್ಟಗಳಿಂದ ನಮ್ಮ ಭವಿಷ್ಯದ ಬದುಕು ಹಿಂಗಾಗಬಹುದು ಅಂತ ಒಂದು ಕತೆಯಲ್ಲಿ ಈ ರೀತಿ ಚಾತುರ್ಯದ ಪ್ರಯೋಗ ಮಾಡಿರುವ ಇನ್ನೊಬ್ಬ ಕತೆಗಾರ ಸಿಗುವದು ಬಹಳ ಕಷ್ಟ... ಕತೆಯ ಕೊನೆಗೆ ಹಳ್ಳಿಯವರು ಬದುಕು ಅನಿವಾರ್ಯವಾದಾಗ ಕಾರ್ಖಾನೆ ವಿರುದ್ಧ "ತಿಪ್ಪಯ್ಯಣ್ಣಾ ಹೊರಗ ಬಾರಪೊ..... ನಿನ್ನ ಮಗನ ಜೀವ ತಗೊಂಡ ನರಭಕ್ಷಕರಿಗೆ ಪಾಠ ಕಲಿಸಬೇಕು" ಅಂತ ಸಿಡಿದೆದ್ದರು..
ಮತಾಂತರ ಕತೆಯಲ್ಲಿ ದುರುಗಪ್ಪನ ಪಾತ್ರ ಪ್ರತಿಯೊಂದು ಹಳ್ಳಿಯ ಅಸಹಾಯಕ ದಲಿತ ಪ್ರತಿಭಟನಕಾರನ ಪಾತ್ರವಾಗಿದೆ. ಗ್ರಾಮೀಣ ಮಟ್ಟದಲ್ಲಿ ಅಸಮಾನತೆ ವಿರುದ್ಧ ಮಾತನಾಡುವ ಕಟ್ಟಕಡೆಯವನ ಪ್ರತಿಭಟನೆ ಧಾರುಣದಲ್ಲೇ ಅಂತ್ಯವಾಗುವದು ಅನ್ನೋದಕ್ಕೆ, ಮತಾಂತರತೆಗೆ ಹಿಡಿದ ಕನ್ನಡಿಯಾಗಿದೆ. ಮತಾಂತರ ಕತೆಯೂ ಈಗಲೂ ಪ್ರಸ್ತುತ ಧರ್ಮಸಂಸ್ಥೆಗಳಾಗಲಿ, ವ್ಯವಸ್ಥೆಯಾಗಲಿ ಮೂಲಭೂತ ಅವಶ್ಯಕಗಳನ್ನು ಪೂರೈಸದೇ ಜನರನ್ನ ಅಮೂರ್ತ ಲೋಕದ ಕಡೆಗೆ ವಾಲಿಸುವುದು ಒಂದು ಕಡೆಯಾದರೆ, ದುರುಗಪ್ಪನ ಪಾತ್ರ ಇವೆಲ್ಲವನ್ನ ತನ್ನ ಒಂದು ಸಾಲಿನಲ್ಲಿ ನೆನಪು ಮಾಡುವದು ಇನ್ನೊಂದು ಕಡೆ,, ಆ ಸಾಲು " ರಕ್ತ ಹರಸ್ತಾರಂತ ಬ್ಯಾಸಿಗಿ ದಿವ್ಸಕ್ಕ ನಮ್ ಬಾಯಿಗಿ ಒಂದೀಸು ಉಚ್ಛಿ ಹೊಯ್ದ್ರ ದೊಡ್ಡ ಪುಣ್ಯ....." ದುರಗಪ್ಪನ ಹೇಳಿದ್ದನ್ನ ಕೇಳಿ ಎಲ್ಲರೂ ನಕ್ಕರು. ಮತಾಂತರ ಓದಿದ ಮೇಲೆ ವಿಮರ್ಶಕ ಟಿ. ಪಿ. ಅಶೋಕರ ಮಾತು ನೆನಪಾಯಿತು "ಪ್ರಚೋದಕರು ಎಲ್ಲಾ ಕೋಮಿನಲ್ಲಿ ಇರುತ್ತಾರೆ, ಅಂತಹವರನ್ನ ಆಯಾ ಕೋಮಿನ ಪ್ರತಿನಿಧಿಗಳೆಂದು ಭಾವಿಸಲಾಗದು".
ಇಲ್ಲೊಂದು "ಕಾಗದದ ದೋಣಿ" ನೋವಿನ ಸಾಗರದಲ್ಲಿ ತೇಲಿ ತೇಲಿ ದಡ ಸೇರುತ್ತದೆ. ಪಾಯಿಖಾನೆ ಮಾಲಿಕ ರುದ್ರಪ್ಪನ ವರ್ತನೆ, ಅಧಿಕಾರವಾಣಿಗಳು ಮಾಲಿಕತನವೆಂಬುದು ಮನುಷ್ಯನಲ್ಲಿ ಹೊಕ್ಕರೆ ಸಾಕು ಅವನ ಪ್ರಜ್ಞೆ ತಪ್ಪಿ ತನ್ನ ಕೆಳಗಿನವರನ್ನ ಹೇಗೆ ಹಿಂಸೆಗೀಡು ಮಾಡುತ್ತಾನೆ ಎಂಬುದು ರುದ್ರಪ್ಪ ಎಂಬ ಪಾತ್ರದ ಮೂಲಕ ಚಿತ್ರಿಸಿದ್ದಾರೆ ಕತೆಗಾರರು.
"ಉಡಿಯಲ್ಲಿನ ಉರಿ"ಯ ಕತೆಯ ಬಗ್ಗೆ ಅಭಿಪ್ರಾಯಗಳನ್ನು ಬರೆಯಲು ಹೋದರೆ ಅದಕ್ಕೆ ತಾಳೆ ಹೊಂದುವುದಿಲ್ಲ, ಕತೆ ಓದಿದ ನಂತರ ಯಾವ ಸನ್ನಿವೇಶಕ್ಕೆ ಗುಂಗು ಹಿಡಿಸಿರಬಹುದು ಎಂದು ಓದುಗನಿಗೆ ನಿರ್ಧರಿಸಲು ಕಷ್ಟ.. ಒಬ್ಬ ಪುರುಷನಾಗಿ ಸ್ತ್ರೀ ಸಂವೇದನೆ ಹೊಂದುವದು, ನಾಟಕದಲ್ಲಿ ಸ್ತ್ರೀ ಪಾತ್ರ ಮಾಡಿದಷ್ಟು ಸುಲಭವಲ್ಲ, ಉಡಿಯಲ್ಲಿನ ಉರಿ ಹಾರಲಾರದ್ದು...
ಜಾಗತೀಕರಣದ ಕರಿನೆರಳು ಬಿದ್ದಾಗ, ಶ್ರಮಿಕವರ್ಗದವರನ್ನ ಹಾಳು ಮಾಡಲಿಕ್ಕೆ ಪ್ರತಿಯೊಬ್ಬ ರಾಜಕಾರಣಿಯನ್ನ ಹಾವಾಡಿಗನನ್ನಾಗಿ ಮಾಡಿಸುತ್ತದೆ, ಎನ್ನುವುದಕ್ಕೆ "ತೂತುಬೊಟ್ಟು" ಕತೆಯಲ್ಲಿನ ಧರ್ಮಪಾಲನ ಭಾಷಣ ಸಾಕ್ಷಿಯಾಗುತ್ತದೆ..
"ಕ್ಷುಲ್ಲಕ ವಸ್ತುಗಳು" ಎನಿಸಿಕೊಂಡ ತುಂಡು ಕಾಗದ, ತೂತು ಬಿದ್ದ ಕಾಂಡೋಮ್, ಮೋಟು ಬೀಡಿ, ಕತೆಗಾರನೇ ಅವೇ ವಸ್ತುಗಳಾಗಿ ಮಾತಾಡಿದಾಗ ಆ ಕ್ಷುಲ್ಲಕ ವಸ್ತುಗಳಿಗೆ ಗಾಂಭೀರ್ಯತೆ ಬರುತ್ತದೆ...
"ನನಗೊತ್ತು ಅಡ್ಡಾದಿಡ್ಡಿಯಾಗಿ ಹರಿದ ನನ್ನ ಮೈ ಕಂಡು ನಗುವಿರಿ. ಹೀಗೆ ಕಾಣಬೇಕೆಂಬ ಬಯಕೆಯಿರಲಿಲ್ಲ. ಯಾರದೊ ತಪ್ಪಿಗೆ ತಪ್ಪದ ಅವಮಾನ. ಪೂರ್ಣವಾಗಿದ್ದಾಗಲೂ ನೋಡಿದ್ದೀರಿ." ಈ ರೀತಿ ತುಂಡು ಕಾಗದ ಮಾತಾಡಿದ್ದು ನೋಡಿ ಒಬ್ಬ ಸಂತ್ರಸ್ತೆ ಏಕಾಂತದಲ್ಲಿ ತನ್ನಷ್ಟಕ್ಕೇ ತಾನು ಗುನುಗುತ್ತಿರುವಳೇನೋ ಅನ್ನಿಸಿತು.
ತೂತು ಬಿದ್ದ ಕಾಂಡೋಮ್, ಅದು ಒಂದು ಬಾರಿ ಚಿಕ್ಕ ಬಾಲಕನ ಕೈಗೆ ಸಿಕ್ಕಾಗ "ಸಮೀಪದಲ್ಲಿ ನಳವೊಂದರಿಂದ ಬೀಳುತ್ತಿದ್ದ ನೀರಿಗೆ ಹಿಡಿದು ಕೂಸಿಗೆ ನಾಜೂಕಿನಿಂದ ಎರೆದಂತೆ ನನ್ನ ಮೈ ತೊಳೆಸಿದ. ಹುಡುಗನಿಗೆ 'ಥ್ಯಾಂಕ್ಸ್...' ಹೇಳುವಂತೆ ಅವನ ಅಂಗೈಗೆ ಕೆಲಕ್ಷಣ ಅಂಟಿಕೊಂಡೆ." ಕಾಂಡೋಮ್ ನ ಕೃತಜ್ಞತೆ ಬಾಲಕನಿಗೆ ಸಿಗುವದು ಕ್ಷಣ ರೋಮಾಂಚಿತಗೊಳಿಸುತ್ತದೆ. ಕಾಂಡೋಮ್ ಕೊನೆಗೆ ವಿಷಾದದಿಂದ "ಚೊಣ್ಣದ ಕಿಂಡಿಯಲಿ ಹೊರಜಗತ್ತನು ಇಣುಕುತ್ತಾ ನಡೆದೆ..."
ಮೋಟು ಬೀಡಿ ಮಾತಾಡಿತು " ಈಷ್ಟುದ್ದ ಇದ್ದ ನನ್ನ ಮೈ ಸುಟ್ಟು ಇಷ್ಟುದ್ದ ಮಾಡಿ ಜನ ತಿರುಗಾಡುವ ರಸ್ತೆ ಪಕ್ಕ ಎಸೆದವರ ಬಗ್ಗೆ ಸ್ವಲ್ಪ ಸಿಟ್ಟಿದೆ" "ಅವನ ತುಟಿಗಳ ಮೇಲೆ ಅದೆಷ್ಟು ನಾಜೂಕಾಗಿ ಕುಳಿತರೂ ತನ್ನ ಎಂಜಲಿನಿಂದ ಅರ್ಧ ಮೈತೊಯ್ಯಿಸಿಬಿಟ್ಟ"... ಇಲ್ಲಿ ವಿಶೇಷವೇನಂದರೆ ಕ್ಷುಲ್ಲಕ ವಸ್ತುಗಳು ಸ್ತ್ರೀಲಿಂಗದ ರೂಪದಲ್ಲಿ ಕಾಣುತ್ತವೆ. ಸ್ತ್ರೀಗುಣನೇ ಅಂತಹದ್ದು ಕರುಣೆಯಿಂದಲೇ ನೋಡುವಂತೆ ಮಾಡುತ್ತದೆ. ನ್ಯಾಯಲಯದ ಆವರಣದಲ್ಲೇ ಮುಗಿಯುವ ಕತೆ "ಸೆಕೆಂಡ್ ಸ್ಯಾಟರ್ ಡೇ". ಒಬ್ಬ "ನಾನು ಈ ದೇಶದ ಎಲ್ಲಾ ಮಹಾತ್ಮರನ್ನು ಕೊಂದಿರುವೆನೆಂದು ಶಿಕ್ಷೆ ಬೇಡುತ್ತಾನೆ".
ಕೊಂದ ಮಹಾತ್ಮರ ಕಾಲಘಟ್ಟಕ್ಕೂ ತನಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಹಾಗಂತ ಕತೆಯಲ್ಲಿ ಅವನನ್ನ ಹುಚ್ಚನೆಂದು ಅಲ್ಲೆಗಳೆಯುವಂತಿಲ್ಲ.
ಕಲಿಗಣನಾಥರ ಎಲ್ಲಾ ಕತೆಗಳು ಓದುಗನನ್ನೇ ಪ್ರಶ್ನೆ ಕೇಳುವ ಹಾಗೆ ಇರುತ್ತವೆ. ಎಲ್ಲಾ ಕತೆಗಳು ನೆಲದಿಂದ, ನೋವಿನಿಂದ ಸಿಡಿದ ಕತೆಗಳಾಗಿವೆ. ಹೈದ್ರಾಬಾದ್ ಕರ್ನಾಟಕದ ಕತೆಗಾರರ ಪೈಕಿ ಕಲಿಗಣನಾಥರ ಪಾತ್ರ ಬಹುದೊಡ್ಡದು.
ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
https://www.bookbrahma.com/book/bisila-bagina