Article

ಹಲವು ಕ್ಷೇತ್ರಗಳನ್ನು ಮುಖಾಮುಖಿಯಾಗಿಸಿರುವ ಕಾದಂಬರಿ ‘ಅಂತು’

ಅಂತು- ವಿಜ್ಞಾನ, ತಂತ್ರಜ್ಞಾನ, ತತ್ವಜ್ಞಾನ, ವಾಣಿಜ್ಯ, ವ್ಯವಹಾರ ಹೀಗೆ ಇಂಥ ಹಲವು ಕ್ಷೇತ್ರಗಳನ್ನು ಯಶಸ್ವಿಯಾಗಿ ತಮ್ಮ ಹೊಸ ಕಾದಂಬರಿಯ ಮೂಲಕ ಮುಖಾಮುಖಿಯಾಗಿಸಿದ್ದಾರೆ ಪ್ರಕಾಶ್ ನಾಯಕರು. ಇದು ಅವರ ಮೊದಲ ಕಾದಂಬರಿ ಎಂದರೆ ನಂಬಲು ಸಾಧ್ಯವಾಗುವುದಿಲ್ಲ. ಕಾದಂಬರಿಯ ಸಂರಚನೆ, ಭಾಷೆ, ಔಚಿತ್ಯ ಎಲ್ಲವೂ ಅಷ್ಟು ನಿಖರವಾಗಿವೆ.

ಇಂದಿನ ಮಾರ್ಕೆಟಿಂಗ್ ಲೋಕದಲ್ಲಿ ಪುನರ್ಜನ್ಮ ಎಂಬ ಧಾರ್ಮಿಕ ಅಥವಾ ದಾರ್ಶನಿಕ ನಂಬುಗೆಯನ್ನು ಹೇಗೆ ಪ್ರಾಡಕ್ಟ್ ಮಾಡಿಕೊಳ್ಳಬಹುದು ಎಂದು ಹೊರಡುವ ಕಂಪನಿಯೊಂದರ ಕಥಾನಕ ಎಂದು ಒಂದೇ ವಾಕ್ಯದಲ್ಲಿ ಕಾದಂಬರಿಯ ಕಥೆಯನ್ನು ಹೇಳಿಬಿಡಬಹುದಾದರೂ ಅದನ್ನು ಮೀರಿದ ಹಲವು ಧಾರೆಗಳು ಸುಮಾರು ೨೦೦ ಪುಟಗಳಲ್ಲಿ ಹರಡಿಕೊಂಡಿದೆ. ಬರೀ ಅದಷ್ಟೆ ಇದರ ಉದ್ದೇಶವಾಗಿದ್ದರೆ ಒಂದು ಸಣ್ಣಕತೆಯಲ್ಲಿ ಈ ಕಥಾನಕವನ್ನು ಮುಗಿಸಿಬಿಡಬಹುದಿತ್ತು. ಆದರೆ ಪ್ರಕಾಶ್ ನಾಯಕರ ನಿರೂಪಣೆ, ಪಾತ್ರಗಳ ಶಿಲ್ಪ, ಸ್ಥಳ, ಸಂಧರ್ಭಗಳ ವಿವರಣೆ ಎಲ್ಲವೂ ಈ ಕಥಾನಕವನ್ನು ೨೦೦ ಪುಟಗಳ ಧೀರ್ಘ ಕಾದಂಬರಿಯನ್ನಾಗಿ ಮಾಡಿದೆ.

ಸ್ವತಃ ಲೇಖಕರ ನಿರೂಪಣೆಯಿಂದ ಶುರುವಾಗುವ ಕಾದಂಬರಿ ಕ್ರಮೇಣ ಕಾದಂಬರಿಯ ಒಂದು ಪಾತ್ರದಿಂದ ಮತ್ತೊಂದು ಪಾತ್ರಕ್ಕೆ ವರ್ಗಾವಣೆಯಾಗುತ್ತ ಸಾಗುತ್ತದೆ. ನಡುವೆ ಕೆಲವೊಮ್ಮೆ ಈ ನಿರೂಪಣೆ ಲೇಖಕರದೋ ಅಥವಾ ಪಾತ್ರದ್ದೋ ಎಂದು ಅನಿಸದೇ ಇರದು. ದಿಗಂಬರ ಎಂಬ ಪಾತ್ರಕ್ಕೆ ಕಾದಂಬರಿಯಲ್ಲಿ ಬಹಳ ವಿಫುಲವಾದ ಜಾಗವನ್ನು ನೀಡಿರುವುದು ಕಥಾನಕವನ್ನು ಇನ್ನೂ ಮುಂದಕ್ಕೆ ಹಾಗೂ ಆಳಕ್ಕೆ ವಿಸ್ತರಿಸುವಲ್ಲಿ ನೆರವಾದರೂ ಸ್ವತಃ ಆ ಪಾತ್ರ ಕಾದಂಬರಿಯಲ್ಲಿ ಯಾವ ನಿರ್ಣಾಯಕ ಪಾತ್ರವನ್ನೂ ನಿರ್ವಹಿಸದೆ ಮಧ್ಯೆ ಮರೆಯಾಗುವುದು ಸ್ವಲ್ಪ ಯಾಕೋ ಕೊರೆಯೆನಿಸುತ್ತದೆ.

ಇನ್ನು ಕಾದಂಬರಿಯ ನಿರ್ಣಾಯಕ ಹಂತದಲ್ಲಿ ಬರುವ ಅನ್ಸೆಲ್ಮೋ ಆಗಿರಬಹುದು ಅಥವಾ ಅವನ ಹೆಂಡತಿಯನ್ನಾಗಿರಬಹುದು ಅವರಿಗೆ ಕಾದಂಬರಿಯ ಪ್ರಾರಂಭದಲ್ಲೇ ಇನ್ನೂ ಹೆಚ್ಚಿನ ಮಹತ್ವ ನೀಡಬಹುದಿತ್ತು.

ಇಡೀ ಕಾದಂಬರಿಯ ಕಥಾಭೂಮಿ ಅಮೆರಿಕಾ ಆಗಿರುವುದು ಕಾದಂಬರಿಯ ಹರಹನ್ನು ಬರೀ ಕನ್ನಡದ ಲೋಕಕ್ಕಷ್ಟೆ ಅಲ್ಲದೆ ಅದರ ಆಚೆ ಇಟ್ಟು ನೋಡುವಂತೆ ಮಾಡಿದೆ.

ದೇಹ-ಆತ್ಮ- ಜನ್ಮ- ಪುನರ್ಜನ್ಮ ಎಂಬ ಪುರಾತನ, ಧಾರ್ಮಿಕ ವಿಚಾರಗಳು ಇಂದಿನ ಕಾರ್ಪೊರೆಟ್ ಜಗತ್ತಿನಲ್ಲಿ ಸಿಕ್ಕು ಹೇಗೆಲ್ಲ ತಳಮಳಿಸುತ್ತದೆ ಎಂದು ಶೋಧಿಸುವುದು ಕಾದಂಬರಿಯ ಮುಖ್ಯ ಉದ್ದೇಶದಂತೆ ತೋರುತ್ತದೆ. ಇಂಥ ವಿಶಿಷ್ಟವಾದ ವಸ್ತುವಿಗೆ 'ಅಂತು' ಎಂಬ ಶೀರ್ಷಿಕೆ ತುಂಬ ಸರಳವಾಯಿತೇನೋ ಅನಿಸಿತು; "ಅಗ್ನಿಹಂಸ" ಎಂಬುದು ಹೆಚ್ಚು ಸೂಕ್ತ ಅನಿಸಿತು.

ತಂತ್ರಜ್ಞಾನ, ಯಂತ್ರಜ್ಞಾನ, ಮುಂದೆ ಮನುಷ್ಯನ ದಿನ ದಿನದ ಬದುಕಿನಲ್ಲಿ ಹೇಗೆಲ್ಲ, ಯಾವೆಲ್ಲ ಬದಲಾವಣೆಗಳನ್ನು, ಅವಸವ್ಯಗಳನ್ನು ಸೃಷ್ಟಿಸಬಲ್ಲವು ಎಂಬುದನ್ನು ಶೋಧಿಸುವ ನೂರಾರು ಸಿನಿಮಾಗಳು, ವೆಬ್ ಅವತರಣಿಕೆಗಳು ಬಂದಿವೆ. ಅದರಲ್ಲೂ ನೆಟ್ ಫ್ಲಿಕ್ಸ್ ನಲ್ಲಿ ಬಂದ "ಬ್ಲ್ಯಾಕ್ ಮಿರರ್" (ಕಪ್ಪು ಕನ್ನಡಿ ಅಥವಾ ಕರಾಳ ಕನ್ನಡಿ) ಎಂಬ ವೆಬ್ ಸರಣಿ ತನ್ನ ಒಂದೊಂದು ಎಪಿಸೋಡುಗಳಲ್ಲಿಯೂ ಮನುಷ್ಯ ಹಾಗೂ ತಂತ್ರಜ್ಞಾನಗಳ ನಡುವಿನ ಸಂಬಂಧಗಳನ್ನು ವ್ಯಂಗ್ಯ ವಿಷಾದದ ವಿಭಿನ್ನ ಕಥಾನಕಗಳ ಮೂಲಕ ದಂಗುಬಡಿಸುತ್ತದೆ.

ಆದರೆ ಕನ್ನಡ ಸಾಹಿತ್ಯಲೋಕದಲ್ಲಿ ಈ ವಿಷಯಗಳ ಮೇಲೆ ಇನ್ನೂ ಅಷ್ಟಾಗಿ ಕೃಷಿ ನಡೆದಿಲ್ಲ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ನಾಯಕರ 'ಅಂತು' ಕಾದಂಬರಿ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತದೆ. ತಮ್ಮ ಮೊದಲ ಕಾದಂಬರಿಯಲ್ಲೇ ಇಂಥ ವಿಶಿಷ್ಟ ವಸ್ತು ವಿಷಯವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅವರಿಂದ ಇನ್ನೂ ಹೆಚ್ಚಿನದನ್ನು ಖಂಡಿತಾ ನಿರೀಕ್ಷಿಸಬಹುದು. ಅವರಿಗೆ ಅಭಿನಂದನೆಗಳು:)

ಮೌನೇಶ್ ಎಲ್. ಬಡಿಗೇರ್