ನಿನ್ನೆ ರಾತ್ರಿ ಎಂಟು ಮುಕ್ಕಾಲರವರೆಗೂ
ಮೈಗೆ ಮೈ ತಾಗಿಸಿ ಇಸ್ಪೀಟಾಡುತ್ತಾ ಕುಳಿತಿದ್ದವರು
ಎರಡೂ ಮುಕ್ಕಾಲು ಗುಂಪುಗಳಾಗಿ
ಇಂದು ಕಚ್ಚಾಡಿಕೊಳ್ಳುತ್ತಿದ್ದಾರೆ
ಕಲ್ಲಿನೇಟಿನ ಬಿಸಿಗೆ
ತಾರಸಿ ಮೇಲಿದ್ದ ಪಾರಿವಾಳದ ರೆಕ್ಕೆ ಮುರಿಯುತ್ತದೆ
ಕಿವಿಗೂ ಉಸಿರುಗಟ್ಟುವಂತೆ
ಯುದ್ಧದ ರಣಕಹಳೆ ಊದಲ್ಪಡುತ್ತದೆ;
ಅವರುಗಳ ಎದೆಯಲ್ಲಿ
ಕಿಟಕಿಗೆ ಗಲ್ಲ ಆನಿಸಿ
ನೋಡುತ್ತಿರುವ ನನ್ನೆದೆಯ
ಆಕಾಶವಾಣಿಯಲ್ಲಿ ಶಾಂತಿಯ ವಾರ್ತೆ ಬಿತ್ತರಗೊಳ್ಳುತ್ತದೆ-
‘ಬುದ್ಧಂ ಶರಣಂ ಗಚ್ಛಾಮಿ....’
ತಕ್ಷಣಕ್ಕೆ ನನ್ನ ತಲೆ ತೂಕಹಾಕುತ್ತದೆ
ಹೌದು! ಬುದ್ಧನಿಲ್ಲ ಅಲ್ಲಿ
ಅವನನ್ನೊಯ್ಯಬೇಕಾಗಿದೆ ನಾನು- ಮಿಡಿತ ಮರೆತ ಹೃದಯಗಳ ಒಳಕ್ಕೆ
ಹುಡುಕತೊಡಗುತ್ತೇನೆ ಅಟ್ಟ ಸೇರಿರುವ ಬುದ್ಧನ ಮೂರ್ತಿಯನ್ನು
ಅಷ್ಟು ಸುಲಭವಾಗಿ ಸಿಕ್ಕೀತೇ?
ಹ್ಞಾ! ಸಿಕ್ಕಿತು! ಸಿಕ್ಕಿತು!
ನನ್ನ ಕೈಯ್ಯೊಳಗಣ ಬುದ್ಧ ರಣಾಂಗಣ ಸೇರಿಕೊಳ್ಳುತ್ತಾನೆ
ಗುಂಪುಗಳ ಮಧ್ಯೆ ನಿಂತ ನಾನೀಗ ಖಾಲಿ ಕ್ಯಾಸೆಟ್ಟು
ದೊಣ್ಣೆ, ಮಚ್ಚುಗಳ ಭಯಕ್ಕೆ ನನ್ನ ಪದಕೋಶ ಬರಿದಾಗುತ್ತದೆ
ಅಂದು ಒಂದು ದಿನ ಬುದ್ಧನೂ ನಿಂತಿದ್ದನಂತೆ ಹೀಗೆಯೇ-
ನೀರಿಗಾಗಿ ಕಚ್ಚಾಡುತ್ತಿರುವವರ ನಡುವೆ
ಆದರೆ ನನ್ನಂತೆ ಮಾತು ಮರೆತಿರಲಿಲ್ಲ
ಕೇಳಿದ್ದನಂತೆ- ‘ನೀರಿನ ಮೌಲ್ಯ ಹೆಚ್ಚೋ?
ಅಲ್ಲಾ ನಿಮ್ಮ ರಕ್ತದ್ದೋ?’
ಮುಂದೆ ನಡೆದದ್ದೆಲ್ಲಾ ಇತಿಹಾಸ
ಯೋಚಿಸಿದ ನನ್ನ ಮೆದುಳು ಆಸೆಬುರುಕತನದ ಟಾನಿಕ್ಕನ್ನು ನೆಕ್ಕಿತು-
ಹಾಗಾದರೆ ನಾನೂ ಬುದ್ಧನಾಗಬಾರದೇಕೆ?
ನಾನೂ ಕೇಳಿಯೇಬಿಟ್ಟೆ- ‘ನಿಮಗೆ ಧರ್ಮ ಮುಖ್ಯವೋ?
ನಿಮ್ಮ ರಕ್ತವೋ?’
ಉತ್ತರವಿಲ್ಲ
ಕಣ್ಣುಗಳು ಮಾತ್ರ ಮಿಕಮಿಕ
ಬ್ಲಡ್‍ಬ್ಯಾಂಕ್‍ಗಳು ಬಂದಮೇಲೆ
ರಕ್ತದ ಮೌಲ್ಯ ಕುಸಿದಿದೆಯೋ ಏನೋ?
ನಾನಿನ್ನೂ ಅಪ್‍ಡೇಟ್ ಆಗಿಲ್ಲ; ದಡ್ಡ
ಮೆದುಳು ಮುಕ್ಕಾಲು ಹಾದಿ ಸವೆಸುವಾಗಲೇ
ಕಲ್ಲೊಂದು ತೂರಿಬರುತ್ತದೆ ನನ್ನ ಕಡೆಗೆ
ಹಣೆಯಲ್ಲಿ ಕೆಂಪು ಶಾಸನ ಕೆತ್ತಲ್ಪಡುತ್ತದೆ
ನಾನೀಗ ಓಡತೊಡಗುತ್ತೇನೆ ಮತ್ತು
ನನ್ನ ಜೊತೆಗೆ....
ಬುದ್ಧನೂ ಕೂಡಾ!!!!
ವಿಶ್ವನಾಥ್ ಎನ್. ನೇರಳಕಟ್ಟೆ
ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.
ಕೃತಿಗಳು: ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.
More About Author