Poem

ವರ್ಷಗಳಾರು

ಜೊತೆ ಹೆಜ್ಜೆಹಾಕಿದ ದಿನಗಳಿಗೆ
ವರ್ಷಗಳಾರು
ನಿನ್ನೆ ಮೊನ್ನೆ ಕೈ ಹಿಡಿದ ನೆನಪುಗಳಿಗೆ
ಮಕ್ಕಳಿಬ್ಬರು.

ವರ್ಷದ ಪ್ರೀತಿಗೆ ಹರ್ಷದ ರೀತಿಗೆ
ಕಳೆಯಿತಾರು.
ಕಾಲದ ಓಟಕ್ಕೆ ದಿನಗಳ ಆಟಕ್ಕೆ
ಉರುಳಿತಾರು.

ಕನಸೋ? ನನಸೋ? ಕನವರಿಕೆಯಲ್ಲೆ
ಕಾಲ ಉರುಳುತ್ತಿದೆ.
ಹಗಲೋ? ಇರುಳೋ? ಎಣಿಕೆಯಲ್ಲೆ
ದಿನ ಹೊರಳುತ್ತಿದೆ.

ಕ್ಷಣ ತಪ್ಪಾದರೂ ಮಾತಿಲ್ಲದ ಮೌನ ಪ್ರತಿಭಟನೆ
ಮಾತಿಗಿಂತ ಹರಿತಾಗಿ ಮೌನದ ಈಟಿ
ಹೇಳುವುದು ತಿದ್ದಿ ನಡೆಯುವ ದಾಟಿ
ಹೆಜ್ಜೆ ಹಾಕಲಿ ಹೇಗೆ ತಪ್ಪುಗಳಿಲ್ಲದೆ ?

ಕಳೆದ ದಿನದಿನವೂ ಹೊಸತಿತ್ತು
ಮನಸಿತ್ತು ಮುನಿಸಿತ್ತು
ಜಾರಿದ ಕ್ಷಣಕ್ಷಣವೂ ಸೊಗಸಿತ್ತು
ಒಲವಿತ್ತು ವರಸೆಯಿತ್ತು.

ಭಿನ್ನ ಹೆಜ್ಜೆ ಸಹಜ ನಡಿಗೆಗೆ
ದಾರಿ ಮಾತ್ರ ಸಾಗುತಲಿರಲಿ
ಅಳು-ನಗುಗಳ ಬೆಸುಗೆಗೆ
ವರ್ಷಗಳುರುಳುತ್ತಿರಲಿ ಪ್ರೀತಿ ಚಿಗುರುತಿರಲಿ

- ಅಂಬರೀಷ ಎಸ್‌.ಪೂಜಾರಿ

ವಿಡಿಯೋ
ವಿಡಿಯೋ

ಅಂಬರೀಷ ಎಸ್. ಪೂಜಾರಿ

ಅಂಬರೀಷ ಎಸ್. ಪೂಜಾರಿ ಅವರು ಬಿಜಾಪುರ ಜಿಲ್ಲೆಯ ಯಕ್ಕುಂಡಿಯವರು. ಪ್ರಾಥಮಿಕ ಶಿಕ್ಷಣವನ್ನು ಯಕ್ಕುಂಡಿಯಲ್ಲೇ ಮುಗಿಸಿ, ಬಬ್ಲೇಶ್ವರದಲ್ಲಿ ಶಿಕ್ಷಣದಲ್ಲಿ ನಂತರದ ಶಿಕ್ಷಣ ಹಾಗೂ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದರು. ಸದ್ಯ ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ ಅಧೀಕ್ಷಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೃತಿಗಳು: ಪರಿವರ್ತನೆ (ಕವನ ಸಂಕಲನ), ಕರೋನ ಮತ್ತು ಇತರೆ ಕವಿತೆಗಳು (ಕವನ ಸಂಕಲನ).

More About Author