Poem

ವಂದೇ ಕನ್ನಡ

ವಂದೇ ಕನ್ನಡ ಜೈ ವಂದೇ ಕನ್ನಡ
ವಂದೇ ಕನ್ನಡ ಜಯಜಯತೋ ಕನ್ನಡ

ಕನ್ನಡಾಂಬೆಯ ತೇರು ಹೊರಡಲಿದೆ
ಬಂದು ಎಲ್ಲ ಕೂಡಿ
ಮಾತೃಭಾಷೆಯ ಘೋಷ ಮೊಳಗಲಿದೆ
ಒಂದುಗೂಡಿ ಹಾಡಿ

ಪಂಪ ಪೊನ್ನರಿಗೆ ರನ್ನ ಜನ್ನರಿಗೆ
ಅಕ್ಕರೆ ನೀಡಿದ ನುಡಿಯು
ಹರಿಹರ ರಾಘವ ಕುಮಾರವ್ಯಾಸರ
ಅಕ್ಕರಗಳೇ ಮುನ್ನುಡಿಯು

ಬಸವೇಶ್ವರರ ಕ್ರಾಂತಿ ಕಹಳೆಯು
ಬೆಳಗುತಲಿದೆ ಎದೆಯನ್ನು
ಅನುಭಾವಿಗಳ ಬೋಧನೆ- ಚಿಂತನೆ
ನೀಡುತಲಿದೆ ಮುದವನ್ನು

ಹಲವು ಹೊಳೆಗಳ ಸಂಸರ್ಗದಿಂದ
ಅಸೀಮ ಸಾಗರದಿರವು
ಹಲವು ಹಕ್ಕಿಗಳ ಕಲರವದಿಂದೆ
ಸುಂದರ ಕನ್ನಡ ತರುವು

ವಂದೇ ಕನ್ನಡ ಜೈ ವಂದೇ ಕನ್ನಡ
ವಂದೇ ಕನ್ನಡ ಅನ್ನೋಣ ಸಂಗಡ

ಉತ್ತರ ಹೈಮಾಚಲದೆತ್ತರದ
ನಿಲುವಾಗಲಿ ನಮ್ಮಿರವು
ಕನ್ನಡ ಭಾಷೆಯ ಸ್ವಾಭಿಮಾನಕೆ
ಬಲು ಹಿಗ್ಗಲಿ ನಮ್ಮುರವು

ಬಂಧುರ ಭಾವದ ಲಲಿತ ಲತೆಗಳಿಗೆ
ಕನ್ನಡ ವೃಕ್ಷದ ಕಸುವು
ಏಳು ಬಣ್ಣಗಳು ಕೋಟಿ ಕನಸುಗಳು
ಕನ್ನಡ ಹಿರಿದಾಗಸವು

ಹಲವು ಧರ್ಮಗಳು ಹಲವು ಜಾತಿಗಳು
ಸಂಸ್ಕೃತಿ ಇಂದು ಅನೇಕ
ಜಾತಿ ಪಂಥ ಮತ ಭೇದವ ಮರೆತು
ಕನ್ನಡವಾಗಲಿ ಏಕ

ವಂದೇ ಕನ್ನಡ ಜೈ ವಂದೇ ಕನ್ನಡ
ವಂದೇ ಕನ್ನಡ ಮರೆಯೋಣ ಪಂಗಡ

ಗಗನಕು ಎತ್ತರ ಆಗಲಿ ನಾಡು......
ಭೂಮಿಗು ಬಿತ್ತರ ಆಗಲಿ ನಾಡು......
ಸಲಿಲದ ಹನಿಗಳು ಸಾರಿ ಹೇಳಲಿ
ಕನ್ನಡಾಂಬೆಗೆ ನಮನ...
ಅಂದದ ಮಾತೆಗೆ ಅಂದಣವಾಗಲಿ
ನಾಡಿನುತ್ಥಾನ ಗಮನ...

ವಂದೇ ಕನ್ನಡ ಜೈ ವಂದೇ ಕನ್ನಡ
ಆಡೋಣ ಕನ್ನಡ ಉಳಿಸೋಣ ಕನ್ನಡ
ವಂದೇ ಕನ್ನಡ ಜೈ ವಂದೇ ಕನ್ನಡ
ಬಳಸೋಣ ಕನ್ನಡ ಬೆಳೆಸೋಣ ಕನ್ನಡ
***
ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author