Poem

ಉಮರ್ ದೇವರಮನಿ ಅವರ ಮೂರು ಗಝಲ್ ಗಳು

ಈ ಮರೆಮಾಡಲಾಗದ ಪ್ರೀತಿಯನ್ನು ಮುಚ್ಚಿಡೋಕೆ ಆಗುತ್ತಾ
ಹೃದಯದಲಿ ಮುಚ್ಚಿಟ್ಟಿದ್ದನ್ನು ಕಣ್ಣಲಿ ಬಚ್ಚಿಡೋಕೆ ಆಗುತ್ತಾ

ಹೃದಯ ತುಂಬಿದ ಮೇಲೆ ಕಣ್ಣಿನಲಿ ಹರಿಯಲೇ ಬೇಕು
ಹರಿಯುವ ಈ ನದಿಗೆ ಅಣೆಕಟ್ಟನು ಕಟ್ಟೋಕೆ ಆಗುತ್ತಾ

ಅವರೇನು ಇವರೇನು ಅನ್ಕೊಂತಾರೆ ಅನ್ಕೊಳ್ಳಿ ಬಿಡು
ನೀ ಅನ್ಕೊಂಡಿದ್ದನ್ನು ಬೇರೆಯವರು ಅನ್ಕೊಳ್ಳೋಕೆ ಆಗುತ್ತಾ

ಅಗೋ ಅಗಲುತ್ತಿರುವ ಆ ಅಪ್ಪುಗೆಯನು ಕರೆದು ಬಿಡು
ಬೆನ್ನಿಗೆ ಬೆನ್ನು ತೋರಿಸಿ ಹೀಗೆ ಮಾತಾಡೋಕೆ ಆಗುತ್ತಾ

ನೀ ಮುಗುಳು ನಕ್ಕಾಗಗೆಲ್ಲಾ ಹೂ ಅರಳುವುದನು ಕಂಡಿದ್ದೇನೆ
ಘಮ ಘಮಿಸುವ ಪರಿಮಳವನು ಕಟ್ಟಿಡೋಕೆ ಆಗುತ್ತಾ

ಪ್ರೀತಿಸುವವರು ಸತ್ತಿರಬಹುದು ಅವರ ಗುರುತು ಅಳಿದಿರಬಹುದು
ಕುಣಿತೋಡಿ ಪ್ರೀತಿಯನು ಸಮಾಧಿ ಮಾಡೋಕೆ ಆಗುತ್ತಾ

ನೀ ಮೀಟಿದ ನೆನಪುಗಳಿಗೆ ಗಝಲ್ ಬರೆಯಲು ಕುಳಿತಿರುವೆ
ಅಕ್ಷರಗಳೇ ಮೂಡದಾದಗ ಪದಗಳನು ಬರೆಯೋಕೆ ಆಗುತ್ತಾ

*****************

ಎರಡೂ ಕಡೆಯು ನಾನೇ ಯಾರನು ಸೋಲಿಸಲಿ
ಇಬ್ಬರ ರಕುತವೂ ಕೆಂಪು ಯಾರನು ಕೊಲ್ಲಿಸಲಿ

ಮಾನವ ಮಾನವನಾಗಿ ಹುಟ್ಟಿದ್ದಾನಷ್ಟೇ ಇಲ್ಲಿ
ಯಾರನು ಹಿಂದೂವಾಗಿಸಲಿ ಮುಸ್ಲಿಮನಾಗಿಸಲಿ

ಏನನು ಬೋಧಿಸಿದವು ಈ ಜಗದ ಧರ್ಮಗಳು
ಮಾನವನು ಉಳಿಯಲಿ ಬದುಕಲಿ ಪ್ರೀತಿಸಲಿ

ಎಲ್ಲಾ ನದಿಗಳು ಸೇರುವುದು ಸಾಗರದಲ್ಲಿಯೇ
ಅದನ್ನೇಕೆ ಹಳ್ಳವಾಗಿಸಲಿ ಸಣ್ಣ ಕೊಳ್ಳವಾಗಿಸಲಿ

ನೀನು ಯಾರಿಗಾಗಿ ಬದುಕಿದೆ ಎಲೇ ಸಾಕಿಯೇ
ನಿನ್ನನು ಹೇಗೆ ಪ್ರೀತಿಸಲಿ ದ್ವೇಷಿಸಲಿ ರಮಿಸಲಿ

ಪ್ರಕೃತಿಯೇನೋ ನೀಡಿದೆ ಒಂದೇ ಭೂಮಿಯನು
ಅದನ್ನೇಕೆ ಭಾರತವಾಗಿಸಲಿ ಪಾಕಿಸ್ತಾನವಾಗಿಸಲಿ

ಈ ಜಗವೆಲ್ಲಾ ನಿನ್ನದಾಗಿರುವಾಗ 'ಉಮರ್'
ನಿನ್ನನೇಕೆ ಸರಹದ್ದುಗಳಿಗೆ ಸೀಮಿತವಾಗಿಸಲಿ

*****************

ಅವನ ಕಲ್ಲು ಮನಸ್ಸೂ ಕರಗುತ್ತದೆ ಎಲ್ಲರೆದುರಿಗಲ್ಲ
ಬರಡು ರೆಪ್ಪೆಗಳೂ ತೇವಗೊಳ್ಳುತ್ತವೆ ಎಲ್ಲರೆದುರಿಗಲ್ಲ

ಜಾರುವ ಕಂಬನಿಗೆ ಗೋಡೆ ಕಟ್ಟಲು ಸಾಧ್ಯವೇ ಸಾಕಿ
ಮರೆಯಲಿ ಹನಿಯೆರಡು ಉದುರುತ್ತದೆ ಎಲ್ಲರೆದುರಿಗಲ್ಲ

ಭಾವವನು ಭಾರವಾಗಿ ಹೊತ್ತ ಹಗುರ ಜೀವಿಯಿದು
ಒಂದಿಷ್ಟು ಅತ್ತು ಹಗುರವಾಗುತ್ತದೆ ಎಲ್ಲರೆದುರಿಗಲ್ಲ

ದುಂಬಿಗಳಿಲ್ಲದ ಜೇನುಗೂಡು ಕಲ್ಲಿನ ತೋಟವಿದು
ಮುಳ್ಳುಗಳಿಲ್ಲಿ ಹೂವಾಗಿ ಅರಳುತ್ತವೆ ಎಲ್ಲರಮುಳ್ಳುಗಳು

ಜೇನುಂಡು ಸುವಾಸನೆಯನು ಸವಿಯುವವರೇ ಇಲ್ಲಿ
ಬರಿ ಹೂವಲ್ಲ ಮುಳ್ಳುಗಳು ಬಾಡುತ್ತವೆ ಎಲ್ಲರೆದುರಿಗಲ್ಲ

ಕಲ್ಲಿನ ಮೇಲೆ ಕೊರೆದ ನಂದನ ವನವಿದೆ ಅವನೊಳಗೆ
ಅಲ್ಲಿ ಎಲ್ಲವೂ ಅಳಿಯದೆ ಉಳಿಯುತ್ತವೆ ಎಲ್ಲರೆದುರಿಗಲ್ಲ

ಹೇಳಿಕೊಳ್ಳಲು ಸಾಕಷ್ಟಿದೆ ಈ ಗಟ್ಟಿ ಮಣ್ಣಲಿ 'ಉಮರ್'
ಇದು ತೋಡಿದಷ್ಟು ಮೃದುವಾಗುತ್ತದೆ ಎಲ್ಲರೆದುರಿಗಲ್ಲ

ಉಮರ್ ದೇವರಮನಿ

ಲೇಖಕ ಉಮರ್ ದೇವರಮನಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನವರು. ಇತಿಹಾಸದಲ್ಲಿ ಎಂ.ಎ ಪದವೀಧರರು. ಮಾನ್ವಿಯ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಆಂಗ್ಲ ಉಪನ್ಯಾಸಕರು. ಹೊಸ ತಲೆಮಾರಿನ ಗಜಲ್ ಬರಹಗಾರರ ಪೈಕಿ ವಿಭಿನ್ನವಾಗಿ ನಿಲ್ಲುವವರು. ಮೊದಲ ಪ್ರಕಟಿತ ಕೃತಿ ‘ರಾಗವಿಲ್ಲದಿದ್ದರೂ ಸರಿ’ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದಿಂದ ಪ್ರಕಟವಾಗಿದೆ.

More About Author