ಲೇಖಕ, ಕತೆಗಾರ ಶರಣಗೌಡ ಬಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ತಿಳಗೂಳದವರು. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಶರಣಗೌಡ ಬಿ. ಪಾಟೀಲ ಅವರ ಸ್ಟೇಷನ್ ಪೇಶಂಟ ! ಕತೆ ನಿಮ್ಮ ಓದಿಗಾಗಿ..
ಅದೊಂದು ಚಿಕ್ಕ ರೈಲ್ವೆಸ್ಟೇಷನ್. ಕಲಾಲಿ ಊರಿಗೆ ಹತ್ತಿರವಾದ್ದರಿಂದ ಕುಲಾಲಿ ಸ್ಟೇಷನ್ ಅಂತ ಹಳದಿ ಬೋರ್ಡ್ ಮೇಲೆ ತ್ರಿಭಾಷೆಯಲ್ಲಿ ಬರೆಯಲಾಗಿತ್ತು. ಅಲ್ಲಿರೋದು ಒಂದು ರೂಮಿನ ಕಛೇರಿ ಕಟ್ಟಡ. ಚಿಕ್ಕ ಪ್ಲಾಟ ಫಾರ್ಮ. ಅದರ ಮುಂದೆ ಮೂರ್ನಾಲ್ಕು ಕಲ್ಲಿನ ಆಸನಗಳು ಮಾತ್ರ ಕಾಣುತಿದ್ದವು. ಅಲ್ಲಿಂದ ಹತ್ತುವ ಇಳಿಯುವ ಪ್ರಯಾಣಿಕರ ಸಂಖ್ಯೆ ಕೂಡ ಬೆರಳೆಣಿಕೆಯಷ್ಟಿತ್ತು. ಸುತ್ತ ಮುತ್ತ ಹಳ್ಳಿಯ ಪ್ರಯಾಣಿಕರು ಮಾತ್ರ ಅಲ್ಲಿಂದ ಹತ್ತಿ ಇಳಿಯುತಿದ್ದರು. ಪ್ಯಾಸೆಂಜರ್ ರೈಲು ನಿಂತರೆ ಎಕ್ಸಪ್ರೇಸ್ ರೈಲು ನಿಲ್ಲದೆ ಚುಕ್ ಬುಕ್ ಸದ್ದು ಮಾಡುತ್ತಾ ಹಾಗೇ ಹೋಗುತಿದ್ದವು. ಅದು ಪ್ರಮುಖ ರೈಲ್ವೆ ಮಾರ್ಗವಾದ್ದರಿಂದ ರೈಲುಗಳ ಓಡಾಟ ನಿತ್ಯ ನಿರಂತರವಾಗಿತ್ತು. ತಮ್ಮೂರಿನ ಸ್ಟೇಷನಿಂದ ರೈಲುಗಳ ಓಡಾಟ ನೋಡಿ ಕುಲಾಲಿ ಜನರಿಗೆ ಎಲ್ಲಿಲ್ಲದ ಖುಷಿಯಾಗುತಿತ್ತು. ಕಲಬುರಗಿ , ಸೋಲಾಪೂರ ಮತ್ತಿತರ ಕಡೆ ಬಾಜಾರು, ಆಸ್ಪತ್ರೆ ಅಂತ ಸುತ್ತ ಮುತ್ತಲಿನ ಹಳ್ಳಿಯ ಜನ ಕೂಡ ಹೋಗಿ ಬರುವದು ಸಾಮಾನ್ಯವಾಗಿತ್ತು.
ಎಂಬತ್ತರ ವಯೋವೃದ್ಧ ಗುರಪ್ಪ ತಿಂಗಳ ತಪಾಸಣೆಗಾಗಿ ಸೋಲಾಪೂರ ಆಸ್ಪತ್ರೆಗೆ ಪ್ರತಿ ತಿಂಗಳು ತಪ್ಪದೆ ಹೋಗಿ ಬರುತಿದ್ದ. ಅವತ್ತು ಇವನು ತಪಾಸಣೆಗೆ ಹೋಗುವದಿತ್ತು ಇವನ ಏಕೈಕ ಮಗಳು ಮಲ್ಲಮ್ಮ ಬೇಗ ಎದ್ದು ಅಪ್ಪನ ಎಲ್ಲ ರೀತಿಯ ವ್ಯವಸ್ಥೆ ಮಾಡಿದಳು. ಅಪ್ಪನ ಸೇವೆ ಮಾಡುವದರಲ್ಲಿ ಮಲ್ಲಮ್ಮಳಿಗೆ ಬೇಸರವೇ ಇರಲಿಲ್ಲ. ಅಪ್ಪನ ಬೇಕು ಬೇಡ ಪೂರೈಸುತ್ತಾ ತಂದೆಗೆ ತಕ್ಕ ಮಗಳಾಗಿ ಎಲ್ಲರ ಕಡೆಯಿಂದ ಭೇಷ್ ಅನಿಸಿಕೊಂಡಿದ್ದಳು. ಮದುವೆ ವಯಸ್ಸಿಗೆ ಬಂದರೂ ಮಗಳು ಕನ್ಯೆಯಾಗಿ ಉಳಿದಿರುವದು ಗುರಪ್ಪನಿಗೆ ಬೇಸರ ತರಿಸಿತ್ತು. ಮಗಳ ಬಗ್ಗೆ ಸದಾ ಯೋಚಿಸುತ್ತಾ ನನ್ನ ಮಗಳ ಮದುವೆ ಮಾಡಲು ನನ್ನಿಂದ ಆಗುತಿಲ್ಲವಲ್ಲ ಅಂತ ನೋವು ಸಂಕಟ ಹೊರ ಹಾಕುತಿದ್ದ.
ಅಪ್ಪ ತನಗೆ ಇನ್ನೂ ಮದುವೆ ಮಾಡಿಲ್ಲ ಅನ್ನುವ ಕೊರಗು ಮಲ್ಲಮ್ಮಳಿಗೆ ಎಂದೂ ಕಾಡಲಿಲ್ಲ. ನಾನು ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋದರೆ ಅಪ್ಪನ ಗತಿ ಏನು? ಅವ್ವ ಇದ್ದಿದ್ದರೆ ಯಾವ ಚಿಂತೆಯೂ ಇರುತಿರಲಿಲ್ಲ ಅವಳು ತೀರಿ ಹೋದ ಮೇಲೆ ಇವನಿಗೆ ಯಾರು ನೋಡ್ಕೋತಾರೆ ಅಂತ ಯೋಚಿಸಿದಳು. ನನ್ನ ಮದುವೆ ಬಗ್ಗೆ ಚಿಂತೆ ಮಾಡಬ್ಯಾಡ ಅಂತ ಮಲ್ಲಮ್ಮ ಅನೇಕ ಸಲ ಸಮಾಧಾನ ಹೇಳಿದಳು. ನಿನ್ನ ಮದುವೆ ಮಾಡದೇ ಮನ್ಯಾಗ ಇಟ್ಕೊಂಡು ಕೂಡಲು ಆಗ್ತಾದೇನು ? ಮದುವೆ ಮಾಡಿ ಕೊಡುವದು ನನ್ನ ಕರ್ತವ್ಯ ಬರೀ ನನ್ನ ಬಗ್ಗೆ ಯೋಚಿಸಿದರೆ ಹೇಗೆ? ಹೆಂಗಾದರು ಆಗ್ತಾದೆ ಆ ದೇವರಿದ್ದಾನೆ ಅಂತ ಹೇಳಿದಾಗ ನೀನು ಚಿಂತೆ ಮಾಡಿದರೆ ಆರೋಗ್ಯ ಕೆಡುತ್ತದೆ. ಮೊದಲು ನಿನ್ನ ಆರೋಗ್ಯದ ಕಡೆ ಗಮನ ಕೊಡು ನನ್ನ ಮದುವೆ ಯೋಗ ಕೂಡಿ ಬಂದರೆ ತಾನೇ ಆಗ್ತಾದೆ ಅಂತ ಹೇಳಿ ಬಿಸಿ ರೊಟ್ಟಿ ತೊಗರಿ ಬ್ಯಾಳಿ ಪಲ್ಯ ಕಾರೆಳ್ಳು ಹಿಂಡಿ ಹಾಕಿ ಮಲ್ಲಮ್ಮ ಮುಂಜಾನೆ ಬುತ್ತಿ ಕಟ್ಟಿದಳು. ಮನೆ ಕಡೆ ಹುಶಾರ ಅಂತ ಹೋಗುವಾಗ ಗುರಪ್ಪ ಎಚ್ಚರಿಸಿದ. ನನ್ನ ಕಡೆ ಚಿಂತಿ ಮಾಡಬ್ಯಾಡ ಡಾಕ್ಟರಿಗೆ ಸರಿಯಾಗಿ ತೋರಿಸು ಅವರು ಬರೆದುಕೊಟ್ಟ ಗೋಲಿ ಪೂರ್ತಿ ತಿಂಗಳಾಗುವಷ್ಟು ತೊಗೊಂಡು ಬಾ. ಸೋಲಾಪೂರ ಡಾಕ್ಟರ್ ಬರೆದುಕೊಟ್ಟ ಗೋಲಿ ಇಲ್ಲಿ ಸಿಗೋದು ಅನುಮಾನ ಅಂತ ಉಪದೇಶ ನೀಡಿದಳು.
ಗುರಪ್ಪ ತಲೆಯಾಡಿಸಿ ಡಾಕ್ಟರ್ ಫೈಲು ಬುತ್ತಿ ಗಂಟು ಹಿಡಿದುಕೊಂಡು ಸ್ಟೇಷನ್ ಕಡೆ ಹೆಜ್ಜೆ ಹಾಕಿದ. ಸ್ಟೇಷನ್ ಊರ ಬಿಟ್ಟು ಸ್ವಲ್ಪ ದೂರದಲ್ಲಿತ್ತು. ಕಾಲ್ನಡಿಗೆಯಿಂದ ಬರುವಷ್ಟರಲ್ಲಿ ಸಂಪೂರ್ಣ ದಣಿದು ಹೋಗಿದ್ದ. ಮಳೆಗಾಲದ ದಟ್ಟ ಮೋಡ ಸೂರ್ಯನಿಗೆ ಹೊರ ಬರದಂತೆ ಬಿಗಿಯಾಗಿ ಹಿಡಿದುಕೊಂಡಿದ್ದವು. ಶೀತ ಗಾಳಿ ರಭಸದಿಂದ ಬೀಸುತಿತ್ತು. ಆಗಾಗ ಸಣ್ಣ ಹನಿಗಳು ಮೋಡದಿಂದ ಉದುರಿ ಹರೆಗೆಟ್ಟ ಇವನ ಜೀವಕ್ಕೆ ತ್ರಾಸ ನೀಡುತಿದ್ದವು. ಹಳೆಯ ರೋಗಗಳಾದ ಕೆಮ್ಮು ದಮ್ಮು ತಂಪು ವಾತಾವರಣಕ್ಕೆ ಮತ್ತಷ್ಟು ಚಿಗುರಿ ಉಸಿರು ಗಟ್ಟಿಸಿದವು. ಸ್ಟೇಷನ್ ಪಕ್ಕದ ಸಿಮೇಂಟ ಕಂಬಕ್ಕೆ ಬೆನ್ನು ಹಚ್ಚಿ ಗುರಪ್ಪ ಉಸ್ಸಂತ ಕುಳಿತ. ಬೇರೆ ಬೇರೆ ಕಡೆ ಹೋಗುವ ಪ್ರಯಾಣಿಕರು ಆಗಲೇ ಪ್ಯಾಸೆಂಜರ್ ರೈಲಿಗಾಗಿ ಕಾಯುತ್ತಿದ್ದರು.
ವಾಡಿ ಸೋಲಾಪೂರ ಪ್ಯಾಸೆಂಜರ್ ರೈಲು ನಿಗದಿತ ಸಮಯಕ್ಕೆ ಬರದೆ ಎರಡು ಗಂಟೆ ತಡವಾಗಿ ಬರಲಿದೆ ಅಂತ ಸ್ಟೇಷನ್ ಮಾಸ್ಟರ ಅಲೌನ್ಸ ಮಾಡಿದಾಗ ಗುರಪ್ಪನಿಗೆ ಬೇಸರ ತರಿಸಿತು. ಈ ಹಾಳಾದ ರೈಲು ನಾನು ಸೋಲಾಪೂರಕ್ಕೆ ಹೋಗುವಾಗಲೇ ತಡವಾಗಿ ಬರಬೇಕೇ? ಅಂತ ಗೊಣಗಿದ. ಇನ್ನೇನು ಮಾಡೋದು ಕುಳಿತು ಸುಸ್ತಾಗ್ತಿದೆ ಅಂತ ತಲೆಗೆ ಸುತ್ತಿದ ರುಮಾಲು ಬಿಚ್ಚಿ ಅಲ್ಲೇ ಮುಸುಕು ಹಾಕಿ ಮಲಗಿದ. ಗುರಪ್ಪನ ಉಬ್ಬಸು ಮತ್ತಷ್ಟು ಜಾಸ್ತಿಯಾಯಿತು. ಪದೇ ಪದೇ ಕೆಮ್ಮುತ್ತಾ ತ್ರಾಸ ಪಡುತೊಡಗಿದ. ಇವನ ಸ್ಥಿತಿ ಗಾಬರಿ ತರಿಸಿತು. ಅಂದು ಸ್ಟೇಷನಿನಲ್ಲಿ ಗುರಪ್ಪನಿಗೆ ಹೊರತು ಪಡಿಸಿ ಇವನ ಊರಿನ ಯಾರೋಬ್ಬ ಪ್ರಯಾಣಿಕರು ಇರಲಿಲ್ಲ .
ಏ ಕಾಕಾ ನೀನು ಯಾವ ಊರಿಗೆ ಹೋಗಬೇಕು. ಎಷ್ಟು ಕೆಮ್ಮತಿದ್ದೀಯಲ್ಲ ಅಂತ ಒಬ್ಬ ಹತ್ತಿರ ಬಂದು ಪ್ರಶ್ನಿಸಿದ. ಕೆಮ್ಮು ಉಬ್ಬಸಿನಿಂದ ಇವನಿಗೆ ಉತ್ತರ ಕೊಡಲು ಆಗದೇ ಚಡಪಡಿಸಿದಾಗ ಅವನೇನು ಹೇಳತಾನೆ ? ಅವನ ಪರಸ್ಥಿತಿ ಅವನಿಗೆ ಆಗಿದೆ ಸಂತಿ ಮುಗಿದಂಗ ಕಾಣಸ್ತಿದೆ ಅಂತ ಮತ್ತೊಬ್ಬ ಬಂದು ಧನಿಗೂಡಿಸಿದ. ಜನ ಜಮಾವಣೆಗೊಂಡು ಗುಸುಗುಸು ಚರ್ಚೆ ಆರಂಭಿಸಿದರು. ಇದು ಬಹುಶಃ ಕೊರೋನಾ ಕೇಸ್ ಇದ್ದಿರಬೇಕು ಈ ರೀತಿಯ ಕೆಮ್ಮು ದಮ್ಮು ಎಂದರೆ ನೂರಕ್ಕೆ ನೂರು ಅದೇ ಇರ್ತಾದೆ ಅಂತ ಒಮ್ಮತಕ್ಕೆ ಬಂದರು.
ಕೊರೋನಾ ಪೇಶಂಟ ಅನ್ನುವ ಸುದ್ದಿ ಆಗಲೇ ಸ್ಟೇಷನ್ ತುಂಬಾ ಹಬ್ಬಿತು. ಇವನು ಆಸ್ಪತ್ರೆಗೆ ಒಯ್ಯುವದರೊಳಗೆ ಬದುಕುಳಿಯುವದು ಕಷ್ಟ ಅಂತ ಮಾತಾಡಿಕೊಂಡರು. ಪೇಶಂಟ ಹತ್ತಿರ ಹೋಗೋದು ಬೇಡ ನಾವು ಇವನಿಂದ ಆದಷ್ಟು ದೂರ ಇರುವದೇ ಛೊಲೊ ಮುಂಜಾಗ್ರತೆ ವಹಿಸಿದರೆ ಯಾವ ತೊಂದರೆ ಇಲ್ಲ ಅಂತ ನಾಲ್ಕು ಹೆಜ್ಜೆ ಹಿಂದೆ ಸರಿದು ನಿಂತರು. ಆಂಬ್ಯುಲೆನ್ಸ್ ತರಿಸಿ ಆಸ್ಪತ್ರೆಗೆ ಕಳಿಸಬೇಕು ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ ಅಂತ ಸಫಾರಿ ಧರಿಸಿದ ವ್ಯಕ್ತಿಯೊಬ್ಬ ಸಲಹೆ ನೀಡಿದ. ಅವನ ಮಾತಿಗೆ ಎಲ್ಲರೂ ಸಮ್ಮತಿಸಿದರು. ಅಷ್ಟರಲ್ಲಿ ಯಾರೋ ಒಬ್ಬ ಆಂಬ್ಯುಲೆನ್ಸಗೆ ಕರೆ ಮಾಡಿ ವಿಷಯ ತಿಳಿಸಿದ.
ಹತ್ತು ನಿಮಿಷ ಕಳೆದಿರಲಿಲ್ಲ ಆಂಬ್ಯುಲೆನ್ಸ್ ಸದ್ದು ಮಾಡುತ್ತಾ ಕುಲಾಲಿ ಸ್ಟೇಷನ್ ಮುಂದೆ ಪ್ರತ್ಯಕ್ಷವಾಯಿತು. ಆಂಬ್ಯುಲೆನ್ಸ್ ದಿಂದ ಇಬ್ಬರು ಸಿಬ್ಬಂದಿ ಕೆಳಗಿಳಿದು ಗುರಪ್ಪನ ಹತ್ತಿರ ಬಂದವರೆ ಏ ಕಾಕಾ ಎದ್ದೇಳು ನಡೀ ನಮ್ಮ ಜೊತೆ ಅಂತ ಆಜ್ಞಾಪಿಸಿದರು. ಗುರಪ್ಪ ಮುಸುಕು ತೆರೆದು ಎಲ್ಲಿಗೆ ಅಂತ ಗಾಬರಿಯಾದ. ಆಸ್ಪತ್ರೆಗೆ ಎಂದಾಗ ರೈಲ್ವೆ ಬಂತಾ ? ಅಂತ ಮರು ಪ್ರಶ್ನಿಸಿದ. ಎಲ್ಲಿ ಬರ್ತಾದೆ? ನಮ್ಮ ಆಂಬ್ಯುಲೆನ್ಸ್ ಇದೆ ಕರೆದುಕೊಂಡು ಹೋಗತೀವಿ ಅಂತ ಇನ್ನೊಬ್ಬ ಜೋರು ದನಿಯಲ್ಲಿ ಹೇಳಿದ. ಯಾವ ಆಸ್ಪತ್ರೆಗೆ? ಅಂತ ಪುನಃ ಪ್ರಶ್ನಿಸಿದಾಗ ದೊಡ್ಡ ಆಸ್ಪತ್ರೆಗೆ ಎಂದನು. ನಾನು ಸೋಲಾಪೂರ ಆಸ್ಪತ್ರೆಗೆ ಹೋಗಬೇಕು ಆ ಆಸ್ಪತ್ರೆಗೆ ಯಾಕೆ ಬರಲಿ ಅಂತ ಪ್ರಶ್ನಿಸಿದ. ಅದೆಲ್ಲ ಪ್ರಶ್ನೆ ಮಾಡಬೇಡ ಈಗ ನಮ್ಮ ಜೊತೆ ಬರಲೇಬೇಕು ಅಂತ ಖಡಕ್ಕಾಗಿ ಹೇಳಿದಾಗ ಅವರು ಒತ್ತಾಯಪೂರ್ವಕ ಇವನಿಗೆ ಆಂಬ್ಯುಲೆನ್ಸ್ ಹತ್ತಿಸಿದರು.
ದೊಡ್ಡ ಆಸ್ಪತ್ರೆಯಲ್ಲಿ ಗುರಪ್ಪನಿಗೆ ಏನೇನೂ ಟೆಸ್ಟ್ ಮಾಡಬೇಕು ಅದೆಲ್ಲಾ ಮಾಡಿ ಮುಗಿಸಿದರು. ಅಷ್ಟರಲ್ಲಿ ರಾತ್ರಿ ಕಳೆದು ಬೆಳಗಾಯಿತು. ಸೋಲಾಪೂರಕ್ಕೆ ಹೋದ ಅಪ್ಪ ಇನ್ನೂ ಯಾಕೆ ಬಂದಿಲ್ಲ ಅಂತ ಮಲ್ಲಮ್ಮ ಬಿಳಿ ಬಿಳಿ ಕಣ್ಣು ಬಿಡುತ್ತಾ ದಾರಿ ಕಾಯುತಿದ್ದಳು. ತಲೆಯಲ್ಲಿ ನೂರಾರು ಕೆಟ್ಟ ಯೋಚನೆ ಸುಳಿದಾಡಿ ಸಂಕಟ ಪಟ್ಟಳು. ಕತ್ತಲೆ ಆವರಿಸುತಿದ್ದಂತೆ ಇವಳ ತಳಮಳ ಹೆಚ್ಚಾಯಿತು. ಮನೆಯಿಂದ ಹೊರ ಬಂದು ನಮ್ಮ ಅಪ್ಪನಿಗೆ ಯಾರಾದರು ನೋಡೀರೇನು ಅಂತ ಸ್ಟೇಷನಿನಿಂದ ಬರುವವರಿಗೆ ವಿಚಾರಿಸಿದಳು. ಇಲ್ಲ ಅನ್ನುವ ಉತ್ತರವೇ ಎಲ್ಲರಿಂದ ಕೇಳಿ ಬಂದಿತು . ಅಪ್ಪನ ಯೋಚನೆಯಲ್ಲೇ ಕಾಲ ಕಳೆದಾಗ ನಿದ್ದೆ ಕೂಡ ಹತ್ತಿರ ಸುಳಿಯಲಿಲ್ಲ.
ಮರುದಿನ ಮುಂಜಾನೆ ಹಾಲು ಮಾರುವ ಹಣಮಂತ ಕೈಯಾಗೊಂದು ಫೈಲ್ ಹಿಡಿದು ನೇರವಾಗಿ ಇವಳ ಹತ್ತಿರ ಬಂದ. ಮಲ್ಲಮ್ಮಳಿಗೆ ಗಾಬರಿ ಮೂಡಿತು. ಇದು ಅಪ್ಪನ ದವಾಖಾನಿ ಫೈಲು ಇದನ್ನು ನೀನ್ಯಾಕೆ ತೊಗೊಂಡು ಬಂದೆ ಅಂತ ಪ್ರಶ್ನಿಸಿದಳು. ನಾನು ಮುಂಜಾನೆ ಸ್ಟೇಷನಿಂದ ಹಾಲು ತೆಗೆದುಕೊಂಡು ಬರುವಾಗ ಅಲ್ಲಿ ಈ ಫೈಲ್ ಸಿಕ್ಕಿತು ಇದರ ಮ್ಯಾಲ ಗುರಪ್ಪ ಕಾಕಾನ ಹೆಸರಿರೋದು ನೋಡಿ ತೊಗೊಂಡು ಬಂದೆ ಅಂತ ಹೇಳಿದ. ಅಪ್ಪ ಇದನ್ನು ಯಾಕೆ ಬಿಟ್ಟು ಹೋದ. ಹೋಗುವಾಗ ಖರ್ಚಿಗೆ ಕೊಟ್ಟ ರುಪಾಯಿ ಕೂಡ ಇದರಲ್ಲೇ ಇವೆ. ಫೈಲ್ ಇಲ್ಲದೆ ಡಾಕ್ಟರಿಗೆ ಹೇಗೆ ತೋರಸ್ತಾನೆ. ಅವರು ಗೋಲಿ ಔಷಧಿ ಬರೆದುಕೊಟ್ಟರೆ ಹ್ಯಾಂಗ ತರ್ತಾನೆ ? ಅಂತ ಆತಂಕ ಹೊರ ಹಾಕಿದಳು. ಅಸಲಿ ವಿಷಯ ಗೊತ್ತಾಗದೆ ಗೊಂದಲದಲ್ಲಿ ಮುಳುಗಿದಳು.
ಗುರಪ್ಪನ ಕೋವಿಡ ಟೆಸ್ಟ್ ರಿಪೋರ್ಟ ನೆಗೆಟಿವ್ ಬಂದಿದ್ದು ಪರೀಕ್ಷೆಯಿಂದ ಗೊತ್ತಾಯಿತು. ದೊಡ್ಡ ಆಸ್ಪತ್ರೆಯವರು ಇವನಿಗೆ ಮನೆಗೆ ಹೋಗಲು ತಿಳಿಸಿದರು. ನಾನು ಮನೆಗೆ ಹೋಗೋದಿಲ್ಲ ಸೋಲಾಪೂರ ಆಸ್ಪತ್ರೆಗೆ ಹೋಗಬೇಕು ಆ ನನ್ನ ಫೈಲ ಎಲ್ಲಿ ಅಂತ ಪ್ರಶ್ನಿಸಿದ. ಯಾವ ಫೈಲು? ಜೊತೆಗೆ ನೀನು ಏನೂ ತಂದಿಲ್ಲ ಖಾಲಿ ಬಂದಿರುವೆ. ಅಲ್ಲೇ ಬಿಟ್ಟು ಬಂದಿರಬೇಕು ಹೋಗಿ ನೋಡು ಅಂತ ಸಲಹೆ ಕೊಟ್ಟರು. ಅವರ ಮಾತು ಗುರಪ್ಪನಿಗೆ ಗಾಬರಿ ತರಿಸಿತು. ಆಸ್ಪತ್ರೆ ಫೈಲ್ ಎಲ್ಲಿ ಬಿಟ್ಟೆ ?, ಕುಲಾಲಿ ಸ್ಟೇಷನದಲ್ಲೇ ಬಿಟ್ಟು ಬಂದಿರಬೇಕು ಅಂತ ಯೋಚಿಸಿ ರೈಲು ಹತ್ತಿದ. ಆದರೆ ಟಿಕೆಟ್ ಪಡೆಯಲು ಇವನ ಹತ್ತಿರ ಹಣ ಕೂಡ ಇರಲಿಲ್ಲ. ಹಾಗೇ ಪ್ರಯಾಣಿಸಿದಾಗ ಮಧ್ಯೆದಲ್ಲಿ ಟಿಕೇಟ ಚಕಿಂದಾರ ಬಂದು ಟಿಕೇಟ್ ಚೆಕ್ ಮಾಡಿದ. ಇವನ ಬಳಿ ಟಿಕೆಟ್ ಇಲ್ಲದಿರುವದು ಗೊತ್ತಾಗಿ ದಂಡ ಪಾವತಿಸುವಂತೆ ಸೂಚಿಸಿದ.
ನನ್ನ ಹತ್ತಿರ ಹಣ ಇಲ್ಲ ಅಂತ ಗುರಪ್ಪ ತನ್ನ ಖಾಲಿ ಕಿಸೆ ತೋರಿಸಿ ಅಸಹಾಯಕತೆ ವ್ಯಕ್ತಪಡಿಸಿದಾಗ ನಾಟಕ ಮಾಡಬೇಡ ದಿನಾ ನಿನ್ನಂಥವರು ಬಹಳ ಜನ ಸಿಗ್ತಾರೆ ಏನೇನೋ ನೆವ ಹೇಳತಾರೆ. ಪೋಲೀಸರಿಗೆ ಒಪ್ಪಿಸಿದರೆ ಆಗಲೇ ಬುದ್ಧಿ ಬರ್ತಾದೆ ನಡೀ ನನ್ನ ಜೊತೆ ಅಂತ ರೇಗಾಡಿ ಜೊತೆಗೆ ಕರೆದುಕೊಂಡು ಹೋದ. ಗುರಪ್ಪ ಹೋಗಿ ಆಗಲೇ ಮೂರು ದಿನ ಕಳೆದು ಹೋದವು. ಅಪ್ಪ ಮನೆಗೆ ಬರದಿರುವದು ಮಲ್ಲಮ್ಮಳ ಆತಂಕ ಮತ್ತಷ್ಟು ಹೆಚ್ಚಾಯಿತು. ಊರಿಗೆ ಬರಲು ಅಪ್ಪನ ಹತ್ತಿರ ಹಣ ಬೇರೆ ಇಲ್ಲ ಎಲ್ಲಿದ್ದಾನೊ ಏನೊ? ಎಲ್ಲಿ ಮಲಗಿದನೊ? ಏನು ಊಟ ಮಾಡಿದನೊ? ಏನೇನು ಕಷ್ಟ ಅನುಭವಿಸಿದನೊ? ಅಂತ ಸಂಕಟ ಪಟ್ಟಳು.
ವಿಷಯ ಚಂದ್ರಶೇಖರ ಮಾಸ್ತರಿಗಾದರು ತಿಳಿಸಬೇಕು ಅವರೇ ಏನಾದರು ದಾರಿ ತೋರಸ್ತಾರೆ ಅಂತ ಯೋಚಿಸಿ ಮಾಸ್ತರ ಮನೆಗೆ ಓಡೋಡಿ ಬಂದಳು. ಮಲ್ಲಮ್ಮಳ ಗಾಬರಿಗೊಂಡ ಮುಖ ನೋಡಿ ಏನು ವಿಷಯ ಅಂತ ಮಾಸ್ತರ ಪ್ರಶ್ನಿಸಿದರು. ಮಲ್ಲಮ್ಮ ಎಲ್ಲ ವಿಷಯ ವಿವರಿಸಿ ಕಣ್ಣೀರು ತೆಗೆದಾಗ ಚಿಂತಿ ಮಾಡಬ್ಯಾಡ ನಿಮ್ಮ ಅಪ್ಪ ಕಾಣೆಯಾದ ಬಗ್ಗೆ ಪೋಲೀಸ ಸ್ಟೇಷನಿಗೆ ಕಂಪ್ಲೇಂಟ್ ಕೊಟ್ಟರಾಯಿತು ಅವರೇ ಪತಾ ಹಚ್ಚತಾರೆ ಅಂತ ಸಲಹೆ ನೀಡಿದರು. ಆಗ ಇವಳಿಗೆ ಸ್ವಲ್ಪ ಧೈರ್ಯ ಬಂದಂತಾಂಗಿ ಒಂದು ಕಂಪ್ಲೇಂಟ್ ಅರ್ಜಿ ಬರೆಯಿಸಿ ತಾನೇ ಖುದ್ದು ಪೋಲೀಸ ಸ್ಟೇಶನಿಗೆ ಹೋಗಿ ಕೊಟ್ಟು ಬಂದಳು.
ಸುಮಾರು ಮೂರ್ನಾಲ್ಕು ದಿನ ಕಳೆದ ಮೇಲೆ ಅಪ್ಪ ಸೋಲಾಪೂರ ಪೋಲೀಸ ಸ್ಟೇಷನಲ್ಲಿರುವದು ಗೊತ್ತಾಯಿತು. ಅಪ್ಪ ಪೋಲೀಸ ಸ್ಟೇಷನಿಗೆ ಯಾಕೆ ಹೋದ ? ಅವನೇನು ತಪ್ಪು ಮಾಡಿದ? ವಯಸ್ಸಾದ ನಮ್ಮ ಅಪ್ಪನ ಮೇಲೆ ಪೋಲೀಸರಿಗೇಕೆ ಸಿಟ್ಟು ಅಂತ ಮಲ್ಲಮ್ಮ ನಾನಾ ರೀತಿಯಲ್ಲಿ ಯೋಚಿಸಿದಳು. ಉತ್ತರ ಮಾತ್ರ ಸಿಗಲಿಲ್ಲ . ಕೊನೆಗೆ ಮಾಸ್ತರ ಸಹಾಯ ಪಡೆದು ಅಪ್ಪನಿಗೆ ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾದಳು. ಮನೆಗೆ ಬಂದಮೇಲೆ ಗುರಪ್ಪ ನಡೆದ ಹಕೀಕತ ಎಳೆಎಳೆಯಾಗಿ ಬಿಡಿಸಿ ಹೇಳಿದ. ಕಾಣದ ಕೊರೋನಾ ಇಷ್ಟೆಲ್ಲಾ ಅವಘಢಕ್ಕೆ ಕಾರಣವಾಯಿತು ಅಂತ ಮಲ್ಲಮ್ಮ ಹಿಡಿಶಾಪ ಹಾಕಿ ನಿಟ್ಟುಸಿರು ಬಿಟ್ಟಳು.
ಶರಣಗೌಡ ಬಿ.ಪಾಟೀಲ ತಿಳಗೂಳ
ಲೇಖಕ ಶರಣಗೌಡ ಪಾಟೀಲ ಅವರು ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಹಿಟ್ಟಿನ ಗಿರಣಿ ಕಿಟ್ಟಪ್ಪ (ಲಲಿತ ಪ್ರಬಂಧಗಳ ಸಂಕಲನ)’, ತೊರೆದ ’ಗೂಡು (ಕಾದಂಬರಿ), ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು (ಕಥಾ ಸಂಕಲನ), ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ (ಕಾದಂಬರಿಗಳು)
ಪ್ರಶಸ್ತಿ-ಪುರಸ್ಕಾರಗಳು: ಇವರ ‘ಹಿಟ್ಟಿನ ಗಿರಣಿ ಕಿಟ್ಟಪ್ಪ ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ. ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ. ಸಾಧಕ ಶಿಕ್ಷಕ ಪ್ರಶಸ್ತಿ, ಕನ್ನಡ ನಾಡು ಲೇಖಕರ ಓದುಗರ ಸ ಸಂಘದಿಂದ ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಪುಸ್ತಕ ಪ್ರಶಸ್ತಿ ಗುರುಕುಲ ಪ್ರತಿಷ್ಠಾನದಿಂದ ಸಾಹಿತ್ಯ ಶರಭ ಪ್ರಶಸ್ತಿಗಳು ಲಭಿಸಿವೆ.
More About Author