ಕತೆಗಾರ, ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಆಸಕ್ತಿ ಕ್ಷೇತ್ರವಾಗಿದ್ದು, ಪ್ರಸ್ತುತ ಅವರು ಬರೆದಿರುವ ʻಸಿಹಿಯ ನೆನಪಿನಲ್ಲಿ' ಕತೆ ನಿಮ್ಮ ಓದಿಗಾಗಿ...
ಸಚಿನ್ ಕಾಲೇಜಿಂದ ಹೊರಟು ಆಕಾಶವಾಣಿಯ ಗೇಟಿನ ಬಳಿ ನಿಂತಿದ್ದ. ಮುಂದೆ ಪೊಲೀಸರು ಬೈಕ್ ಗಳನ್ನು ಹಿಡಿಯುತ್ತಿದ್ದರು. ಆತ ಈ ವಿಷಯವನ್ನು ಅರಿತು ತನ್ನ ಹಾಸ್ಟೆಲಿಗೆ ಆಮೇಲೆ ಹೋದರೆ ಆಯಿತು ಎಂದು ಯೋಚಿಸಿ ಕಲಾಭವನದ ಮುಂದೆ ಇರುವ ಮಹಾರಾಜ ಉದ್ಯಾಯನವನಕ್ಕೆ ಹೋದನು.
ಆ ಉದ್ಯಾನವನದಲ್ಲಿ ಪ್ರೇಮಿಗಳಿಬ್ಬರೂ ಬೆರಳಿಗೆ ಬೆರಳು ಕೂಡಿಸಿ ಕುಳಿತಿದ್ದರು. ಅವರನ್ನು ನೋಡಿದ ತಕ್ಷಣ ‘ಸಿಹಿ’ ತಲೆಗೆ ಬಂದಳು. ಕಪ್ಪು ಕೂದಲಿನ, ದುಂಡು ಮುಖದ, ಎರಡು ಕಡೆಯಲ್ಲಿ ಬದನೆಕಾಯಿ ಜಡೆಯನ್ನು ಹಾಕಿದ ಬಿಳಿಯಾದ ಹುಡುಗಿ. ಅಬ್ಬಾ! ಅವಳ ಸೌಂದರ್ಯ ಎಂಥ ಚಂದ. ಶಾಲೆಗೆ ಸೇರಿದ ಒಂದೇ ವಾರದಲ್ಲಿ ಎಲ್ಲರನ್ನು ಆಕರ್ಷಿಸಿದಳು.
ಆ ದಿನವೇ ಸಿಹಿಗೆ ನನ್ನ ಪ್ರೇಮದ ವಿಷಯ ತಿಳಿಸಬೇಕಿತ್ತು. ಇಷ್ಟವಿದ್ದರೆ ಒಪ್ಪುತ್ತಿದ್ದಳು. ಇಲ್ಲದಿದ್ದರೆ ‘ನನಗೆ ನೀನು ಇಷ್ಟವಿಲ್ಲ’ ಎನ್ನುತ್ತಿದ್ದಳು. ‘ನಾನೆಂಥ ಮೂರ್ಖ’ ಎನಿಸಿತು. ನನ್ನ ಮನಸ್ಸು ನನಗೆ ಕ್ಯಾಕರಿಸಿ ಹೋಗಿತ್ತು. ನನ್ನೊಂದಿಗೆ ಆಕೆ ನಗುತ್ತಾ ಮಾತನಾಡುತ್ತಿದ್ದಳು. ಎಲ್ಲ ವಸ್ತುಗಳನ್ನು ನನ್ನ ಬಳಿ ವಿನಿಮಯ ಮಾಡಿಕೊಳ್ಳುತ್ತಿದ್ದಳು. ನನ್ನ ಹುಟ್ಟುಹಬ್ಬಕ್ಕೆ ‘ಗಣೇಶನ ಮೂರ್ತಿ’ ಹುಡುಗರಿಯಾಗಿ ನೀಡಿದಳು. ಮಳೆಗಾಲದಲ್ಲಿ ನಮ್ಮ ಶಾಲೆಯ ವರ್ಣದಲ್ಲಿ ಆಕೆಯ ಜೊತೆ ನೆನೆಯುತ್ತಾ ಸುತ್ತಾಡುತ್ತಿದ್ದೇನೆ. ಆಕೆ ನನ್ನ ಜೊತೆ ಮಾತ್ರ ಸಲಿಗೆಯಿಂದಿದ್ದಳು.
ಈ ಯುವ ಪ್ರೇಮಿಗಳನ್ನು ನೋಡಿ ನನ್ನ ಪ್ರೇಮವು ನೆನಪಿಗೆ ಬಂತು ಎಂದು ತನ್ನ ಮನದಲ್ಲಿ ಯೋಚನೆ ಮಾಡಿಕೊಂಡು ಕಪ್ಪು ರಸ್ತೆಯ ಮೇಲೆ ಬೈಕ್ ಓಡಿಸಿಕೊಂಡು ಹಾಸ್ಟೆಲ್ ಪಾರ್ಕಿಂಗ್ ಜಾಗಕ್ಕೆ ಬಂದು ನಿಂತುಕೊAಡ. ಅಡುಗೆ ಕೆಲಸ ಮಾಡುತ್ತಿದ್ದ ಸರಸ್ವತಿ ಆತನನ್ನು ನೋಡಿ "ಲೋ... ಬೇಗ ಊಟಕ್ಕೆ ಬಾರೋ, ಇಲ್ಲಾಂದ್ರೆ ಊಟ ಖಾಲಿ ಆಗುತ್ತೆ" ಎಂದು ಕೂಗಿದಳು. ಪ್ರೇಮದ ಲೋಕದಲ್ಲಿ ತೇಲುತ್ತಿದ್ದ ಸಚಿನ್ ಗೆ ನಡೆಯುವ ಶಕ್ತಿಯಿಲ್ಲವಾಗಿತ್ತು. ಆತನು ಕೇಳಗೆ ಇರುವ ಅವರ ಗೆಳೆಯನ ಕೊಠಡಿಗೆ ಹೋಗಿ ತಟ್ಟೆ ಎತ್ತಿಕೊಂಡು ಊಟಕ್ಕೆ ಹೋದನು. ಸಚಿನ್ ನೋಡಿ "ಇವನು ನಮ್ಮ ಹಾಸ್ಟೆಲ್ ಬಾಸ್" ಸರಸ್ವತಿ ಹೇಳಿದಳು. "ಮುಚ್ಕೊಂಡ್ ಊಟ ಹಾಕು" ಎಂದು ರೇಗಿ ಊಟ ಹಾಕಿಸಿಕೊಂಡು ಅಲ್ಲೇ ಕುಳಿತು ಊಟ ಮಾಡಿ ತಮ್ಮ ರೂಮಿಗೆ ಬಂದು ಕಾಲೇಜಿನಲ್ಲಿ ನೀಡಿದ ಪ್ರಾಜೆಕ್ಟ್ ವರ್ಕ್ ಮಾಡಲು ಕುಳಿತುಕೊಂಡ. ಸ್ವಲ್ಪ ಸಮಯದ ನಂತರ ಮುಂದೆ ಕುಳಿತಿದ್ದ ಕಿರಣ್ ಗೆ ತನ್ನ ಪ್ರಾಜೆಕ್ಟ್ ತೋರಿಸಿ "ಹೇಗಿದೆ?" ಎಂದನು. ಆತನು ಆ ಪ್ರಾಜೆಕ್ಟ್ ನೋಡಿ ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ.
ಸಂಜೆಯ ತಿಳಿ ಹೊತ್ತಿನಲ್ಲಿ ಹಾಸ್ಟೆಲ್ ನ ಒಳಾಂಗಣದಲ್ಲಿ ಕೆಲವು ಸ್ನೇಹಿತರು ಕ್ರಿಕೆಟ್ ಆಡುತ್ತಿದ್ದರು ಸಚಿನ್ ದೂರ ಕುಳಿತು ಅವರ ಆಟವನ್ನು ನೋಡುತ್ತಿದ್ದ. ಅಷ್ಟರಲ್ಲಿ ಒಂದು ಹಾವಿನ ಮರಿ ಆಟ ಆಡುತ್ತಿದ್ದ ಜಾಗಕ್ಕೆ ಬಂತು. ಎಲ್ಲರೂ ಆ ಹಾವಿನ ಮರಿ ನೋಡಿ ಓಡಿ ಹೋದರು. ಇವನು ಮಾತ್ರ ಅಲ್ಲೇ ಕುಳಿತು ಆ ಹಾವಿನ ಮರಿ ಅಲ್ಲಿಂದ ಹೋಗುವವರೆಗೂ ನೋಡುತ್ತಾ ಕುಳಿತುಕೊಂಡನು. ಇದು ಕೆರೆ ಹಾವು ಎಂಬುದು ಆತನ ಮನದಲ್ಲಿ ಬಂತು. ತಕ್ಷಣಕ್ಕೆ ಎಳೆ ವಯಸ್ಸಿನಲ್ಲಿ ಗೆಳೆಯರೊಂದಿಗೆ ಊರಿನಲ್ಲಿ ಇರುವ ಗದ್ದೆಯ ಬದಿಗಳ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಹಾವೊಂದು ತನ್ನ ಗೆಳೆಯನಿಗೆ ಕಚ್ಚಲು ಬಂದಾಗ ಎಲ್ಲರೂ ಸೇರಿ ಕೂಲಿನ ಸಹಾಯದಿಂದ ಸಾಯಿಸಿ ನೀರಿನ ಒಳಗೆ ಎಸಿದ್ದೆವು. ಮತ್ತೆ ಅದೇ ನೀರು ಇರುವ ಜಾಗದಲ್ಲಿ ಈಜಲು ಹೋದ ಸಂದರ್ಭದಲ್ಲಿ ನಾವು ಸಾಯಿಸಿದ ಹಾವು ತೇಲುತ್ತಿದ್ದನ್ನು ನೋಡಿ ಹೆದರಿ ಮನೆಗೆ ಓಡಿ ಬಂದದ್ದು. ಶಾಲೆಯ ಅಂಗಳಕ್ಕೆ ಹಾವು ಬಂದ ಸಮಯದಲ್ಲಿ ಶಿಕ್ಷಕರು ಆ ಹಾವಿನ ವಿವರಗಳನ್ನು ನೀಡುವುದು ಆತನಿಗೆ ನೆನಪು ಬಂತು. ಇವನ್ನೆಲ್ಲವನ್ನು ನೆನೆಯುತ್ತಾ
ಕುಳಿತಿರುವ ಸಂದರ್ಭದಲ್ಲಿ ಹಾಸ್ಟೆಲ್ ಗಂಟೆಯ ಶಬ್ದವಾಯಿತು. ಎಲ್ಲರೂ ತಟ್ಟೆ ಹಿಡಿದು 'ಕ್ಯೂ' ಮಾಡಿ ನಿಂತಿದ್ದರೂ. ಒಂದೇ ರುಚಿಯ ಊಟದ ಮೇಲೆ ಅವನಿಗೆ ಆಸಕ್ತಿ ಇರಲಿಲ್ಲ. ತನ್ನ ರೂಮಿನ ಒಳಗೆ ಹೋಗಿ ಆನ್ಲೈನ್ ಮೂಲಕ ಊಟ ಆರ್ಡರ್ ಮಾಡಿ ತರಿಸಿಕೊಂಡ.
ಎAದಿನAತೆ ಆಕಾಶವಾಣಿಯ ಪಕ್ಕದ ರಸ್ತೆಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆ ದೃಶ್ಯಗಳನ್ನು ತನ್ನ ಕಣ್ಣುಗಳಿಗೆ ಇಳಿಸಿಕೊಂಡಿದ್ದ. ಕಾಲೇಜು ಆವರಣದಲ್ಲಿ ತನ್ನ ಗೆಳೆಯರನ್ನು ಹುಡುಕಿದ ಯಾರು ಅಲ್ಲಿ ಇರಲಿಲ್ಲ. ಎಲ್ಲರೂ ಆಗಲೇ ಕೊಠಡಿ ಒಳಗೆ ಹೋಗಿದ್ದರು. ತರಗತಿಗೆ ತಡವಾಗಿದೆ ಎಂದು ತಿಳಿದು ಬೇಗನೆ ನಡೆದನು. ಅಷ್ಟರಲ್ಲಿ ಆಗಲೇ ಉಪನ್ಯಾಸಕರು ತರಗತಿಗಳನ್ನು ತೆಗೆದುಕೊಂಡಿದ್ದರು. ಈಗ ಹೋದರೆ ಏನು ಪ್ರಯೋಜನವಿಲ್ಲವೆಂದು ತಿಳಿದು ಕಾಲೇಜು ಅವರಣದಲ್ಲಿ ಇದ್ದ ಉದ್ಯಾನವನಕ್ಕೆ ಹೋಗಿ 'ನನ್ನ ಜೀವನ' ಎಂಬ ಒಂದು ಕವಿತೆಯನ್ನು ಬರೆದ. ಅಷ್ಟರಲ್ಲಿ ಅಲ್ಲಿಗೆ ನವೀನ್ ಬಂದು ''ಏನೋ ನಿನ್ ಲವರ್ ಬಗ್ಗೆ ಕವಿತೆ ಬರೆದಿದ್ದೀಯಾ" ಎಂದು ಕೇಳಿದ. ಈ ಮಾತು ಕೇಳಿದ ತಕ್ಷಣ ‘ಸಿಹಿ’ ಮತ್ತೆ ನೆನಪಾದಳು. "ನಾನು ನೆನಪಿಸಿಕೊಳ್ಳುವ ಹಾಗೆ ಆಕೆಯು ನನ್ನನ್ನು ನೆನೆದುಕೊಳ್ಳುತ್ತಾಳ" ಎಂಬ ಪ್ರಶ್ನೆಯನ್ನು ತನಗೆ ತಾನೇ ಮಾಡಿಕೊಂಡ. ಆಕೆ ಯಾವ ಕಾಲೇಜಿಗೆ ಸೇರಿದ್ದಾಳೆ ಎಂಬ ಮಾಹಿತಿಯು ಇವನಿಗೆ ಗೊತ್ತಿರಲಿಲ್ಲ. ಆಗಾಗ ಇವನು ಪ್ರೇಮಿಗಳನ್ನು ನೋಡುತ್ತಿದ್ದ ಸಮಯದಲ್ಲಿ ‘ಸಿಹಿ’ ತನ್ನ ಮನದಲ್ಲಿ ಬರುತ್ತಿದ್ದಳು. ಆ ಪ್ರೀತಿಯ ಅಲೆಯಲ್ಲಿ ತನ್ನ ಕಾಲವನ್ನು ಕಳೆಯುತ್ತಿದ್ದನು.
ಮಧ್ಯಾಹ್ನ ಕಾಲೇಜು ಬಿಟ್ಟಾಗ ನವೀನ್ ಮತ್ತು ಸಚಿನ್ ಇಬ್ಬರು ನಾಟಕ ನೋಡಲೆಂದು ಕಲಾಭವನಕ್ಕೆ ಹೊರಟರು. ರಸ್ತೆಯಲ್ಲಿ ಬಣ್ಣ-ಬಣ್ಣದ ಬಟ್ಟೆಗಳು, ವಿವಿಧ ಬಗೆಯ ಹಣ್ಣುಗಳು, ಪಾನಿ ಪುರಿ, ಗೋಬಿ ಮಂಚೂರಿ ಸೇರಿದ ಹಾಗೆ ಅನೇಕ ಅಂಗಡಿಗಳನ್ನು ನೋಡಿ ಕನಸುಗಳು ಮನಸ್ಸಿನಲ್ಲಿ ಹುಟ್ಟಿಕೊಂಡವು. ಇಬ್ಬರ ಬಳಿಯೂ ಹಣವಿರಲಿಲ್ಲ. ಕನಸುಗಳನ್ನು ತಮ್ಮ ಮನದಲ್ಲೇ ಪೂರೈಸಿಕೊಂಡು ಹಳೆ ಬಸ್ ನಿಲ್ದಾಣಕ್ಕೆ ಬಂದರು.
ಇಬ್ಬರು ಹಳೆ ಬಸ್ ನಿಲ್ದಾಣಕ್ಕೆ ಬಂದಾಗ ಹುಡುಗಿಯರು ಕಾಡುಗಳಲ್ಲಿ ಅಲೆದಾಡುತ್ತಾ ಮೇವು ಹುಡುಕುವ ಮೇಕೆಗಳಂತೆ ಓಡಾಡುತ್ತಿದ್ದರು. ಕಣ್ಣುಗಳಿಗೆ ಹಬ್ಬವೋ ಹಬ್ಬ. ಇಬ್ಬರಲ್ಲೂ ಏನೋ ಒಂಥರಾ ಖುಷಿ. ಹುಡುಗಿಯರ ಒಂದು ನೋಟಕ್ಕೆ ಇವರಲ್ಲಿ ಕನಸುಗಳು ಹುಟ್ಟಿಕೊಂಡವು. ಇಬ್ಬರ ಮನಸ್ಸು ಲಗಾಮು ಇಲ್ಲದ ಕುದುರೆಯಂತೆ ಓಡುತ್ತಿತ್ತು.
"ಹಾಯ್ ನವೀನ್" ರೂಪ ಕರೆದಾಗ ಮೈ ಮರೆತಿದ್ದ ಇಬ್ಬರು ದಿಗಿಲಾದರು.
"ನೀನೇನೆ ಇಲ್ಲಿ" ನವೀನ್ ಕೇಳಿದ.
"ನಾನು ಮತ್ತು ಸ್ನೇಹ ಆಸ್ಪತ್ರೆಗೆ ಬಂದಿದೀವಿ ಕಣೋ" .
"ಯಾಕೆ...?, ಯಾರಿಗೆ ಏನಾಯ್ತು".
"ಸ್ನೇಹನಿಗೆ ಸ್ವಲ್ಪ ಜ್ವರ".
"ತುಂಬಾನೇ ಹುಷಾರ್ ಇಲ್ವಾ ಅವಳಿಗೆ" ಆತಂಕದ ಧ್ವನಿಯಲ್ಲಿ ಕೇಳಿದ.
"ಸ್ವಲ್ಪ ತಲೆನೋವು ಅಂತಿದ್ಲು, ಈ ಪರ್ವಾಗಿಲ್ಲ ಬಿಡು".
"ಅವಳು ಎಲ್ಲಿಗೆ ಹೋದ್ಲು, ಈಗ್ ನಿನ್ ಜೊತೆ ಇಲ್ವಲ್ಲ" ಆಗ್ತಾ ಇತ್ತು ನೋಡುತ್ತಾ ಕೇಳಿದ.
"ಈಗ ತಾನೆ ಜಸ್ಟ್ ಬಸ್ಸಿನಲ್ಲಿ ಮನೆಗೆ ಹೋದ್ಲು".
"ಆಕೆ ನಾನು ಕೇಳಿದೆ ಅಂತ ಹೇಳು, ಓಕೆ ನಾ" ನಗುತ್ತಾ ಹೇಳಿದ.
"ಸರಿ... ಸರಿ... ಹೇಳ್ತೀನಿ ಬಿಡು, ನನಗೆ ಟೈಮ್ ಆಯ್ತು ಹೋಗ್ತೀನಿ" ಅಲ್ಲಿಂದ ರೂಪ ಹೊರಟು ಹೋದಳು.
ಆಕೆಯನ್ನು ಸುಮಾರು ಸಮಯದಿಂದ ನೋಡುತ್ತಿದ್ದ ಸಚಿನ್ "ಯಾಕೆ ಚೆನ್ನಾಗಿದ್ದಾಳೆ ಅಲ್ವಾ" ಎಂದು ಕೇಳಿದ.
"ಜಾಸ್ತಿ ಖುಷಿಯಾಗ್ಬೇಡ, ಆಕೆಗೆ ಆಲ್ರೆಡಿ ಲವರ್ ಇದ್ದಾನೆ" ತಟ್ಟನೆ ನವೀನ್ ಹೇಳಿದ. ಲವ್ವರ್ ಎಂಬ ಪದ ಕೇಳುತ್ತಲೇ ಸಚಿನ್ ಮನದಲ್ಲಿ ‘ಸಿಹಿ’ಯ ನೆನಪು ಬಂತು. ಆಕೆಯೊಂದಿಗೆ ಕಳೆದ ದಿನಗಳನ್ನು ತನ್ನ ಮನದಲ್ಲಿ ಯೋಚನೆ ಮಾಡುತ್ತಾ ನಿಂತನು.
ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳ ಗುಂಪು. ಎಲ್ಲರೂ ಆಟದ ಮೈದಾನದಲ್ಲಿ ವಿವಿಧ ಬಗೆ ಆಟಗಳನ್ನು ಆಡುತ್ತಿದ್ದರು. ರಮ್ಯಾ, ಸಿಂಚನ, ನಯನ ಮತ್ತು ನನ್ನ ಪ್ರೇಯಸಿ ಸಿಹಿ ನಾಲ್ಕು ಜನರು ಶಾಲೆಯ ಆವರಣದಲ್ಲಿ ಇದ್ದ ಸಣ್ಣ ಕೈತೋಟದಲ್ಲಿ ವಿವಿಧ ಬಗೆಯ ಸಸ್ಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ರಮ್ಯಾ ತೋಟದಲ್ಲಿ ಇದ್ದ ಕೆಂಪು ಗುಲಾಬಿಯನ್ನು ಕಿತ್ತು ಸಿಹಿಗೆ ನೀಡಿದಳು. ಆಕೆ ಆ ಗುಲಾಬಿಯನ್ನು ತನ್ನ ತಲೆಗೆ ಮುಡಿದುಕೊಂಡಳು. ಕೈತೋಟದಲ್ಲಿ ನಡೆಯುತ್ತಿರುವ ದೃಶ್ಯಗಳನ್ನು ಸಚಿನ್ ದೂರದಲ್ಲಿ ಕುಳಿತು ನೋಡುತ್ತಿದ್ದ. ಯಾವುದೇ ಆಟಕ್ಕೆ ಸೇರದೆ ಸಿಹಿಯನ್ನು ಹಿಂಬಾಲಿಸುವ ಕೆಲಸ ಮಾಡುತ್ತಿದ್ದನು. ಆ ನಾಲ್ಕು ಜನರು ಕೈತೋಟದಲ್ಲಿ ಸ್ವಲ್ಪ ಸಮಯ ಕಳೆದ ನಂತರ ಶಾಲೆಯ ವೇದಿಕೆ ಬಳಿ ಹೋಗಿ ಕುಳಿತುಕೊಂಡರು. ಸಚಿನ್ ಅವರನ್ನು ಹಿಂಬಾಲಿಸಿಕೊAಡು ಹೋಗಿ ಅವರು ಕುಳಿತಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಕುಳಿತು ಸಿಹಿಯನ್ನು ನೋಡುತ್ತಿದ್ದ. ಅಷ್ಟರಲ್ಲಿ ಶಾಲೆಯ ಗಂಟೆ ಬಾರಿಸಿದ್ದು ಎಲ್ಲರೂ ಅವಸರದಲ್ಲಿ ತಮ್ಮ ತರಗತಿಗಳಿಗೆ ಓಡಿದರು. ವೇದಿಕೆ ಹತ್ತಿರ ಕುಳಿತಿದ್ದ ನಾಲ್ಕು ಜನ ಘಂಟೆ ಶಬ್ದ ಕೇಳಿ ಓಡುತ್ತಿದ್ದ ಸಂದರ್ಭದಲ್ಲಿ ಸಿಹಿ ತನ್ನ ತಲೆಯಲ್ಲಿ ಮೂಡಿದಿದ್ದ ಗುಲಾಬಿ ಕೆಳಗೆ ಬಿತ್ತು. ಸಚಿನ್ ಒಂದೇ ಸಮನೆ ಓಡಿ ಬಂದು ಆ ಗುಲಾಬಿಯನ್ನು ತೆಗೆದುಕೊಂಡು ತನ್ನ ಬ್ಯಾಗಿನಲ್ಲಿ ಹಾಕಿಕೊಂಡ.
ಸ್ವಲ್ಪ ಸಮಯದ ನಂತರ ಎಲ್ಲರೂ ಕೊಠಡಿಯಿಂದ ಹೊರಗೆ ಹೋದರು. ಸಿಹಿ ಮತ್ತು ರಮ್ಯಾ ಇಬ್ಬರು ಕನ್ನಡ ಪುಸ್ತಕ ಓದುತ್ತಲೇ ಕುಳಿತರು. ಸಚಿನ್ ಆಕೆಗಾಗಿ ಕ್ರೀಡಾಂಗಣ, ಸಸ್ಯ ತೋಟ, ಶಾಲೆಯ ವೇದಿಕೆ ಎಲ್ಲಾ ಕಡೆ ಹುಡುಕಿದ ಆಕೆ ಎಲ್ಲೂ ಸಿಗಲಿಲ್ಲ. ಸ್ವಲ್ಪ ಹೊತ್ತು ಕಳೆದ ನಂತರ ಸಚಿನ್ ಬೇಸರದಿಂದ ತರಗತಿ ಒಳಗೆ ಹೋದ. ಅಲ್ಲಿ ಸಿಹಿ ಮತ್ತು ರಮ್ಯಾ ಕನ್ನಡ ಪುಸ್ತಕವನ್ನು ಓದುತ್ತಿದ್ದನ್ನು ನೋಡಿ ತುಂಬಾ ಖುಷಿ ಪಟ್ಟನು. ಆಕೆಯ ತಲೆಯಿಂದ ಕೆಳಗೆ ಬಿದ್ದಿದ್ದ ಗುಲಾಬಿಯನ್ನು ಅವಳಿಗೆ ನೀಡಿ ಮಾತನಾಡಿಸೋಣ ಎಂದು ತನ್ನ ಬ್ಯಾಗ್ಗೆ ಕೈ ಹಾಕಿ ಗುಲಾಬಿಯನ್ನು ತೆಗೆದುಕೊಂಡ. ಆ ಗುಲಾಬಿಯ ಎಲ್ಲಾ ದಳಗಳು ಉದುರಿ ದಂಟು ಮಾತ್ರ ಕೈಗೆ ಸಿಕ್ಕಿತು. ಆತನ ಈ ವರ್ತನೆ ನೋಡಿ ಸಿಹಿ ನಕ್ಕಳು.
"ನೀವು ಆಗಲಿ ತಲೆಗೆ ಮುಡಿದುಕೊಂಡ ಗುಲಾಬಿ ಇದು" ಎಂದನು.
"ನಿಮಗೆ ಎಲ್ಲಿ ಸಿಕ್ಕಿತು" ಎಂದು ಸಿಹಿ ಕೇಳಿದಳು.
"ನೀವು ವೇದಿಕೆ ಹತ್ತಿರ ಕುಳಿತಿದ್ದಾಗ ಕೆಳಗೆ ಬಿತ್ತು. ಆಗ ಎತ್ತಿಕೊಂಡೆ ಕೋಡೋಣ ಅಂತ ತುಂಬಾ ಕಡೆ ನಿಮ್ಮನ್ನು ಹುಡುಕಿದೆ ನೀವು ಸಿಗಲಿಲ್ಲ".
"ಹೌದಾ...".
"ಏನು ತುಂಬಾ ಓದ್ತಿದ್ದೀರಾ" ಎಂದನು.
"ಹಾಗೆ ನಾಳೆ ಕನ್ನಡ ಕಿರುಪರೀಕ್ಷೆ ಅಲ್ವಾ ಅದಕ್ಕೆ ಸ್ವಲ್ಪ ನೋಡ್ತಿದ್ದೆ" ಸಿಹಿ ನಗುತ್ತಾ ಹೇಳಿದರು.
ಸ್ವಲ್ಪ ಸಮಯ ಅವರ ಜೊತೆ ಹಾಗೆ ಮಾತನಾಡಿಕೊಂಡು ಕುಳಿತುಕೊಂಡ. ರಮ್ಯಾ ಯಾವುದೋ ಕೆಲಸವಿದೆ ಎಂದು ಅಲ್ಲಿಂದ ಎದ್ದು ಹೋದಳು. ಸಿಹಿ ಅಲ್ಲೇ ಓದಿಕೊಂಡು ಕುಳಿತಳು. ಅವಳನ್ನು ನೋಡುತ್ತ ಸಚಿನ್ ಕೂಡ ಅಲ್ಲೇ ಕುಳಿತುಕೊಂಡ.
"ನಾಳೆ ಪರೀಕ್ಷೆ ಓದಿದ್ದೀರಾ..." ಸಿಹಿ ನಗುತ್ತಾ ಕೇಳಿದರು.
"ಸ್ವಲ್ಪ ಓದಿದ್ದೇನೆ" ಎಂದನು.
"ಹಾಗಾದ್ರೆ ನಾಳೆ ನಿಮ್ಮ ಪಕ್ಕದಲ್ಲಿ ಕುಳಿತುಕೊಳ್ಳುವೆ ನನಗೂ ತೋರಿಸಿ" ಎಂದಳು.
"ಸರಿ... ಬನ್ನಿ, ತೋರಿಸುವೆ".
"ನೀವು ಏನು ಅಂದುಕೊಳ್ಳಲ್ಲ ಅಂದ್ರೆ ನಾಳೆ ನನಗೊಂದು ಪೆನ್ ತಗೊಂಡು ಬನ್ನಿ".
"ಹಾ... ಪಕ್ಕ ತರುವೆ" ನಗುತ್ತಾ ಹೇಳಿದ.
ಸ್ವಲ್ಪ ಸಮಯ ಕಳೆದ ನಂತರ ಹೊರಗೆ ಹೋಗಿದ್ದ ಎಲ್ಲರೂ ಮತ್ತೆ ತರಗತಿಯೊಳಗೆ ಬಂದರು. ಎಲ್ಲಾ ಹುಡುಗರು ಸಚಿನ್ ನೋಡುತ್ತಾ ತಮ್ಮ ಮನದಲ್ಲಿ ಪ್ರೀತಿ ಪ್ರೇಮದ ಬಗ್ಗೆ ಯೋಚಿಸಿ "ಏ... ಏ..." ಎಂದು ಕೂಗಿದರು. ಅಷ್ಟರಲ್ಲಿ ಸಮಾಜ-ವಿಜ್ಞಾನ ಶಿಕ್ಷಕರು ಬಂದರು. ಎಲ್ಲರೂ ತಮ್ಮ ತಮ್ಮ ಜಾಗದಲ್ಲಿ ಕುಳಿತುಕೊಂಡು ಪಾಠ ಕೇಳಿದರು. ಸಂಜೆಯ ಸಮಯವಾಯಿತು ಎಲ್ಲರೂ ಮನೆಯ ಕಡೆ ನಡೆದರು. ಸಚಿನ್ ತನ್ನ ಗೆಳೆಯರೊಂದಿಗೆ ಸಿ ಯನ್ನು ಹಿಂಬಾಲಿಸಿಕೊAಡು ಆಕೆ ಹಿಂದೆ ನಡೆದನು.
ಮರುದಿನ ಬೆಳಗ್ಗೆ ಬೇಗ ಎದ್ದು ಅಂಗಡಿಗೆ ಹೋಗಿ ಒಂದು ಸುಂದರ ಪೆನ್ ತೆಗೆದುಕೊಂಡು ಬಂದನು. ತನ್ನ ಬ್ಯಾಗ್ ನಲ್ಲಿ ಎಲ್ಲಾ ಸಾಮಗ್ರಿಗಳನ್ನು ಜೋಡಿಸಿಕೊಂಡು ಕನ್ನಡ ಪುಸ್ತಕವನ್ನು ಕೈಯಲ್ಲಿ ಹಿಡಿದು ಶಾಲೆ ಕಡೆ ನಡೆದನು. ಆ ದಿನ ಪೆನ್ ಆಕೆಗೆ ನೀಡಲೆಂದು ಬೇಗ ಬಂದಿದ್ದ. ಶಾಲೆ ಆವರಣದಲ್ಲಿ ಯಾರು ಇನ್ನೂ ಬಂದಿರಲಿಲ್ಲ. ಶಾಲೆಯ ವೇದಿಕೆ ಹತ್ತಿರ ಕುಳಿತು ಓದಲು ಆರಂಭಿಸಿದ. ಅಷ್ಟರಲ್ಲಿ ಸಿಹಿ ತನ್ನ ಗೆಳತಿ ರಮ್ಯಾ ನ ಜೊತೆಯಲ್ಲಿ ಅವನು ಇರುವ ಜಾಗಕ್ಕೆ ಬಂದಳು. ಇವರು ಮಾತನಾಡಿಕೊಳ್ಳಲಿ ಎಂದು ರಮ್ಯಾ ಸ್ವಲ್ಪ ದೂರದಲ್ಲಿ ಹೋಗಿ ಕುಳಿತುಕೊಂಡಳು. ಸಚಿನ್ ತನ್ನ ಬ್ಯಾಗ್ ನಿಂದ ಪೆನ್ ತೆಗೆದು ಆಕೆಗೆ ನೀಡಿದ. ಆಕೆ ತನ್ನ ಕೈಯಲ್ಲಿ ಪೆನ್ ಹಿಡಿದುಕೊಂಡು ಧನ್ಯವಾದಗಳು ತಿಳಿಸಿದರು. ಈ ಮಾತುಕತೆ ನಡೆಯುತ್ತಿರುವ ಸಮಯದಲ್ಲಿ ಎಲ್ಲರೂ ಶಾಲೆ ಆವರಣಕ್ಕೆ ಬಂದರು. ಕನ್ನಡ ಶಿಕ್ಷಕರು ಕೂಡ ಅವರ ಜೊತೆಯಲ್ಲಿ ಶಾಲೆ ಅಂಗಳಕ್ಕೆ ಬಂದರು. ಎಲ್ಲರೂ ಪರೀಕ್ಷೆ ಹಾಳೆಗಳನ್ನು ತೆಗೆದುಕೊಂಡು ಕೊಠಡಿಯ ಒಳಗೆ ನಡೆದರು. ಸಿಹಿ ಈತನ ಪಕ್ಕದಲ್ಲಿ ಬಂದು ಕುಳಿತುಕೊಂಡಳು. ಆಕೆಗೂ ಕೂಡ ತಾನು ಬರೆದಿದ್ದೆ ಎಲ್ಲ ಉತ್ತರಗಳನ್ನು ತೋರಿಸಿದ. ಆಕೆ
ಖುಷಿಯಿಂದ ಎಲ್ಲ ಉತ್ತರಗಳನ್ನು ನಕಲು ಮಾಡಿ ಬರೆದಳು. ಪರೀಕ್ಷೆ ಬರೆದು ಹೊರಗೆ ಎಲ್ಲರೂ ಬಂದರು.
"ಧನ್ಯವಾದಗಳು ಸಚಿನ್" ಸಂತೋಷದಲ್ಲಿ ಹೇಳಿದಳು.
"ಇದಕ್ಕೆಲ್ಲ ಯಾರು ಧನ್ಯವಾದ ಹೇಳುತ್ತಾರೆ".
"ಬಾ, ನಾನು ಮನೆಯಿಂದ ಪುಳಿಯೋಗರೆ ತಂದಿರುವೆ ತಿನ್ನೋಣ".
"ಸರಿ, ಬರುವೆ" ಆಕೆ ಹಿಂದೆ ನಡೆದ.
ಇಬ್ಬರು ಶಾಲೆಯ ಆವರಣದಲ್ಲಿ ಇರುವ ಸಸ್ಯ ತೋಟದಲ್ಲಿ ಕುಳಿತು ತಿಂಡಿ ಸೇವಿಸಿದರು. ಅಷ್ಟರಲ್ಲಿ ಎಲ್ಲರೂ ಪರೀಕ್ಷೆ ಮುಗಿಸಿ ಬೇರೆ ತರಗತಿಗಳಿಗೆ ಹೋಗುತ್ತಿದ್ದರು ಇವನು ಕೂಡ ಅವರ ಹಿಂದೆಯಲ್ಲಿ ತರಗತಿಗೆ ನಡೆದನು.
"ಲೋ ಏನ್ ಯೋಚನೆ ಮಾಡ್ತಿದ್ದೀಯಾ" ಆತನ ಕೈ ಎಳೆದು ನವೀನ್ ಕೇಳಿದ.
"ಏನು ಇಲ್ಲ ಬಿಡು" ಕನಸಿನಿಂದ ಹೊರಗೆ ಬಂದು ಉತ್ತರ ನೀಡಿದ.
ಕಾರ್ಯಕ್ರಮ ಮುಗಿಯುವ ಅಷ್ಟರಲ್ಲಿ ರಾತ್ರಿ ತುಂಬಾ ಸಮಯವಾಯಿತು. ಕಲಾಭವನದ ಮುಂದೆ ಇರುವ ಫುಡ್ ಕೋರ್ಟ್ ನಲ್ಲಿ ಎಗ್ ರೈಸ್ ಮತ್ತು ಕಬಾಬ್ ತಿಂದು ಹಾಸ್ಟೆಲ್ ಕಡೆಗೆ ನಡೆದುಕೊಂಡು ಹೋದರು.
ಮರುದಿನ ಬೆಳಗ್ಗೆ ಎದ್ದು ತನ್ನ ಮಂಚದ ಮೇಲೆ ಕುಳಿತಿದ್ದರು. ತನ್ನ ಮೊಬೈಲ್ ನಲ್ಲಿ ಕೆಲವು ಸಂದೇಶಗಳನ್ನು ನೋಡುತ್ತಿದ್ದ ಸಂದರ್ಭದಲ್ಲಿ ಕಾಲೇಜು ಪತ್ರಿಕೆಗೆ ಒಂದು ಅಂಕಣ ಬರೆಯ ಬೇಕೆಂದು ಅವರ ಕಾಲೇಜಿನ ಉಪನ್ಯಾಸಕರು ಸಂದೇಶ ಕಳಿಸಿರುವುದನ್ನು ನೋಡಿದ. ಏನು ಬರೆಯುವುದು ಎಂದು ಯೋಚನೆ ಮಾಡಿ ಕೊಡುತ್ತಿರುವ ಸಂದರ್ಭದಲ್ಲಿ ಆತನ ತಲೆಯಲ್ಲಿ ಸಿಯ ಹೆಸರು ನೆನಪಿಗೆ ಬಂತು. ಆಕೆಯ ಪ್ರೀತಿಯ ಬಗ್ಗೆ ಒಂದು ಅಂಕಣ ಬರೆಯೋಣವೆಂದು ತನ್ನ ಬಳಿ ಇರುವ ಪೆನ್ ಮತ್ತು ಪೇಪರ್ ತೆಗೆದುಕೊಂಡು. ಅವನು ತನ್ನ ಶಾಲೆಯ ಜೀವನವನ್ನು ನೆನೆದುಕೊಂಡು ಬರೆಯಲು ಆರಂಭಿಸಿದ ಅಷ್ಟರಲ್ಲಿ ಪಕ್ಕದ ರೂಮಿನಲ್ಲಿ ಇದ್ದ ನವೀನ್ ಬಂದು ಕಿತ್ತುಕೊಂಡ.
"ಲೋ... ಕೊಡೋ ನನ್ನ ಪೆನ್" ಎಂದು ರೇಗಿದ.
"ಯಾಕೋ, ಏನ್ ಬರೆದಿರೋದು ಹೇಳು" ಹಾಳೆಯನ್ನು ನೋಡುತ್ತಾ ಕೇಳಿದ.
"ಕಾಲೇಜು ಪತ್ರಿಕೆಗೆ ಒಂದು ಅಂಕಣ ಬರೆಯುತ್ತಿರುವೆ" ಎಂದನು.
"ಯಾವ ತರ ಅಂಕಣ ನನಗೂ ತೋರಿಸು" ಹಾಳೆ ಎತ್ತಿಕೊಂಡು ನೋಡಿದ.
"ನನ್ನ ಪ್ರೇಯಸಿ ಸಿಹಿಯ ಬಗ್ಗೆ ಅಂಕಣ ಬರೆಯುತ್ತಿರುವೆ" ಎಂದನು.
"ಲೋ, ನಿನ್ ಲವ್ ಸ್ಟೋರಿ ಎಲ್ಲರಿಗೂ ಹೇಳಿದ್ದೀಯಾ, ನನಗೂ ಹೇಳು" ಕುತೂಹಲದಿಂದ ಕೇಳಿದ.
ಈ ಮಾತು ಕೇಳಿದ ಸಚಿನ್ ಗೆ ಒಳಗೊಳಗೆ ಖುಷಿಯಾದರೂ ತೋರಿಸಿಕೊಳ್ಳದೆ 'ಬರಿಬೇಕು ಪೆನ್ ಕೊಡು' ಎನ್ನುತ್ತಾ ತನ್ನ ಎಲ್ಲಾ ವಸ್ತುಗಳನ್ನು ಅವನ ಬಳಿಯಿಂದ ಹಿಂಪಡೆದು ತನ್ನ ಪ್ರೇಮ ಕಹಾನಿ ಹೇಳಲು ಪ್ರಾರಂಭ ಮಾಡಿದ.
ನಾವಿಬ್ಬರೂ ಚಿಕ್ಕ ವಯಸ್ಸಿನಿಂದಲೂ ಸ್ನೇಹಿತರು. ಆಕೆ ಇರುವುದು ನಮ್ಮ ಮನೆ ಹಿಂದೆ. ನನಗೆ ಬುದ್ಧಿ ಬಂದ ದಿನದಿಂದಲೂ ಆಕೆಯನ್ನು ನೋಡುತ್ತಿದ್ದೆ. ಅವಳು ನಾನು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಕಾರಣವೇನೆಂದು ನನಗೂ ಗೊತ್ತಿಲ್ಲ. ಆದರೆ ಶಾಲೆಗೆ ಹೋಗುವ ಸಂದರ್ಭದಲ್ಲಿ ಮುಗುಳುನಗೆ ಮಾತ್ರ ನೀಡುತ್ತಿದ್ದಳು. ನಾನು ಆಕೆ ನೀಡಿದ ಮುಗುಳುನಗೆಗೆ ನಗುತ್ತಾ ಆಕೆಯನ್ನೇ ಹಿಂಬಾಲಿಸುತ್ತಿದ್ದೆ. ಒಂದು ದಿನ ನಮ್ಮ ಶಾಲೆಯ ಆವರಣದಲ್ಲಿ ಸ್ವಾತಂತ್ರ ದಿನಾಚರಣೆಗೆ ಸ್ವಚ್ಛತೆ ಮಾಡುತ್ತಿದ್ದೆವು. ಆಗ ಕನ್ನಡ ಶಿಕ್ಷಕರು ಬಂದು 'ಎಲ್ಲಾ ಕೆಲಸವನ್ನು ಹಂಚಿಕೊAಡಿ ಮಾಡಿ' ಎಂದು ಸಲಹೆ ನೀಡಿದರು. ನಾವು ಎರಡು ಗುಂಪುಗಳಾಗಿ ಕೆಲಸವನ್ನು ಹಂಚಿಕೊAಡೆವು. ನಾನು ಇದ್ದ ಗುಂಪಿನಲ್ಲಿ ಆಕೆಯೂ ಇದ್ದಳು. ಕೆಲಸ ಮಾಡುತ್ತಾ ನನ್ನ ಕೈ ಆಕೆಗೆ ತಗುಲಿತು. ಆಗ 'ಕ್ಷಮಿಸಿ' ಎಂದು ಮೊದಲ ಪದವನ್ನು ಆಕೆಯ ಜೊತೆ ಮಾತನಾಡಿದೆ. ಆ ದಿನ ನಮ್ಮ ಶಾಲೆಯ ಸ್ವಚ್ಛತಾ ಕಾರ್ಯಕ್ರಮವು ನನ್ನ ಮತ್ತು ಅವಳ ಬೇಟಿಗೆ ಮುನ್ನುಡಿ ಬರೆಯಿರಿ. ಮರುದಿನ ನಾನು ಸಂಗೊಳ್ಳಿ ರಾಯಣ್ಣನ ದ್ವೇಷ ಧರಿಸಿ ಸ್ವತಂತ್ರ ದಿನಾಚರಣೆ ಕಾರ್ಯಕ್ರಮಕ್ಕೆ ಬಂದೆ. ಆ ಕಾರ್ಯಕ್ರಮಕ್ಕೆ ಬಂದಿದ್ದ ಅನೇಕ ಅತಿಥಿಗಳು ನನ್ನ ವೇಷವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ನನಗೆ ಆ ದಿನ ಆಕೆಯೂ ಕೂಡ ನಗುತ್ತಾ "ತುಂಬಾ ಚೆನ್ನಾಗಿ ಕಾಣುತ್ತಿರುವೆ" ಎಂದು ಹೇಳಿದಳು. ಆ ಸ್ವಾತಂತ್ರ‍್ಯ ದಿನಾಚರಣೆಯೂ ನಮ್ಮಿಬ್ಬರನ್ನು ಹತ್ತಿರ ಮಾಡಿತು.
"ಲವ್ ಹೇಗಾಯಿತು ಅಂತ ಹೇಳು" ಆಸಕ್ತಿಯಲ್ಲಿ ಕೇಳಿದ.
"ನಿಧಾನವಾಗಿರು ಹೇಳುವೆ" ಎಂದನು.
ಆ ದಿನ ಸ್ವಾತಂತ್ರ‍್ಯ ದಿನಾಚರಣೆ ಮುಗಿದಿತ್ತು. ಅವತ್ತಿನಿಂದ ನಾನು ಮತ್ತು ಆಕೆಯ ಮಾತುಗಳು ಶುರುವಾಯಿತು. ಒಂದೇ ತರಗತಿ ಆಗಿದ್ದರಿಂದ ಪೆನ್, ಪೆನ್ಸಿಲ್, ಪುಸ್ತಕ ಅಂತ ನಾನು ದಿನಕ್ಕೆ ಒಂದು ಸಲನಾದ್ರೂ ಮಾತನಾಡಿಸುತಿದ್ದೆ. ಅದು ಕೂಡ ಗಾಸಿಪ್ ಆಗಿ ಬಿಟ್ಟಿತ್ತು. ಈ ವಿಷಯವನ್ನು ತಿಳಿದ ಆಕೆ ನನ್ನ ಜೊತೆ ಸ್ವಲ್ಪ ದಿನ ಮಾತು ಬಿಟ್ಟಳು. ಮತ್ತೆ ನಾವು ಮಾತನಾಡಿಸಲು ಆರಂಭ ಮಾಡಿದ್ದೆ ನಮ್ಮ ಶಾಲೆಯ ಪ್ರವಾಸದಲ್ಲಿ. ಅಲ್ಲೇ ನನಗೆ ನಿಜವಾದ ಲವ್ ಆಗಿದ್ದು. ಇಷ್ಟು ಹೇಳಿ ಸ್ವಲ್ಪ ಸಮಯ ಹಾಗೆ ಕುಳಿತುಕೊಂಡ.
"ಹಾಗಾದ್ರೆ ನೀನು ಇದೆ ವಿಷಯ ತಕ್ಕೊಂಡು ಅಂಕಣ ಬರೆತ್ತಿರೋದು" ಎಂದನು.
"ಹೌದು, ನನ್ನ ಪ್ರೀತಿಯ ಬಗ್ಗೆ ಸುಂದರ ಅಂಕಣವನ್ನು ಕಾಲೇಜಿನ ಪತ್ರಿಕೆಗೆ ಬರೆಯುತ್ತಿರುವೆ" ಎಂದನು.
"ಮುAದೆ ಏನು ಆಯಿತು ಅಂತ ಹೇಳು" ಎಂದು ಆಸಕ್ತಿಯಲ್ಲಿ ಕೇಳಿದ.
ನಮ್ಮ ಶಾಲೆಯ ಪ್ರವಾಸ ಆರಂಭವಾಗಿದ್ದೆ ಹಾಸನ ಜಿಲ್ಲೆಯಿಂದ. ನಾವು ಶಾಲೆ ಆವರಣದಿಂದ ಹಾಸನ ಮಾರ್ಗವಾಗಿ ಹಳೇಬೀಡು ಪ್ರವಾಸ ಸ್ಥಳಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಮಲೆನಾಡು ತಾಂತ್ರಿಕ ಕಾಲೇಜನ್ನು ನಮ್ಮ ಗಣಿತ ಶಿಕ್ಷಕರು ತೋರಿಸಿ ಮುಂದೆ ನೀನು ಇದೇ ಕಾಲೇಜಿಗೆ ಸೇರಿಕೊಳ್ಳಬೇಕು ಎಂದು ನನಗೆ ಹೇಳಿದರು. ಅವರು ಹೀಗೆ ಹೇಳಿದ ಸಂದರ್ಭದಲ್ಲಿ ನನ್ನನ್ನು ನೋಡಿ ಎಲ್ಲರೂ ನಕ್ಕರು. ಅವರು ಹೇಳಿದ್ದು ನಮಗೆ ಆಗ ಅರಿವಾಗಲಿಲ್ಲ. ಈಗ ಈ ಕಾಲೇಜಿನ ಮಹತ್ವ ನಮಗೆ ತಿಳಿಯುತ್ತಿದೆ. ಈ ನಮ್ಮ ಪ್ರವಾಸ ಮೂರು ದಿನಗಳ ಕಾಲ
ನಡೆಯಿತು. ನಾವಿಬ್ಬರೂ ಹೀಗೆ ಮಾತನಾಡಿಕೊಂಡು ಹತ್ತಿರ ಬಂದವು. ಧರ್ಮಸ್ಥಳಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವಳು ನನಗೆ ಕೀಬಂಚ್ ನೀಡಿದಳು. ನಾನವರಿಗೆ ಕಾಲ್ಚೇನು ಕೊಟ್ಟಿದ್ದೆ. ಹೀಗೆ ಇಬ್ಬರು ಪ್ರವಾಸದಲ್ಲಿ ಅನೇಕ ರೀತಿಯಲ್ಲಿ ಹತ್ತಿರವಾದವು. ಈ ಪ್ರವಾಸ ಮುಗಿಯುವ ಅಷ್ಟರಲ್ಲಿ ನಮ್ಮಿಬ್ಬರ ಮನಸ್ಸಿನಲ್ಲೂ ಪ್ರೀತಿ ಹುಟ್ಟಿತು. ಆದರೂ ಇಬ್ಬರು ಹೇಳಿಕೊಳ್ಳದೆ ಹಾಗೆ ಇದ್ದವು. ನಮ್ಮ ಪ್ರವಾಸ ಮುಗಿಯಿತು ಇಬ್ಬರು ತುಂಬಾ ಒಳ್ಳೆಯ ಸ್ನೇಹಿತರು ಆಗಿ ಶಾಲೆಯ ಅವರಣದಲ್ಲಿ ಒಟ್ಟಿಗೆ ಇದ್ದವು. ಹತ್ತನೇ ತರಗತಿ ಮುಗಿದ ಮೇಲೆ ಇಬ್ಬರು ಒಂದೇ ಕಾಲೇಜಿಗೆ ಸೇರಿಕೊಳ್ಳೋಣ ಎಂದುಕೊAಡಿದ್ದೆವು. ಆದರೆ ವಿಧಿ ನಮ್ಮ ಬದುಕಿನಲ್ಲಿ ಆಟವಾಡಿದ ಕಾರಣಕ್ಕೆ ಇಬ್ಬರು ಒಂದೇ ಕಡೆ ಸೇರಲು ಆಗಲಿಲ್ಲ. ಹಾಕಿಯನ್ನು ಒಂದೆರಡು ಬಾರಿ ಬಿಟ್ಟರೆ ಇದುವರೆಗೂ ನಾನು ನೋಡಿಲ್ಲ. ಇದೇ ನನ್ನ ಪ್ರೀತಿಯ ಇತಿಹಾಸವೆಂದು ಹೇಳಿ ಪೂರ್ಣವಿರಾಮ ಇಟ್ಟನು.
"ಹಾಗಾದ್ರೆ, ನೀನು ಇದನ್ನೇ ಬರೆಯುತ್ತಿರುವುದು".
"ಹೌದು" ಯೋಚನೆ ಮಾಡುತ್ತಾ ಕುಳಿತುಕೊಂಡ.
ಸ್ವಲ್ಪ ಸಮಯ ಸಚಿನ್ ಜೊತೆಯಲ್ಲಿ ನವೀನ್ ಅನೇಕ ರೀತಿಯ ಮಾತುಗಳನ್ನು ಆಡಿದ. ಅಷ್ಟರಲ್ಲಿ ಕಾಲೇಜಿಗೆ ಸಮಯವಾಗಿತ್ತು ಇಬ್ಬರು ಕಾಲೇಜಿನ ಕಡೆಗೆ ನಡೆದರು.
ಒಂದು ದಿನ ಕಳೆದ ನಂತರ ಸಿಹಿಯ ಬಗ್ಗೆ ಅಂಕಣವನ್ನು ಬರೆದು ಕಾಲೇಜು ಪತ್ರಿಕೆಗೆ ಕಳುಹಿಸಿದ. ಅವನು ಬರೆದ ಆ ಅಂಕಣವು ಕಾಲೇಜು ಪತ್ರಿಕೆಯಲ್ಲಿ ಪ್ರಕಟಣೆ ಆಯಿತು. ಆ ಪತ್ರಿಕೆಯನ್ನು ತೆಗೆದುಕೊಂಡು ಹೋಗಿ ತನ್ನ ಮೆಚ್ಚಿನ ಉಪನ್ಯಾಸಕರಾದ ಪೂರ್ಣಿಮಾ ಮೇಡಂಗೆ ನೀಡಿ ಅಭಿಪ್ರಾಯ ತಿಳಿಸಿ ಎಂದು ಹೇಳಿದ. ಮೇಡಂ ಖುಷಿ ಇಂದ ಅವನಿಗೆ ಶುಭಾಶಯ ತಿಳಿಸಿದರು. ಆನಂತರ ನವೀನ್ ಜೊತೆಯಲ್ಲಿ ಕಾಲೇಜಿನ ಹೊರಗೆ ಬಂದು ನಿಂತನು. ತುಂಬಾ ಹೊಟ್ಟೆ ಹಸಿವು ಇದ್ದ ಕಾರಣಕ್ಕೆ ಇಬ್ಬರು ಇಳಿಜಾರಿನಲ್ಲಿ ಇರುವ ಎಂ.ಜಿ ರಸ್ತೆಯ ಫುಡ್ ಕೋರ್ಟ್ ಗೆ ಹೋದರು. ಅಲ್ಲಿ ಪಾನಿಪುರಿ ಅಂಗಡಿಯ ಹತ್ತಿರ ಇಬ್ಬರು ಹುಡುಗಿಯರು ಚೂಡಿದಾರ ಧರಿಸಿ ಸಾಧಾರಣವಾಗಿ ಪಾನಿಪುರಿ ತಿನ್ನುತ್ತ ಅವರನ್ನು ನೋಡಿದ ನವೀನ್ "ಈ ಕಡೆ ಅವಳು ನಿನಗೆ, ಆ ಕಡೆ ಅವಳು ನನಗೆ" ಎಂದು ಪ್ರೀತಿಯ ಗುಂಗಿನಲ್ಲಿ ಹೇಳಿದ. ನವೀನ್ ಹೇಳಿದ ಮಾತಿಗೆ ತಲೆ ಕೆಡಿಸಿಕೊಳ್ಳದೆ ಸಿಹಿಯ ನೆನಪಿಗೆ ಜಾರಿದ. ಆಕೆಯ ನೆನಪಿನಲ್ಲಿ ಪಾನಿಪುರಿಯನ್ನು ತಿನ್ನಲು ಆರಂಭಿಸಿದನು.
ಪಾನಿಪುರಿ ತಿಂದು ಮುಗಿಸುವ ಅಷ್ಟರಲ್ಲಿ ನವೀನ್ ಇಬ್ಬರು ಹುಡುಗಿಯರನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದನು. ನವೀನ್ ನೋಡಿ ಇಬ್ಬರು ಮುಗುಳುನಗೆ ನೀಡಿದರು. ಅವನು ಏನೇ ಮಾಡಿದರು ತಲೆ ಕೆಡಿಸಿಕೊಳ್ಳದೆ ಸಿಹಿಯ ನೆನಪಿನಲ್ಲಿ ಪಾನಿಪೂರಿ ತಿಂದು ಹಾಸ್ಟೆಲ್ ಕಡೆ ಹೆಜ್ಜೆ ಹಾಕಿದ. ನವೀನ್ ಆ ಸುಂದರ ಹುಡುಗಿಯರ ಜೊತೆಯಲ್ಲಿ ಸುಮಾರು ಸಮಯ ಮಾತನಾಡಿಕೊಂಡು ಅವರ ಫೋನ್ ನಂಬರ್ ಪಡೆದುಕೊಂಡು ಹಾಸ್ಟೆಲ್ ಗೆ ಬಂದನು. ಈ ನಡುವೆ ಆ ಇಬ್ಬರಲ್ಲಿ ಒಬ್ಬಳ ಜೊತೆಯಲ್ಲಿ ನವೀನ್ ಪ್ರೇಮ ಕಹಾನಿ ಪ್ರಾರಂಭವಾಯಿತು. ಸಚಿನ್ ತನ್ನ ಪ್ರಯತ್ ಸಿಹಿಯ ನೆನಪಿನಲ್ಲಿ ತನ್ನ ಕಾಲೇಜಿನ ಜೀವನವನ್ನು ಕಳೆಯುತ್ತಿದ್ದನು.
ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ, ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.
ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು.
ಪ್ರಶಸ್ತಿ-ಪುರಸ್ಕಾರಗಳು: ಕಾವ್ಯಶ್ರೀ ಪ್ರಶಸ್ತಿ
More About Author