ಅದೊಂದು ಕೆಟ್ಟ ಘಳಿಗೆ. ಅವನು ಹಾಗೇ ಹೇಳಿದ್ದಾದ್ದರೂ ಏಕೆ? ನನ್ನ ಇರಿವು ಅವನಿಗೆ ಸಾಕೆನಿಸಿತೆ? ಅಥವಾ ಅವನ ಛಾಯ್ಸ್‌ಗಳು ಬದಲಾದವೇ? ಅವನೆಂದೂ ಹಾಗೇ ನಿಷ್ಠೂರವಾಗಿ ನನ್ನ ಬಗ್ಗೆ ಮಾತನಾಡಿದವನಲ್ಲ. ಅದೇಂತಹ ಅಮೃತ ಪ್ರೀತಿ ನೀಡಿದ್ದನು ಅಲ್ಲವೇ? ಅದೇಕೆ ನಾನು ಈ ಕ್ಷಣ ಈ ವಾಕ್ಯವನ್ನು ಭೂತಕಾಲಕ್ಕೆ ಹಾಕುತ್ತಿರುವೆ? ಅವನಲ್ಲಿ ಇನ್ನೂ ನನ್ನ ಮೇಲೆ ಅಂತಹದೇ ಪ್ರೀತಿ ಇದೆಯಲ್ಲವೇ? ನಾನು ಆ ಕ್ಷಣ ಅವನ ಪರಿಧಿ ಬಿಟ್ಟು ಹೊರಬರುವತನಕ. ಪರಿಧಿ ಬಿಟ್ಟು ಹೊರಬಂದದ್ದಾದರೂ ಏಕೆ? ಕೆಲವೊಮ್ಮೆ ನಾವು ನಮ್ಮವರ ಬಗ್ಗೆ ಬಹಳ ಪೊಸೆಸಿವ್ ಆಗುವುದು ಸರಿಯಾ? ತಪ್ಪಾ? ನಾವು ಏಕೆ? ನಾನೇ ಅದೆಷ್ಟು ಅವನ ಬಗ್ಗೆ ಪೊಸೆಸಿವ್ ಆಗಿದ್ದೆ. ಮನೆಗೆ ಬಂದ ಜನರೆಡೆ ಅವನ ಗಮನ ಜಾಸ್ತಿ ಆಗಿ ನನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದ ಕ್ಷಣ ನನಗದೆಂತಹ ಕೋಪ ಬರುತ್ತಿತ್ತು. ನಾನು ಅದನ್ನು ನನ್ನ ಕಣ್ಣುಗಳಲ್ಲೆ ತೋರಿಸುತ್ತಿದ್ದೇನಲ್ಲಾ. ಅವನಾದರೂ ಅದೆಷ್ಟು ಬೇಗ ಅದನ್ನು ಅರ್ಥ ಮಾಡಿಕೊಳ್ಳುತ್ತಿದ್ದ. ನನ್ನ ಇಡಿಯಾಗಿ ಎತ್ತಿ ಮಂಚದ ಮೇಲೆ ಬರಸೆಳೆದು ಮುದ್ದಿಸುತ್ತಿದ್ದ ಪರಿಗಾಗಿ ನಾನು ಆಗಾಗ ಅವನ ಮೇಲೆ ಮುನಿಸಿಕೊಳ್ಳುತ್ತಿದ್ದೆನಲ್ಲವೇ.
ಅದೆಷ್ಟು ಅಗಾಧ ಹೊಂದಾಣಿಕೆ ನಮ್ಮಲ್ಲಿತ್ತು. ಅವನು ಕಂಪನಿಯಿಂದ ಬಂದ ಕೂಡಲೇ ಅವನ ಕಣ್ಣ ನೋಟದಲ್ಲಿಯೇ ನನಗೆ ಅವನ ಮೂಡ್ ಅರ್ಥವಾಗುತ್ತಿತ್ತು. ಅವನ ಕೋಪ, ಬೇಸರ, ಒತ್ತಡ ಅದೆಲ್ಲವೂ ನನಗೆ ತತಕ್ಷಣ ಅರಿವಾಗುತ್ತಿತ್ತು. ಅದಕ್ಕೆ ನಾನು ನನ್ನೊಬ್ಬಳನ್ನು ಇಡೀ ದಿನ ಮನೆಯಲ್ಲಿ ಬಿಟ್ಟು ಹೋಗಿದ್ದರೂ ನನ್ನ ಬೇಸರವನ್ನು ಒಳನುಂಗಿ ಅವನಿಗಾಗಿ ಎಲ್ಲ ರೀತಿಯ ಪ್ರೀತಿಯ ಮಳೆಗೆರೆಯುತ್ತಿದ್ದೆ. ಆದರೆ ಅವನು ಈ ದಿನ ನನ್ನನ್ನು ಕಳಿಸುವ ಮಾತನಾಡಿದ್ದಾದರೂ ಏತಕ್ಕೆ? ಅದನ್ನು ನಾನು ಕದ್ದು ಕೇಳಿಸಿಕೊಂಡಿದ್ದಾದ್ದರೂ ಏಕೆ? ಶಕ್ಕು ಶಕ್ಕು ಎಂದು ಬಾಯಿತುಂಬ ಕರೆದು ಮುದ್ದಿಸುತ್ತಿದ್ದವ ನನ್ನನ್ನು ಅಷ್ಟು ನಿರ್ದಯವಾಗಿ ಹೊರ ಹಾಕುವ ಮಾತನಾಡಿದರೆ ನಾನು ಅದನ್ನು ಸಹಿಸುವುದಾದರೂ ಹೇಗೆ? ಹಾಗಾದರೆ ಅವನ ಪ್ರೀತಿ ನಾಟಕವೇ? ಅವನ ಜೀವನದಲ್ಲಿ ನನ್ನ ಪ್ರವೇಶ ಏನೂ ಅಲ್ಲವೇ? ಅವನ, ನನ್ನ ಹತ್ತು ವರ್ಷದ ಸಖ್ಯಕ್ಕೆ ತಿಲಾಂಜಲಿ ಇಡುವ ಮಾತನಾಡಿದ್ದಾದರೂ ಏಕೆ? ಅಂದು, ನನ್ನನ್ನು ಆಯ್ಕೆ ಮಾಡಿಕೊಂಡದ್ದು ಅವನೇ ಅಲ್ಲವೇ? ಇಂದು, ನಾನು ಈ ಸರಿ ರಾತ್ರಿಯಲ್ಲಿ ಒಂಟಿಯಾಗಿ ನಿಲ್ಲುವಂತಾಗಲು ಅವನೇ ಕಾರಣನಲ್ಲವೇ? ಕಾರಣ ಅವನಾ? ನಾನಾ? ರಸ್ತೆಯಲ್ಲಿನ ಇಡೀ ಗಂಡು ಸಮುದಾಯ ನನ್ನನ್ನೇ ಎವೆಯಿಕ್ಕದೆ ನೋಡುತ್ತಿವೆ. ನಾನು ನನ್ನನ್ನು ಇವರಿಂದ ಪಾರುಮಾಡಿಕೊಳ್ಳುವುದಾದರೂ ಹೇಗೆ? ಫಿಲ್ಮಗಳಲ್ಲಿ ಹೀರೋ ಬಂದು ವಿಲನ್‍ನೊಬ್ಬ ರೇಪ್ ಮಾಡುವಾಗ ಬಚಾವು ಮಾಡುವಂತೆ ನನ್ನನ್ನು ಪ್ರಸಾದ್ ಕಾಪಾಡುವನೇ? ಇದೆಂತಹ ಹುಚ್ಚು ಯೋಚನೆ? ಅವನಿಗೆ ನಾನು ಮಧ್ಯರಾತ್ರಿ ಮನೆಬಿಟ್ಟು ಬಂದದ್ದು ಗೊತ್ತಿದ್ದರೆ ತಾನೇ ಅವನು ನನ್ನ ಹುಡುಕಿ ಬರುವುದು? ಅವನ ಎಲ್ಲಾ ಸೂಕ್ಷ್ಮಗಳು ನನಗರ್ಥವಾಗುತ್ತವೆ. ಅವನಿಗರ್ಥವಾಗುವುದಿಲ್ಲವಾ? ಅವನ ಮಂಚದಿಂದ ನಾನು ಮೆಲ್ಲನೆ ದೂರ ಸರಿದದ್ದು, ಕೆಳಗಿಳಿದು ರೂಮು ದಾಟಿ ಹೊರಬಂದದ್ದು? ಯಾವುದೂ ತಿಳಿಯದಷ್ಟು ದಪ್ಪಚರ್ಮವಾಯಿತಾ? ಈ ಗಂಡಸರೇ ಹೀಗೆಯಾ? ಇಲ್ಲ ನನ್ನ ಪ್ರಸಾದ್ ಎಲ್ಲರನ್ನು ತೂಗುವ ತಕ್ಕಡಿಯಲ್ಲಿ ತೂಗುವಂತವನಲ್ಲವೇ ಅಲ್ಲ.
ಅಂದು ಅವನ ತೆಕ್ಕೆಗೆ ನಾ ಸೇರಿದ್ದು ನನಗಿನ್ನು ನೆನಪಿದೆ. ಅದೊಂದು ದಿನ ಅವ ನಮ್ಮ ಮನೆಗೆ ಬಂದಿದ್ದ. ಮನೆ ತುಂಬ ಹೆಣ್ಣುಗಳನ್ನೇ ತುಂಬಿಕೊಂಡ ರವಿ ಇವರನ್ನೆಲ್ಲಾ ಸಾಗಹಾಕುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದ. ಬಂದವರದೆಲ್ಲಾ ಏನೇನೋ ಬೇಡಿಕೆಗಳು. ಪ್ರಸಾದ ಬಂದವನೇ ನನ್ನ ಕಣ್ಣುಗಳನ್ನು ನೋಡಿದ. ಸರಿಯಾಗಿ ಊಟವಿಲ್ಲದೆ ಸೊರಗಿದ್ದ ನನ್ನ ಮೈಗಿಂತ ನನ್ನ ಕಣ್ಣುಗಳು ಅವನೊಂದಿಗೆ ಮಾತನಾಡಿದ್ದವು. ಯಾಚಿಸುವಂತೆ ಅವನೆಡೆ ನೋಡಿದೆ. ಅವನಿಗೇನನ್ನಿಸಿತೋ ತಕ್ಷಣ ``ರವಿ ನನಗೆ ಈಕೆ ಬೇಕು. ನೀನು ಅದೆಷ್ಟು ಹಣ ಹೇಳುತ್ತಿಯೋ ವಾಟ್ಸಾಆಪ್‍ಗೆ ಕಳಿಸು. ನಾ ಗೂಗಲ್ ಪೇ ಮಾಡುವೆ'' ಎಂದವನೇ ರವಿಯ ಉತ್ತರಕ್ಕೂ ಕಾಯದೆ ನನ್ನನ್ನು ತನ್ನ ತೆಕ್ಕೆಗೆ ಆನಿಸಿಕೊಂಡಿದ್ದ. ಹೆಣ್ಣೆಂಬ ತಿರಸ್ಕಾರದಲ್ಲಿ ಬೆಳೆದಿದ್ದ ನಾನು ರವಿಯ ಮುಖ ನೋಡಿದೆ. ಅವನು ಒಂದು ಹೆಣ್ಣು ಖಾಲಿಯಾದ ಖುಷಿಯಲ್ಲಿದ್ದ. ``ಪ್ರಸಾದ ಮತ್ತೊಮ್ಮೆ ಯೋಚಿಸು. ನಿನಗೆ ಅವಳನ್ನು ನೋಡಿಕೊಳ್ಳುವುದು ಸಾಧ್ಯವಾ? ಸುಮ್ಮನೆ ರಿಸ್ಕ ಅಂಟಿಸಿಕೊಳ್ಳಬೇಡ'' ಅವನ ಯಾವ ಮಾತಿಗೂ ಪ್ರಸಾದ ಉತ್ತರಿಸದೆ ತನ್ನ ಕಾರಿನ ಬಾಗಿಲು ತೆಗೆದು ಮುಂದಿನ ಸೀಟಿನಲ್ಲಿಯೇ ಕುಳ್ಳರಿಸಿಕೊಂಡ. ಅವನ ಉಪಕಾರಕ್ಕೆ ಅಪಕಾರ ಮಾಡೆನೆಂಬ ಧೃಡ ನಿರ್ಧಾರದಲ್ಲಿಯೇ ಅವನೊಂದಿಗೆ ಅವನ ಮನೆಗೆ ನಡೆದು ಬಂದಿದ್ದೆ.
ಅದೊಂದು ಮಧ್ಯಮ ಸಂಸಾರಸ್ಥರು ವಾಸಿಸುವಂತಹ ಅಪಾರ್ಟಮೆಂಟ್. ಈಜುಕೊಳವಿಲ್ಲದಿದ್ದರೂ ಸುತ್ತಾಡಲು ವಿಶಾಲ ಜಾಗವಿತ್ತು. ಸುಮಾರು ನಲವತ್ತು ಮನೆಗಳ ಸಂಕೀರ್ಣವದು. ಕಾರನ್ನು ಬೆಸಮೆಂಟಲ್ಲಿ ಪಾರ್ಕ ಮಾಡಿ ಲಿಫ್ಟ್‍ನಲ್ಲಿ ಹೋದೆವು. ಪ್ರಸಾದ ಮನೆಗೆ ಬೀಗ ತೆಗೆಯದೆ ಹಾಗೇ ಒಳ ಹೋಗಿದ್ದು ಆಶ್ಚರ್ಯವಾಗಿತ್ತು. ನಂತರ ತಿಳಿದದ್ದು ಅವನಿಗೆ ಬೀಗ ಹಾಕುವುದರಲ್ಲಿ ನಂಬಿಕೆಯಿಲ್ಲ ಎಂದು. ಅದೊಂದು ಪುಟ್ಟ ಎರಡು ಬೆಡ್‍ರೂಮುಗಳ ಮನೆ. ಹೋಗುತ್ತಿದ್ದಂತೆ ಸಿಕ್ಕುವ ಹಾಲ್‍ನಲ್ಲಿ ಒಪ್ಪವಾಗಿ ಜೋಡಿಸಿಟ್ಟ ಸೋಫಾ, ಟೀಪಾಯಿ. ಒಂದು ರೂಮಲ್ಲಿ ಡಬಲ್‍ಬೆಡ್ಡಿನ ಕಾಟ್, ಮತ್ತೊಂದು ಬೆಡ್‍ರೂಮನ್ನು ಅವನು ಕಛೇರಿಯಾಗಿ ಬಳಸುತ್ತಿದ್ದ ಎನಿಸುವಂತೆ ಮೇಜು-ಕುರ್ಚಿ, ಲ್ಯಾಪ್‍ಟಾಪ್ ಜೋಡಿಸಿದ್ದ. ಪುಟ್ಟ ಅಟ್ಯಾಚ್ ಬಾತ್‍ರೂಮುಗಳು. ಪುಟ್ಟ ಅಡಿಗೆಮನೆ. ನಾನೊಮ್ಮೆ ಎಲ್ಲವನ್ನು ನೋಡಿ ಬಂದೆ. ಅಪರಿಚಿತ ಮನೆ, ಅಪರಿಚಿತ ಗಂಡಸು ಎಲ್ಲರನ್ನು ಪರಿಚಿತವಾಗಿಸಿಕೊಳ್ಳುವುದು ಸುಲಭವೇ? ಹುಟ್ಟಿದ ಮನೆಯನ್ನು ಬಿಟ್ಟು ಬರುವ ಪ್ರತಿಹೆಣ್ಣು ಅನುಭವಿಸುವುದು ಅದನ್ನೆ ಅಲ್ಲವೇ? ಅಮ್ಮನ ಪ್ರೀತಿಯ ಮಡಿಲು, ಅಕ್ಕ ತಮ್ಮಂದಿರ ಅಕ್ಕರೆಯನ್ನೆಲ್ಲಾ ಬಿಟ್ಟು ಇವನಾರೋ ಅಪರಿಚಿತನೊಂದಿಗೆ ಹೊಂದಿಕೊಳ್ಳುವುದು ತನಗೆ ಸುಲಭವೇ? ಪ್ರಸಾದ ಬಂದು ಪ್ರೀತಿಯಿಂದ `ಶಕ್ಕು ನಿಂಗೆ ಮನೆ ಇಷ್ಟ ಆಯ್ತಾ'' ಎಂದು ಕೇಳಿದ. ಶಕ್ಕುನಾ? ಇದೆಂತಹ ಹೆಸರು. ನನಗೆ ಅಲ್ಲಿ ಕರೆಯುತ್ತಿದ್ದದ್ದೇ ಬೇರೆ ಹೆಸರು. ಇವನೇಕೆ ಶಕ್ಕು ಎನ್ನುತ್ತಿದ್ದಾನೆ ಎಂದು ಅನುಮಾನದಿಂದಲೇ ನೋಡಿದೆ. ನನ್ನ ಬಳಿ ಬಂದ ಪ್ರಸಾದ ನನ್ನನ್ನು ತನ್ನ ಎರಡು ತೋಳುಗಳಿಂದ ಬಳಸಿ ಅಪ್ಪಿ ``ಶಕ್ಕು, ನನ್ನ ಅಮ್ಮನ ಹೆಸರು. ಶಕುಂತಲೆ ಅವಳ ಪೂರ್ತಿ ಹೆಸರು. ಅಪ್ಪ ಅವಳನ್ನು ಬಾಯಿತುಂಬಾ ಶಕ್ಕು ಎನ್ನುತ್ತಿದ್ದ. ಅದನ್ನೇ ಕೇಳುತ್ತಾ ಬೆಳೆದ ನಾನು ದೊಡ್ಡವನಾದ ಮೇಲೆ ಅಮ್ಮನನ್ನು ಹಾಗೇ ಕರೆದರೆ, ಅಮ್ಮ ಹುಸಿ ಮುನಿಸು ತೋರಿ ಅದು ನಿಮ್ಮಪ್ಪ ಕರೆಯೋದು, ನೀನು ಅಮ್ಮ ಅನ್ನು ನನಗೆ ಇನ್ಯಾರಿದ್ದಾರೆ ಅಮ್ಮ ಅನ್ನಲು ನಿನ್ನ ಬಿಟ್ರೆ ಅಂತ ಹೇಳಿದರೂ ಕೇಳದೆ ಶಕ್ಕು ಎನ್ನುತ್ತಿದ್ದೆ. ಅಮ್ಮನಿಗೂ ಅದು ಬರುಬರುತ್ತಾ ಇಷ್ಟ ಆಯ್ತು. ನಾನೊಬ್ಬನೇ ಮಗ ಆದ್ದರಿಂದ ನನ್ನನ್ನು ಬಹಳ ಮುಚ್ಚಟ್ಟೆಯಿಂದ ಸಾಕಿದ್ಲು. ಆದ್ರೆ....'' ನಾನು ಅವನ ಕತೆಗೆ ಭಂಗ ತರದಂತೆ ಅವನ ಮುಖವನ್ನೇ ನೋವಿನಿಂದ ನೋಡಿದೆ. ಅವನದೇನೋ ಟ್ರಾಜಿಡಿ ಕತೆ ಇರಬೇಕೆಂದು ನನಗೆ ತಕ್ಷಣಕ್ಕೆ ಏಕೆ ಅನಿಸಿತೋ ಗೊತ್ತಿಲ್ಲ. ``ಆದ್ರೆ ಅಮ್ಮ ನಾನು ಪಿಯುಸಿ ಮುಗಿತ್ತಿದ್ದಂತೆ ಸತ್ತು ಹೋದ್ಲು ಶಕ್ಕು. ಅವಳಿಗೆ ಗೊತ್ತಿತ್ತೊ ಇಲ್ಲವೋ ಪ್ರತಿ ತಿಂಗಳು ಹೊಟ್ಟೆನೋವು ಎನ್ನುತ್ತಿದ್ದವಳು ಅದೇನೋ ಮಾತ್ರೆ ನುಂಗಿ ಸಮಾಧಾನಿಸಿಕೊಳ್ತಿದ್ಲು. ಅಪ್ಪನ ಸಂಬಳ ಅಲ್ಲಿಗಲ್ಲಿಗೆ ನೇರವಾಗ್ತಿತ್ತು. ಬರುವ ಸಂಬಳದಲ್ಲೇ ಉಳಿಸಿ ನನಗೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೋತಾ ಇದ್ಲು. ಆಸ್ಪತ್ರೆ, ಡಾಕ್ಟ್ರು ಅಂದ್ರೆ ಎಲ್ಲಿ ಹೊಂದಿಸೋದು ಅಂತ ಅವಳಿಗೆ ಆತಂಕವಾಗ್ತಿತ್ತೆನೋ. ಕೆಲವು ದಿನಗಳಲ್ಲಿ ಮೈಕೈ ಬಾತುಕೊಳ್ಳಲಾರಂಭಿಸಿತು. ಅದನ್ನು ಅಮ್ಮ ಮುಚ್ಚಿಟ್ಟಳು. ಅಪ್ಪ ಗಮನಿಸಿ ಡಾಕ್ಟರ್ ಅತ್ರ ಕರಕೊಂಡು ಹೋದ್ರು. ಅನೇಕ ಪರೀಕ್ಷೆಗಳಾದ ಮೇಲೆ ಲಿವರ್‍ಗೆ ಸಂಬಂಧಿಸಿದ ಕಾಯಿಲೆಯಿದು ಅಂತ ಹೇಳಿದ್ರು. ಅಪ್ಪ ಸಾಲ ಮಾಡಿ ಒಂದೆರೆಡು ಬಾರಿ ನೀರು ತೆಗೆಸಿದ. ಅಮ್ಮ ಸುಸ್ತಾಗಿ ಸತ್ತಂತೆ ಮಲಗಿರೊದನ್ನು ನೋಡಲಾಗುತ್ತಿರಲಿಲ್ಲ. ಅಪ್ಪ, ನಾನು ಮನೆ ಕೆಲಸ ಮಾಡಲು ಶುರು ಮಾಡಿದ್ವಿ. ನಾನು ಪಿಯುಸಿ ಮುಗಿಸಿ ಇಂಜಿನೀಯರ್ ಆಗಲು ಕಾಲೇಜಿಗೆ ಸೇರಿದ ವಾರಕ್ಕೆ ಅಮ್ಮ ಮಲಗಿದ್ದಲ್ಲೇ, ಇಲ್ಲೆ ಇದ್ದು ಇಲ್ಲವಾಗುವ ರೀತಿ ಹೊರಟುಬಿಟ್ಟಳು'' ಪ್ರಸಾದ ಅಳುತ್ತಿದ್ದನಾ? ಅವನ ಕಣ್ಣನ್ನೇ ದಿಟ್ಟಿಸಿದೆ. ನನಗೂ ಅಳು ತಡೆಯಲಾಗಲಿಲ್ಲ. ಅವನನ್ನು ಅಪ್ಪಿ ನಿನ್ನ ನೋವು ನನಗರ್ಥವಾಗುತ್ತೆ. ನೀನು ನಿನ್ನ ಅಮ್ಮನ ಹೆಸರಿಟ್ಟಿದ್ದಿಯಲ್ಲಾ ಆ ಹೆಸರಿಗೆ ಚ್ಯುತಿ ಬರದಂತೆ ಇರುವೆನೆಂಬ ಭರವಸೆ ನೀಡಿದೆ.
ನನ್ನಿಂದಾಗಿ ಅವನ ದಿನಚರಿ ಬದಲಾಯಿತು. ಕೆಲದಿನಗಳಲ್ಲೆ ನಾನಿರುವ ಸಂಗತಿ ಅಕ್ಕಪಕ್ಕದ ಮನೆಗಳಿಗೆ ತಲುಪಿತು. ``ಒಂಟಿ ಗಂಡಸು ಮೊದಲೇ ಏಕೆ ಹೇಳಲಿಲ್ಲ ನಮ್ಮ ಕರಾರಿನಲ್ಲಿ ಹೀಗೆಲ್ಲ ಮತ್ತೊಬ್ಬರಿಗೆ ಅವಕಾಶವಿಲ್ಲ. ಮೊದಲೇ ಹೇಳಿದ್ದರೆ ಓನರ್ ಒಪ್ಪುತ್ತಿದ್ದರೋ ಇಲ್ಲವೋ ಈಗ ಕಂಪ್ಲೇಟ್ ಕೊಟ್ಟಿದ್ದಾರೆ'' ಎಂದು ಅಪಾರ್ಟಮೆಂಟಿನ ವೆಲ್‍ಫೇರ್ ಅಸೋಸಿಯೇಶನ್ನಿನ ಅಧ್ಯಕ್ಷ ಬಂದು ಕೂಗಾಡಿದ. ``ನೀನು ಒಬ್ಬನೇ ಇರ್ತಿನಿ ಅಂದದ್ದಕ್ಕೆ ಮನೆ ಕೊಟ್ಟದ್ದು. ಸ್ವಂತ ಅಪಾರ್ಟಮೆಂಟ್‍ನವರಾದ್ರೆ ಯೋಚಿಸಬಹುದು. ನೀವಿರುವುದು ಬಾಡಿಗೆಗೆ. ಅಂತಹದರಲ್ಲಿ...'' ಎಂದ. ಪ್ರಸಾದ ಏನೋ ಬಾಯಿ ತೆರೆಯಲು ಹೋದವ ಹಾಗೇ ಬಾಯಿ ಮುಚ್ಚಿದ. ಅವನ ಮನಸ್ಸಿನಲ್ಲಿ ಏನು ಓಡುತ್ತಿತ್ತೊ ನನಗೆ ಹೇಗೆ ಅರ್ಥವಾಗುವುದು? ಅಷ್ಟೆಲ್ಲಾ ಕೂಗಾಡಿದರೂ ಹೋಗುವಾಗ ಬಂದು ನನ್ನ ನೆತ್ತಿ ನೇವರಿಸಿದ ಅಧ್ಯಕ್ಷ ``ನನಗೆ ವಯಕ್ತಿಕವಾಗಿ ನಿನ್ನ ಮೇಲೆ ದ್ವೇಷವಿಲ್ಲ. ಆದರೆ ಅಪಾರ್ಟಮೆಂಟ್ ರೂಲ್ಸು ಪಾಲಿಸಬೇಕಲ್ಲ'' ಎಂದು ತನ್ನ ಅಸಾಯಕತೆಯನ್ನು ಹೊರಚೆಲ್ಲಿದ. ``ನೋಡಿ ಸ್ವಲ್ಪ ದಿನ ಟೈಮ್ ಕೊಡಿ ನಾನು ಬೇರೆ ವ್ಯವಸ್ಥೆ ಮಾಡಿಕೊಂಡು ಹೊರಡುವೆ, ನಮ್ಮ ಮನೆಯಲ್ಲಿ ನಮ್ಮ ಇಷ್ಟದಂತೆ ಇರಕ್ಕೆ ದೋಣೆ ನಾಯಕರ ಅಪ್ಪಣೆ ಬೇಕಾ? ಕೈತುಂಬಾ ಬಾಡಿಗೆ ಕೊಟ್ರೂ ನಮಗೆ ಸ್ವತಂತ್ರ ಇಲ್ಲ ಅಂದ್ರೆ ಹೇಗೆ. ಬಾಡಿಗೆದಾರರಿಗೆ ಒಂದು ರೂಲ್ಸು, ಓನರುಗಳಿಗೆ ಒಂದು ರೂಲ್ಸಾ ಇದು ನ್ಯಾಯಾನಾ? ನಾವು ದುಡ್ಡು ಕೊಡದೆ ಹುಣಸೆಬೀಜ ಕೊಡ್ತಿದ್ದೀವಾ?'' ಮೈ ಮೇಲೆ ದೇವರು ಬಂದಂತೆ ಪ್ರಸಾದ ಕೂಗಾಡಿದ. ಮತ್ತೇನೋ ಬಾಯಿ ತೆರೆಯಲು ಹೋದ ಅಧ್ಯಕ್ಷರಿಗೆ ``ಸಾರ್ ನಾನು ಹೇಳಿದ್ದೀನಲ್ಲಾ ಬೇರೆ ವ್ಯವಸ್ಥೆ ಮಾಡುವೆ ಅಂತ, ನೀವು ಮಾತಾಡಬೇಡಿ ಹೊರಡಿ'' ಎಂದು ಸ್ವಲ್ಪ ಬಿರುಸಾಗಿಯೇ ಹೇಳಿ ಬಾಗಿಲಾಕಿದ. ಅವನ ಕೋಪ ಇನ್ನು ಶಮನವಾಗಿರಲಿಲ್ಲ. ನಾನು ದೂರದಲ್ಲಿಯೇ ಇದ್ದೆ. ``ಅಮ್ಮನೂ ಹೀಗೆ ಶಕ್ಕು ಏನಾದ್ರೂ ತಪ್ಪು ಮಾತಾಡಿದ್ರೆ ಸಿಡಿದೆಳ್ತಿದ್ಲು. ಅವಳ ಸ್ವಭಾವವೇ ನನಗೂ ಬಂದಿದೆ. ಅಪ್ಪ ತುಂಬಾ ಸೈಲೆಂಟ್. ಆದ್ರೆ ಅತ್ಯಂತ ಇನ್‍ಡಿಪೆಂಡೆಟ್ ಮನುಷ್ಯ. ನಾನು ಅಮ್ಮನ ಸಾವನ್ನು ತುಂಬಾ ಸೀರಿಯಸ್ ಆಗಿ ತಗೊಂಡು ಮೊದಲ ಸೆಮಿಸ್ಟರ್ ಫೇಲ್ ಆದೆ. ಅಪ್ಪ ನನ್ನನ್ನು ಕೂರಿಸಿಕೊಂಡು ಪ್ರಸಾದ್, ನಿನ್ನಮ್ಮನ ಕನಸು ನೀನು ಇಂಜಿನಿಯರ್ ಆಗಬೇಕು ಅನ್ನೊದು ಅದನ್ನು ನಿರಾಸೆ ಮಾಡಬೇಡ. ಅವಳು ಸತ್ತು ಎಲ್ಲಿದ್ದಾಳೋ, ಅವಳ ಮನಸ್ಸಿಗೆ ಶಾಂತಿನಾದ್ರೂ ಸಿಗಲಿ ಅಂತ ಅಪ್ಪ ಕೇಳಿಕೊಂಡಾಗ ನಾನು ಅಮ್ಮನ ಆಸೆ ನೆರವೇರಿಸುವಂತೆ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿಕೊಂಡೆ. ಅಪ್ಪ ಮನೆ ಮಾರಿ ಬಂದ ದುಡ್ಡನ್ನು ಫಿಕ್ಸೆಡ್ ಡಿಪಾಸಿಟ್ ಇಟ್ಟು ಸಣ್ಣ ಕೋಣೆಯೊಂದನ್ನು ಬಾಡಿಗೆ ಪಡೆದು ಸ್ವತಂತ್ರವಾಗಿ ಬದುಕುವುದನ್ನು ಕಲಿತ. ನನ್ನನ್ನು ಹಾಸ್ಟಲ್‍ಗೆ ಹಾಕಿದ. ನಾನು ಕೆಲಸಕ್ಕೆ ಸೇರಿ ಈ ಊರಿಗೆ ಬಂದ ಮೇಲೆ ಇಲ್ಲೇ ಬಾ ಅಂದರೂ ನನಗೆ ನನ್ನ ಪುಟ್ಟ ಮನೆ, ಪುಟ್ಟ ಊರು ಅಡ್ಜಸ್ಟ್ ಆದಂಗೆ ಬೇರೆ ಮನೆ, ಊರು ಒಗ್ಗಿಸಿಕೊಳ್ಳುವುದು ಕಷ್ಟ ಅಂತ ಅಲ್ಲೆ ಉಳಿದ. ನೀನಾದ್ರೂ ಹೇಳು ಒಂಟಿಯಾದ ಜೀವ ಎಷ್ಟು ದಿನ ತನ್ನ ಭಾವನೆಗಳನ್ನು ಹಂಚಿಕೊಳ್ಳಲಾಗದೆ ಉಳಿಯಲು ಸಾಧ್ಯ? ಈಗ ನನಗೆ ನೆಮ್ಮದಿ. ನನ್ನ ಮಾತುಗಳನ್ನು ಅರ್ಥ ಮಾಡಿಕೊಳ್ಳುವ, ನಿರ್ಮಲ ಪ್ರೀತಿ ನೀಡುವ ನೀನು ಸಿಕ್ಕಿದ್ದು ನನ್ನ ಭಾಗ್ಯ ಶಕ್ಕು'' ಅವನು ಮಾತು ಮುಗಿಸಿ ನನ್ನನ್ನು ದೀರ್ಘವಾಗಿ ಚುಂಬಿಸಿದ. ಅಮ್ಮನ ಪ್ರೀತಿ ಸಿಕ್ಕ ತೃಪ್ತಿ ಅವನಿಗಿತ್ತು, ನನಗೂ ಇತ್ತು.
ಮೊದಲಿದ್ದ ಮನೆ ಬದಲಿಸಿ ನಾವು ಇಂಡಿಪೆಂಡೆಂಟ್ ಮನೆಗೆ ಬಂದು ಕೆಲವು ವರ್ಷಗಳಾಗಿದ್ದವು. ದಿನದಿನಕ್ಕೂ ನಮ್ಮಿಬ್ಬರ ಸಂಬಂಧ ಗಾಢವಾಗಿತ್ತು. ಅವನ ಪ್ರೀತಿಗೆ ಪ್ರತಿಯಾಗಿ ನಾನು ನನ್ನೆಲ್ಲಾ ಪ್ರೀತಿಯನ್ನು ನೀಡುತ್ತಿದ್ದೆ. ಅವನು ನನ್ನಲ್ಲಿ ಅಮ್ಮನಂತಹ ಪ್ರೀತಿ ಕಂಡಿದ್ದ. ನಾನು ಅವನ ನೋವಿಗೆ ಕಿವಿಯಾದ ಖುಷಿಯಲ್ಲಿದ್ದೆ...ಅವನ ಬದುಕಿಗೆ ಅಂಜು ಬರುವ ತನಕ. ಇತ್ತೀಚೆಗೆ ಪ್ರಸಾದ ನನ್ನ ಕಡೆಗೂ ಜಾಸ್ತಿ ಗಮನವರಿಸದೆ ಅವಳೊಂದಿಗೆ ಬೆಳಗೂ ರಾತ್ರಿ ಫೋನಿನಲ್ಲೇ ಇರುತ್ತಿದ್ದ. ಮಧ್ಯರಾತ್ರಿಯಾದರೂ ಅವರಿಬ್ಬರ ಮಾತು ಮುಗಿಯುತ್ತಿರಲಿಲ್ಲ. ನನಗದೆಂತಹದೋ ಅಸಹನೆ, ನನ್ನಿಂದ ಅವನು ದೂರವಾಗುತ್ತಿರುವ ಭಾವ, ಅವನೆಡೆಗೆ ನನ್ನಲ್ಲಿದ್ದ ಪೊಸೆಸಿವ್‍ನೆಸ್ ನನ್ನನ್ನು ಅಲ್ಲಾಡಿಸುತ್ತಿತ್ತು. ನಾನು ಅಂತಹ ರಾತ್ರಿಗಳಲ್ಲಿ ಅಲ್ಲಿಂದ ಹೊರಬಂದು ಸೋಫ ಮೇಲೆ ಮಲಗುತ್ತಿದ್ದೆ. ನಾನು ಅವನ ತೆಕ್ಕೆಯಿಂದ ಎದ್ದು ಹೋದದ್ದೂ ತಿಳಿಯದಂತೆ ಅವನು ತನ್ನ ಮಾತಿನಲ್ಲಿ ಮುಳುಗಿರುತ್ತಿದ್ದ. ನಾನು ಹೊರಗೆ ಬಂದು ಮಲಗಲು ಪ್ರಯತ್ನಿಸಿದರೂ ಹಾಳಾದ ಕಿವಿಗಳಿದ್ದವಲ್ಲಾ ಅವು ಎಲ್ಲವನ್ನು ಕೇಳಿಸುತ್ತಿದ್ದವು. ಅವನ ಮಾತುಗಳ್ಯಾವೂ ನನ್ನ ಕಿವಿಗೆ ಬೀಳದಿರಲಿ ಎಂದು ಎಷ್ಟೇ ಪ್ರಯತ್ನಿಸಿದರೂ ಬಿಡದೆ ಕೇಳಿಸಿ ನನ್ನ ಅಸಹನೆಯನ್ನು ಹೆಚ್ಚಿಸುತ್ತಿದ್ದವು. ಮೊದಲು ಮಾತುಗಳು ಮಾತ್ರ ಕೇಳಿಸಿಕೊಳ್ಳುತ್ತಿದ್ದ ನನಗೆ, ಅವನು ಇತ್ತೀಚೆಗೆ ಆ ದರಿದ್ರ ಫೋನಿಗೆ ಲೊಚಲೊಚ ಮುತ್ತಿಡುವುದನ್ನು ಹೇಗೆ ಅರ್ಥ ಮಾಡಿಕೊಳ್ಳಲಿ? ಬೆಳಿಗ್ಗೆ ಕಣ್ಣುಬಿಟ್ಟ ಪ್ರಸಾದ್ ಬಳಿಬಂದು ``ಅದೇಕೆ ಸೋಫ್ ಮೇಲೆ ಮಲಗಿದ್ದೀ ಶಕ್ಕು?'' ಎಂದು ಮುದ್ದಿಸಿದರೆ ನಾನು ಪ್ರತಿಯಾಗಿ ಮುದ್ದಿಸದೆ ಅವನಿಂದ ದೂರ ಹೋಗಿಬಿಡುತ್ತಿದ್ದೆ. ಅವನಿಗೂ ತನ್ನ ತಪ್ಪಿನ ಅರಿವಾಗಲಿ ಎಂದು. ಆದರೆ ಅವನಿಗೆ ಅರಿವಾಯಿತಾ?
ಮೊದಮೊದಲು ಭಾನುವಾರ ಮನೆಯಲ್ಲೇ ಇರುತ್ತಿದ್ದ ನಾವಿಬ್ಬರು ಬೆಳಗಿನ ಕೆಲಸ ಮುಗಿಸಿ ಅಂದು ಒಂದೆರೆಡು ಗಂಟೆ ವಾಕ್ ಹೊರಡುತ್ತಿದ್ದೆವು. ನಮ್ಮನ್ನು ನೋಡಿದ ಜನ ಮುಗುಳ್ನಕ್ಕು ಮುನ್ನಡೆಯುತ್ತಿದ್ದರು. ದಾರಿಯಲ್ಲಿ ಸಿಕ್ಕ ಗಂಡಸರ ಕುಹಕ ನೋಟ, ಹಿಂಬಾಲಿಸುವಿಕೆ ಬಹಳ ನಡೆಯುತ್ತಿರಲಿಲ್ಲ. ಏಕೆಂದರೆ ನನ್ನೊಂದಿಗೆ ಪ್ರಸಾದ ಇರುತ್ತಿದ್ದ. ನಾವಿಬ್ಬರು ಮನೆಯಿಂದ ದೂರದಲ್ಲಿ ಇದ್ದ ಪಾರ್ಕನ ಕಟ್ಟೆಯ ಮೇಲೆ ಕುಳಿತು ಮರಗಿಡಗಳ ಅಂದ, ಬೀಸುವ ತಂಗಾಳಿ, ಹುಲ್ಲಿನಲ್ಲಿ ಓಡಾಡುತ್ತಿದ್ದ ಸೂಕ್ಷ್ಮಜೀವಿಗಳ ಚಲನವಲನ, ಪಕ್ಷಿಗಳ ಕಲರವ, ಪಾರ್ಕಿನಲ್ಲಿ ಓಡಾಡುತ್ತಿದ್ದ ಜನಗಳ ಚಿತ್ರವಿಚಿತ್ರ ಚಲನೆಗಳನ್ನು ಸೈಲೆಂಟ್ ಆಗಿ ಆನಂದಿಸುತ್ತಿದ್ದೆವು. ಆ ದಿನಕ್ಕಾಗಿ ಪ್ರತಿ ಭಾನುವಾರವನ್ನೂ ನಾನು ಕಾಯುತ್ತಿದ್ದೆ.
ಅಂಜು ಪ್ರಸಾದನ ಬಾಳು ಪ್ರವೇಶಿಸಿದ ಮೇಲೆ ಪ್ರಸಾದ ಬೇರೆಯದೇ ಲೋಕದಲ್ಲಿದ್ದ. ಅದು ನನಗೆ ಗೋಚರವಾಗುವಂತೆ. ಬೇರೆ ದಿನಗಳಲೆಲ್ಲಾ ಆಫೀಸಿನ ಕೆಲಸದಲ್ಲಿ ಬಿಜಿಯಾಗಿರುತ್ತಿದ್ದ. ಭಾನುವಾರಕ್ಕಾಗಿಯೇ ನಾನು ಉಳಿದ ದಿನಗಳ ಏಕಾಂತತೆಯನ್ನು ಸಹಿಸಿಕೊಳ್ಳುತ್ತಿದ್ದೆ. ಆದರೆ ಇದೀಗ ಅವನ ಬಾಳಲ್ಲಿ ಅಂಜು ಪ್ರವೇಶಿಸಿದ ಮೇಲೆ ಪ್ರತಿ ಭಾನುವಾರವೂ ಉಳಿದ ದಿನಗಳಂತೆಯೇ ಇರುತ್ತಿತ್ತು. ಇದನ್ನು ನಾನೇಗೆ ಸಹಿಸಲಿ? ನನ್ನ ಮುನಿಸನ್ನೂ ಗಮನಿಸದಷ್ಟು ಪ್ರಸಾದ ಅಂಜುವಲ್ಲಿ ಲೀನವಾಗಿದ್ದ. ಅದ್ಯಾವ ಮೋಡಿ ಅಂಜು ಮಾಡಿದ್ದಳು? ಇತ್ತೀಚೆಗೆ ಪ್ರಸಾದ ತನ್ನ ಡ್ರೆಸ್ ಬಗ್ಗೆಯೂ ತುಂಬಾ ಕಾಳಜಿ ವಹಿಸುತ್ತಿದ್ದ. ಪರಫ್ಯೂಮ್ ಹಾಕುವುದು ಅವನಿಗೆ ಇಷ್ಟವಿರಲಿಲ್ಲ. ಆದರೂ ಅಂಜುವಿಗಾಗಿ ನಾಲ್ಕೈದು ಫರಫ್ಯೂಮ್ ತಂದಿಟ್ಟುಕೊಂಡು ಸುರಿದುಕೊಳ್ಳುತ್ತಿದ್ದ. ಬಾಗಿಲಲ್ಲಿ ನಿಂತ ನನ್ನನ್ನು ಅಪ್ಪಿ ಮುದ್ದಿಡುವಾಗ ನನಗೆ ಆ ವಾಸನೆ ಸಹಿಸಲಾಗದೆ ದೂರ ಸರಿಯುತ್ತಿದ್ದೆ. ನನ್ನನ್ನು ತನ್ನ ಇಷ್ಟಗಳಿಗೆ ಹೊಂದಿಸಿದ್ದ ಪ್ರಸಾದ, ಇಂದು ಅಂಜುವಿಗಾಗಿ ಇಷ್ಟೊಂದು ಬದಲಾಗಲು ಕಾರಣವೇನು? ಯಾಕೋ ಸಹನೆ ಕೆಡುತ್ತಿದೆ ಎನ್ನಿಸಿ ಕಿಟಕೆಗೆ ಮುಖ ಮಾಡಿದೆ. ಎದುರಿನ ಮಕ್ಕಳ ಆಟದ ಮೈದಾನದಲ್ಲಿ ಮಕ್ಕಳು ತಮ್ಮ ಪಾಡಿಗೆ ತಾವು ಆಟವಾಡುತ್ತಿದ್ದರು. ಹೆಣ್ತತನ ನನಗೂ ಜಾಗೃತವಾಯಿತು. ನಾನು ಬಸಿರಾಗಿ ತಾಯಾಗುವ ಕನಸು ಕಾಣುತ್ತಿದ್ದೆ.
ಅದೊಂದು ಭಾನುವಾರದ ಸಂಜೆ ಟಿವಿಯಲ್ಲಿ ಅದ್ಯಾವುದೋ ಶೋ ನೋಡುತ್ತಾ ಛಾನಲ್‍ಗಳನ್ನು ತಿರುಗಿಸುತ್ತಿದ್ದವನು ಯಾವುದೋ ಛಾನಲ್‍ನಲ್ಲಿ ಶಕುಂತಲೆ ಎಂಬ ಶಬ್ಧ ಕೇಳಿದೊಡನೆ ನೋಡಲಾರಂಭಿಸಿದ. ನಾನು ಅವನ ಪಕ್ಕದಲ್ಲಿ ಸೋಫದ ಮೇಲೆ ಒರಗಿದ್ದೆ. ಪ್ರಸಾದನಿಗೆ ಒರಗಿ ಅವನನ್ನೆ ತದೇಕಚಿತ್ತವಾಗಿ ನೋಡುವುದು ನನಗೆ ಅತ್ಯಂತ ಅಪ್ಯಾಯಮಾನವಾದ ಕೆಲಸವಾಗಿತ್ತು. ``ಶಕ್ಕು, ಶಕುಂತಲೆ-ದುಷ್ಯಂತನ ಕತೆ ಬರ್ತಿದೆ ನೋಡು. ಬಹಳ ಚಿಕ್ಕವನಿದ್ದಾಗ ಅಮ್ಮನಿಂದ ಕೇಳಿದ್ದೆ. ಮರೆತೇ ಹೋಗಿದೆ'' ಎಂದು ಅದರಲ್ಲಿಯೇ ತಲ್ಲೀನನಾದ. ಅವನೊಂದಿಗೆ ನಾನೂ. ``ಬೇಟೆಗಾಗಿ ನೀವು ಅಡವಿಗೆ ಬಂದಿರಿ. ಬೇಟೆ ಪ್ರಾಣಿಯದ್ದೋ?ಹೆಣ್ಣಿನದ್ದೋ? ಅಂತೂ ನಿಮ್ಮ ಕಣ್ಣ ಬಾಣಕ್ಕೆ ಕರಗಿ ನಾನು ಗಂಧರ್ವ ವಿವಾಹವಾದೆ. ನಿಮ್ಮ ಕೂಸಿಗೆ ತಾಯಿಯಾದೆ. ಬರುವೆನೆಂದವರ ದಾರಿ ಕಾದು ಲೋಕದ ಅಪವಾದಕ್ಕೆ ಹೆದರಿ ನಿಮ್ಮಲ್ಲಿ ಬಂದಿರುವೆ ಸ್ವೀಕರಿಸಿ'' ಎಂದು ಶಕುಂತಲೆಯ ಅಸಹಾಯಕತೆಗೆ ದುಷ್ಯಂತ ``ಯಾರಿಗೋ ಬಸಿರಾಗಿ ನನ್ನ ಹೆಸರು ಹೇಳಲು ನಾಚಿಕೆಯಾಗದೆ? ಋಷಿ ಕನ್ಯೆಯಾದ ನೀನು ಸುಳ್ಳು ಹೇಳುವುದು ಎಂದರೇನು? ಪುರಾವೆ ಎಲ್ಲಿದೆ?'' ಅವನ ಅಹಂಕಾರದ ಪ್ರಶ್ನೆಗೆ ತುಂಬಿದ ಸಭೆಯಲ್ಲಿ ಯಾವ ಪುರಾವೆ ನೀಡಬೇಕು? ಶಕುಂತಲೆ ನಿಧಾನಕ್ಕೆ ತನ್ನ ಕೈಯನ್ನು ಹೊಟ್ಟೆಯ ಮೇಲಾಡಿಸುತ್ತಾಳೆ.ಅಲ್ಲಿದ್ದವರೆಲ್ಲಾ ಕುಹಕದ ನಗೆ ನಗುತ್ತಾರೆ. ಮುಂದಕ್ಕೆ ನೋಡಲಾಗದೆ ಪ್ರಸಾದ ಟಿವಿ ಸ್ವೀಚ್ ಆಫ್ ಮಾಡಿದ. ನನ್ನ ಹೊಟ್ಟೆ ಸವರುತ್ತಾ ``ಶಕ್ಕು ಅಮ್ಮ ಕೂಡ ಹೀಗೆ ಅಪ್ಪನನ್ನು ಪುರಾವೆ ನೀಡಿ ನನ್ನ ಎತ್ತಳಂತೆ. ಅಮ್ಮನನ್ನು ಪ್ರೀತಿಸಿದ್ದ ಅಪ್ಪ ತನ್ನ ಕುಟುಂಬದ ಮುಂದೆ ಮದುವೆಯಾಗುವೆನೆಂದಾಗ ಅವರೆಲ್ಲಾ ವಿರೋಧಿಸಿದರಂತೆ. ಜಾತಿ ಬೇರೆ ಅಂತ. ಅಮ್ಮನಿಗೆ ಮೊದಲ ಮುಟ್ಟು ನಿಂತು ಆತಂಕದಿಂದಲೇ ಎರಡನೇ ತಿಂಗಳು ಟೆಸ್ಟ್ ಮಾಡಿಸಿದಾಗ ಗರ್ಭವತಿಯೆಂಬ ಮಾತು ಕೇಳಿ ಅಪ್ಪನ ಕೈಕಾಲು ಹಿಡಿದು ಮದುವೆಯಾದಳಂತೆ. ಅಪ್ಪ ತೆಗೆಸುವ ಮಾತನಾಡಿದ್ದನಂತೆ. ಆದರೆ ಅಮ್ಮ ನನ್ನ ಜೊತೆ ಆಗಲೇ ಯಾವುದೋ ತಂತು ಬೆಸೆದುಕೊಂಡಂತೆ ಉಳಿಸಿಕೊಂಡಳಂತೆ. ನೀ ಹೇಳು ಹೆಣ್ಣು ಅದೆಂತಹ ಅದ್ಭುತ ಕ್ರಿಯೆಗೆ ಸಾಕ್ಷಿಯಾಗ್ತಾಳೆ ಅಂತ. ತನ್ನವನು ಎಂದವನನ್ನು ನಂಬಿ ತನ್ನಲ್ಲಿ ಅವನದೆಲ್ಲವನ್ನು ಒಳಗೊಂಡು ಕಾಣದ ಜೀವಕ್ಕೆ ಕೈಕಾಲು, ಕಣ್ಣು ಮೂಡುವ, ಹೃದಯದ ಬಡಿತ ಆಲಿಸುವ ತಾಳ್ಮೆ, ಆ ಸಂಕಟಕ್ಕೆ ಸಾಕ್ಷಿಯಾಗುವಾಗ ಅವಳ ದೇಹದ ಕಣಕಣವೂ ಅನುಭವಿಸುವ ನೋವು, ಹಿಗ್ಗುವಿಕೆ, ಸಂತಸ, ಅಸಹನೆ, ವಾಂತಿ, ಹೀಗೆ ಏನೆಲ್ಲಾ ಸಹಿಸಿಕೊಂಡು ಒಂದಲ್ಲ ಎರಡಲ್ಲ ಒಂಬತ್ತು ತಿಂಗಳು ಗರ್ಭಧರಿಸಿ ಅದನ್ನು ಜತನದಿಂದ ಕಾಪಾಡುವುದೇನು ತಮಾಷೆಯೇ? ಈ ಸೃಷ್ಟಿಕ್ರಿಯೆ ಮುಂದುವರೆಸದೇ ಇದ್ರೆ ಜಗತ್ತು ಏನಾಗ್ತಿತ್ತು ಅಂತ ಯೋಚಿಸು.'' ಎಂದಾಗ ನನಗೆ ಅವನ ಮೇಲೆ ಅದೆಂತಹ ಪ್ರೀತಿ ಉಕ್ಕಿ ಹರಿದಿತ್ತು. ಪ್ರಸಾದನಲ್ಲಿ ಹೆಣ್ಣಿನ ಸೂಕ್ಷ್ಮತೆಯನ್ನು ಗ್ರಹಿಸುವ ಶಕ್ತಿಗೆ ಬೆರಗಾಗಿದ್ದೆ.
ಹೀಗೆ ಯೋಚನೆಗಳ ದಂಟು ಕಟ್ಟಿಕೊಂಡು ನಾನು ಪ್ರಸಾದ ಮನೆಯಿಂದ ಬಹಳಷ್ಟು ದೂರ ಬಂದಿದ್ದೆ. ಮಧ್ಯರಾತ್ರಿಯ ಆ ಕರಾಳ ರಾತ್ರಿಯಲ್ಲಿ ನಾನು ದಾರಿಕಾಣದೆ ದಿಕ್ಕೆಟ್ಟು ನಿಂತಿದ್ದನ್ನು ಆ ಹೊಯ್ಸಳದ ಪೋಲಿಸ್ ಗಮನಿಸಿದನಲ್ಲವೇ? ಅಯ್ಯೋ ಮುಂದೇನು ಯೋಚಿಸುತ್ತಿರುವಾಗಲೇ ಅವನು ಸಾಗಿ ಹೋಗಿದ್ದ. ಈ ದಾರಿಯ ಯಾವ ದಿಕ್ಕಿಗೆ ನಾನು ಅಡಿಯಿಡಬೇಕು? ಚಿಂತಿಸುತ್ತಾ ಅಲ್ಲೇ ನಿಂತೆ. ನನ್ನ ನಿಂತ ನಿಲುವಿಗೆ ಸುತ್ತಲ ಜಗತ್ತು ತಲೆಕೆಡಿಸಿಕೊಳ್ಳದಂತೆ ಸಾಗುತ್ತಿದೆಯೇ? ಪ್ರಸಾದ ನಾನಿಲ್ಲದೆ ಬದುಕಬಲ್ಲನೇ? ಅಂಜು ಇದ್ದಾಳಲ್ಲಾ ಅವಳ ನೆನಪಾಗುತ್ತಲೇ ನನ್ನ ಮೈಯಿಡಿ ಕೋಪದಿಂದ ನಡುಗಲಾರಂಭಿಸಿತು.
ಅದೊಂದು ಭಾನುವಾರ ಪ್ರಸಾದ ಅಂಜುವಿನೊಂದಿಗೆ ಸುತ್ತಾಡಲು ಹೋಗಿದ್ದ. ನಾನು ಅದೇ ಏಕಾಂಗಿತನವನ್ನು ಮರೆಯಲು ಒಬ್ಬಳೆ ಪಾರ್ಕಿಗೆ ಹೊರಟೆ. ಅದೇನೋ ಅಳುಕು. ಆದರೂ ಪ್ರಸಾದ ಮೇಲಿನ ಕೋಪ ಧೈರ್ಯ ನೀಡಿತ್ತು. ನನ್ನನ್ನೆ ಹಿಂಬಾಲಿಸುತ್ತಿದ್ದ ಗಂಡುಗಳನ್ನು ದೂರಹಾಕಿ ಬಿರಬಿರನೆ ಆ ಪಾರ್ಕ ಸೇರಿದ್ದೆ. ನಾನು ಪ್ರಸಾದ ಕೂರುತ್ತಿದ್ದ ಕಟ್ಟೆಯದು. ಸಂಜೆಯ ತಂಪನ್ನು ಅಹ್ಲಾದಿಸುವ ಮನಸ್ಥಿತಿ ನನ್ನದಾಗಿರಲಿಲ್ಲ. ಅಲ್ಲಾಗಲೇ ಮಬ್ಬು ಕವಿಯುತ್ತಿತ್ತು. ನಾಲ್ಕಾರು ಗಂಡುಗಳು ನನ್ನತ್ತಲೇ ಗುರಾಯಿಸಲಾರಂಭಿಸಿದವು. ಇಲ್ಲದ ಧೈರ್ಯ ತಂದುಕೊಂಡೆ. ದೂರ ಸರಿದಷ್ಟು ಹತ್ತಿರವಾಗುವ ಅವರ ನೋಟ, ನನ್ನನ್ನು ಮುಟ್ಟುವ ಕೊಳಕುತನಕ್ಕೆ ಹೆದರಿ ತಪ್ಪಿಸಿಕೊಳ್ಳಲು ಯತ್ನಿಸಿದೆ. ಕ್ಷಣ ತಪ್ಪಿಸಿಕೊಂಡರೂ ಹಿಡಿತ ಬಿಗಿಯಾಯಿತು. ಒಂದು ಗಂಡಿಗೆ ಮತ್ತೊಂದು ಗಂಡು ಸಾತ್ ನೀಡಲಾರಂಭಿಸಿದಂತೆ ನಾನು ಬಾಯಿ ಜೋರು ಮಾಡಿ ಕಿರುಚಲಾರಂಭಿಸಿದೆ. ಹಿಡಿತ ಬಿಗಿಯಾದಷ್ಟು ನನ್ನ ಕೂಗು ಅನೇಕರ ಕಿವಿ ಮುಟ್ಟದಿರುವುದೇ? ಆದರೆ ಸಹಾಯ ಮಾಡಿದ್ದು ಮಾತ್ರ ಒಬ್ಬನೇ. ಅಲ್ಲಿನ ಮಾಲಿ. ನನ್ನ ಸುತ್ತಲ್ಲಿದ್ದ ಗಂಡುಗಳನ್ನು ಓಡಿಸಲು ಬಂದಾಗ ಅಲ್ಲೇ ಹತ್ತಿರದಲ್ಲಿದ್ದ ಪೋಲಿಸನೊಬ್ಬ ಜೊತೆಯಾಗಿದ್ದ. ಬೆದರಿದ ಗಂಡುಗಳು ನನ್ನ ಬಿಟ್ಟು ಓಡಿ ಹೋದರು. ಪ್ರತಿ ಭಾನುವಾರ ಪ್ರಸಾದನ ಜೊತೆಗೆ ಗಮನಿಸಿದ್ದ ಮಾಲಿ ರಕ್ತಸಿಕ್ತವಾಗಿದ್ದ ನನ್ನನ್ನು ಪ್ರಸಾದನಿಗೆ ಒಪ್ಪಿಸಿ ``ಕಾಲ ಸರಿಯಿಲ್ಲ, ಕಳಿಸಬೇಡಿ ಹಾಗೇಲ್ಲ. ಜೊತೆ ಇಲ್ಲದಿದ್ದರೆ ಸಂಭಾಳಿಸುವುದು ಸುಲಭವಲ್ಲ'' ಎಂದು ಮಾತಾಡಿ ಬಿಟ್ಟು ಹೋಗಿದ್ದ. ಅಪರಾಧಿ ಭಾವದಲ್ಲಿ ನಿಂತಿದ್ದ ನನ್ನ ಬಳಿ ಬಂದು ಪ್ರಸಾದ ಮೈಮೇಲಿನ ಗಾಯ ತೊಳೆದು, ಔಷಧಿಯಾಕಿ ಆರೈಕೆ ಮಾಡಿದ್ದ. ನನ್ನ ತಬ್ಬಿ ``ಶಕ್ಕು ನನ್ನನ್ನು ಕ್ಷಮಿಸು'' ಎಂದು ಬೇಡಿಕೊಂಡ ಅವನ ಕಣ್ಣ ದೈನ್ಯತೆ ಮರೆಯಲುಂಟೆ. ಅಂತಹ ಪ್ರಸಾದನನ್ನು ನಾನು ಬಿಟ್ಟು ಹೊರಟು ಈ ಮಹಾನಗರದಲ್ಲಿ ಎಲ್ಲಿ ಸೇರಲಿ? ಯಾರು ನನಗೆ ದಿಕ್ಕು? ಅಮ್ಮ, ತಮ್ಮ-ತಂಗಿಯರು ಯಾಕೋ ತುಂಬ ನೆನಪಿಗೆ ಬರುತ್ತಿದ್ದಾರಲ್ಲಾ. ಇಷ್ಟು ದಿನ ಅವರೆಲ್ಲಾ ಏಕೆ ನೆನಪಿಗೆ ಬಂದಿರಲಿಲ್ಲ. ಅವರನ್ನೆಲ್ಲಾ ಮರೆಸುವ ಮಾಂತ್ರಿಕ ಶಕ್ತಿ ಪ್ರಸಾದನ ಪ್ರೀತಿಗಿತ್ತೆಂದೇ?
ಅಂದು ಅಂಜು ಪ್ರಸಾದನೊಟ್ಟಿಗೆ ಮನೆಗೆ ಬಂದಿದ್ದಳು. ಅದೆಂತಹ ಮೈಕಾಂತಿ, ಚೆಂದದ ನೀಲಿಕಣ್ಣುಗಳು, ಕರಿ ಮೋಡದಂತಹ ಕೂದಲು. ``ನನ್ನ ಶಕ್ಕು'' ಎಂದು ಪರಿಚಯಿಸಿದರೆ ಅದೆಂತಹ ಕೊಳಕು ನೋಟ ಬೀರಿದ್ದಳು ನನ್ನಮೇಲೆ? ಈಗಲೂ ಕಣ್ಣಿಗೆ ಕಟ್ಟಿದಂತಿದೆ ಆ ನೋಟದ ತಿರಸ್ಕಾರ. ನನ್ನ ಇರುವನ್ನೇ ಕಡೆಗಣಿಸುವ ನೋಟವದು. ಪ್ರಸಾದ ಆಕೆಯನ್ನು ತಬ್ಬಿ ಮೊದಲು ಸೋಫದಲ್ಲಿ ಕುಳಿತ, ನಾನು ಸಹಿಸಿದೆ. ನಂತರ ರೂಮು ಸೇರಿದರು. ಸುಮಾರು ಎರಡು ತಾಸುಗಳ ನಂತರ ರೂಮಿನ ಬಾಗಿಲು ತೆರೆಯಿತು. ನಾನು ಅಸಹಾಯಕಳಂತೆ ಮತ್ತೊಂದು ರೂಮು ಸೇರಿದ್ದೆ. ಪ್ರಸಾದ ಕಣ್ಣಿಲ್ಲಿ ಅದೆಂತದ್ದೋ ಅಮಲು, ಭಾರ ಕಳೆದು ಹಗೂರವಾಗಿದ್ದ. ಕೈಯಲ್ಲಿ ಹಿಡಿದು ತಂದು ಡಸ್ಟ್‍ಬಿನ್‍ಗೆ ಎಸೆದದ್ದು ಏನು? ಅವನು ಆ ಕಡೆ ಸರಿದ ಮೇಲೆ ಹೋಗಿ ನೋಡಿದೆ. ಅಪ್ಪ ಮಾಡಿದ ತಪ್ಪನ್ನು ಮಗ ಮಾಡದಂತೆ ಕಾಂಡೋಮ್ ಬಳಿಸಿದ್ದಾನೆ! ನಾನು ವ್ಯಂಗ್ಯ ನಕ್ಕೆ. ಅಂಜು ಬಿಚ್ಚಿದ್ದನೆಲ್ಲಾ ಏರಿಸಿ ಹೊರಬಂದಳು. ಅವನಲ್ಲಿ ಇವಳ ಮೈವಾಸನೆ, ಇವಳಲ್ಲಿ ಅವನ ಮೈವಾಸನೆ ಸೇರಿದ್ದು ನನ್ನ ಗಮನಕ್ಕೆ ಬಂತು. ನಾನೆಷ್ಟಾದರೂ ತೊತ್ತಿನವಳು. ನನಗ್ಯಾವ ಹಕ್ಕಿದೆ ಅವನ ಪ್ರೀತಿಯ ಮೇಲೇ?ನನ್ನ ಧಿಕ್ಕರಿಸುವಂತೆ ಮತ್ತೆ ನನ್ನ ಕಣ್ಣ ಮಂದೆಯೇ ಅವರಿಬ್ಬರ ರೋಮಾನ್ಸು ಶುರುವಾಯಿತು. ``ಪ್ರಸಾದ್ ನಾವು ಮದುವೆಯಾದ ಮೇಲೆ ನೀನು ಶಕ್ಕುವನ್ನು ಜೊತೆಯಿಟ್ಟುಕೊಳ್ಳವಂತಿಲ್ಲ ತಿಳೀತಾ?" ಕೇಳಿದಳು. ನಾನು ನನ್ನ ವಿಷಯವೆಂದು ಕಿವಿ ನಿಮಿರಿಸಿ ರೂಮಿನಿಂದಲೇ ಕೇಳಿಸಿಕೊಳ್ಳಲಾರಂಭಿಸಿದೆ.
``ಈ ಟಾಪಿಕ್ ಅದೆಷ್ಟು ಸಲ ಹೇಳಿದ್ದೀ. ನಾ ನಿನಗೆ ಭರವಸೆ ನೀಡಿದ್ದೀನಲ್ಲವಾ? ಮತ್ತೇ ಏಕೆ ಅದೇ ವಿಷಯ?'' ಪ್ರಸಾದನ ದನಿ.
``ಆದ್ರೂ ನಾ ನಿನಗೆ ಮತ್ತೊಮ್ಮೆ ಜ್ಞಾಪಿಸಿದೆ''
``ನಾನು, ಶಕ್ಕು ಬಿಡಲ್ಲ ಅಂದ್ರೆ?''
``ನಾ, ನಿನಗ ಸಿಗಲ್ಲ ಅಷ್ಟೆ''
``ನನಗೆ ನೀನು ಬೇಕು, ಶಕ್ಕುನೂ ಬೇಕು ಅಂದ್ರೆ?''
``ನೋಡು ನಾ ಹೇಳಿದ್ದೀನಿ ನಿನಗಿರುವುದು ಒಂದೇ ಚಾಯ್ಸ್ ಇರೋದು. ನಾನು... ಇಲ್ಲ... ಶಕ್ಕು. ಒಂದೇ ಮನೆಯಲ್ಲಿ ಇಬ್ಬರೂ ಇರಲಿಕ್ಕೆ ಸಾಧ್ಯವೇ ಇಲ್ಲ''
``ಓಕೆ ಡಾರ್ಲಿಂಗ್, ನಾನು ನಿನಗೆ ತಮಾಷೆ ಮಾಡಿದೆ ಅಷ್ಟೆ. ನಾನು ನಿನಗೆ ಅವತ್ತೇ ಪ್ರಾಮಿಸ್ ಮಾಡಿನಲ್ಲಾ. ಯೂ ಆರ್ ಮೈ ಲೈಫ್ ಅಂತ. ಸೋ ನೋ ಶಕ್ಕು. ನಾನು ಅವಳನ್ನು ಎಲ್ಲಿಗೆ ಕಳಿಸಬೇಕು ಅಂತ ಯೋಚಿಸುವೆ''
ಆ ಮಾತು ಪ್ರಸಾದ ಆಡಿದ್ದ? ನನಗೆ ಮೊದಲು ನಂಬಲೇ ಆಗಲಿಲ್ಲ. ನನ್ನ ಬಿಡುವ ನಿರ್ಧಾರ ಅದೆಷ್ಟು ಸುಲಭವಾಗಿ ಮಾಡಿದ್ದಾನಲ್ಲಾ? ನನ್ನನ್ನು ಒಂದು ಮಾತೂ ಕೇಳದೆ. ನನ್ನ ಸಂಕಟ, ನಿಶ್ಕಲ್ಮಷ ಪ್ರೇಮ, ಅವನ ಮೇಲಿನ ಪೊಸೆಸಿವ್‍ನೆಸ್ ಅದೆಲ್ಲಾ ಅವನಿಗೆ ಅರ್ಥ ಆಗಲೇ ಇಲ್ಲವಾ? ಅಂಜು ಬರುತ್ತಿದ್ದಂತೆ ಮಂಜಿನಂತೆ ನನ್ನ ಮೇಲಿನ ಪ್ರೀತಿ ಕರಗಿಬಿಟ್ಟಿತೇ? ನನ್ನ ಪ್ರೀತಿಗೆ ನಾನು ಯಾವ ಪುರಾವೆ ನೀಡಲಿ? ದುಷ್ಯಂತನ ಮುಂದೆ ಶಕುಂತಲೆ ನಿಂತಂತಹದ್ದೇ ಅನುಭವ.
ಯೋಚಿಸುತ್ತಾ ನಾನು ಇದ್ಯಾವ ಓಣಿಗೆ ಕಾಲಿಟ್ಟೆ? ಕಣ್ಣುಬಿಟ್ಟು ನೋಡಿದರೆ ಹತ್ತಾರು ಗಂಡುಗಳು ನನ್ನ ಸುತ್ತ ಸುತ್ತುತ್ತಿವೆ. ಮುಗಿಯಿತು ನನ್ನ ಕತೆ ಎಂದು ಕ್ಷಣ ಎನಿಸಿತು. ಪ್ರಸಾದನನ್ನು ಬಿಟ್ಟು ಬಂದು ತಪ್ಪು ಮಾಡಿದೆ ಎಂಬ ಅಪರಾಧಿ ಭಾವವೂ ಸುಳಿಯಿತು. ಇಲ್ಲ ಪ್ರಸಾದನ ತಿರಸ್ಕಾರಕ್ಕೆ ಸಿಕ್ಕ ಮೇಲೆ ನಾನು ಬದುಕುವುದಾದರೂ ಏತಕ್ಕೆ? ಈ ಗಂಡುಗಳು ನನ್ನ ಪ್ರತಿಕಣವನ್ನೂ ಕಿತ್ತು ತಿನ್ನಲಿ. ಒಟ್ಟಾಗಿ ಎರಗಿದರೆ ನಾನು ಉಳಿಯುವುದಾದರೂ ಹೇಗೆ? ಮತ್ತೆ ಬಾಯಿ ಜೋರು ಮಾಡಲಾರಂಭಿಸಿದೆ. ನೀರವ ರಾತ್ರಿಯಲ್ಲಿ ನನ್ನ ಕೂಗು ಯಾರ ಮುಟ್ಟಬೇಕು? ಮುಟ್ಟಿದರೂ ಉಳಿಸುವವರು ಯಾರು? ಕಿಟಕಿಯಿಂದ ಕತ್ತಾಕುವ ಅವರಿಗೆ ಇದೊಂದು ಸಹಜ ಕ್ರಿಯೆ ಅಲ್ಲವೇ? ಹಾಗಾದರೆ ನನ್ನ ಕಣ್ಣ ಬೆಳಕಲ್ಲಿ ಪ್ರಸಾದನ ಪ್ರೀತಿ, ಅಂಜುವಿನ ತಿರಸ್ಕಾರವೇ ತುಂಬಿರಲಿ ಎಂದುಕೊಂಡೆ. ಒಂದು ಗಂಟೆಯಿಂದ ನನ್ನನ್ನು ನಾನು ಕಾಪಾಡಿಕೊಳ್ಳಲು ಹೋರಾಟ ನಡೆಸಿದೆ. ಇನ್ನು ಮುಂದೆ ಹೋರಾಟ ಸಾಧ್ಯವೇ ಇಲ್ಲ ಎನಿಸಿತು. ನನ್ನ ದನಿ ಕ್ಷೀಣಿಸುತ್ತಿದ್ದಂತೆ ಅವರಲ್ಲಿಯೇ ಬಲವಾಗಿದ್ದ ಗಂಡು ಮೊದಲು ನನ್ನ ಮೇಲೆರಗಿದ. ನಾನು ಸೋತು ಕೆಳಗೆ ಬಿದ್ದೆ. ಉಳಿದ ಗಂಡುಗಳು ತಾ ಮುಂದು ನಾ ಮುಂದೆಂದು ಪೈಪೋಟಿ ನಡೆಸಲಾರಂಭಿಸಿದವು. ಒಂಟಿ ಹೆಣ್ಣಿನ ಆರ್ತನಾದ ಕೇಳುವವರಾರು? ಅದೆಲ್ಲಿಂದಲೋ ಬೆಳಕು ತೂರಿ ಬಂದು ಕಲ್ಲುಗಳನ್ನು ಬೀಸಲಾರಂಭಿಸುತ್ತಿದ್ದಂತೆ ನನ್ನ ಸುತ್ತುವರೆದ ಗಂಡುಗಳು ಓಡಿ ಹೋದವು. ನಾನು ಮುಚ್ಚಿದ್ದ ಕಣ್ಣು ತೆರೆದು ನೋಡಿದೆ. ಪ್ರಸಾದ ``ಶಕ್ಕು'' ಎಂದು ಬಾಚಿ ತಬ್ಬಿದ. ನನ್ನ ಕಣ್ಣುಗಳಿಂದ ಧಾರಾಕಾರ ನೀರು. ಅವನೂ ನನ್ನ ತಬ್ಬಿ ``ನನ್ನ ಬಿಟ್ಟು ಹೋಗುವುದು ಅಷ್ಟು ಸುಲಭವಾ ಶಕ್ಕು? ನೀನಿಲ್ಲದೆ ನಾನು ಬದುಕುವುದನ್ನು ನೀನು ಕಲ್ಪಿಸಿಕೊಂಡಿದ್ದಾದರೂ ಹೇಗೆ? ಅಷ್ಟು ನಿಷ್ಠೂರವಾಗಿ ನನ್ನ ಪಕ್ಕದಿಂದ ಸರಿದು ಹೋಗುವುದಾ? ನಿನ್ನನ್ನು ಇಷ್ಟಪಡದ ಅಂಜು ನನಗೂ ಬೇಡ. ನನ್ನಷ್ಟೇ ನಿನ್ನನ್ನು ಪ್ರೀತಿಸುವ ಯಾವಳಾದರೂ ಸಿಕ್ಕೆ ಸಿಕ್ತಾಳೆ. ಸಿಗದಿದ್ದರೆ ಬೇಡ. ನನಗೆ ನೀನು, ನಿನಗೆ ನಾನು. ಅದು ಬಿಟ್ಟು ....ನನ್ನ ದೂರ ಮಾಡುವ ಯೋಚನೆ ಇನ್ನೆಂದಿಗೂ ಮಾಡಬೇಡ'' ಎಂದು ಕಣ್ಣುಗಳ ಕೊಳವಾಗಿಸಿ ಪ್ರಸಾದ ಕೇಳಿದಾಗ ನಾನು ಏನು ಹೇಳಲಿ? ಅವನ ಮುಂದೆ ಕುಬ್ಜಳಾಗಿದ್ದ ನಾನು ನನ್ನ ಅಪರಾಧ ಕ್ಷಮಿಸು ಎನ್ನುವಂತೆ ಬಾಲವಲ್ಲಾಡಿಸುತ್ತಾ ಅವನ ಮುಖವನ್ನೆಲ್ಲಾ ಮುದ್ದಿನಿಂದ ನೆಕ್ಕಲಾರಂಭಿಸಿದೆ.
ಕಲಾಕೃತಿ : ಪ್ರವೀಣ ಮುಚಳಂಬಿ
ಪದ್ಮಿನಿ ನಾಗರಾಜು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಗಂಗಾವತಿ, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ. ಸ್ನಾತಕೋತ್ತರ ಹಾಗೂ ಪಿಎಚ್.ಡಿ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ. ಪ್ರಸ್ತುತ 'ರಾಣಿ ಸರಳಾದೇವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಹಾಗೂ ‘ಕೇಂದ್ರ ಸಾಹಿತ್ಯ ಅಕಾಡೆಮಿ'ಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಅನೇಕ ಲೇಖನ, ಕಥೆ, ಕವಿತೆಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣಕಾರ್ತಿಯಾಗಿಯು ಗುರುತಿಸಿಕೊಂಡಿದ್ದಾರೆ.
'ಗೆಳತಿಯಾಗುವುದೆಂದರೆ' (ಕವನ ಸಂಕಲನ), 'ಸಮಾಧಿ ಮೇಲಿನ ಹೂ' (ಕಥಾ ಸಂಕಲನ), 'ಅವ್ವ' (ಲಂಕೇಶರ ಆತ್ಮಚರಿತ್ರೆಯನ್ನು ಆಧರಿಸಿದ ನಾಟಕ), 'ಅರಿವಿನ ಮಾರ್ಗದ ಸೋಪಾನಗಳು-ಅನುಪ್ರೇಕ್ಷೆಗಳು' (ಸಂಶೋಧನೆ), ಕೃಷ್ಣಮೂರ್ತಿ ಕವತ್ತಾರ (ವ್ಯಕ್ತಿಚಿತ್ರ), ಸಮತ್ವ (ಪ್ರಬಂಧ ಸಂಕಲನ) 'ಅವನಿ', 'ಶ್ರೇಯೋಭದ್ರ', 'ಧವಳ' (ಸಂಪಾದನೆ), 'ಕಸಾಯಪಾಹುಡ' (ಹಿಂದಿಯಿಂದ ಕನ್ನಡಕ್ಕೆ ಅನುವಾದ) - ಅವರ ಪ್ರಮುಖ ಕೃತಿಗಳು.
ಇವರ 'ಸಮಾಧಿ ಮೇಲಿನ ಹೂ' ಕಥೆಗೆ ಕರ್ನಾಟಕ ಲೇಖಕಿಯರ ಸಂಘದಿಂದ 'ಉಮಾದೇವಿ ದತ್ತಿನಿಧಿ ಪ್ರಶಸ್ತಿ', ಅದೇ ಹೆಸರಿನ ಕಥಾಸಂಕಲನಕ್ಕೆ 'ಇನ್‌ಫೋಸಿಸ್ ಸುಧಾಮೂರ್ತಿ ದತ್ತಿನಿಧಿ ಪ್ರಶಸ್ತಿ' ದೊರಕಿದೆ. 'ರಂಗಶಿಲ್ಪಿ', 'ಕಲಾಭಾರತಿ', 'ದಕ್ಷಕ್ ಮಹಿಳೆ', 'ಬ್ರಾಹ್ಮಿಶ್ರೀ' ಪ್ರಶಸ್ತಿಗಳಿಂದಲೂ ಪುರಸತರಾಗಿದ್ದಾರೆ. 'ಅವ್ವ' ನಾಟಕಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ, ಕ.ಸಾ.ಪ ಕೊಡಮಾಡುವ 2020ನೇ ಸಾಲಿನ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ ಸಂದಿದೆ.
More About Author