Poem

ಸರಸಕ್ಕನ ಸದ್ದು....

ಸರಸಕ್ಕ ಇರುವಾಗ ಸದ್ದೋ ಸದ್ದು!

ಅಗೆಯುವುದು ಮೊಗೆಯುವುದು ಸಿಗಿಯುವುದು
ಸೀಳುವುದು ಕೇರುವುದು ತೂರುವುದು....

ಸದ್ದೋ... ಸದ್ದು...
ಕೊಚ್ಚುವುದು ಕಡೆಯುವುದು ಹುರಿಯುವದು
ಕರಿಯುವದು ಹಿದುಕುವುದು ಹೊಯ್ಯುವುದು....

ಸದ್ದೋ....ಸದ್ದು...
ಹೆಕ್ಕುವುದು ಹರಡುವುದು ಸುಲಿಯುವುದು ಸೋಸುವುದು ಮಗಚುವುದು ಮುಚ್ಚುವುದು...

ಸದ್ದೋ.... ಸದ್ದು....
ಸೇದುವುದು ಸುರಿಯುವುದು ಸೆಳೆಯುವುದು
ಬೀಸುವುದು ಹಿಂಡುವುದು ಹಾಸುವುದು....

ಸದ್ದೋ... ಸದ್ದು....
ತಿಕ್ಕುವುದು ತೊಳೆಯುವುದು ಗುಡಿಸುವುದು
ಒರೆಸುವುದು ಬಾಚುವುದು ಬಳಿಯುವುದು....

ಸದ್ದೋ... ಸದ್ದು....
ಕಾಸುವುದು ಮೀಸುವುದು ತೀಡುವುದು ತೇಯುವುದು ತೂಗುವುದು ಹಾಡುವುದು.....

ಥಟ್ಟೆಂದು ಉಟ್ಟ ಬಟ್ಟೆಯಲ್ಲಿ ಎದ್ದು ಹೋದಳೋ...
ಮಂಕಾಗಿದೆ ಮನೆ ಕತ್ತಲು ಕವಿದು
ಬಡವಾಗಿದೆ ದೇವರೂ ಆರತಿ ನೈವೇದ್ಯ ನೆನೆದು!

ತಿಂಗಳೊಪ್ಪತ್ತಿನಲ್ಲಿ ಹೊಸದಾಗಿದೆ
ಮನೆ ಸುಣ್ಣ ಬಣ್ಣ ಬಳಿದು ಹೆಜ್ಜೆಗಳನಳಿಸಿ ಹಾಸಿಕೊಂಡಿದೆ ಅಮೃತ ಶಿಲೆ ಸೂತಕ ಕಳೆದು....

ಇತ್ತೀಚೆಗೆ ಟರ್ರೆಂದು ಮಿಕ್ಸರು ತಿರುಗಿ
ಬುಸ್ಸೆಂದು ಕುಕ್ಕರು ಕೂಗಿ ಗರ್ರೆಂದು
ಧೂಳೊರೆಸಿ ಬಟ್ಟೆ ಮಷೀನಲಿ ಒಣಗಿ
ಟಿವಿಯಲಿ ಮನೆಮಂದಿ ಮುಳುಗಿ
ಸರಸಕ್ಕನ ನೆನಪೂ ಸೊರಗಿ ಕರಗಿಯೇ
ಹೋಯಿತು ಎನ್ನುವಾಗ....ಮೊಮ್ಮಕ್ಕಳು
ಒತ್ತು ಶಾವಿಗೆ ನೆನೆದು ಅತ್ತು ಕರೆದರು

-ಸವಿತಾ ನಾಗಭೂಷಣ

ಸವಿತಾ ನಾಗಭೂಷಣ

ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್‍ ಪ್ರಶಸ್ತಿ ಸಂದಿವೆ.ಕೆಲ ಕಾಲ ’ಸಾಹಿತ್ಯ ಸಂವಾದ’ ಸಾಂಸ್ಕೃತಿಕ ದ್ವೈಮಾಸಿಕದ ಸಂಪಾದಕರಾಗಿದ್ದ ಅವರು ಅಕಾಡೆಮಿ ಪ್ರಕಟಿಸಿದ ’ಸುವರ್ಣ ಕಾವ್ಯ’ ಸಂಪಾದಕರಲ್ಲಿ ಒಬ್ಬರಾಗಿದ್ದರು. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸವಿತಾ, ತಮ್ಮ ಪತಿ ಡಿ.ಎಸ್. ನಾಗಭೂಷಣ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.

More About Author