Poem

ಸಮವೇನುಂಟು

ಹಬ್ಬವಿದೆನ್ನುತ ಕೊಡಗಿಗೆ ಬಂದೆವು
ಇಬ್ಬನಿ ತಬ್ಬಿತು ವರದಂತೆ
ಕಬ್ಬಿಗನೆದೆಯಲಿ ಚಿಗುರಿತು ಕಾವ್ಯವು
ಕಬ್ಬಿನ ಹಾಲಿನ ಸವಿಯಂತೆ

ಮಡಿಕೇರಿಯ ಚಳಿಗಾಲವ ಸವಿಯಲು
ತಡಬಡಿಸದೆ ನಾವ್ ನಿಂದಿಹೆವು
ಗಡಗಡ ನಡುಗುವ ಚಳಿಯಲು ಸೊಬಗನು
ಕಡೆಗಣಿಸದೆ ನಾವೊಪ್ಪಿದೆವು

ತೆಳ್ಳಗೆ ಬಳುಕುವ ನಲ್ಲೆಯ ಜೊತೆಯಿರೆ
ಝಲ್ಲೆನಿಸಿತು ಮೈ ಮನವನ್ನ
ಗಲ್ಲವ ಹಿಂಡಲು ಕೂಸ ನಿರೀಕ್ಷೆಯು
ಮೆಲ್ಲನೆ ಕೆಣಕಿತು ತನುವನ್ನ

ಸುಂದರ ತಾಣದಿ ಬಂಧುರವಾದವು
ಕುಂದದ ಯೌವ್ವನದುತ್ಸಾಹ
ಸಂದಿದೆ ಬಾಳಲಿ ನೆನಪಿನಲುಳಿಯುವ
ಚೆಂದದ ಪ್ರಕೃತಿಯ ಪ್ರೋತ್ಸಾಹ

ಕುಳಿಗೆನ್ನೆಯ ಬಲು ಸುಂದರ ಪತ್ನಿಯು
ಬಳಿಯಿರೆ ಸ್ವರ್ಗಕೆ ಸುಮ ನಂಟು
ಬೆಳೆಗಳನರಳಿಸಿ ಆಸೆಯ ನೀಗಲು
ಚಳಿಗಾಲದ ಸಮವೇನುಂಟು

- ವೈಲೇಶ್ ಪಿ ಎಸ್ ಕೊಡಗು

ವೈಲೇಶ್ ಪಿ. ಎಸ್

ಲೇಖಕ ವೈಲೇಶ್ ಪಿ. ಎಸ್ ಅವರು ಮೂಲತಃ ಕೊಡಗಿನವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರಾಗಿದ್ದಾರೆ. 

 ಕೃತಿಗಳು: ಅಮ್ಮ ನಿನಗಾಗಿ (2018) , ಕಣ್ಮರೆಯಾದ ಹಳ್ಳಿ(2020), ಬೊಮ್ಮಲಿಂಗನ ಸಗ್ಗ(2021) (ಕವನಸಂಕಲನ)

More About Author