Poem

ಪ್ರೇಮಿ ಉವಾಚ

ನಾನು ನಿನ್ನನ್ನು ಪ್ರೇಮಿಸುತ್ತೇನೆ
ಕ್ಯಾಂಡಲ್ ಲೈಟಿನ ಮಬ್ಬು ಬೆಳಕಿನಲ್ಲಿ
ಬರೆಯಲ್ಪಡುವ ಪ್ರೇಮಜಾತಕ ನನ್ನದಲ್ಲ
ಬೆಳಕಿಲ್ಲದೆಯೂ ಬೆಳಗುವ ನಿನ್ನ ಕಣ್ಣುಗಳ
ತಿಳಿ ಬೆಳಕಿನಲ್ಲಿ ಅರಳುವ ಪ್ರೀತಿ ನನ್ನದು

ನಾನು ನಿನ್ನನ್ನು ಪ್ರೇಮಿಸುತ್ತೇನೆ
ಎದೆ ನಡುಗಿಸುವ ಸಂಗೀತದ ಆರ್ಭಟದಲ್ಲಿ
ಕತ್ತೆತ್ತಿ ನಿಲ್ಲುವ ಪ್ರೇಮ ನನ್ನದಲ್ಲ
ನಿರ ನಿರ ನೀರವ ಮೌನದಲ್ಲಿ
ಎದೆಬಡಿತದ ಸದ್ದಿಗೆ ಲಯಗೂಡಿಸುವ ಪ್ರೀತಿ ನನ್ನದು

ನಾನು ನಿನ್ನನ್ನು ಪ್ರೇಮಿಸುತ್ತೇನೆ
ತಾಜ್‌ಮಹಲ್ಲಿನ ಎದುರಲ್ಲಿ
ಭುಜಕ್ಕೆ ತಲೆ ಆನಿಸಿ ಕುಳಿತಾಗ
ಹೊಮ್ಮಿಬರುವ ಪ್ರೇಮ ನನ್ನದಲ್ಲ
ಎದೆಗೂಡಿನಲ್ಲಿಯೇ ಪ್ರೇಮಸೌಧ ಕಟ್ಟಿಕೊಂಡು
ನಿನ್ನನ್ನು ಆರಾಧಿಸುವ ಪ್ರೀತಿ ನನ್ನದು

ನಾನು ನಿನ್ನನ್ನು ಪ್ರೇಮಿಸುತ್ತೇನೆ
ವರ್ಷಕ್ಕೆ ಒಂದು ದಿನವನ್ನು ಗೊತ್ತು ಮಾಡಿಕೊಂಡು
ಹೊತ್ತು ನೋಡಿಕೊಂಡು ಕೆರಳಿ ನಿಲ್ಲುವ ಪ್ರೇಮ ನನ್ನದಲ್ಲ
ವರ್ಷವಿಡೀ ನಿನ್ನನ್ನು ಕಾಣದೆಯೂ
ನಿನ್ನ ಲಕ್ಷ ನೆನಪುಗಳಲ್ಲೇ
ಬದುಕುವ ಪ್ರೀತಿ ನನ್ನದು

ವಿಶ್ವನಾಥ ಎನ್ ನೇರಳಕಟ್ಟೆ

ವಿಡಿಯೋ
ವಿಡಿಯೋ

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author