ಮುಂಜಾನೆ ಚಹದ ನಂತರ ನಾವು ಇಬ್ಬರೇ ಇದ್ದ
ಮನೆಯಲೇಕೋ ನೀರಸ ಮೌನ. ಕಂಪ್ಯೂಟರ್‌ನ
ಕೀಲಿ ಮಣೆಯಲಿ ಕೈಯಾಡಿಸುತಾ ಅದೇ ಘನ
ಗಾಂಭೀರ್ಯ ; ಏನೋ ಹುಡುಕಾಟ ; ಯಾವುದೋ
ಶೋಧನೆ. ಏನಾಯಿತೇ ಎಂತ ಕೇಳಲೂ ಹೆದರಿ
ಕೇಳಿಯೇ ಬಿಟ್ಟೆ.
‘ಹೊಸ ಕಥೆ’ ಎಂದಿಷ್ಟೇ ಹೇಳಿ ಮತ್ತದೇ ಮೌನ
ಓಹೋ... ಹೀಗೋ.... ನಾನೂ ಮುಂದಿನದೆಲ್ಲಾ
ಮನದಲೇ ಅರಿತೆ. ಒಲೆಯ ಮೇಲೆ ಮುಂಜಾನೆಯೇ
ತಯಾರಿಸಿಟ್ಟ ಜೀರಿಗೆ ಕಷಾಯವನ್ನು(ಕೋವಿಡ್
ಸ್ಷೇಷಲ್) ಲೋಟದಲ್ಲಿ ಸುರಿದು ಕೈ ಬುಡದಲ್ಲಿ ಇಟ್ಟೆ
ಧನ್ಯತೆಯಿಂದ ಕ್ಷಣ ಮುಖ ನೋಡಿ ಗುಟುಕುಗಳ
ಹೀರಿ ಮತ್ತೆ ಕೀಲಿ ಮಣೆಗಳ ಜೊತೆ
ಮನದ ಭಾವನೆಗಳ ಹಂಚಿಕೊಂಡಳು.
ಕ್ಷಣ ಅಡಿಗೆ ಕೋಣೆಗೆ ಮುಖವಾಡಿಸಿದೆ. ಅಲ್ಲಲ್ಲೇ
ಹರಡಿಬಿದ್ದ ಪಾತ್ರೆಗಳೆಲ್ಲವನೂ ಸಿಂಕಿನಲಿ ಸೇರಿಸಿ
ತೊಳೆದು ಗ್ಯಾಸ್ ಕಟ್ಟೆಯನು ಸ್ವಚ್ಚಗೊಳಿಸಿದೆ. ಮುಖ
ನೋಡಿದೆ, ಸದ್ದಿನಲೇ ತಿಳಿದ ಮನದಲಿ ಧನ್ಯತೆಯಡಗಿತ್ತು .
ಮತ್ತೆ ಗಂಭೀರತೆಯಲಿ ಕೀಲಿ ಮಣೆಯೊಡಣೆ ಚಿಣಿಮಿಣಿಯಾಟ.
ಪಾಪ ಹಸಿದಿರಬಹುದೆಂದು, ಮೊನ್ನೆ ಊರಿಂದ ತಂದ
ಚಕ್ಕುಲಿ ಪುಡಿ, ಅಮ್ಮನ ನೆನಪಿನ ಬೆಲ್ಲದುಂಡೆಗಳ
ಪ್ಲೇಟಿನಲಿಟ್ಟು ಕ್ಷಣ ಮುಖನೋಡಿದೆ. ತೀಕ್ಷ್ಣ ಕಣ್ಣುಗಳ
ಎದುರಿಸಲಾರದೇ ಅವುಗಳ ಮತ್ತಲ್ಲೇ ಸೇರಿಸಿಟ್ಟೆ.
ಟರ್ಮಸ್ಸಿನಿಂದ ಖಾಲಿ ಬಿಸಿ ನೀರು ಎದುರಿಗಿಟ್ಟೆ,
ಮುಖದಲ್ಲಿ ಪ್ರಸನ್ನತೆ ಇತ್ತು. ಸ್ಕ್ರೀನ್ ದಿಟ್ಟಿಸುತ್ತಾ
ಒಂದೇ ಕೈಲಿ ಲೋಟ ಹಿಡಿದು ಗುಟು ಗುಟು ಮಾಡಿದಳು.
ಬೆಡ್ ರೂಮಿನಲಿ ಬಟ್ಟೆಗಳೆಲ್ಲಾ ಚಲ್ಲಾಪಿಲ್ಲಿಯಾಗಿತ್ತು.
ಮಡಚಿಟ್ಟು ಸಿಕ್ಕಷ್ಟೇ ಕಸ ಹೊಡೆದು ಡಸ್ಟಬಿನ್ನಿಗೆ
ಹಾಕಿದೆ. ಮರೆಯಲಿ ನಿಂತು ಮುಖ ನೋಡಿದೆ. ಗೆಲುವಿನ
ಭಾವ ಮನೆ ಮಾಡಿತ್ತು. ಮತ್ತೆ ಮೊದಲಿನಂತೆ ಕೀಲಿ
ಮಣೆ ಕೆಲಸದಲ್ಲಿತ್ತು. ಮುನಸೀಪಾಲ್ಟಿ ಕಸದ ಗಾಡಿಯ
ಸದ್ದು ಕೇಳಿ ಕಣ್ಣುಗಳೊಂದಾದವು
ಕಸದ ಡಬ್ಬ ಹೊರಗಿಟ್ಟು ಬಂದೆ.
ವಾಟ್ಸಪ್ ಕ್ಷಣ ವೀಕ್ಷಿಸಿದೆ. ಎಚ್ಚೆನ್ ಆರತಿಯ ವಾಯ್ಸ್
ಮೆಸೇಜ್." ನಾಡಿದ್ದೇ ಒಂದು ಅತೀ ಮುಖ್ಯವಾದ ಬರಹ
ಬೇಕಿತ್ತು , ಇವರಿಗೂ ವಾಯ್ಸ್ ಮೆಸೇಜ್ ಮಾಡಿದ್ದೆ
ನೋಡೇ ಇಲ್ಲಾ... ಪ್ಲೀಸ್ " ಎಂದಿತ್ತು. ವಿಷಯ ತಿಳಿಸಿದೆ.
ತನ್ನ ಮೊಬೈಲ್ ನೋಡಿ ನಕ್ಕು ಏನೋ ಬರೆದು ಮತ್ತೆ
ಕೀಲಿ ಮಣೆಗಳ ಕಟ....ಕಟ.... ಕಟ....
ನನ್ನ ಹೊಟ್ಟೆಗೂ ಹಸಿವಿನ ನೆನಪಾಯಿತು. ಕುಕ್ಕರ್
ನೋಡಿದೆ. ಆಹ್ವಾನಿಸುವಂತಿತ್ತು. ನೆನಪಿಸಿಕೊಂಡೆ ;
ಎಷ್ಟು ಅಕ್ಕಿಗೆ ಎಷ್ಟು ನೀರು? ಗ್ಯಾಸ ಮೇಲೆ ಇಟ್ಟು
ಹತ್ತು ನಿಮಿಷ ಕಾದೆ. ಸ್..... ಸ್..... ಶಬ್ಧ ಬಂತು.
ಎಚ್ಚರ ಗೊಂಡು ‘ಏನದು’ ಅಂದು ‘ಅನ್ನಕ್ಕಿಟ್ಟಿಯಾ’
ಕೇಳಿದಳು. ‘ಹುುಂ’ ಅಂದಾಗ ವಿವರ ಕೇಳಿದಳು.
‘ಹದಿಮೂರು ನಿಮಿಷಕೆ ಆರಿಸು’ ಅಂದಳು
(ಸೀಟಿ ಕೈ ಕೊಟ್ಟಿದ್ದರಿಂದ ) ಆರಿಸಿದೆ.
ಮುಖ ದಿಟ್ಟಿಸಿದೆ. ಗಲಬಿಲಿಯಿಂದ ಕೂಡಿತ್ತು.
ಕೀಲಿಮಣೆಯಲಿ ಕೈ ಒಂದಾಗಿತ್ತು. ಅಲ್ಲಿ ಇಲ್ಲಿ ಓದಿದ
ಪ್ರಸವ ವೇದನೆಯ ನೆನಪಿಸಿಕೊಂಡೆ. ಮುಖದಲ್ಲಿ
ಅದೇ ತಾಕಲಾಟವಿತ್ತು. ದಿಟ್ಟಿಸಿ ನೋಡಲಾರದೇ
ಪ್ಯಾಂಟಿನ ಜೇಬಿನಲಿ ಕೈ ಸಿಕ್ಕಿಸಿ ಬೆಡ್ ರೂಂ ನಲಿ
ಸುತ್ತಾಡತೊಡಗಿದೆ.
ಈ ಎಲ್ಲಾ ಮೂಕ ವೇದನೆಯಲ್ಲಿ ನಾನೂ ಪಾಲುದಾರನಾದೆ
ನನ್ನನ್ನು ನಾನೇ ಡಾಕ್ಟರೋ
ಕಂಪೌಂಡರೋ ಎಂದು ಕಲ್ಪಿಸಿ ಸಣ್ಣನೆ ಬೆವರಿದೆ.
"ಪಪ್ಪಾ............ " (ನನ್ನೆರಡೂ ಮಕ್ಕಳೂ ಹಾಗೇ
ಕರೆಯುತಿದ್ದರಿಂದ ಇವಳೂ ಹೀಗೆ) ಧ್ವನಿ ಬಂತು
ಖುಷಿಯಿಂದ. ಮುಖದಲ್ಲಿ ಹಿಂದಿನ ದುಗುಡು
ದುಮ್ಮಾನ ಮಾಯವಾಗಿ ಪ್ರಸನ್ನತೆ ತುಂಬಿತ್ತು.
ನಿನ್ನೆಯ ಬಂಗಡೆ ಸಾರು ಬಿಸಿಮಾಡಿ ಅನ್ನ
ಉಣ್ಣುವಷ್ಟರಲ್ಲಿ ಪ್ರಥ್ವಿಯ (ಸಂಪಾದಕ) ಫೋನ್ ಬಂತು
ಕಲಾಕೃತಿ : ರಂಗನಾಥ ಕುಲಕರ್ಣಿ
ಪ್ರಕಾಶ ಕಡಮೆ
ಕವಿ, ಬರಹಗಾರ ಪ್ರಕಾಶ್ ಕಡಮೆ ಅವರು ಗೋಕರ್ಣ ಸಮೀಪದ ಬಂಕಿಕೊಡ್ಲ ಹತ್ತಿರದ ಕಡಮೆ ಗ್ರಾಮದವರು. 1958ರಲ್ಲಿ ಜನಿಸಿದರು. ಹೈಸ್ಕೂಲ್ ಹಂತದಿಂದಲೇ ಬರವಣಿಗೆಯಲ್ಲಿ ಆಸಕ್ತಿ. ಅವರಿಗೆ ಸ್ಫೂರ್ತಿಯಾಗಿದ್ದವರು ಕವಿ ಸು. ರಂ. ಎಕ್ಕುಂಡಿ. ಬಾಲ್ಯದಿಂದಲೇ ಅಕ್ಷರ ಲೋಕದ ಮೂಲಕ ತಾನು ಬದುಕಬೇಕು ಎಂದು ಕನಸು ಕಂಡವರು.
ಲೆಕ್ಕ ಪತ್ರ ಇಲಾಖೆ ಕೆಲಸ ನಿರ್ವಹಿಸಿದ್ದು, ಕರ್ನಾಟಕ ನೀರಾವರಿ ನಿಗಮದಲ್ಲಿಯೂ ನೌಕರಿ ಮಾಡಿ ನಿವೃತ್ತರಾಗಿದ್ದಾರೆ. ’ಗಾಣದೆತ್ತು ಮತ್ತು ತೆಂಗಿನಮರ (1987), ಆ ಹುಡುಗಿ (1997) ಹಾಗೂ ಅಮ್ಮನಿಗೊಂದು ಕವಿತೆ’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ’ಪರಿಮಳದಂಗಳ ಮತ್ತು ದಾಂಪತ್ಯ ನಿಷ್ಠೆ -ಪರಿಕಲ್ಪನೆ ಬದಲಾಗುತ್ತಿದೆಯೇ? ಕೃತಿಗಳನ್ನು ಪತ್ನಿ ಸುನಂದಾ ಅವರೊಂದಿಗೆ ಸೇರಿ ಸಂಪಾದಿಸಿದ್ದಾರೆ. ಅಮ್ಮನಿಗೊಂದು ಕೃತಿಗೆ ಕವಿ ಡಿ.ಎಸ್.ಕರ್ಕಿ ಅವರ ಪ್ರತಿಷ್ಠಾನದ ಕರ್ಕಿ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
More About Author