Poem

ಪೀಸಾ ಗೋಪುರ

ಒಲೆಯೊಳಗಿನ ಕಾವ ಕಾಪಿಡಲು
ಮತ್ತೆ ಮತ್ತೆ ಒಟ್ಟುವ ಉರುವಲು
ಒಮ್ಮೆ ತೂರಿದ ಕೈಯ
ಹೊರ ತೆಗೆವಾಗ ತಾಕುವ
ಮಸಿಯೊರೆಸಿ

ಹಾಕದ ಭದ್ರ ಬುನಾದಿ
ಎರವಾಗದ ವರವೇ?
ಭೂಕಂಪಕ್ಕೆ ಸಿಲುಕಿ ನಲುಗದ
ಬುಡಕ್ಕೆ ಪೊಳ್ಳು ಮಣ್ಣು ಕಾರಣವೇ

ತುದಿಬೆರಳ ಮೇಲೆ ತೊಯ್ದಾಡುವ ಕೋಲು
ನಂಬಿ ನಿಂತಂತೆ ಅಚಂಚಲ ಚಿತ್ತವ
ತೂರಿದೊಡನೆ ಮೇಲೆ ಹಾರಿ
ಅತಂತ್ರದೆದೆಯಲ್ಲೂ ನಗುವ ಮೊಗ
ನೆಚ್ಚಿಕೊಂಡಂತೆ ಚಾಚಿಕೊಂಡ ಹಸ್ತವ

ಆಗಸದೆತ್ತರಕ್ಕೆ ಏರಿದ ಪ್ರೀತಿ
ಬೀಳದೇ ಬಾಗಿತು ; ಹೆಗಲಾಯಿತದಾವ ಶಕ್ತಿ ?
ನಿಭಾಯಿಸಲು ಸ್ಥಿತಿಯಲ್ಲಿ ಸ್ಥಿರತೆ
ತೊರೆದು ಸ್ಥಿತ್ಯಂತರಗಳ ಕೊರತೆ

ವಾಲಿದರೂ ಒಲವೇ ಬಲ
ನೇರವಿಲ್ಲ, ನೆರವಿಲ್ಲದೆ ನಿಂತಿದೆಯಲ್ಲ
ದಿಗಿಲೇತಕೆ?
ಬಾಗಿದ್ದು ಪ್ರೀತಿಯ ಭಾರಕೆ
ಕಂಪನವು ಕೆಡವಲಾರದ ಹಿಡಿತ
ರೂಪಕವಾಗಿದೆ ಜಗದದ್ಭುತ

- ಡಾ. ಅಜಿತ್ ಹರೀಶಿ


ಅಜಿತ್ ಹರೀಶಿ

ಲೇಖಕ ಡಾ. ಅಜಿತ್  ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ  ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು. 

ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು.  ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು.  ಕಥಾಭರಣ ಸಂಪಾದಿತ ಕೃತಿಯಾಗಿದೆ. ಆರೋಗ್ಯದ ಅರಿವು ಎಂಬ ಅಂಕಣ ಬರಹದ ಗುಚ್ಛ ಮತ್ತು ಕೃತಿಕರ್ಷ (ವಿಮರ್ಶಾ ಕೃತಿ) ಪುಸ್ತಕವಾಗಿ ಪ್ರಕಟಗೊಂಡಿವೆ. ಇವರ ಗಿಡ ಮರವಾದ ಕನಸು, ಸೆಲೆಕ್ಟ್ ಆಲ್ ಡಿಲೀಟ್, ಟೊಮ್ಯಾಟೊ ಕೆಚಪ್- ಇಬುಕ್ ಮತ್ತು ಆಡಿಯೋ ಬುಕ್‌ಗಳು, ಮೈಲ್ಯಾಂಗ್ ಬುಕ್ಸ್‌ನಲ್ಲಿ ಬಂದಿವೆ. ಬಸವ ಪುರಸ್ಕಾರ, ಕಾವ್ಯ ಮಾಣಿಕ್ಯ, ಗುರುಕುಲ ಸಾಹಿತ್ಯ ಶರಭ, ತರಾಸು ರತ್ನ ರಾಜ್ಯಪ್ರಶಸ್ತಿಗಳನ್ನು  ಮುಡಿಗೇರಿಸಿಕೊಂಡ ಗರಿಮೆ ಕೂಡಾ ಇವರದ್ದು. ಕನ್ನಡ ಪ್ರತಿಲಿಪಿ ರಾಷ್ಟ್ರೀಯ ಹಾಗೂ ಕಿರುಗಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಸಂಪದ ಸಾಲು ಪತ್ರಿಕೆಯ ಜಾಗತಿಕ ಕವನ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಇವರ  'ಕನ್ನಡಿಗಂಟದ ಬಿಂದಿ' ಕಥೆಗೆ ಮುಂಬೈನ ಕನ್ನಡ ಭವನ ಎಜುಕೇಷನ್ ಸೊಸೈಟಿಯವರ ರಾಷ್ಟ್ರೀಯ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿದೆ. ಇವರ ಕನಸಿನ ದನಿ ಕವನ ಸಂಕಲನಕ್ಕೆ 2021 ನೇ ಸಾಲಿನ ಸುಮನ್ ಸೋಮಶೇಖರ ಸೋಮವಾರಪೇಟೆ ಕಸಾಪ ದತ್ತಿ ಪ್ರಶಸ್ತಿ ದೊರೆತಿದೆ.

ಇವರ 'ತಿರುವು' ಕಥೆ ಹಿಂದಿ ಭಾಷೆಗೆ 'ಮೋಡ್' ಎಂಬ ಹೆಸರಿನಲ್ಲಿ  ಅನುವಾದಗೊಂಡಿದೆ. ಇವರನ್ನು  ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ೧೪ನೇ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ. ಇವರ ಕಥೆ, ಕವನ, ಅಂಕಣ ಬರಹ, ವೈದ್ಯಕೀಯ, ಸಾಮಾಜಿಕ ಮತ್ತು ಕ್ರೀಡಾ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

 

More About Author