Story

ಪಾರಿವಾಳದ ರೆಕ್ಕೆ

ಕವಿ, ಕತೆಗಾರ ವಿಶ್ವನಾಥ ಎನ್. ನೇರಳಕಟ್ಟೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದವರು. ಕಾವ್ಯ, ನಾಟಕ, ಕತೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಪಾರಿವಾಳದ ರೆಕ್ಕೆ ಕತೆ ನಿಮ್ಮ ಓದಿಗಾಗಿ

“ನನ್ನ ಆನೆಯನ್ನೇ ಕಡಿಯುತ್ತೀಯಾ? ಇರು ನಿನ್ನ ಒಂಟೆಯನ್ನು ಕಡಿಯುತ್ತೇನೆ”, “ಹೌದಾ?! ನನ್ನ ಒಂಟೆ ಕಡಿದರೆ ನಿನ್ನ ಕುದುರೆ ಕಡಿಯುತ್ತೇನೆ”, “ತಾಕತ್ತಿದ್ದರೆ ಕಡಿ ನೋಡುವ”, “ಹೌದಾ?! ಇಕೋ ಕಡಿದಾಯ್ತು”, “ಏನೂ ತೊಂದರೆ ಇಲ್ಲ. ನಾನು ನಿನ್ನ ಇನ್ನೊಂದು ಆನೆಯನ್ನು ಕಡಿದೆ”, “ನಿನ್ನ ಇನ್ನೊಂದು ಕುದುರೆಯನ್ನು ಕಡಿದೆ. ಏನು ಮಾಡುತ್ತಿ?”, “ಇಕೋ ನಿನ್ನ ಮಂತ್ರಿ ಹೋಯ್ತು”, “ಹಾಗಾದರೆ ನಿನ್ನ ಮಂತ್ರಿಯೂ ಸಾಯಲೇಬೇಕು”, “ನಿನ್ನ ಈ ಕಾಲಾಳು ಇನ್ನು ಬೇಡ”, “ನಿನಗೂ ಬೇಡ”, “ಒಬ್ಬ ರಾಜನನ್ನು ಇಟ್ಟುಕೊಂಡು ನೀನು ಅದ್ಹೇಗೆ ಗೆಲ್ಲುತ್ತೀಯಾ ನೋಡುತ್ತೇನೆ”, “ನಿನ್ನಲ್ಲೂ ರಾಜನೊಬ್ಬನೇ ಇರುವುದು, ನೀನೂ ಗೆಲ್ಲುವುದಿಲ್ಲ”...... ಚದುರಂಗದಾಟವಾಡುತ್ತಿದ್ದ ಮೊಮ್ಮಕ್ಕಳ ಈ ಬಗೆಯ ಹಠಭರಿತ ಮಾತುಗಳು ಮೊದಲೇ ಕದಡಿಹೋಗಿದ್ದ ಹಾಜಿ ಅಬ್ಬೂ ಕಾಕಾರ ಮನಸ್ಸನ್ನು ಇನ್ನಷ್ಟು ಪ್ರಕ್ಷುಬ್ಧಗೊಳಿಸಿದವು. ರಂಝಾನ್ ಮಾಸದ ಇಪ್ಪತ್ತಾರನೇ ದಿನದ ನೋಂಬನ್ನು ತೀರಿಸಿ, ಸುಲ್ತಾನಪುರದ ಮಸೀದಿಯಲ್ಲಿ ಮಗ್ರೀಬ್ ನಮಾಜನ್ನು ಪೂರೈಸಿ, ಮನೆಗೆ ಮರಳಿ, ತೂಗುವ ಕುರ್ಚಿ ಮೇಲೆ ಕುಳಿತಿದ್ದ ಅಬ್ಬು ಕಾಕಾರ ತಲೆಯೊಳಗೆ ಫಾರೆಸ್ಟ್ ಆಫೀಸರ್ ಮುಸ್ತಾಫನ ಮಾತುಗಳು ಗಿರಕಿ ಹೊಡೆಯುತ್ತಿದ್ದವು. ಅದೇ ಸಮಯಕ್ಕೆ ಮೊಮ್ಮಕ್ಕಳಾದ ರಫೀಕ್ ಮತ್ತು ಮುನವ್ವರ್‍ನ ಈ ಚದುರಂಗದಾಟದ ಗಲಾಟೆಯೂ ಕೇಳಿಬಂದು ಅಬ್ಬೂ ಕಾಕಾರ ಮನಸ್ಸು ಮತ್ತಷ್ಟು ತಲ್ಲಣಗೊಳ್ಳುವಂತಾಗಿತ್ತು.

“ಯಾ ಅಲ್ಲಾ! ನಾನು ತಪ್ಪು ಮಾಡಿದೆನೇ?” ತಮ್ಮೊಳಗಿಗೆ ಮಾತ್ರ ಕೇಳುವಂತೆ ಪಿಸುಗುಟ್ಟಿದ ಅವರು ಅಸಹಾಯಕರಾಗಿ ಚದುರಂಗದ ಮಣೆಯ ಕಡೆಗೆ ದೃಷ್ಟಿ ಹಾಯಿಸಿದರು. ಆಟದಲ್ಲಿದ್ದ ಅಷ್ಟೂ ಕಾಯಿಗಳು ಉರುಳಿಹೋಗಿದ್ದವು. ಎರಡೂ ಪಕ್ಷದ ರಾಜರುಗಳು ಒಂದೊಂದೇ ಹೆಜ್ಜೆಯನ್ನಿಡುತ್ತಾ, ತಮ್ಮ ಅಸ್ತಿತ್ವದ ಉಳಿಕೆಯ ಕಡೆಗೆ ಗಮನಹರಿಸಿದ್ದರು. ಅಸ್ತವ್ಯಸ್ತವಾಗಿ ಬಿದ್ದಿದ್ದ ಕಾಯಿಗಳು ಸುಲ್ತಾನಪುರದ ಜನಸಾಮಾನ್ಯರಂತೆ, ನಿಧನಿಧಾನಕ್ಕೆ ಒಂದೊಂದೇ ಹೆಜ್ಜೆಯಿಡುತ್ತಿದ್ದ ಚದುರಂಗದ ರಾಜರುಗಳು ಸುಲ್ತಾನಪುರದ ರಾಜಕಾರಣಿಗಳಂತೆ ಭಾಸವಾಗಿ ಹಾಜಿ ಅಬ್ಬೂ ಕಾಕಾ ಬೆಚ್ಚಿಬಿದ್ದರು...

ಅರುವತ್ತನಾಲ್ಕರ ಹಿರಿಯ ಜೀವ ಹಾಜಿ ಅಬ್ಬೂ ಕಾಕಾ! ಒಂದು ಕಾಲದಲ್ಲಿ ಬಿಡಿಗಾಸಿನ ವ್ಯಾಪಾರಿಯಾಗಿದ್ದ ಅಬೂಬಕ್ಕರ್ ಇಂದು ಜಮಾಅತಿನ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವ ಹಾಜಿ ಅಬ್ಬೂ ಕಾಕಾ ಆಗಿದ್ದಾರೆ. ಶೂನ್ಯದಿಂದ ಸರ್ವಸ್ವದೆಡೆಗೆ ಸಾಗಿದ ಬದುಕು ಅವರದ್ದು.

ದೋಣಿ ಸಾಬ ಎಂದೇ ಹೆಸರು ಪಡೆದಿದ್ದ ಬಡ ಅದ್ರಾಮನ ಎಂಟು ಜನ ಮಕ್ಕಳಲ್ಲಿ ಮೊದಲನೆಯವನು ಅಬೂಬಕ್ಕರ್. ಊರಿಗೆಲ್ಲಾ ಕರೆದು ಕರೆದು ಹಂಚುವಷ್ಟು ತುಂಟತನ ಇವನಲ್ಲಿತ್ತು. ಮೇಲಿನಮನೆ ವೆಂಕಪ್ಪಯ್ಯ ಭಟ್ಟರ ಅಂಗಳದ ಮಾವಿನ ಮರಕ್ಕೆ ಕಲ್ಲೆಸೆದು, ಬಿದ್ದ ಹಣ್ಣುಗಳನ್ನು ಚಡ್ಡಿಯ ಜೇಬಿನಲ್ಲಿ ತುಂಬಿಸಿಕೊಂಡು “ಮಾಂಗೇ ಮಾಂಗೇ” ಎಂದು ಬೊಬ್ಬಿಡುತ್ತಾ ಮನೆ ಕಡೆಗೆ ಓಡಿದ್ದು, ಎದುರು ಮನೆಯ ಮಾರಪ್ಪ ಸಫಲಿಗನ ಮಗ ಲಕ್ಷ್ಮಣನನ್ನು ಕೆರೆಗೆ ತಳ್ಳಿ ಈಜು ಕಲಿಸಿದ್ದು, ಶಂಭು ಆಚಾರಿಯ ಮನೆಯಂಗಳದ ತಗಡಿಗೆ ಶಿವರಾತ್ರಿಯಂದು ಕಾದು ಕುಳಿತು ಕಲ್ಲೆಸೆದು ‘ಬಡ ಬಡ’ ಶಬ್ದ ಎಬ್ಬಿಸಿದ್ದು, ಚಂದು ಪೂಜಾರಿಯ ತೆಂಗಿನ ತೋಟಕ್ಕೆ ಹೋಗಿ ಎರಡು ಎಳನೀರು ಕದ್ದು ಕುಡಿದದ್ದು- ಇವೆಲ್ಲವೂ ಹಾಜಿ ಅಬ್ಬು ಕಾಕಾರ ಬಾಲ್ಯಕಾಲದ ಮಧುರ ನೆನಪುಗಳು.

ಶಾಲೆಯ ವಿದ್ಯಾಭ್ಯಾಸಕ್ಕೆ ಒಂದಿಷ್ಟೂ ಅರ್ಹನಲ್ಲದ ಅಬೂಬಕ್ಕರ್ ನಾಲ್ಕನೆಯ ತರಗತಿವರೆಗಾದರೂ ಕಲಿತದ್ದು ಆತನ ಅಜ್ಜಿಯೋ ಅಜ್ಜನೋ ಮಾಡಿದ ಪುಣ್ಯದ ಫಲವೆಂದೇ ಹೇಳಬೇಕು. ಒಂದುವೇಳೆ ಈತ ಚೆನ್ನಾಗಿಯೇ ಕಲಿತಿದ್ದರೂ ಕೂಡಾ ಯಾವುದೇ ಪ್ರಯೋಜನ ಇರಲಿಲ್ಲ. ಪರಿಚಯದ ಶಿಕ್ಷಕರ ಒತ್ತಡಕ್ಕೆ ಮಣಿದು ಕೊನೆಯ ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸಿದ್ದ ಅದ್ರಾಮನಿಗೆ ಮಕ್ಕಳನ್ನು ಹೆಚ್ಚು ಓದಿಸಬೇಕೆಂಬ ಯೋಚನೆಯೇ ಇರಲಿಲ್ಲ. ಕೈಕಾಲು ಗಟ್ಟಿಯಾದ ತಕ್ಷಣ ಮಕ್ಕಳು ದುಡಿಯುವುದಕ್ಕೆ ಶುರು ಮಾಡಿಕೊಂಡರೆ ಒಪ್ಪೊತ್ತಿನ ಊಟದ ಬದಲಿಗೆ ದಿನಕ್ಕೆ ಎರಡು ಹೊತ್ತು ಗಂಜಿಯೂಟ ಮಾಡುವಂತಾಗಬಹುದು ಎಂಬ ಆಲೋಚನೆ ಅದ್ರಾಮನಲ್ಲಿತ್ತು. ನಾಲ್ಕನೆಯ ತರಗತಿಯನ್ನು ಏನೆಂದರೂ ಪಾಸು ಮಾಡದ ಅಬೂಬಕ್ಕರ್ ನಿಜವಾಗಿಯೂ ತಂದೆಗೆ ತಕ್ಕ ಮಗನಾದ. ಶಾಲೆಗೆ ದೊಡ್ಡ ನಮಸ್ಕಾರ ಹಾಕಿ ಬಂದ ಆತ ಅನಂತ ಕಾಮತರ ದಿನಸಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿ, ಅಲ್ಲಿಯೇ ಸುಖ ಕಂಡುಕೊಂಡ. ವಿದ್ಯೆ ಕೈಹಿಡಿಯದಿದ್ದರೂ, ಚುರುಕಾದ ಮಾತು ಅಬೂಬಕ್ಕರ್‍ನ ನಾಲಿಗೆ ತುದಿಯೇರಿ ಕುಳಿತಿತ್ತು. ಬಹುಬೇಗ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡ. ‘ಕಾಮತರ ಅಂಗಡಿ’ ಸುಲ್ತಾನಪುರದ ಜನರ ಬಾಯಲ್ಲಿ ‘ನಮ್ಮ ಅಬೂಬಕ್ಕರ್ ಕೆಲಸ ಮಾಡುವ ಅಂಗಡಿ’ಯಾಗಿ ಬದಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.

ಆದರೆ ಅಬೂಬಕ್ಕರ್ ಈ ಬಗೆಯ ಸಣ್ಣ ಗುರುತಿಸುವಿಕೆಗೆ ಅಟ್ಟ ಏರುವ ಅಲ್ಪತೃಪ್ತನಾಗಿರಲಿಲ್ಲ. ‘ನನ್ನದೇ ಆದ ಅಂಗಡಿಯೊಂದನ್ನು ಆರಂಭಿಸಿದರೆ ಹೇಗೆ?’ ಎಂದು ಮೂರು ಹಗಲು, ಮೂರು ರಾತ್ರಿ ಗಂಭೀರವಾಗಿ ಯೋಚಿಸಿದ ಆತ ಕಾಮತರ ಅಂಗಡಿಯ ಮೂರು ವರ್ಷಗಳ ವ್ಯಾಪಾರದ ಅನುಭವವನ್ನು ತಕ್ಕಡಿ ತುಂಬಾ ತುಂಬಿಕೊಂಡು, ಊರಿನಲ್ಲೊಂದು ಗೂಡಂಗಡಿಯನ್ನು ತೆರೆದಿದ್ದ. ಕೈಬಾಯಿ ಚುರುಕಾಗಿದ್ದ ಕಾರಣ ಅವನಿಗೆ ವ್ಯಾಪಾರವೇನೂ ಕಷ್ಟ ಎನಿಸಲಿಲ್ಲ. ಆದರೆ ತಂದೆ ತಾಯಿಯರ ದುವಾ ಕೈ ಕೊಟ್ಟಿತೋ ಏನೋ, ಆತ ಅಂಗಡಿ ಆರಂಭಿಸಿದ ವರ್ಷವೇ ಸಿಡಿಲು ಬಡಿದು ಆತನ ಗೂಡಂಗಡಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಯಿತು. ಅಂಗಡಿಗಾಗಿ ಮಾಡಿದ್ದ ಸಾಲ ಆತನ ಹೆಗಲು ಹತ್ತಿ ಕುಳಿತಿತ್ತು. ಸುಮ್ಮನೆ ಕುಳಿತುಕೊಳ್ಳುವಂತಿರಲಿಲ್ಲ. ಏನಾದರೂ ಮಾಡಲೇಬೇಕಿತ್ತು. ಹಾಗೆಂದು, ಕಡಿಮೆ ಬಂಡವಾಳದಲ್ಲಿ ವ್ಯವಹಾರ ಆರಂಭಿಸುವ ಅನಿವಾರ್ಯತೆಗೆ ಸಿಲುಕಿಕೊಂಡ ಆತನಿಗೆ ಮತ್ತೆ ಗೂಡಂಗಡಿ ಆರಂಭಿಸುವುದಕ್ಕೆ ಸಾಧ್ಯವಾಗಲಿಲ್ಲ.

ಯೋಚಿಸಿ ಯೋಚಿಸಿ ತಲೆ ಕೆಡಿಸಿಕೊಂಡವನು ಸುಲ್ತಾನಪುರದಲ್ಲಿಯೇ ಪ್ರಥಮ ಬಾರಿಗೆ ಎನ್ನುವಂತೆ ಮೀನಿನ ವ್ಯಾಪಾರವನ್ನು ಶುರುವಿಟ್ಟುಕೊಂಡ. ಯಕ್ಷಗಾನ ಪಾತ್ರಧಾರಿ ಗೋಪಾಲ ಭಟ್ಟರು ಉದಾರವಾಗಿ ಕೊಟ್ಟ ನಾಲ್ಕು ಅಡಿಕೆ ದೊಂಪಗಳನ್ನು ನೆಲದಾಳಕ್ಕೆ ಊರಿ, ತನ್ನ ಮನೆಯಂಗಳದಲ್ಲಿಯೇ ಹಲವಾರು ವರ್ಷಗಳಿಂದ ಇದ್ದ ತಗಡಿನ ಶೀಟನ್ನು ಅವುಗಳ ಮೇಲ್ಭಾಗಕ್ಕೆ ಬಡಿದು, ಅದರ ಕೆಳಗೆ ಮೀನಿನ ವ್ಯಾಪಾರಿಯಾಗಿ ಅಬೂಬಕ್ಕರ್ ಕುಳಿತುಕೊಂಡ. ಮೀನಿನ ಖಾದ್ಯವನ್ನು ಬಹುವಾಗಿ ನೆಚ್ಚಿಕೊಳ್ಳುತ್ತಿದ್ದ ಊರಿನಲ್ಲಿ ಈತನ ವ್ಯಾಪಾರ ಬಹುಸುಲಭವಾಗಿ ಸಾಗತೊಡಗಿತ್ತು. ಹಿಂದಿನ ಸಾಲವನ್ನೆಲ್ಲಾ ತೀರಿಸಿದ ಈತನ ಜೇಬು ನಿಧಾನಕ್ಕೆ ಭರ್ತಿಯಾಗತೊಡಗಿತ್ತು. ಅದೇ ಸಮಯದಲ್ಲಿ ಆತ ಊಹಿಸಿರದ ಬೆಳವಣಿಗೆಯೊಂದು ನಡೆಯಿತು. ಮಂಗಳೂರಿನಿಂದ ಜೀಪಿನಲ್ಲಿ ಮೀನನ್ನು ಪ್ರತಿದಿನ ತಂದುಕೊಡುತ್ತಿದ್ದ ಹೈದರಾಲಿ ಹೆಚ್ಚು ದುಡ್ಡು ಮಾಡಿಕೊಳ್ಳುವ ಆಸೆಯಿಂದ ಬೆಂಗಳೂರು ಸೇರಿಕೊಂಡಿದ್ದ. ಆತನ ಸ್ಥಾನಕ್ಕೆ ಬಂದ ಕಲಂದರ್‍ನಿಗೆ ಕೆಲಸದ ಆಸಕ್ತಿ ಅಷ್ಟಕ್ಕೆ. ಸಮಯ ಮೀರಿ ಸುಲ್ತಾನಪುರಕ್ಕೆ ಬರುತ್ತಿದ್ದ. ಇದರಿಂದಾಗಿ ಬಗೆಬಗೆಯ ಮೀನು ಕೇಳಿಕೊಂಡು ಬಂದವರಿಗೆಲ್ಲಾ “ಮಂಗಳೂರಿನಿಂದ ಇನ್ನೂ ಬಂದಿಲ್ಲ. ಸ್ವಲ್ಪ ಹೊತ್ತು ಬಿಟ್ಟುಬಂದರೆ ಸಿಗುತ್ತದೆ” ಎಂಬ ಉತ್ತರವನ್ನು ಅಬೂಬಕ್ಕರ್ ನೀಡಬೇಕಾಗುತ್ತಿತ್ತು. “ಮಧ್ಯಾಹ್ನದ ಊಟಕ್ಕಿಲ್ಲದ ಮೀನು ಮತ್ತೆ ಯಾಕೆ? ನಾನು ಪಕ್ಕದ ಪೇಟೆಯಲ್ಲಿಯೇ ತೆಗೆದುಕೊಳ್ಳುತ್ತೇನೆ ಬಿಡು” ಎಂದ ಗ್ರಾಹಕರು ಮೀನು ಕೊಳ್ಳುವುದಕ್ಕಾಗಿ ಮೂರು ಕಿಲೋಮೀಟರ್ ದೂರದ ಪೇಟೆಯ ಕಡೆಗೆ ಸಾಗುತ್ತಿದ್ದರು. ಅಬೂಬಕ್ಕರ್‍ನನ್ನು ತಪ್ಪಾಗಿ ಅರ್ಥೈಸಿಕೊಂಡು, ‘ಜಗತ್ತಿಗೆಲ್ಲಾ ಒಬ್ಬನೇ ಮೀನು ಮಾರುವವ ಎಂಬ ಧಿಮಾಕು ಇವನಿಗೆ. ವ್ಯಾಪಾರಕ್ಕೆ ಬಂದರೆ ಬರಲಿ, ಇಲ್ಲವಾದರೆ ಸಾಯಲಿ ಎಂಬ ಅಹಂಕಾರ. ಇನ್ನು ಇವನ ಅಂಗಡಿಗೇ ಬರಬಾರದು’ ಎಂದು ಮನಸ್ಸಿನಲ್ಲಿಯೇ ಬೈದುಕೊಂಡು ಸಾಗುವವರ ಸಂಖ್ಯೆ ಹೆಚ್ಚಾಗತೊಡಗಿತ್ತು. ಹೀಗೆ ಕಲಂದರ್‍ನ ಕಡಿಮೆ ಕರ್ತವ್ಯನಿಷ್ಠೆ ಅಬೂಬಕ್ಕರ್‍ನ ಮೀನಿನಂಗಡಿಯನ್ನು ನುಂಗಿಹಾಕಿತು.

“ನಾಯಿಂಡೆ ಮೋಣೆ. ಕಾಮತರ ಕೈಯ್ಯಡಿಯಲ್ಲಿ ದುಡಿದು, ಗಂಜಿ ಕುಡಿದು ಬದುಕುವುದಕ್ಕಾಗದ ಸೊಕ್ಕು ನಿನಗೆ. ಗೂಡಂಗಡಿ ಹಾಕಿದೆ. ಮೀನು ವ್ಯಾಪಾರ ಮಾಡಿದೆ. ಕಿಲುಬು ಕಾಸೂ ಹುಟ್ಟಲಿಲ್ಲ. ಮನೆಯಲ್ಲಿದ್ದ ಜುಜುಬಿ ಕಾಸೂ ಬರ್ಬಾದ್ ಆಯಿತು. ಇದೆಲ್ಲಾ ಬೇಕಿತ್ತಾ? ಇನ್ನುಮುಂದೆ ವ್ಯಾಪಾರಕ್ಕೆ ಹೊರಟರೆ ಜಾಗ್ರತೆ. ನಾಳೆಯೇ ಹೋಗಿ ಕಾಮತರ ಅಂಗಡಿ ಸೇರಿಕೋ. ಅವರು ಕೆಲಸ ಕೊಟ್ಟರೆ ಅದೇ ಪುಣ್ಯ” ತಂದೆ ಆಕ್ರೋಶದಿಂದ ಆಡಿದ ಈ ಮಾತು ಅಬೂಬಕ್ಕರ್‍ನ ಸ್ವಾಭಿಮಾನಕ್ಕೆ ಬಲವಾದ ಕೊಡಲಿಯೇಟು ನೀಡಿತು. ‘ಯಶಸ್ವೀ ವ್ಯಾಪಾರಸ್ಥ ಎನಿಸಿಕೊಳ್ಳದೆ ಸಾಯಲಾರೆ’ ಎಂಬ ಹಠ ಅಬೂಬಕ್ಕರ್‍ನೊಳಗೆ ಮೂಡಿದ್ದು ಆವಾಗಲೇ.

ಸೀದಾ ತನ್ನ ತಾಯಿಯ ತವರೂರಿನತ್ತ ಹೊರಟ ಆತನಲ್ಲಿ ಮರದ ಮಿಲ್ಲಿನ ಆರಂಭಕ್ಕೆ ಹಿರಿದು ಬಂಡವಾಳವನ್ನು ಕಲೆಹಾಕುವ ಯೋಚನೆ ಬಲವಾಗಿತ್ತು. ತನ್ನಮ್ಮನ ತಮ್ಮ ಅಂದರೆ ಮಾವನಲ್ಲಿ ಮರದ ಮಿಲ್ಲಿನ ಕನಸನ್ನು ಬಿಚ್ಚಿಟ್ಟ ಆತ ದೊಡ್ಡ ಮೊತ್ತದ ಸಾಲ ಕೇಳಿದ. ಕೊಡಲೊಪ್ಪದ ಮಾವನ ಕಾಲು ಹಿಡಿದು ಬೇಡಿಕೊಂಡ. ಅಳಿಯನಿಗೆ ಬದುಕಿನ ಕುರಿತ ಗಂಭೀರತೆ ಮೂಡಿದೆ ಎಂದು ಅರಿತ ಸಿರಿವಂತ ಮಾವ ಸಮುದ್ರದಿಂದ ಬೊಗಸೆ ನೀರು ತೆಗೆದುಕೊಟ್ಟಂತೆ ಸಾಲದ ಮೊತ್ತವನ್ನು ಈತನ ಕೈಗಿತ್ತ.

ಕಡ ತೆಗೆದುಕೊಂಡು ಸುಲ್ತಾನಪುರಕ್ಕೆ ಮರಳಿದ ಅಬೂಬಕ್ಕರ್‍ನ ತಲೆಯೊಳಗೆ ಭರ್ತಿ ಕನಸಿತ್ತು. ಎದೆಯೊಳಗೆ, ಆಗಾಗ ಆಚೀಚೆ ಹೊಯ್ದಾಡುವ ಆತ್ಮವಿಶ್ವಾಸವಿತ್ತು. ಗೆದ್ದರೂ, ಸೋತರೂ ಹೆಸರು ತನಗೇ ಇರಲಿ ಎಂಬಂತೆ ‘ಅಬೂಬಕ್ಕರ್ ವುಡ್ ಟಿಂಬರ್ಸ್’ ಎಂಬ ಹೆಸರಿನಲ್ಲಿ ಮರದ ವ್ಯಾಪಾರವನ್ನು ಶುರುವಿಟ್ಟುಕೊಂಡ. ಹಿಂದಿನೆರಡು ವ್ಯವಹಾರಗಳಲ್ಲಿ ಕೈಸುಟ್ಟುಕೊಂಡಿದ್ದ ಅಬೂಬಕ್ಕರ್ ಇದರಲ್ಲಿ ಗೆದ್ದ. ಎಣಿಸಲಾಗದಷ್ಟು ಹಣ ಕೈಸೇರಲಾರಂಭಿಸಿತು. ಹತ್ತರೊಡನೆ ಹನ್ನೊಂದಾಗಿದ್ದ ಅದ್ರಾಮನ ಕುಟುಂಬ ಊರಿನ ಗಣ್ಯ ಕುಟುಂಬವಾಯಿತು. ಹುಡುಕಿಬಂದ ಸಂಬಂಧವನ್ನು ಒಪ್ಪಿದ ಅಬೂಬಕ್ಕರ್ ಮಮ್ತಾಜಳ ಪ್ರೀತಿಯ ಗಂಡನಾದ. ಕಾದರ್, ಇಬ್ರಾಹಿಮ್ ಹಾಗೂ ಬಾತೀ ಹೆಸರಿನ ಮೂವರು ಮಕ್ಕಳ ತಂದೆಯಾದ.

ಮಕ್ಕಳು ಬೆಳೆದಂತೆ ಮರದ ಮಿಲ್ಲಿನ ವ್ಯವಹಾರವನ್ನು ಅವರ ಕೈಗೊಪ್ಪಿಸಿದ ಅಬೂಬಕ್ಕರ್ ತಮ್ಮ ಐವತ್ತೆಂಟನೇ ವಯಸ್ಸಿನಲ್ಲಿ ಹಜ್ ಯಾತ್ರೆಯನ್ನು ಪೂರೈಸಿ ಬಂದಿದ್ದಾರೆ. ಅದಾದ ಬಳಿಕ ಅಬೂಬಕ್ಕರ್ ಊರವರ ಬಾಯಲ್ಲಿ ಹಾಜಿ ಅಬ್ಬೂ ಕಾಕಾ ಎನಿಸಿಕೊಂಡಿದ್ದಾರೆ. ಈಗ ಸುಲ್ತಾನಪುರದ ಎಲ್ಲರಿಗೂ ಅವರು ಅಬ್ಬೂ ಕಾಕಾ ಆಗಿಹೋಗಿದ್ದಾರೆ. ಅಬೂಬಕ್ಕರ್ ಎಂಬ ಅವರ ಹೆಸರು ಹಿನ್ನೆಲೆಗೆ ಹೋಗಿ, ‘ಕಾಕಾ’ ಎಂಬ ಸಂಬಂಧವಾಚಕದ ಬಗೆಗೆ ಒಂದಿಷ್ಟೂ ಯೋಚನೆ ಮಾಡದೆ ಎಲ್ಲಾ ವಯಸ್ಸಿನವರೂ ಅವರನ್ನು ಅಬ್ಬೂ ಕಾಕಾ ಎಂದು ಕರೆಯುವಂತಾಗಿದೆ.

ಮನೆಯ ಮೊದಲ ಅಂತಸ್ತಿನ ಕಿಟಕಿ ಗಾಜು ಫಳಾರೆಂದ ಶಬ್ದ ಕೇಳಿ, ಚದುರಂಗದ ಮಣೆಯಲ್ಲಿ ದೃಷ್ಟಿ ನೆಟ್ಟಿದ್ದ ಹಾಜಿ ಅಬ್ಬೂ ಕಾಕಾ ಅಂಗಳಕ್ಕೆ ಬಂದರು. ಎರಡನೇ ಮಗ ಇಬ್ರಾಹಿಮ್‍ನ ಮಗ ನೌಷದ್, ಅಜ್ಜನ ಕಡೆಗೆ ತಿರುಗಿ ಉತ್ಸಾಹದಿಂದ ನಗುತ್ತಾ, “ಉಪ್ಪಾಪ ನೋಡು” ಅಂದ. ಪಾರಿವಾಳವೊಂದು ಆತನ ಕೈಯ್ಯಲ್ಲಿತ್ತು. ಕಲ್ಲು ತೂರಿ ಅದನ್ನು ಬೀಳಿಸಿದ್ದ ಆತನಲ್ಲಿ ವಿಶ್ವಕಪ್ ಗೆದ್ದಂತಹ ಸಂಭ್ರಮವಿತ್ತು. ಮೊಮ್ಮಗನ ಕೈಯ್ಯಿಂದ ಪಾರಿವಾಳವನ್ನು ನಾಜೂಕಾಗಿ ತಮ್ಮ ಕೈಗಳಿಗೆ ರವಾನಿಸಿಕೊಂಡ ಅಬ್ಬೂ ಕಾಕಾರಿಗೆ ಅದರ ರೆಕ್ಕೆಗೆ ಏಟು ಬಿದ್ದಿರುವುದು ಸ್ಪಷ್ಟವಾಯಿತು. ಹಾರುವ ಸಾಮರ್ಥ್ಯವನ್ನು ಕಳೆದುಕೊಂಡಿತ್ತು. ಒಂದಿಷ್ಟು ನೀರನ್ನು ಕುಡಿಸಿದ ಅವರು, ಅದಾಗಿಯೇ ಚೇತರಿಸಿಕೊಳ್ಳಲಿ ಎಂಬ ಉದ್ದೇಶದಿಂದ ಬುಟ್ಟಿಯೊಂದರಲ್ಲಿ ಅದನ್ನಿಟ್ಟರು. ಇರುವೆಗಳು, ಮನೆಯ ಬೆಕ್ಕು ಅದರ ಸುತ್ತ ಬರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮೂರೂ ಜನ ಮೊಮ್ಮಕ್ಕಳಿಗೆ ವಹಿಸಿ, “ಮುಟ್ಟಿದರೆ ಜಾಗ್ರತೆ” ಎಂದು ಏರುದನಿಯಲ್ಲಿ ಮೊಮ್ಮಕ್ಕಳನ್ನು ಬೆದರಿಸಿ, ಮನೆಯೊಳಕ್ಕೆ ಹೋದರು. ಟಿ.ವಿ.ಯಲ್ಲಿ ಮೂಡಿಬರುತ್ತಿದ್ದ ಇಸ್ರೇಲ್ ಪ್ಯಾಲೇಸ್ತೇನ್ ಸಂಘರ್ಷದ ಸುದ್ದಿ, ಆ ದಾಳಿಯ ಚಿತ್ರಣ ಅವರಲ್ಲಿ ವಿಪರೀತವಾದ ಅಸಮಾಧಾನ ಮೂಡಿಸಿತು. ಟಿ.ವಿ. ಆಫ್ ಮಾಡಿ ಬಂದು ತೂಗಾಡುವ ಕುರ್ಚಿ ಮೇಲೆ ಕುಳಿತುಕೊಂಡರು.

 

ಯಶಸ್ವೀ ಮರದ ವ್ಯಾಪಾರಿಯಾಗಿ ಹೆಸರು ಪಡೆದ ಹಾಜಿ ಅಬ್ಬೂ ಕಾಕಾರ ಬದುಕಿನಲ್ಲಿ ಒಂದು ಕಪ್ಪು ಚುಕ್ಕೆಯಿದೆ. ಆಗ ಅವರಿಗೆ ಮೂವತ್ತೇಳು ವರ್ಷ. ಮರದ ಮಿಲ್ಲು ಯಶಸ್ವಿಯಾಗಿ ನಡೆಯುತ್ತಿದ್ದ ಸಮಯವದು. 1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸದ ಘಟನೆ ಎರಡು ವರ್ಷಗಳ ನಂತರವೂ ಸುಲ್ತಾನಪುರದ ಜನರ ಮೇಲೆ ಪರಿಣಾಮ ಬೀರುತ್ತಲೇ ಇತ್ತು. ಹಿಂದೂ- ಮುಸಲ್ಮಾನರ ಸಾಮರಸ್ಯ ಕದಡಿಹೋಗಿತ್ತು. ಅದೇ ಸಮಯದಲ್ಲಿ ಅದೊಂದು ಮಧ್ಯಾಹ್ನ ಅಬ್ಬೂ ಕಾಕಾರ ಮರದ ಮಿಲ್ಲಿಗೆ ಬಂದ ಅರಣ್ಯಾಧಿಕಾರಿಗಳು ಗಂಧದ ದಿಮ್ಮಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ ಎಂದು ಆರೋಪಿಸಿ, ಇದ್ದಕ್ಕಿದ್ದಂತೆಯೇ ತಪಾಸಣೆ ಆರಂಭಿಸಿದ್ದರು. ಗಂಧದ ದಿಮ್ಮಿಗಳೇನೂ ದೊರೆತಿರಲಿಲ್ಲ. ಆದರೆ ಅಬ್ಬೂ ಕಾಕಾರ ಮರದ ಮಿಲ್ಲಿನ ಕುರಿತು ಊರವರು ಸಂಶಯದ ದೃಷ್ಟಿಯಿಂದ ನೋಡುವಂತಾಗಿತ್ತು. “ಅರಣ್ಯಾಧಿಕಾರಿಗಳಿಗೆ ಹಣ ತಿನ್ನಿಸಿ, ಬಚಾವಾಗಿದ್ದಾರಂತೆ” ಎಂಬ ಸುಳ್ಳು ಮಾತುಗಳೂ ಊರತುಂಬಾ ಹರಿದಾಡತೊಡಗಿದ್ದವು. ಸಹಿಸಲಾರದ ಅವಮಾನವಾಗಿತ್ತು ಅಬ್ಬೂ ಕಾಕಾರಿಗೆ.

ಊರಿನವರೆಲ್ಲರ ಜೊತೆಗೂ ಹಮ್ಮುಬಿಮ್ಮಿಲ್ಲದೆ ಬೆರೆಯುತ್ತಿರುವ ತನ್ನ ಬಗ್ಗೆ ದೂರು ಕೊಟ್ಟವರು ಯಾರಿರಬಹುದು? ಎಂದು ಯೋಚಿಸಿದ ಅಬ್ಬೂ ಕಾಕಾರಿಗೆ ಅರ್ಚಕ ವಿಷ್ಣು ಭಟ್ಟರು ವಾರದ ಹಿಂದೆ ತನ್ನಲ್ಲಿ ಆಡಿದ ತಮಾಷೆಯ ಮಾತು ನೆನಪಾಗಿತ್ತು- “ಸಾಹುಕಾರರೇ, ನಿಮ್ಮ ಮಿಲ್ಲಿನಲ್ಲಿ ಗಂಧದ ಕೋಡೂ ಸಿಗುವಂತಿದ್ದರೆ ಒಳ್ಳೆಯದಿತ್ತು. ನಮ್ಮ ದೇವಸ್ಥಾನಕ್ಕೆ ಬೇಕಾದಷ್ಟನ್ನೂ ನಿಮ್ಮಲ್ಲಿಂದಲೇ ಖರೀದಿಸಬಹುದಿತ್ತು.” ಹೌದು! ಐತಾಳರೇ ದೂರು ಕೊಟ್ಟವರು ಎಂದು ಅಬ್ಬೂ ಕಾಕಾ ನಿಶ್ಚಯಿಸಿ ಆಗಿತ್ತು.

ಆ ಸಂಜೆ ತನ್ನ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕೈದು ಯುವಕರೊಂದಿಗೆ ಭಟ್ಟರ ಮನೆಯಂಗಳದಲ್ಲಿ ಹೋಗಿನಿಂತ ಅಬ್ಬೂ ಕಾಕಾ ಬಾಯಿಗೆ ಬಂದಂತೆ ಬೈದು, ಅಬ್ಬರಿಸಿದ್ದರು. ಭಟ್ಟರು ‘ಬ್ಬೆಬ್ಬೆಬ್ಬೆ’ ಎಂದು ಮಾತನಾಡುವುದಕ್ಕೆ ಒದ್ದಾಡುತ್ತಲೇ ತನ್ನದೇನೂ ತಪ್ಪಿಲ್ಲ, ತಾನು ದೂರು ಕೊಟ್ಟಿಲ್ಲ ಎಂದು ಸಾಬೀತುಪಡಿಸುವ ಪ್ರಯತ್ನ ನಡೆಸಿದ್ದರು. ಭಟ್ಟರ ಮನೆಯ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರಂತೆ ಎಂಬ ಸುದ್ದಿ ತಿಳಿದ ಹಿಂದೂ ಯುವಕರು ಮನೆಯೆದುರು ಬಂದು ಸೇರುವಷ್ಟರಲ್ಲಿ ಅಬ್ಬೂ ಕಾಕಾ ಮತ್ತು ತಂಡ ಭಟ್ಟರ ಕೆನ್ನೆಗೆರಡೇಟು ಬಿಗಿದು, ಅಲ್ಲಿಂದ ತೆರಳಿ ಅರ್ಧಗಂಟೆಯಾಗಿತ್ತು.

ಮರುದಿನ ಇದೇ ವಿಚಾರ ಮಹಮ್ಮದನ ಹೋಟೆಲಿನಲ್ಲಿ ಚರ್ಚೆಗೆ ಬಂದು, ಹಿಂದೂ- ಮುಸಲ್ಮಾನ ಯುವಕರು ಬಡಿದಾಡಿಕೊಂಡಿದ್ದರು. ಒಂದಷ್ಟು ಜನ ಆಸ್ಪತ್ರೆ ಸೇರುವಂತಾಗಿತ್ತು. ರಾಜಕಾರಣಿಗಳ ಪ್ರವೇಶವಾದ ಬಳಿಕ ಕೋಮುಸಂಘರ್ಷದ ರಂಗಸ್ಥಳಕ್ಕೆ ಮತ್ತಷ್ಟು ಕಳೆ ಬಂದಿತ್ತು. ಈ ಎಲ್ಲಾ ಘಟನೆಗಳಿಂದ ಬೇಸತ್ತ ಭಟ್ಟರು ಪತ್ನಿ- ಮಕ್ಕಳ ಸಮೇತ ರಾತ್ರೋ ರಾತ್ರೆ ಊರಿನ ಯಾರಿಗೂ ತಿಳಿಯದಂತೆ ಊರು ಬಿಟ್ಟು ಗೋಕರ್ಣ ಸೇರಿಕೊಂಡಿದ್ದರು. ಈ ಮೊದಲು ಮರದ ವ್ಯಾಪಾರಿಯಾಗಿ ಹೆಸರು ಪಡೆದಿದ್ದ ಅಬ್ಬೂ ಕಾಕಾ ಈ ಘಟನೆಯ ಬಳಿಕ ಸುಲ್ತಾನಪುರದ ಮುಸ್ಲಿಮರ ಪಾಲಿಗೆ ಅಘೋಷಿತ ನಾಯಕನಾಗಿ ರೂಪುಗೊಂಡಿದ್ದರು. ಹಬ್ಬ, ಗಲಾಟೆ ಏನೇ ನಡೆದರೂ ಅವರ ಸಲಹೆ ಮುಸ್ಲಿಮ್ ಸಮುದಾಯದಲ್ಲಿ ಪ್ರಧಾನವಾಗಿ ಪರಿಗಣಿಸಲ್ಪಡುತ್ತಿತ್ತು. ವಿಷ್ಣು ಭಟ್ಟರನ್ನು ತಾನು ಸೋಲಿಸಿದ್ದೇನೆ, ತನ್ನ ತಾಕತ್ತಿಗೆ ಹೆದರಿಯೇ ಅವರು ಊರು ಬಿಟ್ಟಿದ್ದಾರೆ ಎಂಬ ಯೋಚನೆ ಅಬ್ಬೂ ಕಾಕಾರಿಗೆ ಆವಾಗಾವಾಗ ಖುಷಿ ಕೊಡುತ್ತಿತ್ತು.

ಆದರೆ ಈಗ ಸ್ವಲ್ಪ ಹೊತ್ತಿಗೆ ಮೊದಲು, ಆ ಘಟನೆ ನಡೆದು ಸರಿಸುಮಾರು ಇಪ್ಪತ್ತೇಳು ವರ್ಷಗಳಾದ ಮೇಲೆ, ನಿಜ ವಿಷಯ ತಿಳಿದುಬಂದಿತ್ತು. ಸಂಜೆಯ ನಮಾಜ್ ಮುಗಿದ ಮೇಲೆ ಮಸೀದಿಯಲ್ಲಿ ಸಿಕ್ಕಿದ ಈಗಿನ ಅರಣ್ಯಾಧಿಕಾರಿ ಮುಸ್ತಾಫ ಹೇಳಿದ್ದಿಷ್ಟು- “ನೋಡಿ ಅಬ್ಬೂ ಕಾಕಾ, ನಿಮ್ಮ ಮೇಲೆ ಯಾರೋ ದೂರು ಕೊಟ್ಟಿದ್ದಾರೆ ಎಂದು ನಿಮ್ಮ ಮಿಲ್ಲಿನ ಮೇಲೆ ದಾಳಿ ನಡೆದದ್ದಲ್ಲವಂತೆ. ನನ್ನೆಣಿಕೆಯ ಪ್ರಕಾರ, ನೀವು ಆ ಅರಣ್ಯಾಧಿಕಾರಿಗೆ ಲಂಚ ತಿನ್ನಿಸದ್ದೇ ದೊಡ್ಡ ತಪ್ಪಾಗಿರಬೇಕು. ಅವನು ಮಹಾ ಹಣಬಾಕನಂತೆ. ನಿಮ್ಮನ್ನು ಹೆದರಿಸಿ, ಹಣ ಪೀಕಿಸುವ ಉದ್ದೇಶವಷ್ಟೇ ಆತನಿಗೆ ಇದ್ದಿರಬೇಕು. ಹಣ ಕಂಡರೆ ಸೈತಾನನಾಗುವ ಸ್ವಭಾವ ಅವನದ್ದಂತೆ. ತುಂಬಾ ಜನ ಹಾಗೆ ಮಾತನಾಡುವುದು ಕೇಳಿದ್ದೇನೆ.”

ವಾರಗಳ ಹಿಂದೆ ಮುಸ್ತಾಫನಲ್ಲಿ ಮಾತನಾಡುತ್ತಾ ಅಬ್ಬೂ ಕಾಕಾ ತನ್ನ ಮಿಲ್ಲಿನ ಮೇಲೆ ನಡೆದ ದಾಳಿ, ಆ ಬಳಿಕದ ಬೆಳವಣಿಗೆಗಳನ್ನು ಹೇಳಿದ್ದರು. ಕುತೂಹಲಗೊಂಡ ಮುಸ್ತಾಫ ಅರಣ್ಯಾಧಿಕಾರಿಯ ದಾಳಿಯ ಹಿನ್ನೆಲೆಯನ್ನು ತನ್ನ ಇಲಾಖೆಯ ಬೇರೆಯವರಲ್ಲಿ ಕೇಳಿಕೊಂಡು ಬಂದು ಅಬ್ಬೂ ಕಾಕಾರ ಕಿವಿಗೆ ರವಾನಿಸಿದ್ದ.

ತೂಗಾಡುವ ಕುರ್ಚಿ ಮೇಲೆ ಕುಳಿತಿದ್ದ ಅಬ್ಬೂ ಕಾಕಾರ ಮನಸ್ಸೂ ತೂಗಾಡುತ್ತಿತ್ತು. ತನ್ನ ಮೀನಿನ ವ್ಯಾಪಾರಕ್ಕೆ ಸಹಾಯ ಮಾಡಿದ ಯಕ್ಷಗಾನದ ಗೋಪಾಲ ಭಟ್ಟರ ಮಗನೇ ಈ ವಿಷ್ಣು ಭಟ್ಟರು ಎಂಬ ವಿಚಾರವನ್ನೂ ಸಂಘರ್ಷದ ಆ ಉತ್ತುಂಗದ ಸ್ಥಿತಿಯಲ್ಲಿ ಮರೆತೆನಲ್ಲಾ! ವಿಷ್ಣು ಭಟ್ಟರನ್ನು ತಪ್ಪಾಗಿ ಅರ್ಥೈಸಿಕೊಂಡು, ಅವರು ಊರು ಬಿಟ್ಟು ಹೋಗುವ ಹಾಗೆ ಮಾಡಿದೆನಲ್ಲಾ ಎಂಬ ಖೇದ ಅವರನ್ನು ಸಂಪೂರ್ಣ ಆವರಿಸಿತ್ತು. ಅವರ ಮನಸ್ಸು ಅಂದುಕೊಂಡಿತು- ‘ಬಹುಷಃ ಎಲ್ಲಾ ಸಂಘರ್ಷಗಳ ಹಿಂದೆಯೂ ಇಂತಹ ತಪ್ಪು ಅರ್ಥೈಸುವಿಕೆಗಳಿವೆ. ಕೋಮುಗಲಭೆಯ ಒಡಲಲ್ಲಿ ಇಂತಹದ್ದೇ ರಹಸ್ಯಗಳು ಬಚ್ಚಿಟ್ಟುಕೊಂಡಿವೆ.’

ತನ್ನಿಂದಾದ ತಪ್ಪನ್ನು ಸರಿಪಡಿಸುವ ಬಗೆ ಹೇಗೆ? ಎಂದು ಅವರು ಗಹನವಾಗಿ ಯೋಚಿಸತೊಡಗಿದರು. ‘ಈಗ ದೇವಸ್ಥಾನದ ಅರ್ಚಕರಾಗಿರುವ ನಾರಾಯಣ ಭಟ್ಟರು ವಿಷ್ಣು ಭಟ್ಟರ ಸಂಬಂಧಿಕರಂತೆ. ಹಾಗಿದ್ದರೆ ನಾರಾಯಣ ಭಟ್ಟರಿಗೆ ಗೋಕರ್ಣದಲ್ಲಿ ವಿಷ್ಣು ಭಟ್ಟರ ಮನೆ ಎಲ್ಲಿದೆ ಎಂದು ಗೊತ್ತಿರುತ್ತದೆ. ಅವರಲ್ಲಿಯೇ ಕೇಳಿಬಂದರಾಯಿತು. ಈ ರಂಝಾನ್ ಹಬ್ಬಕ್ಕೆ ಮೊದಲು ಗೋಕರ್ಣಕ್ಕೆ ಹೋಗಿ, ಅವರನ್ನು ಕರೆತಂದು, ಊರಿನವರಿಗೆಲ್ಲಾ ಸತ್ಯವನ್ನು ತಿಳಿಸಿ, ಇಡೀ ಊರಿನ ಹಿಂದೂ ಮುಸ್ಲಿಮರೆಲ್ಲಾ ಒಂದಾಗಿ ಹಬ್ಬ ಆಚರಿಸಬೇಕು’ ಎಂದು ಯೋಚಿಸಿದ ಅಬ್ಬೂ ಕಾಕಾರಿಗೆ ವಿಪರೀತ ಹುರುಪು ಬಂದಂತಾಯಿತು. ದೇವಸ್ಥಾನದ ಪಕ್ಕದಲ್ಲಿಯೇ ಇರುವ ನಾರಾಯಣ ಭಟ್ಟರ ಮನೆಗೆ ಹೋಗಲು ನಿರ್ಧರಿಸಿದ ಅವರು ಅಂಗಳಕ್ಕೆ ಬಂದು, ಡ್ರೈವರ್ ಉಸ್ಮಾನನ ಹೆಸರನ್ನು ಜೋರಾಗಿ ಕೂಗಲಾರಂಭಿಸಿದರು.

ಅಷ್ಟರಲ್ಲಿ ಅವರ ಮೊಮ್ಮಕ್ಕಳು ಓಡಿ ಬಂದು, ಆಕಾಶದ ಕಡೆಗೆ ಕೈಚಾಚಿ, ಬೊಬ್ಬೆ ಹೊಡೆದರು- “ಉಪ್ಪಾಪ ನೋಡಲ್ಲಿ.” ಹಾಜಿ ಅಬ್ಬೂ ಕಾಕಾ ತಲೆ ಎತ್ತಿ ನೋಡಿದರು. ರೆಕ್ಕೆಗೆ ಏಟು ಮಾಡಿಕೊಂಡಿದ್ದ ಅದೇ ಪಾರಿವಾಳ ಈಗ ತಲೆಯೆತ್ತಿ, ರೆಕ್ಕೆಯನ್ನು ಬೀಸಿ ಬೀಸಿ ಹಾರುತ್ತಿತ್ತು. ಹಾರುತ್ತಲೇ ಇತ್ತು...

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author