ಸಮಾನತೆಯ ಕನಸಿಗೆ
ಸಹಿ ಹಾಕಿದ ಭೀಮಾ ಸಾಹೇಬರು
ಮಾನವತೆಯ ಮುಗುಳುನಗೆಯಾಡಿದರು
ಭೀಮ ಹುಟ್ಟಿದ ಭೂಮಿ ಇದು
ಭಯ ಬಿಟ್ಟು ಬಯಲಲ್ಲಿ ಹಾಡಿರಿ
ನಮ್ಮ ನುಡಿಯೇ ಭೀಮ ನಡೆಯು
ನಮ್ಮದೆಲ್ಲವೂ ಸಮಾನತೆಯ ಕಡೆಗೆ
ಎಂತ ಜಾತಿ ಎಂತ ಧರ್ಮ
ಕಂದಕಗಳ ಕಡಿದೆ ನೀನು
ನೊಂದು ಬೆಂದ ಜೀವಗಳಿಗೆ
ಜಲವಾದ ಜೀವ ನೀನು
ದಿಕ್ಕಾದೆ ಸ್ತ್ರೀ ಕುಲಕೆ
ಅಸ್ಪೃಶ್ಯರಿಗೆ ಅರಿವಾದೆ
ಅವರು ಇವರು ಎಲ್ಲರಿಗೂ ಘನತೆಯ ಗುರುವಾದೆ
ಸಹನೆ ಕರುಣೆ ಭ್ರಾತೃತ್ವಕೆ ಭಾರತೀಯರೆಂದೆ
ಬಹುಜನರ ಭಾರತಕ್ಕೆ ಸಂವಿಧಾನ ಬರೆದೆ
ಬುದ್ದನೆಡೆಗೆ ನೆಡೆದೆ ಭಾರತ ರತ್ನವಾದೆ
ನೀನು ಹುಟ್ಟಿದ ಈದಿನ
ನೆಲದ ಕಳಂಕ ಕಳೆದ ದಿನ
ಭೂಮಿ ಮೇಲೆ ಬರೆದೆವು
ಚಿರಾಯುವಾಗಲಿ ಭೀಮಾ ಸಾಹೇಬ
ಜೈಭೀಮ್ ಜೈ ಭೀಮ್
ಕೊರಳೆತ್ತಿ ಹಾಡುತ್ತೇವೆ
ನಲಿಯುತ್ತೇವೆ ಉಲಿಯುತ್ತೇವೆ
ನಮ್ಮದಿನ ನಿಮ್ಮ ದಿನ
ಮುಗಿಲು ಮುಟ್ಟಿತು ಈ ದಿನ
ಏಪ್ರಿಲ್ ಹದಿನಾಲಕ್ಕು ಏಪ್ರಿಲ್ ಹದಿನಾಲಕ್ಕು
ನೀಲಿ ಮಳೆ ಸುರಿದ ಈ ಸುದಿನ
ಸುಬ್ಬು ಹೊಲೆಯಾರ್ (ಹೆಚ್. ಕೆ. ಸುಬ್ಬಯ್ಯ)
ಸುಬ್ಬು ಹೊಲೆಯಾರ್ ಎಂದೇ ಪ್ರಖ್ಯಾತವಾಗಿರುವ ಹೆಚ್. ಕೆ. ಸುಬ್ಬಯ್ಯ ಕೋಮಾರಯ್ಯ ಮತ್ತು ತಿಪ್ಪಮ್ಮ ದಂಪತಿಗಳ ಮಗನಾಗಿ ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ ಜನಿಸಿದರು. ಪ್ರಸ್ತುತ ದೂರದರ್ಶನ ಚಂದನ ವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಕರಾಗಿರವ ಸುಬ್ಬು ಹೊಳೆಯಾರ್, ಡಿಪ್ಲೊಮ ಇನ್ ಡ್ರಾಮಾ ಪದವಿ, ನೀನಾಸಂ ಹೆಗ್ಗೋಡು ಇಲ್ಲಿ ರಂಗ ಶಿಕ್ಷಣ ಕಲಿತವರು. ’ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಕೃತಿಗೆ ಡಾ. ಜಿ. ಎಸ್. ಎಸ್. ಕಾವ್ಯಪ್ರಶಸ್ತಿ, ದಿನಕರದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಗಂಧದ ಹಾರ ಕಾವ್ಯಪ್ರಶಸ್ತಿ, ’ಅಮ್ಮ’ಗೌರವ ಪ್ರಶಸ್ತಿ, ಮುಳ್ಳೂರ್ ನಾಗರಾಜ್ ಕಾವ್ಯಪ್ರಶಸ್ತಿ ಸೇರಿದಂತೆ ಹಲವಾರು ಪ್ರಸಸ್ತಿ, ಪುರಸ್ಕಾರಗಳು ಸಂದಿವೆ.
ಇವರ ಎರಡನೇ ಕಾವ್ಯಸಂಗ್ರಹ ’ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ’ ಕೃತಿಯು 2010ನೇ ಸಾಲಿನ ಮುದ್ದಣ ಕಾವ್ಯಪ್ರಶಸ್ತಿಯನ್ನು ಪಡೆದುಕೊಂಡಿದೆ. 2013ನೇ ಸಾಲಿನಲ್ಲಿ ಬುದ್ಧ ಪ್ರಶಸ್ತಿ, ದಲಿತಸಿರಿ ಪ್ರಶಸ್ತಿ, ಕರ್ನಾಟಕ ರಾಜ್ಯಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ. ಇವರ ಜೀವನ ಕಥನ ’ದನ ಕಾಯದವನು’ ’ಕರಿಯ ಕಣ್ಬಿಟ್ಟ’ ಎಂಬ ಕಲಾತ್ಮಕ ಚಲನಚಿತ್ರವಾಗಿ ಮೂಡಿಬಂದಿದೆ.
More About Author