ಇದೀಗ ಹೊಸದು ಜಗ
ಕಣ್ಣಳತೆಯ ಸೋಜಿಗ
ತೊಟ್ಟಿಕ್ಕುವ ಪ್ರತಿ ಹನಿಗೂ
ಬಿಕ್ಕಳಿಸುವ ನೆತ್ತರ ಯುಗ
ಯಾಕಾದರೂ ಬಂದೆಯೋ ಎಂದರೆ
ಎದೆ ಹಂದರಗಳಲ್ಲಿ ಕಂದರ
ಕಣ್ಣಾಮುಚ್ಚಾಲೆಯಾಟದಲ್ಲಿ
ಕಳೆದುಹೋದ ಕಂದಮ್ಮಗಳ ನಿರುತ್ತರ!
ಉಸಿರು ತಾಕಿದ ಎಡೆಗಳಲ್ಲೆಲ್ಲ
ಹೆಡೆ ಎತ್ತುವ ಸಾವಿನ ನಾಗರ!
ತುಂತುರು ಹನಿಹನಿಗೂ
ಲೇಪಿಸಿದ ವಿಷ
ನಿಜಗುಣಗಳ ಶಾಪ!
ಯಾವೂರ, ಯಾವ ಕೇರಿ
ಹುಡುಕಿ ಹೋಗುವ ಜೀವಗಳಿಗೆ ಯಾವ ದಾರಿ?
ಎಂದಾದರೂ ಯಾರಿಗಾದರೂ ಕೇಳಿಸೀತೆ ಹಸಿವಿನ ಸದ್ದು?
ಭರಪೂರ ನಿದ್ದೆಯಿಂದ ಎದ್ದವರಿಗಷ್ಟೇ ಗೊತ್ತು
ಭರ ತೇಗಿನ ಗುದ್ದು!
ಈಗಲೂ ಹಾಡುವೆ
ಅದೇ ಸೋಜಿಗದ ಹಾಡು
ಮೈಮೇಲೆ ಬರುವ ದೇವರೇ
ಬಂದು ಒಮ್ಮೆ ನೋಡು!
ಮಂಜುನಾಥ್ ಲತಾ
’ಮಂಜುನಾಥ ಲತಾ' ಎಂದು ಬರೆಯುವ ಮಂಜುನಾಥ್ ಎಸ್ ಅವರು ಪತ್ರಿಕೋದ್ಯಮ, ಅಭಿವೃದ್ದಿಪರ ಚಟುವಟಿಕೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಣ್ಣ ಕಥೆಗಳು ಓದುಗರ ಪ್ರೀತಿಗೆ ಪಾತ್ರವಾಗಿವೆ.
ತೆಂಕಲಕೇರಿ, ಕತೆ ಎಂಬ ಇರಿವ ಅಲಗು (ಕಥಾ ಸಂಕಲನಗಳು), ಪರದೇಸಿ ಮಗನ ಪದವು, ಆಹಾ ಅನಿಮಿಷ ಕಾಲ, ಸೋಜಿಗದ ಸೂಜಿ (ಕವನ ಸಂಕಲನಗಳು), ಪಲ್ಲಂಗ (ಕಾದಂಬರಿ), ಮಾತಿನ ಓದು (ಲೇಖನಗಳ ಸಂಗ್ರಹ) ಅವರ ಪ್ರಕಟಿತ ಕೃತಿಗಳು. . ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕುಬಾರಿ ಬಹುಮಾನ ಗಳಿಸಿವೆ.
More About Author