Poem

ನನ್ನ ನಿನ್ನ ಪ್ರೀತಿ ನಮ್ಮೊಳಗೆ ಉಳಿದುಬಿಟ್ಟಿತು

ನನ್ನ ನಿನ್ನ ಈ ಪ್ರೀತಿ
ನನ್ನ ನಿನ್ನ ಒಲವ ಸಂಬಂಧ
ನನ್ನ ನಿನ್ನೊಳಗೆ ಉಳಿದು ಹೋಯಿತು
ಜಗದ ಕಣ್ಣಿಗೆ ನಾವು ಅಪರಿಚಿತರು.

ನಾನು ನೀನು ಮೊದಲು ಭೇಟಿಯಾಗಿದ್ದು
ಬರಿ ಕಣ್ಣುಗಳಿಗೆ ಮಾತ್ರ ಗೊತ್ತು.
ನಮಗೂ ಅರಿಯದೆ , ಅದು ಹೇಗೋ
ಒಂದಾದದ್ದು ಬರಿ ಮನಸ್ಸಿಗೆ ಮಾತ್ರ ಗೊತ್ತು.
ಆದರೂ ಲೋಕದ ಕಣ್ಣಿಗೆ
ನಾವು ಅಪರಿಚಿತರು.

ಜಾತ್ರೆಯ ಆ ಜನಸಂದಣಿಯಲ್ಲಿ
ಕಿರುಬೆರಳು ಹಿಡಿದು ನಡೆದದ್ದು.
ಪಾರ್ಕಿನಲ್ಲಿ ಜೊತೆ ಕೂತು
ಹರಟೆ ಹೊಡೆದದ್ದು
ಹೊಳೆಯ ಅಲೆಗಳಲಿ ತೆಲಾಡಿದ್ದು
ಆ ದಂಡೆಯಲ್ಲಿ ಮರಳು ಗೂಡು ಕಟ್ಟಿದ್ದು
ಎಲ್ಲವೂ ನಮ್ಮೊಳಗೆ ಉಳಿದವು
ಲೋಕದ ಕಣ್ಣಿಗೆ ಯಾವುದೇ ಅನುಮಾನ
ಬರದಂತೆ ಕಾಪಿಟ್ಟುಕೊಂಡೆವು.

ಪ್ರೀತಿ ರಸಿಕತೆಯನ್ನು ಕಲಿಸುತ್ತದೆ
ಹುಚ್ಚು ಧೈರ್ಯವನ್ನು ತುಂಬುತ್ತದೆ.
ಈ ಜಾಗವನ್ನು ಸುಲಭವಾಗಿ ಯಾಮಾರಿಸಬಹುದು
ಎಂಬುದನ್ನು ತೋರಿಸುತ್ತದೆ.

ಎಲ್ಲವೂ ನಾವು ಅಂದುಕೊಂಡಂತೆ
ನಡೆಯುತ್ತದೆ ಎಂದುಕೊಂಡಾಗಲೆ
ಕಾಲದ ಪರಿಧಿಯಲ್ಲಿ ಸಿಲುಕಿ
ನಾನು ನೀನು ಬೇರಾದದ್ದು ಕೂಡ
ನನಗೂ ನಿನಗಷ್ಟೇ ಗೊತ್ತು
ನನ್ನ ನಿನ್ನ ಈ ಪ್ರೀತಿ
ನನ್ನ ನಿನ್ನ ಒಳಗೆ ಬಲು ರಹಸ್ಯವಾಗಿಯೆ
ಉಳಿಯಿತು.
ಆ ವಿರಹದ ವೇದನೆಯು ಕೂಡ
ರಹಸ್ಯವಾಗಿಯೆ ಅನುಭವಿಸಬೇಕು.

- ಶಿವಮನ್ಯು

ವಿಡಿಯೋ
ವಿಡಿಯೋ

ಶಿವಮನ್ಯು ಪಾಟೀಲ

ಲೇಖಕ ಶಿವಮನ್ಯು ಪಾಟೀಲರು ಅವರು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದವರು.  ಎಂಜಿನಿಯರಂಗ್ (ಸಿವಿಲ್) ಪದವೀಧರರು.‘ ಸ್ಕೈ’  ಎಂಜಿನಿಯರ್‍ಸ್ ಕಂಪನಿಯ ಪ್ರಧಾನ ವ್ಯವಸ್ಥಾಪಕರು. ಸಾಹಿತ್ಯಕವಾಗಿಯೂ ತೊಡಗಿಸಿಕೊಂಡಿದ್ದಾರೆ.  

ಕೃತಿಗಳು : ಪ್ರೇಮಾಂಕುರ ( ಕವನ ಸಂಕಲನ ), ಭಾವಾಂಕುರ ( ಕವನ ಸಂಕಲನ ), ನಾಟಕಗಳು: ದ್ರೋಹದ ದೊರೆ, ಆಗಸ್ಥಿಕೆ, ವೇದಾಂತ - ಸಿದ್ದಾಂತ  ಕನ್ನಡ ಹುಲಿ.

ಪ್ರಶಸ್ತಿ-ಪುರಸ್ಕಾರಗಳು:  ದ್ರೋಹದ ದೊರೆ  ನಾಟಕಕ್ಕೆ ಮುಂಬಯಿ ಕನ್ನಡ ಸಂಘದಿಂದ ಮೊದಲ ಪ್ರಶಸ್ತಿ., ಆಗಸ್ಥಿಕೆ ನಾಟಕಕ್ಕೆ ರಂಗಾಂತರಂಗದವರಿಂದ ಉತ್ತಮ ನಾಟಕ ಪ್ರಶಸ್ತಿ., ಬೆಳಕು ಮಾರುವವರು ಕಥೆಗೆ ಕುವೆಂಪು ಕಲಾವೇದಿಕೆ ಮೈಸೂರು ಇವರಿಂದ ಪ್ರಶಸ್ತಿ, ಉಡುಗೊರೆ ಎಂಬ ಕಥೆಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಉತ್ತಮ ಕಥೆಯ ಪ್ರಂಶಸೆ, ಅಲೆಮಾರಿಯ ಬದುಕು ಎಂಬ ಕವನವು ಬೆಂಕಿಯ ಬಲೆ ಪತ್ರಿಕೆಯವರು ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ., ನಿಜ ನಾಯಕ ಎಂಬ ಕವನಕ್ಕೆ ಸುನಂದಾ ಸಾಹಿತ್ಯ ವೇದಿಕೆಯಿಂದ ಪ್ರಥಮ ಬಹುಮಾನ.


 

 

More About Author