ನಿಲ್ದಾಣ ಬಂದಾಗ
ನಾನಿಳಿದು ನನ್ನ ದಾರಿ ಹಿಡಿದೆ
ಚಪ್ಪಲಿ ಸವೆದಾಗ
ಹಿಂದಿರುಗಿ ನೋಡಿದೆ
ಬಲು ದೂರ ಬಂದಿದ್ದೆ
ಈ ನಡೆಗೆ ದಿಕ್ಕು ಇದೆಯೇ?
ಇನ್ನು ತಿಳಿದಿಲ್ಲ ಮನವೆ
ನುಡಿಯಲ್ಲೂ ಅಷ್ಟೆ
ನನ್ನ ಸರದಿ ಬಂದಾಗ
ಎದ್ದು ನಿಂತು ನುಡಿಯಲಾರಂಭಿಸಿದಾಗ
ಆರಂಭಕ್ಕೂ, ಅಂತ್ಯಕ್ಕೂ ಸಂಬಂಧವೇ ಇಲ್ಲ
ಆದರೂ ನನ್ನೊಳಗೊಂದು
ಅಭಿಮಾನ, ಸ್ವಾಭಿಮಾನ
ನಡೆ-ನುಡಿ ನೇರವಾಗಿಯೇ ಇದೆ
ಮೂಕಾಭಿಮಾನಕ್ಕೆ ನಾಂದಿ ಹಾಡಬೇಕಿದೆ
ನಡೆದರೆ, ನುಡಿದರೆ
ದೇವರೇ ಮೆಚ್ಚಬೇಕು
ಬಸವಣ್ಣನ ನುಡಿ
ಮನದಲ್ಲಿ ಅಚ್ಚಳಿಯದೆ ಉಳಿದಿದೆ
ಇಲ್ಲಿನ ದಾರಿಹೋಕ ನಾನು
ನಡೆಯಲೇ ಬೇಕು
ನುಡಿಯಲೇ ಬೇಕು
ಇಲ್ಲಿ ನಡೆದಷ್ಟು-ನುಡಿದೆಷ್ಟು ಪ್ರಯೋಜನವೆಷ್ಟು?
ನನ್ನ ನಡೆ-ನುಡಿಗಳೆಲ್ಲವೂ
ಅನಾವರಣ ಮಾಡುತ್ತಿವೆ
ನನ್ನ ವ್ಯಕ್ತಿತ್ವವನ್ನು
ನಾನು ವಿರಮಿಸುವೆ ನನ್ನ ನಡೆ-ನುಡಿಗೆ
ನಾಂದಿ ಹಾಡಿ ಅಲ್ಲ
ವಿದಾಯ ಹೇಳಿ
ಮತ್ತೆ ನೇರ ನಡೆ ನುಡಿಯ
ದಾರಿ ಹಿಡಿಯಲು...
ಆಮಿರ್ ಬನ್ನೂರು
ಕವಿ ಆಮಿರ್ ಬನ್ನೂರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಕವನ, ಬರವಣಿಗೆ ಹಾಗೂ ಓದು ಅವರ ಆಸಕ್ತಿಕ್ಷೇತ್ರವಾಗಿದೆ. ಪ್ರಸ್ತುತ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಯುವ ಸಂಘಟಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ; ತುಮಕೂರಿನ ಮಾತೃ ಭೂಮಿ ಸೇವಾ ಟ್ರಸ್ಟ್ ವತಿಯಿಂದ ಎ ಪಿ ಜೆ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ.
More About Author