Poem

ಮೋಹನನ ಧ್ಯಾನ 

ಕತೆಗಾರ್ತಿ ಲಕ್ಷ್ಮೀದೇವಿ ಕಮ್ಮಾರ ಅವರು ವೃತ್ತಿಯಿಂದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ, ಪ್ರವೃತ್ತಿಯಿಂದ ಸಾಹಿತ್ಯಾಸಕ್ತರು. ಕಥೆ, ಕವನ, ಲೇಖನ ಬರವಣಿಗೆ, ಓದು ಅವರ ನೆಚ್ಚಿನ ಹವ್ಯಾಸ. ಅವರ ‘ಯಶಸ್ಸಿನ ದಾರಿದೀಪಗಳು’ ಕೃತಿಗೆ ವೆಂಕಟರಾಮಯ್ಯ ಶ್ರೀನಿವಾಸ್ ರಾವ್ ದತ್ತಿ ಪ್ರಶಸ್ತಿ ಸಂದಿದೆ. ಅವರ ‘ಮೋಹನನ ಧ್ಯಾನ’ ಕವಿತೆ ಇಲ್ಲಿದೆ.

ನಿನ್ನೂರಿನ ಹಾದಿಬೀದಿಯಲಿ ಹಾದುಹೋಗುವಾಗೆಲ್ಲ
ಕಾಡುವದು ನಿನ್ನ ನೆನಪು

ತಂಗಾಳಿ ಬೀಸಿ ಮೈಸೋಕಿದಾಗೆಲ್ಲ
ಕಾಡುವದು ನಿನ್ನ ಸ್ನಿಗ್ಧ ನಗುವಿನ ನೆನಪು

ಮಳೆ ಸುರಿವ ವೇಳೆಯಲಿ
ಹೊಳೆಸಾಲಿನಲಿ ಸುಳಿಯುವಾಗೆಲ್ಲ
ಮೈಮನಗಳಲಿ ಮಿಂಚು ಹರಿಸಿದ ಸಂಚುಗಾರನ ನೆನಪು

ಕೊಳಲಗಾನ ಕೇಳಿದಾಗ
ದನಕರುಗಳು ಸಾಗುವಾಗ
ನವಿಲು ನೃತ್ಯಗೈಯ್ಯುವಾಗ
ಚೆಲುವೆ ಒಲವು ಗೆಲುವು ಮೇಳೈಸಿದಾಗೆಲ್ಲ
ಮೋಹನನ ಮೋಡಿಯ ನೆನಪು

ದಟ್ಟವಾಗಿ ಕಾಡಿದಾಗ ನಿನ್ನ ನೆನಪು
ತಟ್ಟನೆ ರಾಧೆ ಎಂಬ ಕೂಗು
ಗಕ್ಕನೆ ಹಿಂತಿರುಗಿ ನೋಡಿದರೆ
ಗಟ್ಟಿಯಾಗಿ ನಿಂತಿರುವ ಶ್ಯಾಮನೆಂಬ ಸವಿ ನೆನಪು

ಆದರೂ ನಂಬಿಕೆ ಬರದು ನನಗೆ
ನೆನಪು ಕಾಡಿದಾಗೆಲ್ಲ ಎದುರಿಗೆ
ಕಾಣುವವರೆಲ್ಲ ಮಾಧವನಂತೆ
ಯಾರೆ ಕರೆದರು ಅವನದೇ ಧ್ವನಿಯಂತೆ
ನನ್ನ ಸ್ಥಿತಿ ಕಂಡು ಮುಗಳ್ನಕ್ಕು ಮೈದಡುವನು
ಮರೆತಂತೆ ಎಲ್ಲ ಚಿಂತೆ

ಕಲಾಕೃತಿ : ಎಂ. ಬಿ. ಪಾಟೀಲ್‌

ಲಕ್ಷ್ಮೀದೇವಿ ಕಮ್ಮಾರ (ಪತ್ತಾರ)

ಕತೆಗಾರ್ತಿ ಲಕ್ಷ್ಮೀದೇವಿ ಕಮ್ಮಾರ (ಪತ್ತಾರ) ಅವರು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ. ಯಶಸ್ಸಿನ ದಾರಿದೀಪಗಳು (ಕಥಾ ಸಂಕಲನ-ವೆಂಕಟರಾಮಯ್ಯ ಶ್ರೀನಿವಾಸ್ ರಾವ್ ದತ್ತಿ ಪ್ರಶಸ್ತಿ ಪುರಸ್ಕೃತ ಕೃತಿ) ಕತ್ತಲೆಗಂಟಿದ ಬೆಳಕು:ಈ ಕವನ ಸಂಕಲನಕ್ಕೆ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ (2017) ಲಭಿಸಿದೆ. ಅವರ ಹಲವು ಕವನ, ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಬಸವಚೇತನ ಪ್ರಶಸ್ತಿ ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ. ಟೈಮ್ಸ್ ಆಫ್ ಇಂಡಿಯಾದವರ ಟಾಫಿಟ್ ಅವಾರ್ಡ್(ಶಿಕ್ಷಣಕ್ಕಾಗಿ)2018-19, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ(2019) ಲಭಿಸಿವೆ.

More About Author