Poem

ಮನಸ್ಸಿಲ್ಲದವರು

ಮನಸೊಂದಿದ್ದರೆ ಅವರಲ್ಲಿ
ಲಯಬದ್ಧ ಸ್ವರ
ಎಬ್ಬಿಸಬಹುದಿತ್ತು
ಬಿದಿರಿನ ಕೊರಡು
ಸುಶ್ರಾವ್ಯ ಗಾನವಾದಂತೆ

ಬನದೊಳು ಹೊಕ್ಕು
ಕಡಿದ ಬಿದಿರು
ಕೊಳಲಾಗಿ
ಸ್ವರಗಳೆದುರು ತಲೆಬಾಗಿ
ಯಾರದೋ 'ಕರ'ಕರೆಗೆ
ಇನ್ನಾರೋ ಗಾನವಾದಾಗಲೂ...

ಗಾನವಾಗುತ್ತಿಲ್ಲ ಅವರು
ಕೊಳಲಾಗುತ್ತಿದ್ದಾರೆ

ಮನಸೊಂದಿದ್ದರೆ ಅವರಲ್ಲಿ
ಬೆಳಕನ್ನು ಚೆಲ್ಲಬಹುದಿತ್ತು
ಹಣತೆ ದೀಪ ಕಗ್ಗತ್ತಲನ್ನು
ಒದ್ದೋಡಿಸಿದಂತೆ

ಮಣ್ಣೂಳಗಿನ ಮಡ್ಡಿ
ದೀಪಿಕೆಯಾಗಿ
ಇರುಳಿನ ಕರುಳನ್ನೇ ಬಗೆದು
ಯಾರದೋ ಕತ್ತಲೆಗೆ
ಇನ್ನಾರೋ ಬೆಳಕಾದಾಗಲೂ...

ಬೆಳಕಾಗುತ್ತಿಲ್ಲ ಅವರು
ಹಣತೆಯಾಗುತ್ತಿದ್ದಾರೆ.

- ದಿನೇಶ್ ಹೊಳ್ಳ

ದಿನೇಶ್ ಹೊಳ್ಳ

ದಿನೇಶ್ ಹೊಳ್ಳ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪಿನವರು. ಪರಿಸರ ಪ್ರೇಮಿ. ಗಾಳಿಪಟ ರಚನೆಕಾರ, ಸಾಹಿತಿ, ರೇಖಾಚಿತ್ರಕಾರ, ವಿಮರ್ಶಕ, ಛಾಯಾಚಿತ್ರಕಾರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೊಡಂಕಾಪುವಿನ ಇನ್ಪೆಂಟ್ ಜೀಸಸ್ ಸ್ಕೂಲ್ ನಲ್ಲಿ ಹಾಗೂ ದೀಪಿಕಾ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು ಪಡೆದಿರುತ್ತಾರೆ. ಪಿಯುಸಿ ಶಿಕ್ಷಣದ ಬಳಿಕ ಸುಂಕದ ಕಟ್ಟೆಯ ಎಸ್.ಎಂ.ಎಸ್ ಪಾಲಿಟೆಕ್ನಿಕ್ ನಲ್ಲಿ ತಾಂತ್ರಿಕ ಶಿಕ್ಷಣ ಪೂರೈಸಿದ್ದಾರೆ. 1989ರಲ್ಲಿ “ಮೇಷಾ ಗ್ರಾಫಿಕ್ಸ್” ಸಂಸ್ಥೆಯನ್ನು ಆರಂಭಿಸಿ, ಕಳೆದ 32 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಕೃತಿಗಳು : ಬೆಟ್ಟದ ಹೆಜ್ಜೆಗಳು

More About Author