Poem

ಕುರ್ಬಾನಿಯಾಗಿದೆ

ಮುಂಜಾನೆಯ ಅಝಾನ್ ಆಹ್ವಾನಕ್ಕೆ
ಸುಖ ನಿದ್ದೆಯ ತೊರೆದು
ಕಾಣುತ್ತಿರುವ ಕನಸ ಮುರಿದು
ಮೆತ್ತಗಿನ ಹಾಸಿಗೆ ಬಿಟ್ಟು
ಅಲ್ಲಾನ ಭಕ್ತಿಗೆ ಭಕ್ತನಾಗಿ
ನಸುಕಿನ ನಿದ್ದೆಯ ಕುರ್ಬಾನಿಯಾಗಿದೆ ||

ದುನಿಯಾದಲ್ಲಿ ನೂರಾರು ನೋವುಗಳು
ನಸುಕಿ ನಲಿಯುತ್ತಿರುವ ಮನಸುಗಳು
ಧರ್ಮ ಹೇಳದ ತಪ್ಪು ದಾರಿ ಹಿಡಿದು
ರಾಜಕೀಯ ಆಶ್ರಯ ಪಡೆದು
ಅಲ್ಲಾನ ಹೆಸರಿನಲ್ಲಿ ದಂಗೆ ಮಾಡಿ
ಮಾನವೀಯತೆಯ ಕುರ್ಬಾನಿಯಾಗಿದೆ ||

ಶಾಲಾ ಅಂಗಳದಲ್ಲಿ ಮುಗ್ಧ ಮನಸ್ಸುಗಳು
ಸ್ವಾರ್ಥವಿಲ್ಲದ ಹೃದಯಗಳು
ಲೋಕದ ಅರಿವಿಲ್ಲದ ವಿದ್ಯಾರ್ಥಿಗಳು
ಧರ್ಮದ ಮಾರ್ಗ ತೋರಿ
ಮನಸ್ಸುಗಳಿಗೆ ವಿಷ ಬಿತ್ತಿ
ವಿದ್ಯಾ ದೇವತೆಯ ಮರೆಸಿ
ಜ್ಞಾನದ ಕುರ್ಬಾನಿ ಯಾಗಿದೆ ||

ಅಲ್ಲಾನ ಅನುಗ್ರಹದಿಂದ ದೊರೆತ
ಶ್ರೇಷ್ಠ ಪ್ರಸಾದವನ್ನು
ಬಡವರಿಗೆ ನೀಡದೆ
ತಾನೊಬ್ಬನೇ ಸುಖ ಪಡೆದು
ಆಸೆಗಳನ್ನು ಮೈತುಂಬಿಕೊಂಡು
ಪ್ರಸಾದವ ಹಂಚಿ ಖುಷಿಪಡದೆ
ಸಮಾನತೆಯ ಕುರ್ಬಾನಿಯಾಗಿದೆ ||

ಜಗತ್ತಿನಲ್ಲಿ ಸುಖದ ಸ್ವರ್ಗವ
ಮಾನವನಿಗಾಗಿ ಸೃಷ್ಟಿಸಿ
ಲೋಕದ ನೋವುಗಳನ್ನೆಲ್ಲಾ
ತನ್ನ ಕೃಪೆಯಿಂದ ಬಗೆಹರಿಸಿ
ಮಾನವೀಯತೆಯನ್ನು ಮುಗ್ಧ
ಮನಸ್ಸುಗಳಿಗೆ ತುಂಬಿದ
ಅಲ್ಲಾನ ಕುರ್ಬಾನಿಯಾಗಿದೆ ||

ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.

ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು.

ಪ್ರಶಸ್ತಿ-ಪುರಸ್ಕಾರಗಳು:  ಕಾವ್ಯಶ್ರೀ ಪ್ರಶಸ್ತಿ

More About Author