Story

ಕೋಟಿನ ಗುಂಡಿ !

‘ಹಿಟ್ಟಿನ ಗಿರಣಿ ಕಿಟ್ಟಪ್ಪ, ತೊರೆದ ಗೂಡು , ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು, ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ’ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಲೇಖಕ ಶರಣಗೌಡ ಬಿ. ಪಾಟೀಲ ತಿಳಗೊಳ ಅವರ ' ಕೋಟಿನ ಗುಂಡಿ' ಕತೆ ನಿಮ್ಮ ಓದಿಗಾಗಿ...
ಅದು ಮಾರ್ಕೆಟ್ ಪ್ರದೇಶ ಎಲ್ಲಿ ನೋಡಿದಲ್ಲಿ ಜನವೋ ಜನ , ಅವರು ಅಗತ್ಯ ವಸ್ತು ಖರೀದಿಯಲ್ಲಿ ತೊಡಗಿದ್ದರು . ವರ್ಷದ ದೊಡ್ಡ ಹಬ್ಬ ಇನ್ನೂ ಎರಡೇ ದಿನ ಬಾಕಿ ಉಳಿದಿತ್ತು ನಗರದ ಜನರಲ್ಲದೆ ಹಳ್ಳಿಯ ಜನ ಕೂಡ ಖರೀದಿಗೆ ಮುಗಿ ಬಿದ್ದಿದ್ದರು ಅದಕ್ಕಾಗಿ ಆ ಪ್ರದೇಶ ಜನಸಾಗರವಾಗಿ ಮಾರ್ಪಟ್ಟಿತ್ತು. ಅಕ್ಕ ಪಕ್ಕ ಅಲ್ಲದೆ ರಸ್ತೆಯ ಮೇಲೂ ಮಾರುವವರ ಕೊಳ್ಳುವವರ ಮಧ್ಯೆ ಚೌಕಾಶಿ ವ್ಯಾಪಾರದ ಭರಾಟೆ , ಗದ್ದಲ ಗೊಂದಲ ಮುಂದುವರೆದಿತ್ತು. ಖರೀದಿಗೆ ತೊಂದರೆಯಾಗದಿರಲಿ ಅಂತ ವಹಾನ ಸಂಚಾರ ಅಲ್ಲಿಂದ ನಿಷೇಧಿಸಿ ಬೇರೆ ಕಡೆಯಿಂದ ವ್ಯವಸ್ಥೆ ಮಾಡಲಾಗಿತ್ತು. ಗೌರಮ್ಮ ಮನೆಗೆಲಸ ಮುಗಿಸಿ ಹಬ್ಬದ ವಸ್ತುಗಳ ಖರೀದಿಗೆ ಮಾರ್ಕೆಟಿಗೆ ಹೋಗಲು ನಿರ್ಧರಿಸಿದಳು. ನಾನು ನಿನ್ನ ಜೊತೆ ಬರ್ತೀನಿ ನನಗೂ ಕರೆದುಕೊಂಡು ಹೋಗು ಅಂತ ಇವಳ ಎಂಟು ವರ್ಷದ ಮಗ ವೀರೂ ಒಂದೇ ಸವನೆ ಹಠ ಮಾಡಿ ಅಳತೊಡಗಿದ. ಅಲ್ಲಿ ಗದ್ದಲ ಬಹಳ ಇರ್ತಾದೆ ಅದು ನಮ್ಮಂಗ ಸಣ್ಣ ಊರಲ್ಲ . ನೀನು ಅಲ್ಲಿಗೆ ಬರೋದು ಬೇಡ ಸುಮ್ಮನೆ ಅಕ್ಕನ ಜೊತೆ ಆಟಾ ಆಡ್ತಾ ಮನ್ಯಾಗ ಇದ್ದು ಬಿಡು. ನಿನಗ ಏನೇನು ಬೇಕೊ ಅದೆಲ್ಲಾ ತಂದುಕೊಡ್ತೀನಿ ಅಂತ ಗೌರಮ್ಮ ಪರಿ ಪರಿಯಾಗಿ ಹೇಳಿದರು . ಮಗು ಕೇಳದೇ ತನ್ನ ಹಠ ಮುಂದುವರೆಸಿದ. ಸಣ್ಣ ಮಕ್ಕಳು ಗದ್ದಲದಾಗ ಕಳೆದು ಹೋಗತಾರೆ, ಕಳ್ಳರು ಮಕ್ಕಳಿಗೆ ಹಿಡಕೊಂಡು ಹೋಗಿ ಮಾರಾಟ ಮಾಡ್ತಾರೆ. ನಿನಗೂ ಹಿಡಕೊಂಡು ಹೋಗಿ ಮಾರಾಟ ಮಾಡಿದರೆ ಏನ್ಮಾಡತಿ? ನೀನು ನಮಗಿರೋನು ಒಬ್ಬನೇ ಮಗ ಅಂತ ಗೌರಮ್ಮ ಹೆದರಿಸಲು ಮುಂದಾದಳು.
ಅಮ್ಮನ ಮಾತಿಗೆ ವೀರೂ ಹೆದರದೆ ತನ್ನ ಪಟ್ಟು ಸಡಿಲಿಸಲಿಲ್ಲ. ಮಗನಿಗೆ ಹೇಗೆ ಸಮಾಧಾನ ಮಾಡುವದು? ಅಂತ ಗೌರಮ್ಮಳಿಗೆ ತೋಚದಂತಾಯಿತು. ಏ ಅಮ್ಮ ವೀರೂ ಹೇಳಿದ ಮಾತು ಕೇಳೋದಿಲ್ಲ ಮೊಂಡುತನ ಮಾಡ್ತಾನೆ ಸುಮ್ಮನೆ ಜೊತೆಗೆ ಕರೆದುಕೊಂಡು ಹೋಗು, ಹೆಂಗೂ ಇವನಿಗೆ ಬಸ್ಸಿನ್ಯಾಗ ರೊಕ್ಕಾ ತೊಗೊಳ್ಳೊದಿಲ್ಲ ಅಂತ ಲಕ್ಷ್ಮಿ ಅಮ್ಮನಿಗೆ ಸಲಹೆ ನೀಡಿದಳು. ಇವನು ಮೊದಲೇ ತುಂಟ ಇಂಥವನಿಗೆ ಕರಕೊಂಡು ಹೋದರೆ ಸಾಮಾನು ಖರೀದಿ ಮಾಡಲು ಆಗ್ತಾದೇನು? ಮಾರ್ಕೆಟದಾಗ ಅದು ಬೇಕು ಇದು ಬೇಕು ಅಂತ ಹಠ ಮಾಡಿದರೆ ಏನ್ಮಾಡಲಿ ಅಂತ ಬೇಸರ ವ್ಯಕ್ತಪಡಿಸಿದಳು. ಇವನು ಮನ್ಯಾಗ ಇದ್ದರು ತುಂಟತನ ಮಾಡ್ತಾನೆ ಜೊತೆಗೆ ಬಂದರೂ ಮಾಡ್ತಾನೆ ಇವನ ಸ್ವಭಾವಕ್ಕೆ ಏನು ಮಾಡೋದು ಅಂತ ಲಕ್ಷ್ಮಿ ಸಮಜಾಯಿಷಿ ನೀಡಲು ಮುಂದಾದಳು. ಅದೇ ಸಮಯ ಪಕ್ಕದ ಮನೆ ಪದ್ಮವತಿ ಹಾಜರಾಗಿ ಎಲ್ಲಿಗೆ ಹೋಗ್ತಿ ಗೌರಮ್ಮ ಅಂತ ಪ್ರಶ್ನಿಸಿದಳು. ಹಬ್ಬದ ಸಾಮಾನು ತರಲು ಮಾರ್ಕೆಟಿಗಿ ಹೋಗ್ತಿದ್ದೀನಿ ಆದರೆ ಇವನು ಬರ್ತೀನಿ ಅಂತ ಹಠ ಮಾಡ್ತಿದ್ದಾನೆ. ಒಂದೂ ತಿಳಿತಿಲ್ಲ ಎಂದಳು.
ಮಕ್ಕಳು ಹಂಗೇ ಮಾಡ್ತಾರೆ ಊರ ಎಂದರೆ ಸಾಕು ಅದೇನು ಖುಷಿನೊ ಏನೋ ? ಹೋದ ವಾರ ಮಾರ್ಕೆಟಿಗೆ ಹೋಗಿ ನಾನೂ ಹಬ್ಬದ ಸಾಮಾನು ತೊಗೊಂಡು ಬಂದೆ ಜೊತೆಗೆ ಚಂದ್ರುಗ ಬಟ್ಟೆನೂ ತಂದೆ ಆದರೆ ಅವು ಮೈಅಳತೆ ಬರ್ತಿಲ್ಲ . ಜೊತೆಗೆ ಕರೆದುಕೊಂಡು ಹೋಗಿ ತಂದಿದ್ದರೆ ಹಿಂಗಾಗ್ತಿರಲಿಲ್ಲ . ಈಗ ಬದಲಾಯಿಸಿ ಬೇರೆ ಬಟ್ಟೆ ತರಬೇಕಾಗಿದೆ ಅಂತ ಬೇಸರ ಹೊರ ಹಾಕಿದಳು. ಅವಳ ಮಾತು ಗೌರಮ್ಮಳಿಗೆ ಕ್ಛಣ ಕಾಲ ಯೋಚಿಸುವಂತೆ ಮಾಡಿತು. ನಾನೂ ವೀರೂಗ ಬಟ್ಟೆ ತರೋದಿದೆ ಜೊತೆ ಕರೆದುಕೊಂಡು ಹೋಗಿ ತರದಿದ್ದರೆ ಅಳತೆ ಹೆಚ್ಚು ಕಮ್ಮಿ ಆಗಬಹುದು ಮತ್ತೆ ಯಾರು ಹೋಗಿ ವಾಪಸ್ ಕೊಟ್ಟು ಬರಬೇಕು ? ಅಂತ ಯೋಚಿಸಿದಳು. ಏ ಲಕ್ಷ್ಮಿ ತಮ್ಮನಿಗೆ ಬಟ್ಟೆ ಹಾಕಿ ತಯಾರು ಮಾಡು ಕರೆದುಕೊಂಡು ಹೋಗ್ತೀನಿ ಅಂತ ಗೌರಮ್ಮ ಮಗಳಿಗೆ ಆಜ್ಞಾಪಿಸಿದಳು. ತನಗೆ ಅಮ್ಮ ಕರೆದುಕೊಂಡು ಹೋಗೇ ಹೋಗ್ತಾಳೆ ಅಂತ ವೀರೂಗ ಗೊತ್ತಾದ ಕೂಡಲೆ ತಕ್ಷಣ ಅಲ್ಲಿಂದ ಜಾಗಾ ಖಾಲಿ ಮಾಡಿ ಹೊರಗಡೆ ಹೋಗಿ ನಿಂತುಕೊಂಡ.
ವೀರೂ ನಿನಗೆ ಅಮ್ಮ ಕರೆದುಕೊಂಡು ಹೋಗ್ತಾಳಂತೆ ಬಾ ಬಟ್ಟೆ ಹಾಕೊಂಡು ತಯಾರಾಗು ಅಂತ ಲಕ್ಷ್ಮಿ ಇವನ ಹತ್ತಿರ ಬಂದು ಒತ್ತಾಯಿಸಿದಳು. ನಾನು ಅಮ್ಮನ ಜೊತೆ ಹೋಗಲ್ಲ ಇಲ್ಲೇ ನಿನ್ನ ಜೊತೆ ಆಟಾ ಆಡ್ತಾ ಇರ್ತೀನಿ ಅಂತ ವೀರೂ ಹೊಸ ನಾಟಕ ಶುರು ಮಾಡಿದ. ಇಷ್ಟು ಹೊತ್ತು ಹೋಗತೀನಿ ಅಂತ ಹಠ ಮಾಡತಿದ್ದೆ ಈಗ ಒಲ್ಲೆ ಅಂತಿಯಲ್ಲೋ ಅಂತ ಲಕ್ಷ್ಮಿ ಒತ್ತಾಯ ಮಾಡಿ ಅಮ್ಮನ ಮುಂದೆ ತಂದು ನಿಲ್ಲಿಸಿದಳು. ಇವನು ಯಾವಾಗಲೂ ಹೀಗೆ ಇವನ ಸ್ವಭಾವ ಯಾವಾಗ ಬದಲಾಗ್ತಾದೊ ಏನೋ? ಬರಬೇಡ ಅಂದ್ರೆ ಬರ್ತೀನಿ ಅಂತಾನೆ ಬಾ ಎಂದರೆ ಒಲ್ಲೆ ಅಂತಾನೆ ಅಂತ ಗೌರಮ್ಮ ಬೈದು ಮದ್ಯಾಹ್ನ ಬಸ್ಸಿಗೆ ಗೌರಮ್ಮ ಇವನಿಗೆ ಕರೆದುಕೊಂಡು ಮಾರ್ಕೆಟಿಗೆ ಬಂದಳು. ಇಲ್ಲಿಯ ಗದ್ದಲ ಗಾಬರಿ ತರಿಸಿತು. ಊರಿಗೆ ವಾಪಸ್ ಹೋಗುವ ತನಕ ನೀನು ನನ್ನ ಕೈ ಬಿಡಬೇಡ ಅಂತ ಮಗನಿಗೆ ಖಡಕ್ಕಾಗಿ ತಾಕೀತು ಮಾಡಿದಳು. ವೀರೂ ಹ್ಞೂಂ ಅಂತ ತಲೆಯಾಡಿಸಿದ . ಯಾವ ಕಡೆ ಹೋಗಬೇಕು ಅಂತ ಯೋಚಿಸಿ ನಿಂತಾಗ ಏ ಗೌರಮ್ಮ ನೀನ್ಯಾವಾಗ ಬಂದೆ ಅಂತ ಭಾಗಮ್ಮ ಎದುರಾಗಿ ಪ್ರಶ್ನಿಸಿದಳು . ಈಗ ತಾನೆ ಬಂದೆ ನೀನ್ಯಾವಾಗ ಬಂದೆ ಅಂತ ಇವಳೂ ಆಶ್ಚರ್ಯದಿಂದ ಪ್ರಶ್ನಿಸಿದಳು. ನಾನು ಮುಂಜಾನೆ ಬಸ್ಸಿಗೆ ಬಂದೆ ಎಲ್ಲಾ ಸಾಮಾನು ಖರೀದಿ ಮಾಡಿದ್ದಾಯಿತು ಈಗ ವಾಪಸ್ ಊರಿಗೆ ಹೋಗತಿದ್ದೀನಿ ಅಂತ ಪದ್ಮಾವತಿ ಹೇಳಿದಾಗ ಸೂರ್ಯ ತಲೀಮ್ಯಾಲ ಬಂದರೂ ಮಾರ್ಕೆಟದಾಗ ಜನ ಕಡಿಮೆ ಆಗ್ತಿಲ್ಲ ಇಂತಹ ಗದ್ದಲದಾಗ ನಾನು ಹ್ಯಾಂಗ ಖರೀದಿ ಮಾಡಬೇಕೊ ಗೊತ್ತಾಗ್ತಿಲ್ಲ ಅಂತ ಗೌರಮ್ಮ ಗಾಬರಿ ಹೊರ ಹಾಕಿದಳು. ಹಬ್ಬ ಮುಗಿಯುವ ತನಕ ಮಾರ್ಕೆಟದಾಗ ಜನ ಕಡಿಮೆ ಆಗೋದಿಲ್ಲ. ನೀನು ವಾಪಸ್ ಮನೆ ಸೇರಬೇಕಾದರೆ ರಾತ್ರಿ ಆಗ್ತಾದೆ. ಗದ್ದಲ ಗೊತ್ತಿದ್ದರೂ ಇವನಿಗೆ ಯಾಕೆ ಕರಕೊಂಡು ಬಂದೆ? ಅಂತ ಪ್ರಶ್ನಿಸಿದಳು. ಇವನಿಗೆ ಬಟ್ಟೆ ತೊಗೊಳ್ಳಬೇಕಾಗಿತ್ತು ಅದಕ್ಕೆ ಕರಕೊಂಡು ಬಂದೆ. ಇಲ್ಲದಿದ್ದರೆ ನಾನೆಲ್ಲಿ ಕರೆದುಕೊಂಡು ಬರ್ತಿದ್ದೆ ಎಂದಾಗ ಹುಶಾರು ಗದ್ದಲ ಬಹಳ ಇದೆ ಅಂತ ಎಚ್ಚರಿಸಿ ಹೊರಟು ಹೋದಳು. ಗೌರಮ್ಮ ಮಗನ ಕೈ ಗಟ್ಟಿಯಾಗಿ ಹಿಡಿದು ಮುಂದೆ ಸಾಗಿದಳು. ವೀರೂ ಆ ಕಡೆ ಈ ಕಡೆ ಕುತೂಹಲದಿಂದ ನೋಡುತ್ತಾ ಹೊರಟ.
ಕೆಲವು ಅಂಗಡಿಗಳಲ್ಲಿ ಆಟಿಕೆ ಸಾಮಾನು ಕಾಣುತಿದ್ದವು ಅವು ಇವನಿಗೆ ಬಹುವಾಗಿ ಆಕರ್ಷಿಸಿದವು. ಕೆಲ ಅಂಗಡಿಗಳಲ್ಲಿ ತೂಗು ಹಾಕಿದ ಆಟಿಕೆ ನೋಡಿ ತೆಗೆದುಕೊಳ್ಳುವ ಆಸೆ ಮೂಡಿತು . ಅಮ್ಮ ಕೊಡಿಸುವದಿಲ್ಲ ಅಂತ ಗೊತ್ತಾಗಿ ಸುಮ್ಮನಾದ. ಅತ್ತ ಇತ್ತ ಹೊರಳಲು ಕೂಡ ಗೌರಮ್ಮ ಇವನಿಗೆ ಅವಕಾಶ ಕೊಡಲಿಲ್ಲ. ಇವಳು ತನ್ನ ಎಡಗೈ ಸಂಪೂರ್ಣ ಮಗನಿಗೇ ಮೀಸಲಿಟ್ಟಿದ್ದಳು. ಸಮಯ ಕಳೆದಂತೆ ಮಾರ್ಕೆಟಿನಲ್ಲಿ ಜನರ ಗದ್ದಲ ಗೊಂದಲ ಮತ್ತಷ್ಟು ಜಾಸ್ತಿಯಾಯಿತು. ಅಷ್ಟರಲ್ಲಿ ವೀರೂ ಇವಳ ಕೈಯಿಂದ ಕೊಸರಿಕೊಂಡು ಹೋದದ್ದು ಗೌರಮ್ಮಳಿಗೆ ಗೊತ್ತೇ ಆಗಲಿಲ್ಲ. ಒಂದು ದೊಡ್ಡ ಬಟ್ಟೆ ಅಂಗಡಿ ಮುಂದೆ ನಿಂತು ಇಲ್ಲೇ ನಿನಗೆ ಬಟ್ಟೆ ಖರೀದಿ ಮಾಡೋಣ ಛೊಲೊ ಬಟ್ಟೆ ಸಿಗ್ತಾವೆ ಆಮೇಲೆ ಊರಿಗೆ ಹೋಗಿ ಬಿಡೋಣ ಎಂದಾಗ ವೀರೂನಿಂದ ಯಾವ ಪ್ರತಿಕ್ರಿಯೆ ಬರಲಿಲ್ಲ. ತನ್ನ ಎಡಗೈ ಕಡೆ ದೃಷ್ಟಿ ಹಾಯಿಸಿ ನೋಡಿದಾಗ ವೀರೂ ಕಾಣಲಿಲ್ಲ ಅರೇ ವೀರೂ ಎಲ್ಲಿ ಹೋದ ಅಂತ ಗಾಬರಿಯಾಗಿ ಜೋರಾಗಿ ಕೂಗಲು ಆರಂಭಿಸಿದಳು. ಗೌರಮ್ಮಳ ಕೂಗಾಟ ನೋಡಿ ಜನ ಸುತ್ತುವರೆದು ಏನಾಯಿತು ? ಅಂತ ಪ್ರಶ್ನಿಸತೊಡಗಿದರು. ನನ್ನ ಮಗ ಕಾಣಸ್ತಿಲ್ಲ ಇಷ್ಟು ಹೊತ್ತು ನನ್ನ ಬೆರಳು ಹಿಡಿದು ಜೊತೆನೇ ಇದ್ದ ಅವನು ಗದ್ದಲದಾಗ ಕಳೆದು ಹೋದರೆ ಏನ್ಮಾಡಲಿ ಅಂತ ಕಣ್ಣೀರು ತೆಗೆದಳು. ಮಾರ್ಕೆಟಿಗೆ ಯಾರಾದರೂ ಮಕ್ಕಳಿಗೆ ಕರೆದುಕೊಂಡು ಬರ್ತಾರಾ? . ಸಣ್ಣ ಮಕ್ಕಳು ಇಂತಹ ಗದ್ದಲದಾಗೇ ಕಳೆದು ಹೋಗ್ತಾರೆ ಅಂತ ಜನ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡಿದರು. ಅವರ ಮಾತು ಗೌರಮ್ಮಳಿಗೆ ಬಾಣಿನಂತೆ ತಾಗಿ ಮನಸ್ಸಿಗೆ ಗಾಯಗೊಳಿಸಿದವು. ಮಗನಿಗೆ ಈಗ ಎಲ್ಲಿ ಹುಡಕೋದು? ಯಾರಿಗೆ ಕೇಳೋದು ? ಅಂತ ಗೊತ್ತಾಗದೆ ಕಕ್ಕಾಬಿಕ್ಕಿಯಾಗಿ ನಿಂತಳು. ಇವಳ ಕೈಯಿಂದ ಕೊಸರಿಕೊಂಡು ಹೋದ ವೀರೂ ಪುನಃ ಕೈ ಹಿಡಿಯಲು ಬಂದಾಗ ಇವಳು ಕಾಣದೆ ಆತ ಕೂಡ ಗಾಬರಿಯಾದ. ನಾನು ಅಮ್ಮನ ಕೈ ಬಿಟ್ಟು ತಪ್ಪು ಮಾಡಿದೆ ಅವಳೀಗ ಎಲ್ಲಿದ್ದಾಳೊ ಏನೋ ನನಗೆ ಬಿಟ್ಟು ಹೋದರೆ ಏನ್ಮಾಡಲಿ , ಅವಳಿಗೆ ಎಲ್ಲಿ ಹುಡಕಲಿ ಅಂತ ಒಂದೇ ಸವನೆ ಅಳತೊಡಗಿದ. ಜನ ಸುತ್ತುವರೆದು ನಿನ್ನ ಅಮ್ಮ ಇಲ್ಲೇ ಎಲ್ಲಿಯಾದರು ಇದ್ದಿರಬೇಕು ನಿನಗೆ ಹುಡುಕಿಕೊಂಡು ಬಂದೇ ಬರ್ತಾಳೆ ಅಳಬೇಡ ಸುಮ್ಮನಿರು ಅಂತ ಸಮಾಧಾನ ಹೇಳಿದರು. ಸುಮಾರು ಹೊತ್ತು ಕಳೆದು ಹೋಯಿತು. ಇತ್ತ ವೀರೂನ ಆತಂಕ ಹೆಚ್ಚಾದರೆ ಅತ್ತ ಗೌರಮ್ಮಳ ಆತಂಕವೂ ಹೆಚ್ಚಾಯಿತು.
ಸೂರ್ಯ ತನ್ನ ಕೆಲಸ ಮುಗಿಸಿ ಆಕಾಶದಂಚಿನಲಿ ಮರೆಯಾದ ನಿಧಾನವಾಗಿ ಕತ್ತಲೆ ಆವರಿಸತೊಡಗಿತು. ಜನರ ಗದ್ದಲ ಸ್ವಲ್ಪ ಮಟ್ಟಿಗೆ ಕಡಿಮೆಯಾಗತೊಡಗಿತು. ಗೌರಮ್ಮಳ ಆತಂಕ ಮಾತ್ರ ಕಡಿಮೆಯಾಗಲಿಲ್ಲ. ಬೀದಿ ದೀಪ ಪ್ರಜ್ವಲಿಸಿದರು ರಸ್ತೆಯ ಕೊನೆಯ ಅಂಚಿನ ತನಕ ಗೌರಮ್ಮ ದೃಷ್ಟಿ ಹಾಯಿಸಿ ಮಗನಿಗಾಗಿ ಕಾಯುತ್ತಿದ್ದಳು. .ಸ್ವಲ್ಪ ಹೊತ್ತಿನ ನಂತರ ಪೋಲೀಸರು ವೀರೂನ ಕೈ ಹಿಡಿದು ಕರೆದುಕೊಂಡು ಬಂದರು. ಮಗನಿಗೆ ನೋಡಿ ಒಮ್ಮೆಲೆ ಇವಳ ದುಃಖ ಪ್ರೀತಿ ಎರಡೂ ಉಕ್ಕಿ ಬಂದವು. ತನ್ನ ಹೋದ ಜೀವ ಮತ್ತೆ ಬಂದಂತಾಯಿತು. ಇನ್ನೊಂದು ಸಾರಿ ನಿನಗೆ ಎಲ್ಲಿಗೂ ಕರೆದುಕೊಂಡು ಹೋಗಬಾರದು . ಸರಿಯಾಗಿ ಪಾಠ ಕಲಿಸಿದೆ, ನಡೆ ಮನೆಗೆ ಅಂತ ಬೈದು ಊರಿಗೆ ಕರೆದುಕೊಂಡು ಬಂದಳು. ವೀರೂ ಮಾರ್ಕೆಟಿನಲ್ಲಿ ಕಳೆದ ಹೋದ ವಿಷಯ ಆಗಲೇ ಊರ ತುಂಬಾ ಸುದ್ದಿ ಹಬ್ಬಿತ್ತು ಜನ ಇವರ ಮನೆಯ ಮುಂದೆ ಜಮಾಯಿಸಿ ಪರಸ್ಪರ ಚರ್ಚಿಸುತಿದ್ದರು. ಗೌರಮ್ಮ ಮನೆಗೆ ಬರುತ್ತಲೇ ಎಲ್ಲರೂ ಇವಳಿಗೆ ಸುತ್ತುವರೆದು ವೀರೂ ಹ್ಯಾಂಗ ಕಳೆದಿದ್ದ ? ಆವಾಗ ನೀನೇನು ಮಾಡ್ತಿದ್ದೆ ಅಂತ ಪ್ರಶ್ನಿಸಿದರು. ಉತ್ತರ ಕೊಡುವದರಲ್ಲೇ ಇವಳಿಗೆ ಸಾಕಾಗಿ ಹೋಯಿತು. ಏನೇ ಆಗಲಿ ದೇವರು ದೊಡ್ಡವನು ನಿನ್ನ ಮೇಲೆ ಕರುಣೆ ತೋರಿ ಮಗ ವಾಪಸ್ ಬರುವಂತೆ ಮಾಡಿದ ಅಂತ ಸಮಾಧಾನ ಹೇಳಿದರು. ನಾನು ಎಲ್ಲೂ ಕಳೆದು ಹೋಗಿಲ್ಲ ಇವಳೇ ಕಳೆದುಹೋಗಿದ್ದಳು. ಇವಳಿಗಾಗಿ ನಾನು ಹುಡುಕಿದೆ ಅಂತ ವೀರೂ ಅಮ್ಮನ ಕಡೆ ಕೈ ಮಾಡಿ ಹೇಳಿದ . ವೀರೂನ ಮಾತು ಎಲ್ಲರಿಗೂ ಆಶ್ಚರ್ಯ ತರಿಸಿತು. ನಮ್ಮ ವೀರೂ ಬಹಳ ಶ್ಯಾಣ್ಯಾ ಏನು ಕೇಳಿದರು ಉತ್ತರ ಕೊಡತಾನೆ ನೀನು ಅಮ್ಮನ ಕೈ ಯಾಕೆ ಬಿಟ್ಟೆ ? ಕೈ ಬಿಡದಿದ್ದರೆ ಹೀಗೆಲ್ಲಾ ಆಗುತಿತ್ತಾ? ಅಂತ ಲಕ್ಷ್ಮಿ ರಮಿಸಿ ಪ್ರಶ್ನಿಸಿದಳು. ನಾನು ಅಮ್ಮನ ಕೈಬಿಟ್ಟು ಆಚೆ ಹೋಗಿದ್ದು ನಿನ್ನ ಸಲುವಾಗಿ ಅಂತ ಚುಟುಕಾಗಿ ಉತ್ತರಿಸಿದ. ನನ್ನ ಸಲುವಾಗಿಯೇ ? ಯಾಕೆ ನಾನೇನು ಅಲ್ಲಿಗೆ ಬಂದಿದ್ನಾ ಅಂತ ತೀಕ್ಷ್ಣವಾಗಿ ಪ್ರಶ್ನಿಸಿದಳು. ತನ್ನ ಕಿಸೆಯಿಂದ ಆ ಸೆಕೆಂಡ್ ಹ್ಯಾಂಡ್ ಕೋಟಿನ ಗುಂಡಿ ಹೊರ ತೆಗೆದು ಇದು ರಸ್ತೆಯ ಪಕ್ಕದಲ್ಲಿ ಬಿದ್ದಿತ್ತು. ಬಿಸಿಲಿಗೆ ಒಂದೇ ಸವನೆ ಹೊಳೆಯುತಿತ್ತು ಇದನ್ನು ನಿನಗೆ ತಂದು ಕೊಟ್ಟರೆ ಖುಷಿ ಪಡ್ತಿ ಅಂತ ಹೀಗೆ ಮಾಡಿದೆ ಎಂದನು. ತಮ್ಮನ ಮುಗ್ಧ ಮಾತು ಲಕ್ಷ್ಮಿಯ ಕಣ್ಣಂಚಿನಲ್ಲಿ ನೀರು ತರಿಸಿತು . ಕೋಟಿನ ಗುಂಡಿ ಕೈಯಲ್ಲಿ ಹಿಡಿದು ಅದನ್ನು ಪರೀಕ್ಷಿಸಿದಾಗ ಅದು ಭೇಷ್ ಒಂದು ರುಪಾಯಿ ನಾಣ್ಯದಷ್ಟು ಅಗಲವಾಗಿತ್ತು, ವೀರೂ ಹೇಳಿದಂತೆ ಒಂದೇ ಸವನೆ ಪಳ ಪಳ ಹೊಳೆಯುತಿತ್ತು .ನೀನು ವಾಪಸ್ ಬಂದು ನನ್ನ ಕೈ ಯಾಕೆ ಹಿಡಿಯಲಿಲ್ಲ ಅಂತ ಗೌರಮ್ಮ ಪ್ರಶ್ನಿಸಿದಳು. ನಾನು ಬರುವಷ್ಟರಲ್ಲಿ ನೀನು ಕಾಣಲಿಲ್ಲ ಯಾರ ಕೈ ಹಿಡಿಯಲಿ ಅಂತ ವೀರೂ ಹೇಳಿದಾಗ ಇದರಲ್ಲಿ ನಿನ್ನದೇನೂ ತಪ್ಪಿಲ್ಲ ಎಲ್ಲಾ ತಪ್ಪು ನಿಮ್ಮ ಅಮ್ಮನದೇ ಅಂತ ಜನ ಹೇಳಿದರು. ವೀರೂ ಮುಗ್ಳನಗೆ ಬೀರಿ ಕೇಕೆ ಹಾಕಿದ. . ಎಂತಹ ದೊಡ್ಡ ಕೆಲಸಾ ಮಾಡಿದ ನೋಡಿ ನನ್ನ ಮಗ ಅಂತ ಗೌರಮ್ಮ ವ್ಯಂಗ್ಯವಾಗಿ ಹೇಳಿದಳು. ಲಕ್ಷ್ಮಿ ವೀರೂನನ್ನು ಅಪ್ಪಿಕೊಂಡು ಒಂದೇ ಸವನೆ ಮುದ್ದಿಸತೊಡಗಿದಳು.

 

 

 

ಶರಣಗೌಡ ಬಿ.ಪಾಟೀಲ ತಿಳಗೂಳ

ಲೇಖಕ ಶರಣಗೌಡ ಪಾಟೀಲ ಅವರು  ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಹಿಟ್ಟಿನ ಗಿರಣಿ ಕಿಟ್ಟಪ್ಪ (ಲಲಿತ ಪ್ರಬಂಧಗಳ ಸಂಕಲನ)’, ತೊರೆದ ’ಗೂಡು (ಕಾದಂಬರಿ), ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು (ಕಥಾ ಸಂಕಲನ), ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ (ಕಾದಂಬರಿಗಳು)  

ಪ್ರಶಸ್ತಿ-ಪುರಸ್ಕಾರಗಳು:  ಇವರ ‘ಹಿಟ್ಟಿನ ಗಿರಣಿ ಕಿಟ್ಟಪ್ಪ  ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ. ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಮಟ್ಟದ ಪ್ರಬಂಧ  ಸ್ಪರ್ಧೆಯ ಪ್ರಶಸ್ತಿ. ಸಾಧಕ ಶಿಕ್ಷಕ ಪ್ರಶಸ್ತಿ, ಕನ್ನಡ ನಾಡು ಲೇಖಕರ ಓದುಗರ ಸ ಸಂಘದಿಂದ ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಪುಸ್ತಕ  ಪ್ರಶಸ್ತಿ  ಗುರುಕುಲ ಪ್ರತಿಷ್ಠಾನದಿಂದ ಸಾಹಿತ್ಯ ಶರಭ ಪ್ರಶಸ್ತಿಗಳು ಲಭಿಸಿವೆ. 
 

More About Author