Poem

‘ಕತ್ತಲ ಕಾವ್ಯ’ ಹಾಗೂ ‘ಪ್ರೇಮ ಮತ್ತು ಯುದ್ಧ’

ನಮ್ಮ ನಡುವಿನ ಸೃಜನಶೀಲ ಕವಿ ಎನ್. ರವಿಕುಮಾರ್ ಟೆಲೆಕ್ಸ್ ಅವರ ಎರಡು ಕವಿತೆಗಳು ನಿಮ್ಮ ಓದಿಗಾಗಿ

‘ಕತ್ತಲ ಕಾವ್ಯ’

ಫಕೀರನ ತಂಬೂರಿಯ ತಂತಿಯಲ್ಲಿ
ಅವಳು ಸುಖಿಸುತ್ತಿದ್ದಾಳೆ
ತಂತು ತಂತಿಗೂ ತಾಗುವ ಬೆರಳ ಸ್ಪರ್ಶಕೆ
ನಾದಗೊಂಡು ನುಲಿಯುತ್ತಾಳೆ
ಅಸಂಖ್ಯಾತ ನೋವುಗಳ ಮಡಿಲಲ್ಲಿ ಸಂತೈಸುತ್ತಾ

ಕತೆ ಮುಗಿದಿಲ್ಲ:
ನೀನು ಹ್ಞೂಂ ಗುಡುತ್ತಿದ್ದಿಯಾ ತಾನೆ....?
ಮುಳ್ಳುಗಂಟಿಯ ಕಾಲು ದಾರಿ ಸಾಗುತ್ತಲೇ ಇಲ್ಲ
ಹೆಜ್ಜೆ ಜಾಡು ಹಿಡಿದು ದುಡಿಯುತ್ತಿರುವ
ಪಾದಗಳೂ..ಸವೆಯುತ್ತಲೆ ಇಲ್ಲ
ಅಗೆದು-ಬಗೆದು ನೋಡ ಹೊರಟ
ಅಲ್ಲೊಂದು ಮಡುವಿನಲ್ಲಿ ಹಾಡು ಮುಳುಗಿದ ಕಥನ
ಬೆಳಕ ನುಂಗಿದ ಕತ್ತಲ ಕಾವ್ಯ.

ಅವತ್ತೂ ಕೂಡ ಹೀಗೆಯೇ...
ಮಿಂಚು-ಗುಡುಗು ಬರಸಿಡಿಲು
ಇರುಳಿಗೆ ಇರುಳ ಮುಖಗವುಸು ತೊಡಿಸಿದ ರಾತ್ರಿ
ಕೊರಳ ಬಿಗಿದು ಸುಖದ ಸೋಗಿನ ನೋವ ತೇಯ್ದ ಲೋಕವಿದು
ಕಾಲ ಸೃಷ್ಟಿಸಿದ ಅವಳ ಮಹಾಕಾವ್ಯ.

ಕಲ್ಲಾದ ಅಹಲ್ಯೆಯನ್ನು ಪ್ರೀತಿಸಿ
ಜೀವ ತುಂಬಿ ಬಿಡಬೇಕೆನಿಸುತ್ತಿದೆ
ಸೀತೆಯದ್ದು ಕಾಡ ದುಃಖ
ಶೂರ್ಪನಖಿಯ ಮೂಗು -ಮುಂದಲೆ ಕೂಯ್ದ
ಘೋರ ಸಾಕ್ಷಿ ಅನಾಥವಾಗಿ ಅಲೆಯುತ್ತಿದೆ
ಮಂಡೋದರಿಯ ಮೌನ, ಭಾನುಮತಿ, ಊರ್ಮಿಳೆಯ
ನಿಟ್ಟುಸಿರುಗಳೆನ್ನೆಲ್ಲಾ ಜಪ್ತಿ ಮಾಡಿದ ಲೋಕಕಥನ.

ಹ್ಞಾ ...,!
ಊರ ಜಗಲಿಯ ಮೇಲೆ ತೂತು ತಮಟೆ ಗೋಳು ನುಡಿದಿದೆ.
ಪುರದ ಪುಣ್ಯವಂ ನೆನೆ ನೆನೆದು ನೆರದ ಜನರ ಭಕ್ತಿ ಮೊರೆದಿದೆ.
ದಿಟವೊಂದು ಬಾಧಿಸುತ್ತಿದೆ ಸೂತ್ರ ಸತ್ತ ಪಟದಂತೆ

ಎಂದೋ ಮುಗಿದು ಹೋದ ಹಾಡಿಗೀಗ ಹರೆಯ ಬಂದಿದೆ
ಫಕೀರನ ತಂಬೂರಿ ತಂತಿಯೊಳಗೆ ನಾದಗೊಂಡು
ಸುಖಿಸುವುದಾ ಕಲಿತಿದ್ದಾಳೆ
ತಂತು ತಂತಿಗೂ ತಾಗುವ ಬೆರಳ ಸ್ಪರ್ಶಕೆ ನುಲಿದು
ಹರಿದಾಡುತ್ತಾಳೆ ಸೀಮೆಯ ಸೀಮೆಯಲ್ಲೂ .
*****
ಪ್ರೇಮ ಮತ್ತು ಯುದ್ಧ

ಸಖೀ.
ನಿನ್ನ ಕೋಮಲ ತುಟಿಗಳ
ಬಣ್ಣದ ಕುರಿತೇ ಯೋಚಿಸುತ್ತಿರುವಾಗ
ಗಡಿಯಲ್ಲಿ ನನ್ನ ಯೋಧನ ಮುಖದಲ್ಲಿ
ರಕ್ತ ಮುಕ್ಕಳಿಸುತ್ತಿತ್ತು
ತುಟಿ ಬಣ್ಣ ಮತ್ತು ಯೋಧನ ಮುಖ ಬಣ್ಣ
ಕೆಂಪು....ಕೆಂಪು

ನಿನ್ನ ಕೊರಳ ಇಳಿಜಾರಿನ
ಎದೆಯ ಕಣಿವೆಯಲ್ಲಿ
ಮುಖ ಹುದುಗಿಸಿ
ಮೈಮರೆವಾಗ ಯುದ್ಧದ ಕರೆ ಬಂದಿದೆ

ಗೊಬೆಲ್ ನ ಸುಳ್ಳು ವೇದ್ಯಗಳ
ಅಮಲಿನ ಕರೆಯಲ್ಲಿ
ನಿನ್ನ ಪ್ರೇಮದ ಅಮಲು ಯಾವ ಲೆಕ್ಕ?
ನಾನು ಯುದ್ಧಕ್ಕೆ ಹೊರಡಬೇಕು
ಹಾಳು ಕವಿತೆಗಳು ಎದೆತುಂಬಿಕೊಂಡು
ಒಂದೇ ಸಮನೆ ಜೀವ ಹಿಂಡುತ್ತಿವೆ.
ಏನಾದರಾಗಲಿ ; ಕವಿತೆಗಳ ಕೊಂಡೊಯ್ಯುತ್ತೇನೆ
ಎಷ್ಟೇ ಆಗಲಿ ಅವು ಬಿಳಿ ಪಾರಿವಾಳಗಳಲ್ಲವೆ?

ನಿನಗೆ ಗೊತ್ತಾ,? ಅವನಾಗಲೇ
ಸಿದ್ದನಾಗಿದ್ದಾನೆ; ಹೆಣಗಳ‌ ಲೆಕ್ಕ ಪಡೆಯಲು
ಓಟಿನ ಬೂತುಗಳಲ್ಲಿ ಸಾಲು ನಿಂತವರ
ಬೆರಳ ತುದಿಗೆ ಯುದ್ಧ ಕಣದಿಂದ ತಂದ
ನೆತ್ತರದ ಗುರುತ ಮೆತ್ತಲು
ಗಡಿಯಲ್ಲಿ ಮದ್ದು - ಗುಂಡು ಫಿರಂಗಿಗಳ
ಜಮಾ ಆಗುತ್ತಿದೆ.
ಇತ್ತ ದೇಶಪ್ರೇಮದ ಮದ್ದು ತಿನಿಸಿ
ಮತ್ತು‌ ಭರಿಸಲಾಗುತ್ತಿದೆ
ನಿನ್ನ ಪ್ರೇಮದ ಬಗ್ಗೆ ಯಾರಿಗೆ ಹೇಳಲಿ?!

ಯುದ್ಧದ ಸೋಲು - ಗೆಲುವು ನಮ್ಮಿಬ್ಬರ
ಇಚ್ಛೆಯದ್ದಲ್ಲ
ಅದು ಆಳುವವರ ಇಚ್ಛೆಗೆ ಬಿಟ್ಟದ್ದು
ಅವರವರ ಪಾಲಿನ‌ ಹೆಣಗಳಿಗೆ ಜಾಗ ಹುಡಕಬೇಕಿದೆ
ಸಾವಿಗೂ ವ್ಯಾಪಾರಿ ಇದ್ದಾನೆ;
ಅವನಿಗೆ ಜೀವ- ಪ್ರೇಮ ಮತ್ತು ಕವಿತೆಗಳಿಗಿಂತ
ಮೆಚ್ಚಿನದ್ದು ಅಧಿಕಾರ ಮಾತ್ರ.
ನನ್ನ ಶವಪೆಟ್ಟಿಗೆಯ ಮೆರವಣಿಗೆ ಬರುವಾಗ
ಬೀದಿಯಲ್ಲಿ ನಿಂತು ಬಿಕ್ಕಿ ಅಳಬೇಡ
ಕಣ್ಣೀರೀಗೆ ಅವಧಿ ತೀರಿದೆ.
ವ್ಯಾಪಾರಿಯ ಮುಂದೆ ಅದಕ್ಕೆ ಬೆಲೆ ಇಲ್ಲ

ಎನ್‌.ರವಿಕುಮಾರ್‌ ಟೆಲೆಕ್ಸ್‌

ಪತ್ರಕರ್ತ, ಕವಿ ಎನ್. ರವಿಕುಮಾರ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ತಂದೆ- ನಾಗಯ್ಯ, ತಾಯಿ- ಗಂಗಮ್ಮ. ಶಿವಮೊಗ್ಗ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಲಂಕೇಶ್ ಪತ್ರಿಕೆ ಸೇರಿದಂತೆ ನಾಡಿನ ಹಲವು ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿರುವ ರವಿಕುಮಾರ್ ಸದ್ಯ ಶಿವಮೊಗ್ಗ ಟೆಲೆಕ್ಸ್ ಎಂಬ ಕನ್ನಡ ದಿನಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

2006ನೇ ಸಾಲಿನಲ್ಲಿ ಅತ್ಯುತ್ತಮ ಅಪರಾಧ ವರದಿಗಾಗಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯಮಟ್ಟದ  " ಗಿರಿಧರ ಪ್ರಶಸ್ತಿ" ಪಡೆದಿದ್ದ ಅವರು ಸಾಹಿತ್ಯ, ರಂಗಭೂಮಿಗಳಲ್ಲೂ ತೊಡಗಿಕೊಂಡಿದ್ದಾರೆ. ಅಲ್ಲದೇ 2016 -2018ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ. ಇವರ ಚೊಚ್ಚಲ ಕವನ ಸಂಕಲನ ‘ನಂಜಿಲ್ಲದ ಪದಗಳು’ ಹಸ್ತಪ್ರತಿಗೆ ರಾಜ್ಯಮಟ್ಟದ ಪ್ರತಿಷ್ಠಿತ ವಿಭಾ ಸಾಹಿತ್ಯ ಪ್ರಶಸ್ತಿ, ಎರಡನೇ ಕವನ ಸಂಕಲನ "ನೆರ್ಕೆಗೋಡೆಯ ರತ್ನಪಕ್ಷಿ"  ಹಸ್ತಪ್ರತಿಗೆ  ರಾಜ್ಯಮಟ್ಟದ "ಗವಿಸಿದ್ದ ಬಳ್ಳಾರಿ ಕಾವ್ಯಪ್ರಶಸ್ತಿಗಳು ಸಂದಿವೆ. ಜೊತೆಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2004 ನೇ ಸಾಲಿನಲ್ಲಿ ರಾಜ್ಯಮಟ್ಟದ ದುಂ.ನಿ .ಬೆಳಗಲಿ (ರಬಕವಿ) ಸಾಹಿತ್ಯ ಪ್ರಶಸ್ತಿ ಪುರಸ್ಕಾರ, 2007ರಲ್ಲಿ ಮಂಡ್ಯ ಯುವ ಬರಹಗಾರ ಬಳಗದ ರಾಜ್ಯ ಮಟ್ಟದ "ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ",  ಪತ್ರಿಕೋದ್ಯಮದಲ್ಲಿನ ಗಣನೀಯ ಸಾಧನೆಗಾಗಿ ಕರ್ನಾಟಕ ಸರ್ಕಾರದಿಂದ 2014ನೇ ಸಾಲಿನ ಪ್ರತಿಷ್ಠಿತ  ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸೇರಿದಂತೆ ಪತ್ರಿಕೋದ್ಯಮ ಮತ್ತು ಸಾಹಿತ್ಯಿಕ ಕ್ಷೇತ್ರಗಳ ಕಾರ್ಯಕ್ಕಾಗಿ ಹಲವು ಗೌರವ ಪ್ರಶಸ್ತಿಗಳನ್ನು ಪಡೆದಿದ್ದಾರೆ. 

More About Author