Story

ಕಥೆ- ಬಯಲು

ಕತೆಗಾರ ಬಸವಣ್ಣೆಪ್ಪಾ ಕಂಬಾರ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಘೋಡಗೇರಿಯವರು. ಅವರು ಕನ್ನಡದ ಭರವಸೆಯ ಕತೆಗಾರರಲ್ಲಿ ಒಬ್ಬರು. ’ಆಟಿಕೆ’, ’ಗಾಂಧಿ ಪ್ರಸಂಗ’ ಮತ್ತು ಗರ್ದಿ ಗಮ್ಮತ್ ಎಂಬ ಮೂರು ಕತಾ ಸಂಕಲನ ಪ್ರಕಟಿಸಿದ್ದು, ಅವರ ಕಥೆ- ಬಯಲು ಕತೆ ನಿಮ್ಮ ಓದಿಗಾಗಿ...

ಗುಡಿ ಪೌಳಿಲಿ ಜನಜಾತ್ರೇ ನೆರೆದಿತ್ತು. ಮಧ್ಯಾಹ್ನ ಒಂದು ಗಂಟೆ ಸಮಯ. ಕೆಂಡದಂತಹ ಬಿಸಿಲು ರವುಗುಡತಿತ್ತು. ಜನರು ನೆತ್ತಿಯ ಮೇಲೊಂದು ಟವಲೊ, ಇನ್ಯಾವದೋ ವಸ್ತುವನ್ನೋ, ಹೆಂಗಸರು ಶರಗನ್ನು ಹೊದ್ದುಕೊಂಡು ಬೆವರಿನ ಜೊತೆ ನಿಟ್ಟುಸಿರನ್ನು ತಡೆ ತಡೆದು ಬಿಡುತ್ತಿದ್ದರು. ಹಣೆಗೆ ತಾಮ್ರದ ಪಟ್ಟಿ, ಬಣ್ಣದ ಗಲೀಪು, ಕೊರಳಲಿ ಹೂವಿನ ಹಾರ, ಹುರಿಗೆಜ್ಜೆ ಸರಾ, ಕಣ್ಣಪಟ್ಟಿ, ಹೊಟ್ಟೆ ನಡುವಿನ ಭಾಗಕ್ಕ ಮಾತ್ರ ಸೀಮಿತವಾದ ಕಂಬಳಪಟ್ಟಿ, ಕಾಲಿಗೆ ಬಣ್ಣದ ಅರಿವೆ, ಕೊಂಬಿಗೆ ಹುರಿಮಂಜು , ಅದರ ತುದಿಗೆ ಕೆಂಪು ರಿಬ್ಬನ್ನು ಕಟ್ಟಿ ಸಿಂಗಾರಗೊಂಡ ನಂದಿಯೊಂದಿಗೆ ಗುರುಪಾದಯ್ಯ ಬಿಸಿಲಿನ ರಾವಿಗೆ ಹೆದರಿ ಗುಡಿಯ ಪೌಳಿರುವ ಕಮಾನಿನಲಿ ತುಸು ತಲೆ ತೂರಿಸಿ ನೆರಳಿಗೆ ಹಾಯ್ ಅಂದ. ಜನದಟ್ಟಣೆಯಿಂದ ಗಾಳಿಯ ಉಲುವಿಲ್ಲದೆ ಬೆವರಿನ ಘಮಲು ಎಲ್ಲೆಡೆ ಆಘ್ರಾಣಿಸಿತ್ತು. ಊರಗೌಡರ ಮನೇಯಿಂದ ಇಷ್ಟೊತ್ತಿಗಾಗಲೆ ನೈವೆದ್ಯ ಬರಬೇಕಾಗಿತ್ತು, ಬಂದಿದ್ದರೆ ಕೆಂಡ ಹಾಯ್ದ ನಂದಿ ಉದುರಿಸುವ ಬೂದಿಯು ಯಾವ ದಿಕ್ಕಿನತ್ತ ಬೀಳುವುದೊ.. ಅದರ ಫಲಾನುಫಲಗಳ ಚರ್ಚೆ ಬಾಯಾರಿದ ಜನರ ನಾಲಿಗೆ ನಡುವೆ ಇಷ್ಟೊತ್ತಿಗಾಗಲೇ ಸುಳಿದಾಡಬೇಕಿತ್ತು. ಕರಡಿಮಜಲು,ಹಲಗೆ,ಡೊಳ್ಳು,ಸಿತಾಳವಾದನ,ಶಹನಾಯಿ ವಾದನಗಳ ಸಪ್ಪಳದೊಂದಿಗೆ ಊರಗೌಡರ ಮನೇಯಿಂದ ನೈವೆದ್ಯೆ ಗುಡಿಯತ್ತ ಬರುವುದುರ ಸೂಚನೆ ನೋಡಿ ಪೂಜೇರಿ ಹನಮಂತಪ್ಪ ಧೂಪ ಹಾಕಿ ಗಂಟೆ ಬಾರಿಸುತ ಗರ್ಭಗುಡಿಯಿಂದ ಪೂಜೆ ಮಾಡಿಕೊಂಡು ಆಚೇ ಬಂದು ನೈವದ್ಯೆದವರನ್ನು ಅದರ ಜೊತೆ ಬಂದ ಗೌಡರ ಮನೇ ದೇವರು ಹಾಗು ಸುಮಂಗಲೆಯರನ್ನು ಬರಮಾಡಿಕೊಂಡ. ನಂತರ ಮಂತ್ರಾಕ್ಷತೆ, ತೀರ್ಥಪ್ರಸಾದ, ದೂಪ ಬೆಳಗಿ ಇತ್ಯಾದಿ ಪೂಜಾ ಕೈಂಕರ್ಯ ಮುಗಿಸಿದ. ಗರ್ಭ ಗುಡಿಯಿಂದ ಆಚೆ ಬಂದ ಹನಮಂತಪ್ಪ ಕೈ ಸನ್ನೇ ಮಾಡಿ ಶುರುವಾಗಲಿ ಎಂಬಂತೆ ಸಂಜ್ಞೇ ಮಾಡಿದ. ಜನ ಹೋ ಎಂದು ಕೂಗಿದರು. ಗದ್ದಲ ಕಡಿಮೆ ಮಾಡಲು ಜನ ಅಲ್ಲಲ್ಲಿ ಕೂಗಾಡಿದರು. ಆಮೇಲೆ ಎರಡು ಥೂಪಾಕಿಗಳು ಮುಗಿಲಿನತ್ತ ಢಂ ಢಂ ಅಂತ ಸದ್ದು ಮಾಡಿ ಮರದಲ್ಲಿದ್ದ ಹಕ್ಕಿಪಕ್ಕಿಗಳನ್ನು ಬಡೆದೊಡಿಸಿದವು. ಜನ ಸ್ತಬ್ದರಾದರು. ಹೆಂಗಸರು ಕಂಕುಳಲ್ಲಿದ್ದ ಮಕ್ಕಳ ಬಾಯಿ ಅದುಮಿದರು. ನಂದಿ ಗರ್ಭಗುಡಿಗೆ ಅಭಿಮುಖವಾಗಿ ನಿಂತು ಕಾಲು ಮಡಚಿ ಕೆಳ ಕೂಡ್ರುತ ನಮಸ್ಕರಿಸಿತು. ಜನರು ಮತ್ತೋಮ್ಮೆ ತಡೆದು ಹೋ.. ಅಂತ ಕೂಗಿ ಕೈಮುಗಿದರು. ನಂದಿ ನಂತರ ಹಿಂದ ಹಿಂದಕ್ಕೆ ಸರಿದು ಕೆಂಡದ ಕುಣಿಯ ಬಳಿ ಬಂದು ಆಕಡೇಯಿಂದ ಈ ಕಡೇಗೆ ಸುತ್ತೇಲ್ಲ ಒಮ್ಮೇ ಗಮನಿಸಿ ಹುಲಿಕಿ ಕೊಟ್ಟು ಆಕಡೇಯಿಂದ ಈಕಡೇಗೆ , ಈ ಕಡೇಯಿಂದ ಆ ಕಡೇಗೆ ಎರಡು ಬಾರಿ ದಾಟಿ ಬರಿಗಾಲಿನಿಂದ ಕೆಂಡವನ್ನು ಒಮ್ಮೇ ಜಾಡಿಸಿತು. ಉತ್ತರ ದಿಕ್ಕಿಗೆ ಬೆಂಕಿ ಮಿಶ್ರಿತ ಬೂದಿ ಹಾಗು ಹುಡಿ ದಟ್ಟವಾಗಿ ಮೇಲಕ್ಕೇ ಹಾರಿತು. ರಣ ರಣ ಎನ್ನುವ ಬಿಸಿಲನಲಿ ಕೆಂಡದ ಚೂರುಗಳು ಎಲ್ಲರಿಗೂ ಸ್ಪಷ್ಟವಾಗಿ ಕಂಡವು. ಆಮೇಲೆ ನಾಲ್ಕೈದು ಜನ ಬಂದು ಎಳೆಂಟು ಕೊಡ ನೀರು ತಂದು ನಂದಿಯ ಕಾಲಿಗೆ ಸುರಿದರು. ನಂದಿ ಆ ನೀರಿನಲ್ಲಿ ಚಡಪಡಿಸುತ ಬಿಸಿಲು ಹಾಗು ಬೆಂಕಿಯ ಕಾವನ್ನು ನೀಗಿಸಿಕೊಳ್ಳಲು ಹವಣಿಸುತಿತ್ತು. ಅದರ ಮೈಮೇಲಿನ ಗಲಿಪು ಬಟ್ಟೇ, ಪಟ್ಟೇ ಪಟ್ಟೆ ಕಾಲಿನ ಪಟ್ಟಿ ಕಪ್ಪಾಗಿದ್ದವು. ಕೊಂಬಿನ ರಿಬ್ಬನ್ನು ಕಮರಿತ್ತು. ಜನರ ಮೈಮೇಲೆ ಢಾಳವಾಗಿ ಬಂಡಾರ ಅಡರಿತ್ತು. ನಂದಿಯ ಕಣ್ಣಿನ ರೆಪ್ಪೆಯಲ್ಲೆ ಹಳದಿಯಾಗಿತ್ತು. ಬೆಂಕಿ ಹಾರಿದ ದಿಕ್ಕನ್ನು ನೋಡಿ ಊರಿನ ಜನರು ಆಶಾಭಾವನೆ ಹೊಂದುತ ಬಿಸಿಲಿನಲು ಮುಖದ ಮೇಲೆ ಮುಗುಳು ನಗೆ ಮೂಡಿತು. ಬಿಸಿಲು ರಣಗುಡುತ್ತಿತ್ತು. ಗುಡಿಯ ಪ್ರಾಂಗಣದಿಂದ ಜನರೆಲ್ಲ ತಮ್ಮ ತಮ್ಮ ಮನೆಯತ್ತ ಹೆಜ್ಜೆ ಹಾಕಿದರು.

ಪೂಜಾರಪ್ಪ ನಾನು ಹೊರಡತೇನ್ರಿ.......? ಬಿಸಿಲಿ ಹೊಳ್ಳೇತಿ.. ಅಂತ ಗುರುಪಾದ ಅಂದಾಗ. ಒಳಗಡೆ ಶಲ್ಯೆಗಳನ್ನು, ದೇವರ ಇತರೇ ಬಟ್ಟೇಗಳನ್ನು ನೀಟಾಗಿ ಮಡಚಿಡುತಿದ್ದ ಹನಮಂತಪ್ಪ ಕುಳಿತಲ್ಲಿಂದಲೆ ಮುಖ ಹೊರಗೆಹಾಕಿ..

ಮನಿಯೊಳಗರ ಎನ ಮಾಡತಿ......? ಹಿಂದ ಕುದರಿ ಮನ್ಯಾಗ ಮೇವ ಇತ್ತು ತಗೊಂದ ಹೋಗ...... ನಾಳಿ ಬೆಳಿಗ್ಗಿ ಬರಬೇಕು ಗುಡಿ ತೊಳಿಬೇಕಲ್ಲ..... ಕೆರಿಯಿಂದ ನೀರ ತರಬೇಕು. ಅಂದಾಗ ಗುರಪಾದನ ಹೊಟ್ಟಿಯೊಳಗ ಚೇಳು ಕಡಿದಂಗಾತು ಒಳಗಡೆ ಹನಮಂತಪ್ಪ ಇನ್ನು ಎನೇನೊ ಮಾಡುತ್ತಿದ್ದ ಮತ್ತೇ ಅವನನ್ನು ನೋಡಬೇಕನಿಸಲಿಲ್ಲ ನಂದಿಯನ್ನು ಎಳಕೊಂಡು ಗುಡಿಯಿಂದ ಹೊರಬಂದ. ಕಾಲು ಸುಡುತ್ತಿದ್ದವು. ಸಣ್ಣಗೆ ಮಣ್ಣಿನ ಧೂಳು ಅಡರಿತ್ತು.ಜೊತೆಗೆ ಬಂಡಾರ ಬೇರೆ.ಗುಡಿ ಹೊರಗಿನ ಬೇವಿನ ಮರದಡಿ ನಿಂತ. ಕಾಲಲಿ ಚಪ್ಪಲಿ ಇಲ್ಲದೆ ನಡೆಯಬೇಕು.ಇಲ್ಲಿಂದ ಒಂದು ಹರದಾರಿ ತನ್ನಮನೆ. ನಂದಿಗೂ ಬಿಸಿಲಿನಿಂದ ಬೆವರಡರಿತ್ತು ಅದು ಸೋರಿ ಬಂಡಾರದ ನಡುವೆ ಕೆಳಗಿಳಿದು ಗೆರೆ ಕೊರೆದಂತೆ ಕಾಣುತ್ತಿತ್ತು. ಈ ವರ್ಷವೂ ಉತ್ತರ ದಿಕ್ಕಿಗೆ ಬೆಂಕಿ-ಬೂದಿ ಹಾರಿದ್ದರಿಂದ ಊರಿನ ಜನ ಮಳೆಯ ಕುರಿತು ಆಶಾ ಭಾವನೆ ಹೊಂದಿ ಮುಖದಲ್ಲಿ ತುಸು ಗೆಲವು ತಂದುಕೊAಡಿದ್ದರು. ಎರಡು ವರ್ಷಗಳಿಂದ ಸರಿಯಾದ ಮಳೆಯಿಲ್ಲದಕ್ಕೆ ಬೇಸತ್ತಿದ್ದರು ಈ ಮೊದಲು ನಂದಿ ಪೂರ್ವಕ್ಕೊಮ್ಮಿ ದಕ್ಷಿಣಕ್ಕೊಮ್ಮಿ ಬೆಂಕಿ-ಬೂದಿ ಹಾರಿಸಿತ್ತು ಅವು ಬರಗಾಲದ ದಿಕ್ಕುಗಳೆ ಆಗಿದ್ದರಿಂದ ಊರಿಗೆ ಬರ ಬಂದು ಜನ ಸಂತೋಷವನ್ನೆ ಮಾರಿಕೊಂಡಿದ್ದರು. ಉತ್ತರ ದಿಕ್ಕು ಸದಾ ಸಂತಸದ ದಿಕ್ಕು ಮಳೇಯ ದಿಕ್ಕು ಅಂತ ನಂಬಿಕೆ.ಇದು ಸಹಸ್ರವರ್ಷಗಳಿಂದ ನಂಬಿರುವ ಪದ್ದತಿ ಇತಿಹಾಸವು ಹೌದು. ಎರಡು ಮೂರು ವರ್ಷಗಳಿಂದ ಬೆಂಕಿ ಬೂದಿ ದೇವರ ನುಡಿ ಹುಸಿಯಾಗಿದ್ದು ಜನರು ತುಟಿಯೊಳಗ ಮಾತಾಡಿಕೊಂಡಿದ್ದರು. ಪೂಜೆಯೊಳಗೆನು ಬದಲಾವಣೆ ಅಥವಾ ವ್ಯತ್ತಾಸಗಳು ನಡೆದಿರಲಿಲ್ಲವಾದರು ಹುಸಿ ಹೊದದ್ದು ಮಾತ್ರ ನುಂಗಲರದ ತುತ್ತಾಗಿತ್ತು ಜನಕ್ಕೆ.ದೂರದ ಜಾಲಿಯ ಗಿಡದಲ್ಲಿ ಒಂಟಿ ಗೂಗೆಯೊಂದು ಕೂಗುತ್ತಿತ್ತು. ಅಯ್ಯಯ್ಯಪ್ಪ. ಹಾಂ .. ಹೂಂ..... ಅಂತ ಮುಖ ಕಿವುಚುತ ಹೆಜ್ಜೆಹಾಕಿದ.ಒಂದು ಕೈಯಲ್ಲಿನ ನಂದಿಯ ಹಗ್ಗ ಇನ್ನೊಂದು ಕೈಯಿಂದ ತಲೆಮೇಲೆ ಟವಲ ಹಿಡಿದು ನಡೆದ. ನಂದಿಯ ಕೊರಳಲ್ಲಿನ ಗಂಟೆಯ ಸದ್ದು ಮಧ್ಯಾಹ್ನದ ಬಿಸಿಲಿಗೆ ಕಿವಿಗಡಚಿಕ್ಕುತ್ತಿತ್ತು. ಇತ್ತೀಚೆಗೆ ನಂದಿ ಎರಚುವ ಬೆಂಕಿ ಬೂದಿ ಭವಿಷ್ಯವನ್ನು ನಗರಕ್ಕೆ ಶಾಲೆ ಕಲೆಯಲು ಹೋಗುವ ಹುಡುಗರು ಅಪಹಾಸ್ಯ ಮಾಡುತ್ತಿದ್ದಾರೆ ಅಂತ ಸುದ್ದಿ ಗುರುಪಾದನ ಕಿವಿಗೂ ಬಿದ್ದಿದೆ. ನಾಲ್ಕ ಅಕ್ಷರ ಕಲಿತ ಮಾತ್ರಕ್ಕೆ ಸಂಪ್ರದಾಯ ಸಂಸ್ಕೃತಿ, ಆಚಾರ ವಿಚಾರ ಬಿಡಕ್ಕಾಗುತ್ತಾ.....? ತಲೆ ಮಾಸದ ಹುಡುಗರೆಲ್ಲ ದೇವರನ್ನೇ ಪ್ರಶ್ನಿಸುವಂಗಾದರಲ್ಲಾ.....? ಅಂದುಕೊಂಡ. ನಮ್ಮೂರಿನಲ್ಲಿ ಮರ ಗಿಡಗಳಿಲ್ಲ ಅದಕ್ಕೆ ನಮ್ಮ ಊರಿನತ್ತ ಮಳೆ ಸ್ವಲ್ಪ ಕಡಿಮೆ ಅಂತ ಹುಡುಗರು ವಾದ ಮಾಡಿದರೆ, “ ನಿಮಗೆ ಎರಡು ಅಕ್ಷರ ಕಲ್ತಿದಿನಿ ಅನ್ನೋ ಧಿಮಾಕು ಹುಟ್ಟಿ ದೇವರು, ದೈವ , ದೊಡ್ಡವರು ಅನ್ನುವ ಭಯಾ ಭಕ್ತಿ ಇಲ್ಲದೆ ಹೋದ ಮೇಲೆ ಮಳೆ ಹೆಂಗ್ರೋ ಈ ಊರ ಅಗಸಿ ಬಾಗಿಲಿಗಿ ಬರತೈತಿ.....? ಮತ್ತೇ ಯಾಕ ಬರಬೇಕು ಹೇಳಿ....? ಅಂತ ವೀರಾವೇಶದಿಂದಲೆ ಕೂಗಾಡಿದ್ದು ಇಂದಿಗೆ ಇತಿಹಾಸ. ಆಚಾರ ವಿಚಾರ ಪ್ರಶ್ನಿಸೋರು ನಿಮ್ಮ ಜನ್ಮಾಂತರಗಳನ್ನು ಮೊದಲು ಪ್ರಶ್ಮಾ ಮಾಡಕೊಳ್ಳಿ. ನೊಡೊಣ....? ಅಂತ ಸವಾಲೆಸೆದದ್ದು

ಇತ್ತು. ಗುರುಪಾದಯ್ಯ ಸಮಸ್ತ ಶಿವಾಪೂರ ಜನರ ಪ್ರೀತಿಯ ಮನುಷ್ಯ. ಆತ ಗ್ರಾಮದೇವರ ವಾಹನವಾದ ನಂದಿಯ ಸೇವಕ. ಊರಲ್ಲಿ ಯಾರಿಗೂ ದೊರೆಯದ ಈ ಕಾಯಕ ಮತ್ತು ಅಧಿಕಾರ ಇವನ ಕುಟುಂಬಕ್ಕೆ ತಲೆ ತಲಾಂತರದಿಂದಲೂ ಬಂದಿದೆ. ಊರಿನ ಸಮಸ್ತ ಕುಟುಂಬಗಳ ಪೂಜಾ ಕೈಂಕರ್ಯ, ಮದುವೆ, ಮುಂಜಿ, ಗೃಹಪ್ರವೇಶ, ಉತ್ಸವ, ಜಾತ್ರೇ, ಹೊಲ ಖರೀದಿ, ಮನೇ ಖರೀದಿ, ಹೆಣ್ಣುಮಕ್ಕಳು ಮೈನೆರೆದರೆ ಊರಲ್ಲಿ ಯಾವ ಶುಭ ಕಾರ್ಯಕ್ಕೂ ಗುರುಪಾದಯ್ಯನ ಹಾಗು ನಂದಿಯನ್ನು ಕರೆಯಿಸುವುದು ಊರಿನ ವಾಡಿಕೆ. ನಂದಿಯ ಪೂಜೆ ಮಾಡಿ ಬಾಗಿನ ಕೊಡಬೇಕು. ಕೆಲವರು ದಕ್ಷಿಣೆ, ಕಾಳು ಕೂಡಾ ಕೊಡತಾರೆ. ಊರ ಗದ್ದೇಗಳಲಿ ಹೋದರೆ, ಮೇವು, ತರಕಾರಿ, ಧಾನ್ಯ, ಕೊಡತಾರೆ. ಹೊಸದಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಮಕ್ಕಳು ಹೊಸ ರವಿಕೆ, ಸೀರೆ ಕೊಟ್ಟರೆ, ಗಂಡಿನ ಕಡೇಯವರು ಅಂಗಿ,ಟೊಪಿಗಿ, ಧೋತರ ಆಯೇರ ಕೊಡುತ್ತಾರೆ. ಮದುವೆ ಗಟ್ಟಿಯಾದರೆ, ಹೊಸ ಮನೆ ಕಟ್ಟಿದರೆ, ನಂದಿಯನ್ನು ಕರೆದೊಯ್ದು ಪೂಜೆ ಮಾಡಿಸಿ ದಕ್ಷಿಣೆ ಕೊಟ್ಟು ಕಳಿಸುವುದು ವಾಡಿಕೆ. ಗಂಡು ಮಗುವಾಗಲೆಂದು, ಮಗಳಿಗೆ ಬೇಗ ಗಂಡು ಸಿಗಲೆಂದು,ಚನ್ನಾಗಿ ಬೆಳೆ ಬರಲೆಂದು ಹೀಗೆ ಭಕ್ತರು ಬೇಡಿಕೆಗೆ ಕೊನೆಯಿದೆಯೇನು.....? ನಂದೀಶ ಸಾಧ್ಯವಾದಷ್ಟು ಈಡೇರಿಸಿದ್ದಾನೆ. ಊರಲ್ಲಿ ಕೊರತೆಗಳಿಲ್ಲಂತಲ್ಲ. ಆದರೆ ಭಕ್ತರ ಭಕ್ತಿಗೂ ಕೊನೆಯಿಲ್ಲ, ನಿರಾಶರಾಗಲ್ಲ ಇಂದಲ್ಲ ನಾಳೆ ಅದೃಷ್ಟ ಶಕ್ತಿ ತಮ್ಮನ್ನು ಕೈ ಹಿಡಿದು ನಡೆಸುತ್ತೇ ಅನ್ನುವ ಆಶಾ ಭಾವನೆ ಕುಂದಿಲ್ಲ. ಊರು ಬೆಳೆಯುತಿದೆ. ಖಾಲಿ ಇದ್ದ ಜಾಗೆಗಳಲೆಲ್ಲ ವಾಣಿಜ್ಯ ಸಂಕೀರ್ಣಗಳಾಗಿ ತಲೆ ಎತ್ತುತ್ತಿವೆ, ಹಳ್ಳಿ ತುಂಬ ಅಂಡ್ರಾಯಿಡ ಮೋಬೈಲ್ ಪೋನಗಳ ಹಾವಳಿ,ಝರಾಕ್ಸ ಮಶಿನಗಳು,ಊರು ಡಿಜಿಟಲಿಕರಣಗೊಳ್ಳುತ್ತಿದೆ, ಪ್ರತಿಬಾರಿ ಗ್ರಾಮ ಪಂಚಾಯತ ಚುನಾವಣೆಗಳು ಜಾತಿಯಾಧಾರಿತವಾಗಿ ನಡೆಯುತ್ತಿವೆ, ಭಕ್ತಿ, ಜ್ಞಾನ ಸಂವೇದನೆ, ಕೀರ್ತನೆ, ಹಾಡುಗಾರಿಕೆ, ಭಜನೆ ಮಾಯವಾಗುತ ನಡೆದಿವೆ.ದೇವಸ್ಥಾನಗಳಲ್ಲಿ ಅರ್ಚಕರು ಅನಾಥರಾಗುತ್ತಿದ್ದಾರೆ,ಶಾಸ್ತ್ರ,ಪುರಾಣ,ಕಟ್ಟಿಟ್ಟ÷ ಗಂಟಿನಲಿ ಸುಮ್ಮನೆ ನೇತಾಡುತಿವೆ.ಜನರಿಗೆ ಭಕ್ತಿ ಬೇಕಿಲ್ಲ ಬರೀ ಶೋಕಿಯಲಿ ಕುಣಿದಾಡುತ್ತಿದ್ದಾರೆ.ಮಹಾಭಾರತ,ರಾಮಾಯಣ ಶ್ಲೋಕಗಳ ಕಂಠಪಾಠ,ದೇವಸ್ಥಾನಗಳ ಪ್ರಾಂಗಣದಲ್ಲಿ ನಡೆಯುವ ಶಾಸ್ತçಗಳು,ಹಬ್ಬದ ದಿನಗಳಲ್ಲಿ ನಡೆಸುವ ಉತ್ಸವಗಳು,ಜಾತ್ರೇ,ರಥೋತ್ಸವ,ದೀಪರಾಧಣೆ ಅಭಿಷೇಕ, ಎಲ್ಲವೂ ಕನಸೆಂಬಂತೆ ನಮ್ಮ ಮುಂದೆಯೆ ಮರೆಯಾಗುತ್ತಿರುವುದನ್ನು ನೋಡುತ್ತಿರುವ ಗುರುಪಾದನಿಗೆ ಯಾರಿಗೆ ಹೇಳೋದು ಎನು ಹೇಳೊದು ಎನ್ನುವುದೆ ಸಮಸ್ಯೆ. ಯಾರು ಯಾರ ಮಾತನ್ನು ಕೇಳುತ್ತಿಲ್ಲ ಯಾವೂದೊ ಅವ್ಯಕ್ತ ಶಕ್ತಿಯ ಹಿಂದೆ ಹುಚ್ಚೆದ್ದ ಓಡುತಿದೆ ಮನುಕುಲ.ನೆಮ್ಮದಿಯನ್ನು ಕಳಕೊಂಡು ಕುರುಡು ಕಾಂಚಾಣದ ಹಿಂದೆ ಹೆಣ್ಣು ಗಂಡು ಎಂಬ ಭೇದಬಾವವಿಲ್ಲದೆ ಓಡುತ್ತಿದ್ದಾರೆ.....

೦ ೦ ೦

ಮುದುಕರು ಕ್ಯಾಕರಿಸಿ ಉಗುಳಿಸದಷ್ಟು ಅಂತರದಲ್ಲಿ ಕಟ್ಟಿಕೊಂಡಿರುವ ಮನೆಗಳು ಸಾಲು ಹಿಡಿದು ಊರಿನ ದಿಬ್ಬವ ಇಳಿದು ಗುಡ್ಡದ ಮಹಾದೇವಯ್ಯನ ಮನೇಲಿ ಹನ್ನೊಂದು ಎಮ್ಮೇಗಳು ಆರು ಕ್ಯಾನ ಹಾಲನ್ನು ಗೋಕಾವಿ ಡೈರಿಗೆ ಮಾರುತ್ತಾನೆ. ಒಂದು ದಮಡಿ ದಾನ ಮಾಡದವ, ಅದರ ಪಕ್ಕದ ಮನೆಯೆ ಡೊಗ್ಗೇರಿ ಚಿನ್ನವಳ ಮನೆ. ಕರಿಹೆಂಚಿನ ಸನ್ನ ಗುಡಿಸಲು. ಗಂಡ ಮಕ್ಕಳಿಲ್ಲ ಒಂದು ಆಕಳನ್ನು ಸಾಕಿಕೊಂಡು ಜೀವನ ನೂಕುತ್ತಿದ್ದಾಳೆ.

ಕರೆದವರ ಗದ್ದೆಗೆ ಕೂಲಿ ಹೋಗುವುದು.ಕತ್ತಲು ಬೆಳಕಿನೊಂದಿಗೆ ಬದುಕು ಸಾಗಿಸುತ್ತ ಮೂವತ್ತೈದು ಯುಗಾದಿಗಳನ್ನು ಕಳೆದಿದ್ದಳು. ಇಡೀ ಊರಿನ ಗಂಡಸರ ಪ್ರಾಯವೆಲ್ಲ ಅವಳ ದೇಹವನ್ನು ಅಳತೆ ಮಾಡಿವೆ. ಒಂದು ಸಲ ಗುರುಪಾದಯ್ಯನ ಮುಂದೆ ತನ್ನ ಹಸು ಹಿಡಿದುಕೊಂಡು ಬಂದಿದ್ದಳು. ಇವತ್ತು ಅವಳ ಮಗಳು ಬದುಕಿದ್ದರೆ ಇಪ್ಪತ್ತೆರಡರ ಪ್ರಾಯ ಅವಳಿಗೆ. ತಾಯಿಯ ಗುಣಾವಗುಣಗಳು ಅವಳನ್ನು ಕಿರಿಯ ವಯಸ್ಸಿನಲ್ಲಿಯೆ ವೈರಾಗ್ಯ ಬರುವಂತೆ ಮಾಡಿದ್ದವು. ಮೆಟ್ರಿಕ್ ಪರೀಕ್ಷೆ ಬರೆಯಲೆಂದು ಗೋಕಾವಿ ಹೋದವಳು ವಡ್ಡರ ಹನುಮನ ಮಗನೊಡನೆ ಓಡಿ ಹೋಗಿದ್ದಳು. ಮರಳಿ ಬರಲಿಲ್ಲ. ಮೈಯಲ್ಲಿ ಸೊಕ್ಕು ಅಂತ ಬಯ್ಕೊಂಡಳು. ಅವಳ ಹಾಗೇ ಓಡಿ ಹೋಗಲು ಶಾಂತವ್ವಳ ಪ್ರಾಯವು , ಹಿಡಿತದಲ್ಲಿ ಇಲ್ಲದ ಮನಸ್ಸು, ಕೂಡ ಕಾರಣವಾಗಿದ್ದವು. ಪ್ರತಿದಿನ ಗುರುಪಾದಯ್ಯ ಅವಳ ಮನೆ ದಾಟುವರೆಗು ನದಿಯನ್ನು ಅತ್ಯಂತ ಬಿಗಿಯಾಗಿ ಹಿಡಿದುಕೊಂಡು ದಾಟುತ್ತಾನೆ. ಯಾಕೋ ಗೊತ್ತಿಲ್ಲ ನಂದಿ ಅವಳ ಮನೆಯತ್ತ ಕತ್ತು ಹೊರಳಿಸಿತಾ..? ಕಣ್ಣು ಮಿಟಿಕಿಸಿತಾ..? ಬಾಗಿಲಲ್ಲಿ ಅವಳಿರುವಳಾ..? ಎಂಬ ಆತಂಕದಿಂದಲೆ ದಟುತ್ತಾನೆ ಮನೆಯತ್ತ ಬಂದ ಬಂದಂತೆ ತುಸು ನಿರಾಳವಾಗುತ್ತಾನೆ. ಮನೆಯ ಹಿಂದಿನಿಂದ ಬಂದು ಹಿತ್ತಲಲ್ಲಿ ನಂದಿಯ ಕಟ್ಟುಹಾಕಿ ಅಲ್ಲೆ ಇದ್ದ ಮೇವು ಮುಂದೆ ಎಸೆದು ಬಾಗಿಲ ತಳ್ಳಿ ಬಂದ. ಪಡಸಾಲೆ ಕಂಬಕ್ಕೊರಗಿ ಕಟ್ಟಿದ ಹೊರಸಿನ ಮೇಲೆ ರೋಗಿಷ್ಠ ಹೆಂಡತಿ ಕಣ್ಣು ಬಿಟ್ಟು ನೋಡುತ್ತಾಳೆ. ಧೋತರ ಪಡಿ ಪದರಿನಲ್ಲಿ ಕಟ್ಟಿಕೊಂಡು ಬಂದಿದ್ದ ಒಂದು ಬಾಳೆ ಹಣ್ಣು ಬಿಚ್ಚಿ ಅವಳ ಬಾಯಿಗಿಟ್ಟು ತಿನ್ನಿಸುತ್ತಾನೆ. ಎರಡು ತುತ್ತು ತಿಂದು ಕತ್ತು ವಾಲಿಸಿದಳು ಬೇಡವೆಂಬಂತೆ. ನೈವದ್ಯದ ಹೋಳಿಗೆಯನ್ನು ತುಸು ಮುರಿದು ಬಾಯಿಗಿಟ್ಟ. ಅವಳಿಗೆ ಇಂದೆಕೊ ಯಾವುದು ರುಚಿಸಿಲ್ಲ. ಮತ್ತೇ ಬೇಡವೆಂಬಂತೆ ಕತ್ತು ವಾಲಿಸಿದಳು. ಗುರುಪಾದಯ್ಯ ಅಡುಗೆ ಮನೆಗೆ ಹೋಗಿ ಬುಟ್ಟಿಯೊಂದರಲ್ಲಿ ಅವನ್ನೆಲ್ಲ ಹಾಕಿ ನೀರು ಕುಡಿದು ಬಂದು ಅವಳ ಬಳಿ ಕುಳಿತ. ಬಾಯಿಗೆ ಅಂಟಿದ ಹೋಳಿಗೆಯನ್ನು ಒರೆಸಿಕೊಳ್ಳುತ್ತ ಶಾಂತವ್ವ ಹೇಳಿದಳು

“ಡೊಗ್ಗೇರಿ ಚಿನ್ನವ್ವ ಬಂದಿದ್ದಳು
ಆತ ‘ಹೂಂ’ ಗುಟ್ಟಿದ
ಹಾಸಿಗೆಲಿ ಬಿದ್ದಿದ ಹೋಳಿಗೆ ಚೂರನ್ನು ಜಾಡಿಸುತ್ತಿದ್ದ ಹೆಂಡತಿಯ ಕಡೇ ದಿಟ್ಟಿಸಿ ನೊಡಿದ. ನಾಳೆ ಬರುವ ಯುಗಾದಿಗೆ ಹೆಂಡತಿ ಹಾಸಿಗೆ ಹಿಡಿದು ಆರುವರ್ಷ, ಕಾಲುಗಳೆ ಇಲ್ಲ ಸುತ್ತ ಹದಿನೆಂಟು ಹಳ್ಳಿಯ ದೇವರು-ದಿಂಡಿರು ಮುಗಿದವು. ಆರು ಜನ ಎಂ.ಬಿ..ಬಿ.ಎಸ್ ಇಂಗ್ಲೀಷ ಡಾಕ್ಟರರು ಕೈಚೆಲ್ಲಿದರು ಆಯುರ್ವೇದ ಔಷಧಿಯ ಇಲಾಜು ಆಯ್ತು ಅವಳ ಕಾಲಿಗೆ ನಡೆದಾಡುವ ಭಾಗ್ಯ ಬರಲಿಲ್ಲ. ಚಿನ್ನವಳ ತಂಗಿ ಸವಿತಾ ಮೂರು ತಿಂಗಳಿ ಇದ್ದು ಆರೈಕೆ ಮಾಡಿ ಹೋದಳು. ಇರೋ ಒಬ್ಬ ಮಗನನ್ನು ನಾನೇ ಸಾಕೊತಿನಿ ಅಂದು ಕರೆದುಕೊಂಡು ಹೋಗಿದ್ದಳು. ಬಡತನದ ಜೊತೆಗೆ ನೋವು, ರೋಗರುಜಿನಗಳು, ಅಸಹಾಯಕತೆ ತಲೆ ಮೇಲಿನ ಸೂರಿನಂತೆ ಬದುಕಿನ ತುಂಬ ಮನೆ ಮನದ ತುಂಬ ತುಂಬಿಕೊಂಡಿತ್ತು. ಸಂಜೆಯ ಸೂರ್ಯನ ಬೆಳಕು ಸೂರಿನ ಕಿಂಡಿಯಿಂದ ಕಣ್ಣು ಕುಕ್ಕಿತು. ಶಾಂತವ್ವ ಯಾಕೆ ಮತ್ತೇ ನೆನಪಾದಳು... ಇವಳೇಕೆ ದಿನದಿಂದ ದಿನ ಕಾಯುತ್ತಿದ್ದಾಳೆ..? ಹಿಡಿಯಷ್ಟು ಸುಖಕ್ಕಾಗಿ ಬೆಳಗಿನಿಂದ ರಾತ್ರಿಯವರೆಗು ಅದನ್ನೆಲ್ಲ ನಾಟಕವಾಡಬೇಕೆ..? ನಿಯತ್ತಿಗೆ ನಮ್ರವಾಗಿದ್ದಷ್ಟು ದಿನ ಬರೀ ಉಗುಳು ನುಂಗಿ ಬದುಕುವುದೇ ಆಯ್ತು. ಎನ್ನವ ಒಂದ ಸಲ ಅಂದದ್ದು ನೆನಪಾಯ್ತು. ನನ್ನ ನಂಬಿ ಕಾಲ ಹಾಕಬೇಡಿ.. ಇನ್ನೊಂದು ಮದುವೆಯಾಗಿ ಇರೋವಷ್ಟು ದಿನ ನಿಮ್ಮೊಂದಿಗೆ ಇದ್ದು ಸತ್ತೋಗತಿನಿ.. ಯಾಕೆ ನಿಮ್ಮ ಜೀವ ಒಣಗಿಸ್ತಿರಿ..? ಎಂದು ಕೇಳಿದಕ್ಕೆ ಉತ್ತರವಿಲ್ಲದೆ ಎದ್ದು ಹೊರನಡೆದಿದ್ದನಷ್ಟೆ.

ರಾತ್ರಿ. ಆತನ ಮೈ ರೋಮಗಳು ಹುರಿಹೊಡದವು. ಹಿತ್ತಲಿಗೆ ಬಂದು ನಂದಿಯ ಕೊರಳ ಸುತ್ತ ಕೈ ಹಾಕಿ ಹಿಡಿದು ಮುದ್ದಿಸಿದ.. ಅದರ ಮೈ ತಿಕ್ಕಿದ. ತಪ್ಪ ಒಪ್ಪುಗಳ ಲೆಕ್ಕ ಮಾಯವಾಗಿತ್ತು. ಉಂಡರು ಸಾವು ಉಣದಿದ್ದರು ಸಾವು..ಖಚಿತ. ಬದುಕನ್ನು ಒಣಗಿಸಿಕೊಂಡು ಸಾಯುವದಕ್ಕಿಂತ ಉಂಡುಟ್ಟು ಕಳೆಯಬಾರದೇ..?

ಇಡೀ ಊರಿನ ಭಕ್ತಿಯನ್ನು, ನಂಬಿಕೆಯನ್ನು ಕೊಳ್ಳೆ ಹೊಡೆಯುವಂತ ಕಾಯಕವಿದು. ಈ ಕಳಾದ ಹುಡುಗರು ಅಣಕಿಸುವಂತಾ ಮಾತುಗಳಲ್ಲಿ ಸತ್ಯದ ತಾತ್ಪರ್ಯವಿದೆ ಅನಿಸತೊಡಗಿತು. ಹುರಿಗೊಂಡ ಮೈ ಬೆವರತೊಡಗಿತು. ಅಸಮಂಜಸವೆಲ್ಲ ಯಾವುದೋ ಹುತ್ತದೊಳಗೆ ಕೆಳಮಾಡಿ ಇಳಿಯುತ್ತಿದ್ದಂತೆ ಅನಿಸಿತು. ಬರೀ ನೆತ್ತಿಗೆ ಮೆತ್ತಗೆ ತಾಕಿದ್ದು ಹಸಿಮಣ್ಣೋ.. ? ನಾಗರ ನಾಲಿಗೆಯೊ ಗೊತ್ತಿಲ್ಲ ಹಾಗಾದರೆ ಸಾವನ್ನು ಗೆದ್ದವರಿದ್ದಾರಾ…? ಬಡವ ಶ್ರೀಮಂತ ಇಬ್ಬರಿಗೂ ಸಾವುಂಟು ಅರ್ಥವಾಗದ ಹಾಗೇಯೋಚಿಸಿದ. ಮತ್ತೇ ಒಳ ಬಮದು ಬಟ್ಟೆಗಳನ್ನು ಬಿಚ್ಚಿಟ್ಟ್ ನೀಲಿ ಅಂಗಿ ದಡಿ ಧೋತರ ತೊಟ್ಟು ಹಣೆಗೆ ವಿಭೂತಿ ಬಳೆದುಕೊಂಡು ಬಗಲಕಿಸೆಯಲ್ಲಿ ಟೊಪಿಗೆ ಇಟ್ಟುಕೊಂಡು ಮೊದಲ ಬಾರಿ ಎಂಬಂತೆ ಹೆಂಡತಿ ಮುಖ ನೋಡಲು ಭಯವಾಯ್ತು.

“ಚಿನ್ನಿ..”
ಬಯಲು ಆಲಯ
ಆಕೆ ಎನು ಎಂಬಂತೆ ದಿಟ್ಟಿಸಿದಳು.
“ಪೂಜಾರಪ್ಪನ ಮನೆಯತನಕಾ ಹೋಗಿ ರ‍್ತೀನಿ.. ಹಣ್ಣು ,ಪಂಚೆ, ಕೊಡ್ತಿನಿ ಅಂದಿದಾರೆ. ಅಂದ. ಅವಳ ಮುಖದ ಹಾವಭಾವ ಬದಲಾಯಿತು. ಹಣ್ಣು ಶಲ್ಯಗಳ ಆಸೆಗಿಂತ ಹೆಣ್ಣಿನ ಆಸೆಗಳೆ ಎದ್ದು ಕಂಡವು.

“ಇವತ್ತೆ ಜಾತ್ರೇ ಅವನ್ನೆಲ್ಲ ಗದ್ದಲದ ದಿನ ಹೇಗೆ ಕೊಡತಾರೆ ನಿಮಗೆ..? ಪ್ರತಿ ವರ್ಚ ಮರುದಿನ ಅಲ್ವಾ ನೀವು ಹೋಗಿ ರ‍್ತಿರೋದು..? ಕೇಳಿದಳು. ತಾನು ಹೊರಟ ದಿಕ್ಕು ಗೊತ್ತಾಯ್ತಾ ಇವಳಿಗೆ..? ಎಂಬ ಆತಂಕ ಅವನ ಮುಖದ ಮೇಲೆ ರಪ್ಪನೆ ಅವಚಿತು. ಇದೇ ಸತ್ಯ ಅಲ್ವಾ ಅಂತಂದು ಆ ಕಡೆಗೆ ಮುಖ ತಿರಿವಿ ಮಲಗಿದಳು. ಧೋತರದ ಚುಂಗು ಹಿಡಿದು ರಸ್ತೇಗಿಳಿದ. ಎಣ್ಣೆ ಆರಿದ ದೀಪದಂತೆ ಚಂದ್ರ ಕ್ಷೀಣಿಸಿದ್ದ. ಹಿತ್ತಲಲ್ಲಿ ನಂದಿ ಢುರಕಿ ಹೊಡೆಯಿತು. ಗ್ರಾಮದ ಸಂಪ್ರದಾಯಸ್ತ ಜನಗಳ ನಂಬಿಕೆ, ಭಕ್ತಿ, ನೆಗ್ಗಿನ ಮುಳ್ಳಿನಂತೆ ಪ್ರತಿ ಹೆಜ್ಜೆಗು ಕೆದಕಿದವು. ಉಸಿರ ಬಿಟ್ಟರು ನೀತಿ ಬಿಡಬಾರದು ಅಪ್ಪ ಹೇಳಿದ ಮಾತು ನೆನಪಿಗೆ ಬಂತು. ಎಲ್ಲ ನಿಷ್ಠೆಗಳನ್ನು ಮೈತುಂಬಿಕೊAಡು ಬದುಕುವ ನನಗೆ ಎನು ಭಾಗ್ಯ ಸಿಕ್ಕಿರುವುದು..? ಪ್ರತಿರೋದಗಳು ಮನಸ್ಸಿನ ಸಂಯಮವನ್ನು ಧೃತಿಗೆಡಿಸಿದವು. ಅಳಕು ತಡೆಗೋಡೆಯಾಗಿ ಅನೈತಿಕತೆಯನ್ನು ತಡೆದಿತ್ತು. ಚಿನ್ನವಳ ಮನೇ ಅಂಗಳದಲ್ಲಿ ನಿಂತು ಸುತ್ತ ನೋಡಿದ. ಒಣ ಮೌನ ಸುತ್ತಲು ಬಿದ್ದಿತ್ತು. ಚಿನ್ನವಳ ಮನೆ ಕಿಟಕಿಯಿಂದ ಲಾಂದ್ರದ ಬೆಳಕು ಹೊರಗೆ ಇಣುಕಿತ್ತು. ಬಾಗಿಲ ಬಳಿ ಬಂದು

“ ಚಿನ್ನವ ನಾನು ಬಂದಿದ್ದೇನೆ.. ಕೂಗಿದ. ಅವನ ಕಣ್ಣುಗಳು ಸುತ್ತ ಮುತ್ತ ನೋಡಿ ಸುಮ್ಮನಾದವು. ಯಾರಾದರು ಕಂಡರೇ.. ಎಂಬ ಭಯ ಮುಖದ ತುಂಬ ರಾರಾಜಿಸುತಿತ್ತು. ಒಳಗಡೆ ಬಳೆ ಸದ್ದು ಕ್ಷಣ ತಟಸ್ಥವಾಯ್ತು. ನಿಮಿಷಗಳ ನಂತರ ಪೂಜಾರಪ್ಪ ಹೊರಕ್ಕೆ ಕತ್ತು ಚಾಚಿ..” ಯಾರು..? ಅಂದ ಗುರುಪಾದನಿಗೆ ಜಂಘಾಬಲವೆ ಉಡುಗಿ ಹೋಯ್ತು. ತನ್ನ ಕಾಲುಗಳು ನೆತ್ತಿಯ ಮೇಲೆ ಬಂದಂಗಾದವು. ಕಣ್ಣ ಅಗಲಿಸಿ ಮತ್ತೇ ಆ ಮೂರ್ತ ಸ್ವರೂಪವನ್ನು ದಿಟ್ಟಿಸಿದ. ಗಂಟಲ ಪೆಸೆ ಆರಿತು “ಪೂಜಾರಪ್ಪಾ.. ನೀವು... ಅಂತಂದ ಶಬ್ದಗಳು ಇಚೆ ಬರಲೇ ಇಲ್ಲ. ಆತ “ಗುರುಪಾದ.. ನೀ ಇಲ್ಲಿಗಿ ಯಾವಾಗ್ಯಾವಗ ಬರೋಕೆ ಶುರು ಮಾಡಿದೆ..?” ಗುಡುಗಿದ. ಗುರುಪಾದ ಮೌನವಾದ. ಹಾವಿನ ಹೆಡೆ ಮೇಲೆ ನಿಂತಂತಾಗಿತ್ತು ಅವನಿಗೆ. ಆಮೇಲೆ

ಒಬ್ಬಳು ಹೆಂಗಸು ತಲೆ ಮೇಲೆ ಶೆರಗು ಹೊದ್ದುಕೊಳ್ಳುತ ಹೊರಬಂದು “ ನೀವು ನಾಳೆ ಬರಬೇಕಂತೆ.. ಅಕ್ಕ ಹೇಳಿದ್ದಾ ಎಂದು ಹೇಳಿ ಒಳ ಹೋದಳು. ಗುರುಪಾದನಿಗೆ ಇಂಚಿಂಚಾಗಿ ತನ್ನ ಮೈಯನ್ನು ಸುಲಿಯುತ್ತಿರುವ ಅನುಭವವಾಯ್ತು. ನೆಟ್ಟಗೆ ರಸ್ತೇಗಿಳಿದವನೆ ಬಿರುಸ ಹೆಜ್ಜೆ ಹಾಕುತ ಮನೆಯತ್ತ ನಡೆದ. ಚಂದ್ರ ಶೆಟಗೊಂಡು ಮೋಡದಲ್ಲಿ ಸರಿದಿದ್ದ. ಬೆವರಿನಿಂದ ಪಾದದಲ್ಲಿ ಹಸಿಯಾಗಿತ್ತು. ರಾತ್ರಿ ಎಷ್ಟೊತ್ತಾಗಿತ್ತೊ ಎನೋ ಮನೆಯ ಮುಂದಿನ ಅಂಗಳದಲ್ಲಿ ಕುಸಿದು ಕುಳಿತ.

೦ ೦ ೦

ಬೆಳಿಗ್ಗೆ ಎದ್ದು ಗುರುಪದ ಹಿತ್ತಲಿಗೆ ಹೋಗಿ ನೊಡಿದ. ನಂದಿ ಇಲ್ಲ. ಅರೇ... ನಂದಿ ಎಲ್ಲಿ ಹೋಯ್ತು..?.. ಅದರ ಕೊರಳಿಗೆ ಕಟ್ಟಿದ ಹಗ್ಗ ಇಲ್ಲೆ ಇದೆ. ಯಾರಾದರು ಬಿಚ್ಚಿಕೊಂಡು ಒಯ್ದರಾ..? ಅಥವಾ ಅದೇ ಬಿಚ್ಚುಗೊಂಡು ಹೋಯ್ತಾ..? ಇಷ್ಟು ದಿನಗಳಲಲ್ಲಿಲ ಈ ಕಲ್ಪನೆ ಕೂಡ ಬಂದಿಲ್ಲ ಅವನಿಗೆ ನಂದಿ ಕುರಿತು. ಯಾವತ್ತು ಹಾಗೇ ಆಗದೆ ಇದ್ದುದ್ದು ಇವತ್ತು ನಡೆದಿರಬಹುದೇ.. ಅದರ ಮೇವು ಇಡುವ ಜಾಗದಲ್ಲಿ ಮುದುರಿ ಕುಳಿತ. ಅದು ನಿನ್ನೇ ಹಾಕಿದ ಶೆಗಣಿ, ಗಂಜಳ ಅರ್ಧ ತಿಂದು ಬಿಟ್ಟ ಮೇವು ಕಾಲಿನ ಗುರುತುಗಳು ಮಾಮುಲಿನ ಹಾಗೆ ಇವೆ. ಯಾರೋ ಮುಖಕ್ಕೆ ರಪ್ಪನೆ ಒದ್ದಂತಾಯ್ತು. ಬಿಡಿಸಿ ಎದ್ದು ಹೊರಗಡೆ ಬಂದ. ಸುತ್ತು ಮುತ್ತ ನೋಡಿದ. ಯಾರನ್ನು ಕೇಳಬೇಕು ..? ಚಿಂತಿಸುತಲೆ ಗುಡಿಯತ್ತ ದಾಪುಗಾಲ ಹಾಕಿದ. ಎದುರಿಗೆ ಬರುತ್ತಿದ್ದ ರಾಮಾ ಜೋಯಿಷರು ಕಲ್ಲು ಬಂಡೆ ನೂಕಿಕೊಂಡು ಬರುತ್ತಿರುವವರಂತೆ ಎದುರಿಗೆ ಬಂದರು. ಗುರುಪಾದನ ನೋಡಿ

“ ಗುರುಪಾದ ನಂದಿ ಎಲ್ಲಿ..? ಒಬ್ಬನೆ ಬರತಿದಿಯಾ..?

“ಗೊತ್ತಿಲ್ಲಾ.. ಮನೇಲೂ ಇಲ್ಲ ರಾಯರೆ.. ತೊದಲುತ, ಮುಖಕೊಟ್ಟು ಹೇಳಲಾಗದೆ ಮುಂದೆ ನಡೆದ. ಜೋಯಿಷರಿಗೆ ತಬ್ಬಿಬ್ಬು. ಗುರುಪಾದ ಅವರನ್ನೊಮ್ಮಿ ಹಿಂತಿರುಗಿ ನೋಡಿ ಮತ್ತೇ ಓಟಕ್ಕಿತ್ತ. ಹಾಸಿಗೆಯಲ್ಲಿದ್ದ ಚಿನ್ನವ್ವ ಕನಲಿದಳು. ಗಂಡನ ಚಟುವಟಿಕೆ, ಇನ್ನು ಮುಂಬಾಗಿಲು ತೆರೆಯದೆ ಇದ್ದುದು ಆತಂಕ ಸೃಷ್ಠಿಸಿತು. ದೇವರೆ ಎನು ನಡೀತಿದೆ ಇಲ್ಲಿ.. ಅಂದು ಅಲವತ್ತುಕೊಳ್ಳುತ್ತ ಬಾಗಿಲತ್ತ ನೋಡಿದಳು. ಬೆಳಿಗ್ಗೆ ಹೊಟ್ಟೆ ತೊಳೆಸಿದ್ದರಿಂದ ಸೀರೆಯಲ್ಲಿಯೆ ಸಂಡಾಸು ಮಾಡಿಕೊಂಡಿದ್ದಳು. ನಾತ ಹೊಡೆಯುತ್ತಿತ್ತು. ಅಸಹ್ಯದ ಜೊತೆಗೆ ವಾಕರಿಕೆ, ಗಂಡ ಇನ್ನೂ ಬರೆದೆ ಬಾಗಿಲ ತೆರೆಯದೆ ಎಲ್ಲಿ ಹೋದ..?ಊರ ದೇವರ ನಂದಿ ಚಾಕರಿ ಮಾಡುವ ಗುರುಪಾದನ ಮನೆಯಿಂದ ನಿನ್ನೇ ರಾತ್ರಿ ನಂದಿ ಕಳುವಾಗಿದೆ. ಊರ ಜನರಿಗೆ ಈ ಮಾತು ಅರಗಿಸಿಕೊಳ್ಳಲಾದಿತಾ..? ಊರನ್ನೆ ಕಾಯುವ ದೇವರದು. ಅನಂತ ಮತ್ತು ಅಖಂಡ ಶಕ್ತಿಗಳ ದೈವಿಸ್ವರೂಪ. ಅದನ್ನು ಮುಟ್ಟಿ ಪಾವನರಾದವರು ಇದ್ದಾರೆ, ಬೇನೆ ಕಳೆದುಕೊಂಡವರಿದ್ದಾರೆ, ವರ ಪಡೆದು ಪುನೀತರಾದವರಿದ್ದಾರೆ ಇಂತ ನಂದಿ ಊರಿಗೆ ಉಪಕಾರಿಯಾಗಿದ್ದುದು ಕಳುವಾಗುವದೆಂದರೆ..?

“ಗುರುಪಾದ ನಿನ್ನೆ ಜಾತ್ರೇ ಮುಗಿದ ಮೇಲೆ ನಂದಿಯನ್ನು ಮನೆಗೆ ಕರೆದುಕೊಂಡು ಹೋದದ್ದು ನೀನೆ ಅಲ್ವೇ..?

“ಹೌದು..

ಮತ್ತೇ ಎಲ್ಲಿ..? ಇಂದು ಸುತ್ತಲಿನ ಗ್ರಾಮಗಳ ಪಲ್ಲಕಿಗಳ ಬಿಳ್ಕೋಡುಗೆ. ಊರ ದೇವರ ಪಲ್ಲಕಿ ಅದರ ಮುಂದೆ ನಂದಿ ಇರಬೇಕು ಗ್ರಾಮದ ಹಳ್ಳದ ತನಕ ಬಂದು ಹದಿನೆಂಟು ಹಳ್ಳಿಯ ಗ್ರಾಮಗಳ ಪಲ್ಲಕಿಯನ್ನು ಬಿಳ್ಕೊಟ್ಟು ಬರುವಾಗ ಗ್ರಾಮ ದೇವರ ಪಲ್ಲಕಿ, ನಂದಿ ಜೊತೆಯಾಗಿ ಬರಬೇಕು ಇದು ಸಂಪ್ರದಾಯ. ಮತ್ತೇ ಹೋಗಿ ನಂದಿ ಕರತರು ಸಿಂಗಾರ ಮಾಡಲ್ವಾ..?

ಗುರುಪಾದ ಹಿರಿಯ ಪೂಜಾರಪ್ಪನ ಕಡೆಗೊಮ್ಮಿ ತೀಕ್ಷ್ಮಣವಾಗಿ ನೋಡಿದ.

“ಇಷ್ಟು ದಿನ ಭಕ್ತಿಯಿಂದ ಸೇವೆ ಮಾಡಿದಿನಿ ಎಂದು ಆಗದ ತಪ್ಪ ಇಂದೇಕೆ ಆಯ್ತು..? ಮಾತು ತುಂಡರಿಸಿದವು ಗುರಪಾದನಿಗೆ. ಕಣ್ಣುಗಳು ತುಂಬಿ ಬಂದವು.

ಹೆಂಡತಿ ರೋಗಿಷ್ಠೆೆ್ಠ. ತಾನೇ ಸೇವೆ ಮಾಡಬೇಕು. ಅದು ಸಾಯೋವರೆಗು ಅವಳಿಗೆ ಖಾಯಿಲೆ ತಪ್ಪಲ್ಲ. ತನ್ನ ಬಿಟ್ಟರೆ ಅವಳ ಸೇವೆಗೆ, ಕೂಳಿಗೆ ಬಟ್ಟೇ ಬರೆಗೆ ಯಾರು ದಿಕ್ಕಿಲ್ಲ. ಅವಳ ಸಂಬಂದಿಕರು ಅಷ್ಟಕಷ್ಟೆ. ಆಳು ಕೊಟ್ಟು ಮಾಡಿಸುವಷ್ಟು ಸಂಪಾದನೆ ಇಲ್ಲ. ನಿತ್ಯ ಊಟಕ್ಕೆ, ಸಂಸಾರದ ತಾಪತ್ರಯಕ್ಕೆ ಸರಿಹೊಂದುವಷ್ಟು ಮಾತ್ರ ಹುಟ್ಟುವ ದಿನದಲ್ಲಿ ಮಿಕ್ಕುವದಾದರು ಎಲ್ಲಿ.? ನೆಟ್ಟಗೆ ಗುಡಿ ಹಿಂದಿನ ಹೂವಿನ ತೋಟಕ್ಕೆ ಬಂದನು. ಪೂಜಾರಪ್ಪ ಹೂ ಕೀಳುತ್ತಿದ್ದ. ಗುರುಪಾದನ ನೋಡಿ

“ಎನು ಗುರುಪಾದ..? ವಯಸ್ಸಿಗು ಮನಸ್ಸಿಗೂ ಮೀರಿದ್ದು ಮಾಡುವಷ್ಟು ಹುಮ್ಮಸ್ಸು ಧೈರ್ಯ ಬಂತಾ ನಿನಗೆ..? ಜೋರಾಗಿ ಹೂವಿನ ಗಿಡದಿಂದ ಹೂವೊಂದನ್ನು ಕೀಳುತ್ತ ಕೇಳಿದ. ಹೂವಿನ ಪಕಳೆಗಳೆಲ್ಲ. ನೆಲ ಕಂಡವು. ನಂದಿ ಕಳೆದು ಹೋಗಿದೆಯಂತೆ ನಿಜವೇ..? ಕೇಳಿದ ಗೊತ್ತಿದ್ದು ಗೊತ್ತಿಲ್ಲದವರ ಹಾಗೆ. ಗುರುಪಾದನಿಗೆ ಹೇಗೆ ಮತ್ತು ಎನು ಹೇಳಬೇಕೆಂದು ತಿಳಿಯದೆ ತಲೆ ಕೆಳಹಾಕಿದ. “ ಹೌದು ಪೂಜಾರಪ್ಪ..

“ದೇವರ ಮುಟ್ಟಿ, ಮೈಲಿಗೆ ಮುಟ್ಟಲು ಹೋದರೆ ಇನ್ನೇನ ಆದಿತು..? ಅದು ದೇವರಿಗೆ ಕಣದಂತ ಮಾಡತಿನಿ ಅನ್ನೊದು ಎಂತಾ ದುಸ್ಸಾಹಸಾ..? ಅಬ್ಬಾ ಮೆಚ್ಚ ಬೇಕು ನಿನ್ನ ಗುಂಡಿಗೆಗೆ..

“ ನಾ ಎಂತ ಮೈಲಿಗೆ ಮಾಡಿದೆ ಪೂಜಾರಪ್ಪಾ..? ಪುಜಾರಪ್ಪನಿಗೆ ಆಶ್ಚರ್ಯ ಕೋಪ ಒಟ್ಟಿಗೆ ನುಗ್ಗಿ ಬಂದವು.

” ನಿನ್ನೆ ಚಿನ್ನವಳ ಮನೆಗೆ ಬಂದುದು ಮೈಲಿಗೆ ಅಲ್ವಾ..? ಅಂದ

“ರಾಮಾಜೋಯಿಷರ ಬಳಿ ಕೇಳಲೆ..?

“ ಎನು ಕೇಳುತ್ತಿ..? ನನ್ನ ಮನೆಯ ಹಿತ್ತಲಿನಲ್ಲಿ ಕಟ್ಟಿ ಹಾಕಿದ್ದ ನಂದಿಯನ್ನು ನಿಮ್ಮ ಜನಗಳು ಕದ್ದುಕೊಂಡು ಹೋಗಿದ್ದಾರೆಂದು ಕೇಳುತಿಯಾ..? ಅಯ್ಯೋ ಪಾಪದವನೆ ದೇವರ ನಂದಿಯನ್ನು ನಾನು ಕದಿಯಲು ಹೇಳಿದಿನಿ ಅಂತಿಯಾ..? ದೇವಸ್ಥಾನದ ಪ್ರಾಂಗಣಕ್ಕೆ ಬಂದು ಇಂತ ಹೊಲಸು ಮಾತಾಡಲು ನಾಚಿಕೆ ಆಗಲ್ವಾ..? ಬೆಚ್ಚಿಬಿದ್ದು ಉಸುರಿದ ಪುಜಾರಪ್ಪ. ಗುರುಪಾದ ನೀರು ನುಂಗಿದ ಹಡುಗಿನಂತೆ ತಟಸ್ಥನಾದ. ಅವನ ಎದೆಯಲ್ಲಿ ಸಮುದ್ರವೇ ಉಕ್ಕುತಿತ್ತು. ಪೂಜಾರಪ್ಪನ ಮಾತು, ಮೋಸ ಹಾಗು ಅಣಕಿಸಿ ರೊಚ್ಚಿಗೆಬ್ಬಿಸುವ ಪರಿಯಿಂದ ರೋಸಿಹೋದ.

“ ನಾನು ಚಿನ್ನಿ ಮನೆಗೆ ಬಂದರೆ ಮೈಲಿಗೆ ಆಯ್ತು, ನೀವು…? ನೀವು ಅವಳ ತೆಕ್ಕೆಯಲ್ಲಿ ಬೆತ್ತಲೆ ಮಲಿಗಿದ್ದಿರಲ್ಲ ಗುಡಿಯಲ್ಲಿ ಒಂದು ಹೂ ಕೂಡ ಬಾಡಿಲ್ಲ ಯಾಕೆ..? ಕೇಳಿದ. ಪೂಜಾರಪ್ಪನಿಗೆ ಗುರುಪಾದನ ಈ ಮಾತು, ವರಸೆ ಕೇಳಿ ಬೆಚ್ಚಿದ. ಅಲ್ಲಿಯೆ ಇಟ್ಟಿದ್ದ ಹೂವಿನ ಬುಟ್ಟಿಯನ್ನು ಪೂಜಾರಿಯ ಮುಖಕ್ಕೆ ಎಸೆದು

“ಹೌದೊ.. ಅವಳು ದೇವದಾಸಿ ನಾನು ಅರ್ಚಕ ಅವಳು ಗುಡಿಯ ಆಸ್ತಿ ಅವಳನ್ನು ಬಲಸುವ ಅಧಿಕಾರ ನನಗಿದೆ.

“ ಹಾಗಾದರೆ ನಾನು ದೇವರ ಸೇವಕನೆ ಅಲ್ವಾ ಪೂಜಾರಪ್ಪ..?

“ ನೀ ಎಂತ ಸೇವಕ ..? ಇಲ್ಲಿಗೇಕೆ ಬಂದೆ ಅದನ ಬೊಗಳು.. ಸಿಡಿದು ನಿಂತ ಪೂಜಾರಪ್ಪ.

“ ದೇವರ ಪೂಜಿಸೊ ನೀವು ಮಾಡಿದರೆ ಮೈಲಿಗೆಯಲ್ಲ. ನಾನು ಅವಳ ಮನೆ ಮುಂದೆ ಬಂದರೆ ಮೈಲಿಗೆಯಾ..? ನಂದಿ ನಿಮ್ಮ ಮನೆಯ ಕೊಟ್ಟಿಗೆಲಿ ಇದೆ. ಅದನ್ನು ಊರ ಪಂಚರ ಮುಂದೆ ನಾನೆ ಹೇಳುವೆ ಕದ್ದದ್ದು ನೀವೆ ಅಂತ. ಇಲ್ಲ ಸಲ್ಲದ ಆರೋಪ ಹೊರಿಸಿ ತಪ್ಪಿನಿಂದ ನೀವು ಪಾರಾಗಲು ನೊಡುತ್ತಿದ್ದಿರಿ..ಈ ಹಣೆ ಬರಹ ನನಗೇಕೆ..? ಹರಿದು ಬಿದ್ದ ಹೂವನ್ನು ಗಿಡದ ಟೊಗೆ ಮೇಲೆ ಇಡುತ್ತ ಮನೆಯತ್ತ ದಾಪುಗಾಲ ಹಾಕಿದ. ಗುರುಪಾದ ಹೋದ ದಾರಿಯನ್ನು ನೋಡುತ್ತ ಪೂಜಾರಪ್ಪ ತುಸು ಹೊತ್ತ ನಿಂತ.

ಮನೇ ಸಮೀಪಿಸುತ್ತಿದ್ದಂತೆ ಕಾಲುಗಳು ಮಣ್ಣಿನೊಳಗೆ ಹೂತು ಹೋದಂತೆ ಜಡವಾದವು. ಬಾಗಿಲ ಚಿಲಕವನ್ನು ನೆಕ್ಕುತ ನಂದಿ ಮನೆ ಮುಂದೆ ನಿಂತಿತ್ತು. ಬೆವರಿದ ಮುಖಕ್ಕೆ ತಂಗಾಳಿ ತಗುಲಿದಷ್ಟು ಮೈ ಮನಸ್ಸು ಹಗರುವಾಯ್ತು. ಬಾಗಿಲ ಚಿಲಕ ತೆಗೆದು ಒಳ ಬಂದ ಹೆಂಡತಿ ಸುತ್ತ ಹೊಲಸು ವಾಸನೆ ಬರುತ್ತಿತ್ತು. ಜೊತೆಗೆ ನೊಣಗಳು ಕೂಡ ಮುಕರಿದ್ದವು. ಎಂದಿನಂತೆ ಇಷ್ಟೊತ್ತಿಗಾಗಲೆ ಎದ್ದು ಚಡಪಡಿಸುತ್ತಿದ್ದವಳು ಅದ್ಯಾಕೆ ಇನ್ನು ನಿದ್ದೆಗೆ ಜಾರಿದಾಳೊ..? ಹೊದಿಕೆ ಸರಿಸಿ ಗದ್ದ ಹಿಡಿದು ಅಲುಗಾಡಿಸಿದ.

“ ಚಿನ್ನಿ..”

ಬಲಕ್ಕೆ ವಾಲಿದ ಮುಖ ಭಾರವಾಗಿತ್ತು ಎಡಕ್ಕೆ ತಿರಗಲು ಸಾಧ್ಯವಾಗಲಿಲ್ಲ.

“ಚಿನ್ನಿ... ಅಂತ ಕೂಗಿದ. ಕೆಳ ಕುಳಿತ. ಕೆಟ್ಟ ವಾಸನೆಗಿಂತ ಅಧಿಕವಾದ ನೋವು ಎದೆ ಗುದ್ದಿಕೊಂಡು ಬಂತು. ಹೊರಗಡೆ ಅಂಗಳ ದಾಟಿ ನಂದಿ ರಸ್ತೇಗೀಲಿದಿದು ಇಲ್ಲಿಂದಲೆ ಕಂಡಿತು. ಎದ್ದು ಬಾಗಿಲ ತನಕ ಬಂದ. ಅದು ಎದುರಿಗೆ ಬರುತ್ತಿದ್ದ ಮಕ್ಕಳು, ಜನಗಳ ಮೇಲೆ ಗೊಣು ಅಲ್ಲಾಡಿಸಿತು, ಹಾಯಲು ಬಂದಂತೆ ಮಾಡಿತು ಗುಟುರು ಹಾಕಿತು. ಊರ ಜನರಿಗೆ ಅದರ ವರ್ತನೆ ನೋಡಿ ಭಯ..

“ ಇದೇನು ದೇವರ ನಂದಿ ಹೀಗೆ ನಡೆತೆಗೆಟ್ಟು ವರ್ತಿಸುತಿದೆ..? ಗುರುಪಾದ ಎಲ್ಲಿ..? ವಯಸ್ಸಾದ ಮುದುಕಿಯೊರ್ವಳನ್ನು ಇರಿಯಲು ಹೊಯ್ತು. ಅವಳು ಭಯದಿಂದ ಹೆದರಿ ಓಡಿದಳು ಜನ ಚದರಿ ದಿಕ್ಕಾಪಾಲಾದರು. ಇದೇನು ದೇವರ ನಂದಿಯೊ ಗೂಳಿಯೊ.. ಯಾರು ಬಾಯಿ ಬಿಟ್ಟು ಹೇಳತಿಲ್ಲ.. ಹೆದರಿಕೆ ಅವರ ಮೈ ಮನ ತಿನ್ನುತ್ತಲೆ ಇದೆ........

ಬಸವಣ್ಣೆಪ್ಪಾ ಕಂಬಾರ

ಬೆಳಗಾವಿ ಜಿಲ್ಲೆಯ ಘೋಡಗೇರಿಯವರಾದ ಬಸವಣ್ಣೆಪ್ಪ ಕಂಬಾರ ಅವರು ಕನ್ನಡದ ಭರವಸೆಯ ಕತೆಗಾರರಲ್ಲಿ ಒಬ್ಬರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಸವಣ್ಣೆಪ್ಪಾ ಅವರು ’ಆಟಿಕೆ’, ’ಗಾಂಧಿ ಪ್ರಸಂಗ’ ಮತ್ತು ಗರ್ದಿ ಗಮ್ಮತ್ ಎಂಬ ಮೂರು ಕತಾ ಸಂಕಲನ ಪ್ರಕಟಿಸಿದ್ದಾರೆ. ಅವರ ಆಟಿಕೆ’ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್‌. ಅನಂತಮೂರ್ತಿ ಕತಾ ಪ್ರಶಸ್ತಿ, ಧಾರವಾಡದ ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಬೇಂದ್ರೆ ಪುಸ್ತಕ ಬಹುಮಾನ ಸಂದಿವೆ.

More About Author