ಚೌರ್ಯಗಳ ಕ್ಷೌರಗಳ ಕುಕವಿಯು ಮಾಡುವನು
ವೀರ್ಯವಿಲ್ಲದ ಪುರುಷ ಜೊಳ್ಳು ಹಡೆದು
ನೋಂದಣಿಯ ಅಪ್ಪನಿವ ಕಪ್ಪು ಸುರಿದು ॥ಪ॥
ಮೆದುಳುಗಳ್ಳನು ಕವಿಯು ಕದ್ದು ಸವಿದನು ಸಿಹಿಯು
ಪದ ಪ್ರತಿಮೆ ಕದಿಯುತಿಹ ಕಳ್ಳನಿವನು
ರಸಮಾಡಿ ಕುಡಿದವನು ಜಲ್ಲೆಯನು ಜಗಿದವನು
ಕಬ್ಬನ್ನು ಕಿತ್ತವನು ಬಲುಭಂಡನು
ಇಟ್ಟಿಗೆಯು ಕಲ್ಲುಗಳು ನನ್ನೆದೆಯ ಉತ್ಪನ್ನ
ಗೋಡೆ ಕಟ್ಟಿದನವನು ತನ್ನದೆಂದು
ಬಿಳಿಸುಣ್ಣ ರಂಜಕವ ಹೊಗಳಿದರು ಜನಪರಿಶೆ
ಅವನೊಳಗೆ ಅಳುಕುಂಟು ಕನ್ನವೆಂದು
ಆಳಗಲ ಎತ್ತರವ ಅರಿಯದಿರೊ ಮಂಕನಿವ
ಪರೀಕ್ಷನ ಕಂಡೊಡನೆ ಓಟಕಿತ್ತ
ನಕಲು ಮಾಡಿದ ಮೆದುಳು ಸಾಮರ್ಥ್ಯ ಬರಿಹುದುಲು
ಚಿತ್ರಸುಮ ಪರಿಮಳಕೆ ಮೂಗನಿತ್ತ
ಕದಿಯದಲೆ ಬರೆದವನ ಈ ಜಗದಿ ನಾಕಾಣೆ
ಪ್ರಕೃತಿಯಲಿ ಬರಹಗಳು ಹುಗಿದೊಟ್ಟಿವೆ
ಬರೆದವನ ಬರಹಗಳ ಕದ್ದವನು ಕಡುಮೂರ್ಖ
ಸಾಹಿತ್ಯ ಲಾಲಿತ್ಯ ಹದಗೆಟ್ಟಿವೆ
ಗಣಿಯೊಳಗೆ ಶ್ರಮವಿರಿಸಿ ರತ್ನವನು ಎತ್ತಿಟ್ಟು
ಕುಸುರಿಯಲಿ ಕೆತ್ತಿದರೆ ಮೂಗುಮೂತಿ
ಹರಿಹರಿಗೆ ಹಾರಿದರೆ ನೆಲೆಯೆಲ್ಲಿ ದೊರಕುವುದು?
ಎದಿರೇಟು ಬಿಗಿದಾಗ ಮಂಗಮೂತಿ
ಜೀವರಾಜ ಹ ಛತ್ರದ
ಜೀವರಾಜ ಹ ಛತ್ರದ
ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)
More About Author