ವಿನಾಯಕ ಅರಳಸುರುಳಿಯವರು ಶಿವಮೊಗ್ಗ ಜಿಲ್ಲೆ,ತೀರ್ಥಹಳ್ಳಿ ತಾಲ್ಲೂಕಿನ ಅರಳಸುರುಳಿ ಗ್ರಾಮದಲ್ಲಿ 1991, ಏಪ್ರಿಲ್ 19ರಂದು ಜನಿಸಿದರು. ಕೃಷಿ ಕುಟುಂಬದ ಹಿನ್ನಲೆಯವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಅರಳಸುರಳಿಯಲ್ಲಿ ಪಡೆದ ಇವರು, ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ 2011-12ನೆಯ ಸಾಲಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದರು. ನಂತರ ಎಂಟು ವರ್ಷಗಳ ಕಾಲ ಬೆಂಗಳೂರಿನ ಖಾಸಗೀ ಸಂಸ್ಥೆಗಳಲ್ಲಿ ಅಕೌಂಟ್ಸ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಹುಟ್ಟೂರಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ಅವರ ಕಾಳಿಂಗ ನರ್ತನ ಕಥೆ ನಿಮ್ಮ ಓದಿಗಾಗಿ...
ಚಂಡಮಾರುತವೋ, ಮಂದಮಾರುತವೋ, ಆ ದಿನ ಬೆಳಿಗ್ಗೆ ಏಳುವ ಹೊತ್ತಿಗೇ ಆಕಾಶದಲ್ಯಾರೋ ದೊಡ್ಡ ಬಟ್ಟೆಯೊಂದನ್ನು ಒಗೆದು ಒಣಗಲು ಹಾಕಿದ್ದಾರೇನೋ ಎಂಬಂತೆ ಮಳೆ ಸಣ್ಣಗೆ ತೊಟ್ಟಿಕ್ಕುತ್ತಿತ್ತು. ಮೇಲೆ ಟೆಂಟು ಕಟ್ಟಿಕೊಂಡಿದ್ದ ಮೋಡ ತನ್ನ ಕೊನೆಯ ಹನಿಯನ್ನೂ ಹನಿಸಿ ಸ್ವಲ್ಪ ಬಿಸಿಲು ಕಾಣಿಸಿಕೊಳ್ಳುವ ವೇಳೆಗೆ ಸಮಯ ಹನ್ನೊಂದು ಮೊವ್ವತ್ತು. ಕಪ್ಪಿನ(ತೋಡು ಅಥವಾ ಕಾಲುವೆ) ಕಳೆ ತೆಗೆಯೋಣ ಎಂದುಕೊಂಡವನಿಗೆ ಅಲಸ್ಯ ಮೂಡಿ ಸೋಗೆಗಳನ್ನಾದರೂ ಎಳೆದು ಬರೋಣ ಎಂದು ತೋಟಕ್ಕೆ ಇಳಿದೆ. ಎಲ್ಲಿ ನೋಡಿದರೂ ತೇವ, ಹುಲ್ಲು, ಗೊಚ್ಚೆ ಹಾಗೂ ಜಾರಿಕೆ. ಕಳೆದ ವರ್ಷ ಮಳೆಗಾಲದಲ್ಲಿ ಈ ಜಾರಿಕೆಗೆ ಸಿಕ್ಕಿ ಕನಿಷ್ಠ ಆರೆಂಟು ಬಾರಿಯಾದರೂ ಕಾಲು ಮೇಲಾಗಿ ಕಪ್ಪಿಗೆ ಬಿದ್ದಿದ್ದೆ. ಪ್ರತೀಸಲ ತೋಟದಿಂದ ಬರುವಾಗಲೂ ಗೊಚ್ಚೆಯಲ್ಲಿ ಜಲಕ್ರೀಡೆ ಆಡಿ ಬಂದ ಎಮ್ಮೆಯಂತೆ ಮೈಯೆಲ್ಲಾ ಮಣ್ಣಾಗಿರುತ್ತಿದ್ದ ನನ್ನನ್ನು ನೋಡಿದ ನನ್ನ ತಮ್ಮ ಈ ಪ್ಯಾಟೆಯ ಫಾರಂ ಕೋಳಿಗಳಿಗ್ಯಾಕೆ ಬೇಕಪ್ಪ ತೋಟದ ಸವಾಸ? ಎಂದು ನಗುತ್ತಿದ್ದ. ಈ ಸಲ ಅಂಥಹಾ ಯಾವುದೇ ಮುಖಭಂಗಕ್ಕೆ ಒಳಗಾಗಬಾರದು ಎಂದು ಎಚ್ಚರಿಕೆಯಿಂದ ನಡೆಯುತ್ತಾ ಸೋಗೆ ಎಳೆದುಹಾಕುತ್ತಿದ್ದೆ. ಅಷ್ಟರಲ್ಲಿ ಪಕ್ಕದ ತೋಟದಲ್ಲಿ ಸುಮ್ಮನೆ ನಡೆಯುತ್ತಿದ್ದ ಲಕ್ಷ್ಮಿ, ಲಲಿತ ಇದ್ದಕ್ಕಿದ್ದಂತೆ ದಾರಿಯ ನಡುವೆ ಏನನ್ನೋ ನೋಡಿ ಕ್ಯಾವ್, ಕ್ಯಾವ್ ಎಂದು ಚೀರಿಕೊಂಡು ಒಬ್ಬರನ್ನೊಬ್ಬರು ದೂಡುತ್ತಾ, ಮೆಟ್ಟುತ್ತಾ ಓಡತೊಡಗಿದರು. ಅವರ ಕೂಗು ಕೇಳಿ ಗಾಬರಿಯಾದ ನಾನೂ ಅರೆಕ್ಷಣ ಓಡಲೆಂದು ಕಾಲ್ತೆಗೆದೆನಾದರೂ ಅಷ್ಟರಲ್ಲಿ ಅವರಿಗೂ, ನನಗೂ ನಡುವೆ ಬಹಳ ಅಂತರವಿದೆ, ಅವರನ್ನು ಅಡ್ಡಹಾಕಿದ ಆ ಮೃಗ ನನ್ನೆಡೆಗೆ ಬರಲಿಕ್ಕೆ ಇನ್ನೂ ಸಮಯ ಬೇಕು ಎಂಬ ಸತ್ಯ ಮೆದುಳಿಗೆ ಅರ್ಥವಾಗಿ ಸುಧಾರಿಸಿಕೊಂಡೆ.ಕಿಟಾರನೆ ಚೀರಿ ಹತ್ತಾರು ಹೆಜ್ಜೆ ಓಡಿದ ಅವರಿಬ್ಬರೂ ಒಂದು ಕಡೆ ನಿಂತು ತಮ್ಮೆದುರಿದ್ದ ಕಪ್ಪನ್ನೇ ಭಯದಿಂದ ನೋಡುತ್ತಿದ್ದರು. ಮೊದಲಿಗೆ ನಾನು ಮುಂಗುಸಿಯೋ ಮತ್ತೆಂತದೋ ನಾಲ್ಕು ಕಾಲಿನ ಪ್ರಾಣಿ ಸುಮ್ಮನೆ ಕುಶಾಲಿಗೆ ಇವರನ್ನು ಅಟ್ಟಿಸಿಕೊಂಡು ಬಂದಿರಬೇಕೆಂದುಕೊಂಡು ಏನಾಯ್ತು? ಎಂದು ಕೇಳಿದೆ. ಅದಕ್ಕೆ ಲಕ್ಷ್ಮಿ ಅಯ್ಯೋ, ಹಾವು! ಇಷ್ಟು ದೊಡ್ಡ ಹೆಡೆ! ಕುತ್ತಿಗೆಯ ಕೆಳಗೆ ಕೆಂಪು.. ಅಲ್ಲಲ್ಲ ಹಳದಿ! ಇಷ್ಟೆತ್ತರಕ್ಕೆ ಹೆಡೆ ಎತ್ತಿ, ಬಾಯಿ ಕಳೆದು ಅಟ್ಟಿಸಿಕೊಂಡು ಬಂತು ಎಂದಳು. ಅದಕ್ಕೆ ಲಲಿತ ಅದು ಓಡ್ಸ್ಕೊಂಡ್ ಬರ್ತಿದ್ದರೆ ಇವ್ಳು ಓಡೋದು ಬಿಟ್ಟು ನನ್ನ ಕಾಲನ್ನೇ ಮೆಟ್ಟಿದಳು ಎಂದು ಕಂಪ್ಲೇಂಟ್ ಮಾಡಿದಳು. ಯಾವ ಹಾವಿನ ಬಾಲ ಯಾವ ಬಣ್ಣಕ್ಕಿರುತ್ತದೆ ಎಂಬ ಯಾವುದೇ ಮಾಹಿತಿ ಗೊತ್ತಿಲ್ಲದವನಾದರೂ ಅವರ ಭಯದ ಮೂಲಕ ಆ ಹಾವಿನ ಜಾತಿಯನ್ನು ಊಹಿಸಿದ ನಾನು ಕಾಳಿಂಗ ಸರ್ಪನಾ ಎಂದು ಕೇಳಿದೆ. ಲಲಿತ ಹೌದೆನ್ನುತ್ತಾ ಎದುರುಗಡೆಯ ಕಪ್ಪಿನೊಳಗಿದೆ ಎಂದು ಬೆರಳು ತೋರಿಸಿದಳು.ನಾನು ಯಾವುದೇ ಕ್ಷಣದಲ್ಲಾದರೂ ಓಡುವುದಕ್ಕೆ ತಯಾರಾಗಿ ನಿಂತುಕೊಂಡು ದೂರದಿಂದಲೇ ಆ ಕಪ್ಪಿನೊಳಗೆ ಇಣುಕಿದೆ. ಬಿದ್ದ ಸೋಗೆಗಳಿಂದ ಮುಚ್ಚಿಹೋಗಿದ್ದ ಅದರಲ್ಲಿ ಏನೂ ಕಾಣಲಿಲ್ಲ. ಅಷ್ಟರಲ್ಲಿ ತಾನೇ ಕೊಂಚ ಧೈರ್ಯ ತಂದುಕೊಂಡ ಲಕ್ಷ್ಮಿ ಸಣ್ಣ ಕಲ್ಲೊಂದನ್ನೆತ್ತಿ ಕಪ್ಪಿಗೆ ಎಸೆದಳು. ಕಲ್ಲು ಹೋಗಿ ಬಿದ್ದದ್ದೇ ತಡ, ಇಷ್ಟು ಹೊತ್ತು ಸೋಗೆಗಳ ಮರೆಯಲ್ಲಿ ನಿಶ್ಚಲವಾಗಿದ್ದ ತೊಡಿನೊಳಗಿನ ಕಪ್ಪು ಕತ್ತಲು ಮೆಲ್ಲಗೆ ಚಲಿಸಲಾರಂಭಿಸಿತು. ಆಗ ನನಗೆ ಹೊಳೆಯಿತು.. ಇಷ್ಟು ಹೊತ್ತು ನಾನು ನೋಡಿದ್ದು ಕತ್ತಲನ್ನಲ್ಲ.. ಸುರುಳಿ ಸುತ್ತಿಕೊಂಡ ಹಾವಿನ ಕಡುಗಪ್ಪು ದೇಹವನ್ನು!ದಟ್ಟ ಕಪ್ಪು ಬಣ್ಣದ ನಡುವೆ ಚಿಕ್ಕ ಚಿಕ್ಕ ಗೀರುಗಳನ್ನು ಬರೆದು ಮಾಡಿದ ಹಗ್ಗವೊಂದನ್ನು ಅಲ್ಲಿ ಯಾರೋ ಸುತ್ತಿಟ್ಟಿದ್ದಾರೇನೋ ಎಂಬಂತೆ ಸಣ್ಣದಾದ ಎರೆಡು ಸುರುಳಿ ಸುತ್ತಿಕೊಂಡಿದ್ದ ಆ ಸರೀಸೃಪದ ತಲೆ ಯಾವ ಕಡೆಗಿದೆಯೋ, ಬಾಲ ಯಾವ ಕಡೆಗಿದೆಯೋ ಕಾಣುತ್ತಿರಲಿಲ್ಲ. ಅದರ ದೇಹದ ಗಾತ್ರವನ್ನು ಗಮನಿಸಿದರೆ ಇದು ಕೇರೆ, ನಾಗರ ಮುಂತಾದ ಚಿಕ್ಕ ಜಾತಿಯ ಹಾವಂತೂ ಅಲ್ಲ ಎನ್ನುವುದು ಸ್ಪಷ್ಟವಾಗುತ್ತಿತ್ತು. ತನ್ನ ಪಾಡಿಗೆ ತಾನು ಹರಿದು ಹೋಗುವಾಗ ಥಟ್ಟನೆ ಎದುರಾಗಿ ಹೋಹೋ ಎಂದು ಅರಚುತ್ತಾ ಓಡಿದ ಈ ಎರೆಡು ಮನುಷ್ಯ ಪ್ರಾಣಿಗಳಿಂದ ಬಚಾವಾಗಲೋ ಏನೋ, ಅದು ಸೋಗೆಯ ಮರೆಯಲ್ಲಿ ಅಲ್ಲಾಡದೆ ಮಲಗಿತ್ತು.ಕಳೆದೊಂದು ವರ್ಷದಿಂದ ಊರಿನಲ್ಲಿದ್ದರೂ ಒಂದೇ ಒಂದು ಕಾಡು ಪ್ರಾಣಿಯನ್ನು ನೋಡಲಾಗಿಲ್ಲವೆಂದು ಕೊರಗುತ್ತಿದ್ದ ನನಗೆ ಒಳಗೊಳಗೇ ಖುಷಿಯಾಯಿತು. ಜೇಬಿನಿಂದ ಮೊಬೈಲು ತೆಗೆದು ಪಕ್ಕದ ಮನೆಯ ಅರುಣಣ್ಣನಿಗೆ ಕಾಲ್ ಮಾಡಿದೆ. ಮರುಕ್ಷಣವೇ ತೋಟಕ್ಕೆ ಬಂದ ಅವರು ಇದು ಕಾಳಿಂಗವೇ ಎಂದು ದೃಢಪಡಿಸಿದರು. ಆಚೆಕಡೆಯಿಂದ ಮೆಲ್ಲಗೆ ಆ ತೋಡನ್ನು ಸಮೀಪಿಸಿದ ಅವರು ಅರ್ಧ ಕಪ್ಪಿನೊಳಕ್ಕೆ ಹಾಗೂ ಇನ್ನರ್ಧ ಹೊರಗೆ ಬಿದ್ದಿದ್ದ ಸೋಗೆಯನ್ನು ನಿಧಾನಕ್ಕೆ ಎಳೆದುಹಾಕಿದರು. ಇಷ್ಟು ಹೊತ್ತು ತನ್ನನ್ನು ಮರೆಮಾಡಿದ್ದ ಸೋಗೆ ಮೇಲಿನಿಂದ ಸರಿಯುತ್ತಿದ್ದಂತೆಯೇ ಆ ಉರಗ ಸರ್ರನೆ ಸರಿಯುತ್ತಾ ಮುಂದಕ್ಕೆ ಚಲಿಸಿತು. ಅದನ್ನು ಕಂಡ ಲಕ್ಷ್ಮಿ ಓ ಅಲ್ಲಿದೆ..ಬಂತು ಬಂತು ಎಂದು ಕಾಮೆಂಟ್ರಿ ಕೊಟ್ಟಳು. ಅದು ಆ ಕಡೆ ಹೋಗುತ್ತಿದೆಯೋ, ಇತ್ತ ಬರುತ್ತಿದೆಯೋ ಎಂದು ಗೊತ್ತಾಗದ ನಾನು ಯಾವುದಕ್ಕೂ ಇರಲೆಂದು ಮನೆಯ ದಾರಿಯಲ್ಲಿ ನಾಲ್ಕು ಹೆಜ್ಜೆ ಹಿಂದಕ್ಕೆ ಓಡಿದೆ. ಆದರೆ ಪುಣ್ಯಕ್ಕೆ ಹಾವು ನಮ್ಮ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಾ ಕಪ್ಪಿನೊಳಗೆ ಮುಂದೆಹೋಯಿತು. ಹೆದರುತ್ತಲೇ ಅದು ಹೋದ ದಾರಿಯಲ್ಲಿ ಹಿಂಬಾಲಿಸಿ ನಡೆಯುವಾಗ ನನ್ನ ಮನಸ್ಸಿನಲ್ಲಿ ಎಂತೆಂಥದೋ ಕಲ್ಪನೆಗಳು ಬರುತ್ತಿದ್ದವು. ಹಾವು ಹಿಂದಿನಿಂದ ಬಂದು ನನಗೆ ಕಚ್ಚಿಬಿಟ್ಟರೆ? ಕಾಲ ಕೆಳಗಿನಿಂದ ಭುಸ್ ಅಂತ ಇಷ್ಟೆತ್ತರಕ್ಕೆ ಎದ್ದುನಿಂತರೆ? ಮರದ ಮೇಲಿನಿಂದ ಟಪಕ್ ಅಂತ ತಲೆ ಮೇಲೆ ಉದುರಿದರೆ? ಹೀಗೇ ಒಳಗೊಳಗೇ ಹೆದರುತ್ತಾ, ಎದುರಿಗೆ ಧೈರ್ಯ ನಟಿಸುತ್ತಾ ಅಣ್ಣನನ್ನು ಹಿಂಬಾಲಿಸಿ ನಡೆದೆ. ಹಾಳಾದ್ದು ನೋಡೋಕೆ ಎಷ್ಟು ಭಯಂಕರವಾಗಿದೆಯೋ ಅದರ ವಿಷ ಇನ್ನೂ ಭಯಂಕರವಾಗಿರುತ್ತದೆ. ಅದರ ಒಂದು ತೊಟ್ಟು ವಿಷ ಇಪ್ಪತ್ತು ಜನರನ್ನ ಪರಲೋಕಕ್ಕೆ ಕಳಿಸುತ್ತದಂತೆ. ಅಲ್ಲಿಗೆ ನನಗೇನಾದರೂ ಅದು ಕಚ್ಚಿದರೆ ಮುಂದಿನ ಇಪ್ಪತ್ತು ಜನುಮದ್ದೂ ಸೇರಿಸಿ ಒಮ್ಮೆಲೇ ಸತ್ತು ಹೋಗ್ತೇನೆ.. ಹೀಗೇ ಯೋಚಿಸುತ್ತಾ ನಡೆಯುವಾಗ ನಡುವೆ ಸಣ್ಣಗೆ ಕಾಲು ಜಾರಿತು. ಜಾರಿದ್ದು ಸ್ವಲ್ಪವೇ ಆದರೂ ನಾನು ಮಾತ್ರ ಆ ಕಾರ್ಕೋಟಕ ಕಾಳಿಂಗದ ಬಾಯೊಳಗೇ ಬಿದ್ದುಬಿಟ್ಟೆನೇನೋ ಎಂಬಂತೆ ಗಾಬರಿಯಾದೆ.ಕೊಂಚ ಮುನ್ನಡೆದ ಅಣ್ಣ ದೋಟಿಯೊಂದರಿಂದ ಕಪ್ಪಿನೊಳಗಿನ ಮತ್ತೊಂದು ಸೋಗೆಯನ್ನು ಸರಿಸಿದಾಗ ಕಾಳಿಂಗ ಮತ್ತೆ ಕಾಣಿಸಿಕೊಂಡಿತು. ನನಗದು ಕಾಣಲಿಲ್ಲವಾದರೂ ಅವರು ಹಿಡಿದ ದೋಟಿಯ ಆಚೆ ಅಂಚಿನಿಂದ ಕೇಳಿಬಂದ ಹಿಸ್ ಎಂಬ ಶಬ್ದ ಸ್ಪಷ್ಟವಾಗಿಯೇ ಕಿವಿತಲುಪಿತು. ಕಣ್ಣು ಕೀಲಿಸಿ ನೋಡಿದರೆ ಮತ್ತದೇ ಚಲಿಸುವ ಕಡುಗಪ್ಪು ಹಗ್ಗ! ಅಷ್ಟರಲ್ಲಾಗಲೇ ಸುದ್ದಿ ತಿಳಿದ ನಾಲ್ಕಾರು ಜನ ಅಲ್ಲಿ ಜಮೆಯಾದರು. ನಮ್ಮೆಲ್ಲರ ಇರುವಿಕೆಯ ಸುಳಿವಿನಿಂದಲೋ ಅಥವಾ ದೋಟಿಯನ್ನು ತಾಕಿದ್ದರಿಂದಲೋ ವಿಚಲಿತಗೊಂಡ ಆ ಸರ್ಪ ಕಪ್ಪಿನಿಂದ ಹೊರಬಂದು ಎರೆಡಡಿ ಎತ್ತರಕ್ಕೆ ಬೆಳೆದ ಹುಲ್ಲಿನ ನಡುವೆ ತೆವಳುತ್ತಾ ಆಚೆಯ ಹಸಿರಿನೊಳಗೆ ಲೀನವಾಗಿಹೋಯಿತು.ಮೇಲೆ ಬಂದ ಅದನ್ನು ಚೆನ್ನಾಗಿ ಗಮನಿಸಿದ್ದ ನಾಗೇಶ ಅದರ ಹೆಡೆಯ ಕೆಳಗಿನ ಎರೆಡೂ ಪಾರ್ಶ್ವಗಳಲ್ಲಿ ಹಳದಿ ಬಣ್ಣವಿತ್ತೆಂದು ಹೇಳಿದ. ಹುಡುಕಿ ನೋಡಿದರೆ ಕಾಳಿಂಗಗಳಂತೆ ಕೆಲ ನಾಗರಗಳಿಗೂ ಹೆಡೆಯ ಕೆಳಗೆ ಹಳದಿ ಪಟ್ಟೆಯಿರುತ್ತದೆ ಎಂದು ಗೊತ್ತಾಯಿತು. ಅತ್ತ ನಾಗರದಷ್ಟು ಚಿಕ್ಕವೂ ಇಲ್ಲದ, ಇತ್ತ ಕಾಳಿಂಗದಷ್ಟು ದೊಡ್ಡವೂ ಇಲ್ಲದ ಅದು ಇನ್ನೂ ಹೈಸ್ಕೂಲು ವಯಸ್ಸಿನ ಕಾಳಿಂಗವೇ ಇರಬೇಕೆಂಬುದು ನನ್ನ ಅಭಿಪ್ರಾಯ. ಅದು ಯಾವ ಹಾವೇ ಆದರೂ ನಾನಂತೂ ಇನ್ನೆರೆಡು ದಿನ ತೋಟದ ಕಡೆ ತಲೆಹಾಕುವುದಿಲ್ಲ ಎಂದು ಪ್ರತಿಜ್ಞೆ ಮಾಡಿಯಾಗಿದೆ. ಸಣ್ಣದೊಂದು ಹಳಕಲು ಬಳ್ಳಿ ಕಾಲಿಗೆ ತಾಕಿದರೂ ಮಾರುದ್ದದ ಕಾಳಿಂಗವೇ ಕಾಲಿಗೆ ಸುತ್ತಿಕೊಂಡಿದೆ ಎನಿಸಿ, ಪ್ರಾಣಭಯದಲ್ಲಿ ದಿಕ್ಕಾಪಾಲಾಗಿ ಓಡಿ, ಕಾಲು ಮೇಲಾಗಿ ತೋಡಿಗೆ ಬಿದ್ದು, ಮೂಳೆ ಮುರಿದು, ಹಲ್ಲುದುರಿ.. ಹೆಣ್ಣು ಸಿಗದ ಈ ಕಾಲದಲ್ಲಿ ಇಂಥಹಾ ರಿಸ್ಕ್ ಗಳೆಲ್ಲಾ ಯಾಕೆ ಬೇಕು ಅಲ್ವಾ?..
ವಿನಾಯಕ ಅರಳಸುರಳಿ
ಶಿವಮೊಗ್ಗ ಜಿಲ್ಲೆ,ತೀರ್ಥಹಳ್ಳಿ ತಾಲ್ಲೂಕಿನ ಅರಳಸುರುಳಿ ಗ್ರಾಮದಲ್ಲಿ 1991, ಏಪ್ರಿಲ್ 19ರಂದು ಜನಿಸಿದ ವಿನಾಯಕ ಅರಳಸುರುಳಿಯವರು, ಕೃಷಿ ಕುಟುಂಬದ ಹಿನ್ನಲೆಯವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಅರಳಸುರಳಿಯಲ್ಲಿ ಪಡೆದ ಇವರು, ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ 2011-12ನೆಯ ಸಾಲಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದರು. ನಂತರ ಎಂಟು ವರ್ಷಗಳ ಕಾಲ ಬೆಂಗಳೂರಿನ ಖಾಸಗೀ ಸಂಸ್ಥೆಗಳಲ್ಲಿ ಅಕೌಂಟ್ಸ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಹುಟ್ಟೂರಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ಹವ್ಯಾಸೀ ಬರಹಗಾರರಾಗಿದ್ದು, ಕವನ ಲಲಿತ ಪ್ರಬಂಧ ಹಾಗೂ ಸಣ್ಣಕತೆಗಳನ್ನು ಬರೆದಿದ್ದಾರೆ. ಮೈಸೂರು ಅಸೋಸಿಯೇಶನ್-ಮುಂಬೈ ಇವರು 2016ರಲ್ಲಿ ನಡೆಸಿದ ‘ಮಾಸ್ತಿ ಸ್ಮರಣಾರ್ಥ ನೇಸರು ಜಾಗತಿಕ ಸಣ್ಣಕತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಇದೇ ಸಂಸ್ಥೆಯವರು 2017ರಲ್ಲಿ ನಡೆಸಿದ ನೇಸರು ಜಾಗತಿಕ ಕನ್ನಡ ಕವನಗಳ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಕನ್ನಡ ಸಂಘ- ಸಿಂಗಾಪುರ ಇವರು 2017ರಲ್ಲಿ ನಡೆಸಿದ ಸಣ್ಣಕತೆಗಳ ಸ್ಪರ್ಧೆಯಲ್ಲಿ ಪ್ರತಮ ಬಹುಮಾನ ಸೇರಿದಂತೆ ಹಲವು ಬಹುಮಾನಗಳನ್ನು ಪಡೆದಿದ್ದಾರೆ.
More About Author