ಅವನು ನನ್ನ ಜೊತೆಗಾರ
ನನ್ನನ್ನು ಆಗಾಗ
ಹಿಂಬಾಲಿಸುವನು
ಮುಂಬಾಲಿಸುವನು !
ಸೂರ್ಯ ಚಂದ್ರ ವಿದ್ಯುತ್ತಿನ
ಬೆಳಕಿದ್ದರೆ ಕಾಣುವನು
ಕತ್ತಲಾದರೆ ಸಾಕು
ಏಕಾಏಕಿ ಮಾಯವಾಗುವನು !
ನನಗೂ ಹೇಳುವದಿಲ್ಲ
ಹೋಗುವ ವಿಷಯ
ಹೋದಾಗ ಹುಡುಕುತ್ತೇನೆ
ಎಲ್ಲಿಗೆ ಹೋದನೆಂದು
ಯೋಚಿಸುತ್ತೇನೆ !
ಕೂಗಿದರು ಬರುವದಿಲ್ಲ
ಕಿವಿಯಿದ್ದರು ಕೇಳುವದಿಲ್ಲ
ಬಾಯಿದ್ದರು ಮಾತಾಡುವದಿಲ್ಲ
ಕಾಲಿದ್ದರು ಹೆಜ್ಜೆಹಾಕುವದಿಲ್ಲ !
ನಾನಿಲ್ಲದಿದ್ದರೆ ಅವನಿಲ್ಲ
ಅವನಿಗೆ ಸ್ವಂತ ಅಸ್ತಿತ್ವವೂ ಇಲ್ಲ
ಜೀವವಿಲ್ಲ ಭಾವವಿಲ್ಲ
ಆದರೂ ನನ್ನೊಂದಿಗೆ ನೆರಳಾಗಿ
ಹಿಂಬಾಲಿಸುವನು!!
- ಶರಣಗೌಡ ಬಿ ಪಾಟೀಲ ತಿಳಗೂಳ
ಶರಣಗೌಡ ಬಿ.ಪಾಟೀಲ ತಿಳಗೂಳ
ಲೇಖಕ ಶರಣಗೌಡ ಪಾಟೀಲ ಅವರು ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಹಿಟ್ಟಿನ ಗಿರಣಿ ಕಿಟ್ಟಪ್ಪ (ಲಲಿತ ಪ್ರಬಂಧಗಳ ಸಂಕಲನ)’, ತೊರೆದ ’ಗೂಡು (ಕಾದಂಬರಿ), ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು (ಕಥಾ ಸಂಕಲನ), ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ (ಕಾದಂಬರಿಗಳು)
ಪ್ರಶಸ್ತಿ-ಪುರಸ್ಕಾರಗಳು: ಇವರ ‘ಹಿಟ್ಟಿನ ಗಿರಣಿ ಕಿಟ್ಟಪ್ಪ ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ. ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ. ಸಾಧಕ ಶಿಕ್ಷಕ ಪ್ರಶಸ್ತಿ, ಕನ್ನಡ ನಾಡು ಲೇಖಕರ ಓದುಗರ ಸ ಸಂಘದಿಂದ ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಪುಸ್ತಕ ಪ್ರಶಸ್ತಿ ಗುರುಕುಲ ಪ್ರತಿಷ್ಠಾನದಿಂದ ಸಾಹಿತ್ಯ ಶರಭ ಪ್ರಶಸ್ತಿಗಳು ಲಭಿಸಿವೆ.
More About Author