Poem

ಜೇಡರ ಬಲೆಯ ದಿಗ್ಭಂಧನ

ಅರ್ಧಸುಟ್ಟು ಇನ್ನರ್ಧ ದಿಕ್ಕೆಡಿಯಾದ
ಸಿಗರೇಟಿನ ಚೂರೊಂದು
ಗಾಳಿಗದುರಿ ಮಾತನಾಡುತಿದೆ
ಅದಕ್ಕೇನೋ
ಸುಟ್ಟು ಕಾಲಲಿ ತಿಕ್ಕಿದವನ
ಚರಿತ್ರೆ ಸಾರುವ ಆಸೆಯಂತೆ
ಈಗೀಗ ಹೊಸಕುವದು ನವ್ಯಯುಗದ
ಪ್ಯಾಷೆನ್ ಆಗಿದೆ

ಈಗೀಗ ಅಲ್ಲ ಬಿಡಿ,
ಹರಪ್ಪ-ಮಹೆಂಜೋದಾರೋದಿಂದಲೂ
ಚರಿತ್ರೆ ಸಾರುವ
ಇತಿಹಾಸ ಪುಟವನು
ಜೇಡರ ಬಲೆಯು ದಿಗ್ಭಂಧಿಸಿ
ಮೋಜುಗಾಗಿ ಗೇಲಿ ಮಾಡಿದೆ
ಅದಕ್ಕೂ,
ಅಲ್ಪಾಯುಷದ ಶಿಕ್ಷೆ ಜಾರಿಯಾಗಿದೆ....

ಕೀಟ ತಿಂದು ಹರಿದ
ಪುಟದಲ್ಲಿದ್ದವರೆಲ್ಲ
ಮೂಗು,ಕಣ್ಣು,ಕಿವಿ ಕಳೆದುಕೊಂಡವರ
ಅಸ್ಪಷ್ಟವಾದ ವಾಕ್ಯಗಳು,
ಅನತಿ ದೂರದಲಿರುವಂತೆ ವಿಚಿತ್ರ ಕೂಗು
ಪುಟ ಹೊರಳಿಸಿದ ತೋರ್ಬೆರಳಿನ
ತೇವಗೊಂಡ ಕುರುಹು
ಪಳುವಳಿಕೆಯಂತಿರುವ

ಕೊಳೆತ ಸೀರೆಯೊಳಗೊಂದಿಷ್ಟು
ಸ್ಖಲಿಸಿ ಹೋದವರ ವೀರ್ಯ,
ಹೆಕ್ಕಿ ತೆಗೆದ ಭಯಕ್ಕೆ ಮಣ್ಣು ಎಳೆದು
ಮುಚ್ಚಿಕೊಂಡಿದೆ

ಟಾರುಕಿತ್ತ ರೋಡಿನೊಂದಿಗೆ
ವಾದಕ್ಕಿಳಿಯಬೇಡ,
ಅದನ್ನೂ ಅತ್ಯಾಚಾರಗೈಯಲಾಗಿದೆ

ಹುಡಿ ಧೂಳೆದ್ದ ರೋಡಿನ ತುಂಬ
ಹತ್ಯಗೈದವನ ಬೆವರುಹನಿಗಳ ಚಿತ್ತಾರ...!
ಕಲ್ಲುಬಂಡೆಗೆ ಚಿಮ್ಮಿದ ಹಸಿರಕ್ತದ
ವಾಸನೆಗೆ ಇರುವೆ ಸಾಲುಗಳೇ ಸಾಕ್ಷಿ
ರುಂಡ ಛೇಧಿಸಿ,ಮಣ್ಣು ಮೆತ್ತಿಕೊಂಡು
ತುಕ್ಕು ಹಿಡಿದ ಮುದಿಖಡ್ಗಕ್ಕೂ
ಪ್ರಾಯಶ್ಚಿತ್ತದ ಬಿಕ್ಕಳಿಕೆ....!

ಮೋಡಕ್ಕಿನ್ನು ಪುರಾವೆಗಳನು ಸಲ್ಲಿಸಬೇಡ,
ಅದಕ್ಕೂ ತೇಪೆ ಹಚ್ಚಿ ಗುರುತು ಸಿಗದಂತೆ
ತಿರುಚಲಾಗಿದೆ....

ರಾಯಸಾಬ ಎನ್ ದರ್ಗಾದವರ

ರಾಯಸಾಬ ಎನ್ ದರ್ಗಾದವರ ಅವರು ಮೂಲತಃ ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದವರು. ವೃತ್ತಿಯಿಂದ ಹುಬ್ಬಳ್ಳಿ ಶಹರದ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಪೇದೆಯಾಗಿ 2012 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿ ನೆಹರು ಕಾಲೇಜಿನಿಂದ ಪದವೀಧರರು. ಕತೆ, ಕವಿತೆ ಬರೆಯುವ ಮೂಲಕ ಸಾಹಿತ್ಯಿಕವಾಗಿ ತಮ್ಮನ್ನುಗುರುತಿಸಿಕೊಂಡಿದ್ದಾರೆ. ದಿನಪತ್ರಿಕೆ, ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಅವರ ಕವಿತೆಗಳು "ಕಾವ್ಯದ ಹುಳು"ತಂಡದವರು ನಡೆಸಿಕೊಡುವ 'ಚಿತ್ರ ನೋಡಿ ಕವಿತೆ ಬರೆಯಿರಿ' ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ಕನ್ನಡ ಕಲರವ ಮತ್ತು ಅವ್ವ ಪುಸ್ತಕಾಲಯದವರು ನಡೆಸಿದ ಕಾವ್ಯ ಸ್ಪರ್ಧೆಯಲ್ಲಿ ಟಾಪ್ 5 ಸರಣಿಯಲ್ಲಿ ಬಹುಮಾನ ಪಡೆದಿವೆ.

More About Author