Poem

ಹೊಂಗೆ ನೆರಳಿನ ಆತ್ಮವು

ಒಂದು ಸಮಾಧಿಯ ಮೇಲೆ ಎಂದೋ ನೆಟ್ಟ ಸಸಿಯು
ಈಗ ಬೆಳೆದು ಮರವಾಗಿದೆ
ಒಳಗೆ ಹೂತವನು ಮತ್ತೆ ಜೀವಂತವಾಗಿದ್ದಾನೆ
ಹೊಂಗೆಮರದ ಮೂಲಕ ಸಾಕ್ಷಿಯಾಗಿದ್ದಾನೆ
ಕಣ್ಣುಮುಚ್ಚಿದ ಆ ಜೀವವು ಬದುಕಿದೆ
ಉಸಿರಾಡುವುದು ಈಗ ಕಣ್ಣಿಗೆ ಕಾಣುತ್ತಿದೆ
ಆ ಜೀವವಿಲ್ಲ ಎಂಬ ಭಾವವೇ ಇಲ್ಲವಾಗಿದೆ

ಬಿರುಬಿಸಿಲಿನ ಆ ದೊಡ್ಡ ಮಸಣದಲ್ಲಿ
ಇದೊಂದು ಮರ ಸುಂದರ
ಅಕ್ಕಪಕ್ಕದ ನೂರಾರು ಸಮಾಧಿ-ಗೋರಿಗಳು ಅನಾಥವಾಗಿವೆ
ಹೂತು ಹೋದವರ ನಡುವೆ
ಇವನ ಸಮಾಧಿ ಮಾತ್ರ ಬದುಕಿದೆ
ತುಂಬು ಹಸಿರು ಬಿಳಲು ಬಿದ್ದ ಟೊಂಗೆಗಳು
ತಂಪಾದ ನೆರಳು
ಚಿಲಿಪಿಲಿ ಹಕ್ಕಿಗಳ ಸದ್ದು ಗೂಡುಕಟ್ಟಿದ ಸೊಗಸು
ಬಿಸಿಲು ಕಾಣದ ಬುಡವು
ಬೆಳೆದ ಮರವು ಸುತ್ತಲಿನ ನೆನಪಿಗೆ
ಗುರುತಾಗಿದೆ ಆಶ್ರಯವಾಗಿದೆ

ನಿರೀಕ್ಷೆ ಇರಲಿಲ್ಲ
ನೆಟ್ಟ ಸಸಿಗಳೆಲ್ಲಾ ಬದುಕಿ ಮರವಾಗುವ ಕಲ್ಪನೆ
ದೂರದ ಮಾತು
ಶಾಸ್ತ್ರಕ್ಕೆಂದು ಹೆಣ ಹೂಳುವಾಗ ಯಾವುದೋ ಗಿಡನೆಟ್ಟು
ಹಾಲು ತುಪ್ಪ ಹಾಕಿ ಪೂಜೆ ಮಾಡಿದ ನೆನಪು
ಅಂದು ನೆಟ್ಟ ಹೊಂಗೆ ಸಸಿಯು ಬದುಕಿದೆ
ಮಣ್ಣ ನೀರನ್ನು ಹೀರಿ ಜೀವಂತವಾಗಿದೆ
ಸತ್ತವನು ಕೊಳೆತು ನೆಲದಾಳವನು ಸೇರಿ
ಹುಳು ಹುಪ್ಪಡಿಗಳಿಗೆ ಆಹಾರ ಗೊಬ್ಬರವಾಗಿ
ನೆಟ್ಟಸಸಿಗೆ ಬಲವಾಗಿರಬಹುದು
ಒಣಸ್ಮಶಾನದಲ್ಲಿ ಸಿಕ್ಕ ಗುಟುಕು ನೀರು ಹಿಡಿಯಷ್ಟು ಫಸಲು
ಮಣ್ಣ ಗೊಬ್ಬರದ ಸಾರ ಹೀರಿ
ಹೊಂಗೆ ಸಸಿಯು ಬೆಳೆದು ದೊಡ್ಡದಾಗಿರಬಹುದು

ಬದುಕಿ ಬಾಳಿದರೆ ವೃಕ್ಷದಂತಿರಬೇಕು ಎಂದರು ಹಿರಿಯರು
ಇದ್ದಾಗಲೂ ಬಿಸಿಲಿಗೆ ತಂಪು ನೆರಳು
ಸತ್ತಾಗಲೂ ಮನೆಯ ಆಶ್ರಯ
ಈಗ ಸತ್ತವನು ಹಾಗೆ ಆಗಿದ್ದಾನೆ ಅಂತ ಅನಿಸುತ್ತಿದೆ
ಬದುಕಿದ್ದಾಗಲೂ ಮರದಂತೆ ನೆರಳು ಹಣ್ಣು ಆಶ್ರಯ ನೀಡಿದ ವ್ಯಕ್ತಿ
ಈಗ ಸತ್ತ ಮೇಲೂ ಹಾಗೆ ಬದುಕುತ್ತಿದ್ದಾನೆ ಅಂತ ಕಾಣುತ್ತಿದೆ
ಬೆಳೆದು ನಿಂತ ಆ ಹೊಂಗೆ ಮರವೇ
ಅವನ ಬದುಕಿಗೆ ಸಾಕ್ಷಿಯು

ಹಸಿರು ದಿಬ್ಬಣ ಹೊದ್ದ ಮರವು ಮಾತನಾಡುತ್ತಿದೆ
ಬದುಕಿದವನ ವಿಚಾರಗಳನ್ನು ಹೇಳುತ್ತಿದೆ
ಈ ಮಿಥ್ಯ ಜಗತ್ತಿನಲ್ಲಿ
ನಿನ್ನ ಒಳ್ಳೆಯ ಕುರುಹುಗಳನ್ನು ಹೇಗಾದರೂ
ಸಾಬೀತು ಮಾಡು ಎಂದು ಮನವರಿಕೆ ಮಾಡಿಸುತ್ತಿದೆ
ಅನವರತವೂ...

ಫಕೀರ (ಶ್ರೀಧರ ಬನವಾಸಿ ಜಿ.ಸಿ.)

'ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ.

ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. ಶ್ರೀಧರ್ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ಮನೊರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಹಾಗೂ ಅನೇಕ ಟೀವಿ ಕಾರ್ಯಕ್ರಮಗಳು, ಜಾಹಿರಾತು ಹಾಗೂ ಸಾಕ್ಷ್ಯಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.  ಸದ್ಯ ವೆಸ್ತಾಕ್ರಾಫ್ಟ್ ಎಂಬ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ. ಆಲ್ ಇಂಡಿಯಾ ರೇಡಿಯೋ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಥಾಸಂಧಿ ಕಾರ್ಯಕ್ರಮದಲ್ಲಿ ಕಥಾವಾಚನ  ಮತ್ತು ಸಂವಾದದಲ್ಲಿ ಭಾಗಿಯಾಗಿದ್ದಾರೆ.

ಇವರ ಕತೆಗಳ ಮೇಲೆ ಎಂಫಿಲ್ ಅಧ್ಯಯನವನ್ನು ಕೂಡ ಮಾಡಲಾಗಿದೆ. `ತಿಗರಿಯ ಹೂಗಳು’, `ಬಿತ್ತಿದ ಬೆಂಕಿ’ ಇವರ ಕವನ ಸಂಕಲನಗಳು. 2017ರಲ್ಲಿ ಪ್ರಕಟಗೊಂಡ ಇವರ `ಬೇರು' ಕಾದಂಬರಿಯು ಆ ವರ್ಷದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದ್ದು ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ `ಯುವ ಪುರಸ್ಕಾರ', ಕರ್ನಾಟಕ ಸಾಹಿತ್ಯ ಅಕಾಡೆಮಿಯ `ಚದುರಂಗ' ದತ್ತಿನಿಧಿ, `ಕುವೆಂಪು’ ಪ್ರಶಸ್ತಿ, ‘ಚಡಗ ಕಾದಂಬರಿ ಪ್ರಶಸ್ತಿ’, `ಶಾ ಬಾಲುರಾವ್’ ಹಾಗೂ `ಬಸವರಾಜ ಕಟ್ಟಿಮನಿ ಯುವ ಬರಹಗಾರ’ ಪ್ರಶಸ್ತಿ ಸೇರಿದಂತೆ ಸುಮಾರು 9 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಒಂದು ವಿಶೇಷ ಮತ್ತು ದಾಖಲೆಯೆಂದು ಗುರುತಿಸಲ್ಪಟ್ಟಿದೆ. ತಮಿಳಿನ ‘ಇನಿಯ ನಂದನವನಂ’ ಪತ್ರಿಕೆಯು ಇವರಿಗೆ ಕರುನಾಡ ಸಾಹಿತ್ಯ ಚಿಂತಾಮಣಿ ಪ್ರಶಸ್ತಿ ನೀಡಿ ಗೌರವಿಸಿದೆ. ಕಥೆ, ಕಾವ್ಯ, ಕಾದಂಬರಿ, ನಾಟಕ, ಜೀವನಕಥನ ಮತ್ತು ಗ್ರಂಥ ಸಂಪಾದನೆ ಸೇರಿದಂತೆ ಇದುವರೆಗೆ ಸುಮಾರು ಹನ್ನೆರಡು ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ. 
 

More About Author