Poem

ಹಿಡಿ ಭೂಮಿಯಲ್ಲಿ!

ನಡುರಾತ್ರಿಯಲ್ಲಿ ಸಂಚಾರ
ಅವಳದು ನಿತ್ಯವೂ
ತನ್ನ ಪುಟ್ಟ ಜಾಗದಲ್ಲಿ
ಮಿಣಿ ಮಿಣಿ ಬೆಳಕು
ಹಾಕಿಕೊಂಡು..
ಉಮ್ಮಲ್ತಿಯಂತೆ

ಬೆವರು ಕಣ್ಣೀರು ರಕ್ತ
-ಸುರಿಸಿ ದುಡಿದಿದ್ದಾಳೆ
ಮುಕ್ಕಾಲುಪಾಲು ಬದುಕಲ್ಲಿ
ಕಾಣಿಸುತ್ತಾಳೆ ಹೊರಹೊರಗೆ
ಕೂದಲ ತುದಿಯೂ ಕೊಂಕದ
ಅಂಗಾಲಿನ ಚಿಗುರು ಕೆಂಪು
ಮಾಸದ ಗಟ್ಟಿಗಿತ್ತಿಯಂತೆ

ಅವಳ ಹಿಡಿ ಭೂಮಿಯಲ್ಲಿ
ಚುಕ್ಕಿ ಚಂದ್ರರ ತಂಪು
ಕಾಡು ಹೂಗಳ ಕಂಪು
ನರಿ ಗೂಬೆಯ ಸದ್ದು ಆಲೈಸುತ್ತ
ಮಸಿಕತ್ತಲಿಗೆ ಮುಖವಿಟ್ಟು
ನೆಮ್ಮದಿಯ ಮೊಗೆಯುತ್ತಾಳೆ

ಗದ್ದೆ ತೋಟ ಬೇಸಾಯದ
ಕನಸುಗಳ ನೆಪದಲ್ಲಿ
ಮಣ್ಣ ಕಣ ಕಣವನ್ನು
ಇರುವೆ ಗೊದ್ದ ಹಾವು
ಚೇಳು ಮುಳ್ಳುಕಂಟಿಗಳನ್ನು
ನಿರುಕಿಸಿ, ನೀರುಣಿಸಿ
-ಬೆಳೆಸಿದ ಹೂ ಹೂವಿನ ಘಮ
ಕುಡಿಯುತ್ತ ಸುಖಿಸುತ್ತಾಳೆ

ಹುಲ್ಲೊಂದು ಮರವಾಗಿ
ತರಗೆಲೆ ಪೊದೆಯಾಗಿ
ಒಣಕಡ್ಡಿ ಬಿದಿರ ಮೆಳೆಯಾಗಿ
ಸಂವಾದಿಸತೊಡಗಿ
ಹಕ್ಕಿ ಹಾಡು ಕರೆಯುತ್ತ
ಅಲೆದಾಡುತ್ತಾಳೆ

ತಡರಾತ್ರಿಯ ತಿರುಗಾಟ
ನೀಹಾರಿಕೆವರೆಗೂ ಕರೆದೊಯ್ದು
ಕತೆ ಕವಿತೆಗಳ ಕಾಣಿಸುತ್ತದೆ
... ನೂರಾರು ಮೈಲಿ
ನಡೆದು ಬಂದವಳಂತೆ
ಕೈ ಕಾಲು ತೊಳೆದು
ತಣ್ಣನೆಯ ಗಾಳಿಯಲ್ಲಿ
ನಿದ್ದೆಗೆ ಜಾರುತ್ತಾಳೆ
ಮರಗಳ ಉಸಿರು ತಾಕುವ
ಮನೆಯೊಳಗೆ!
**
ವಿಜಯಶ್ರೀ ಎಂ.ಹಾಲಾಡಿ

ವಿಜಯಶ್ರೀ ಹಾಲಾಡಿ

ಕವಯತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ತಂದೆ ಬಾಬುರಾವ್ ತಾಯಿ ಎಂ., ರತ್ನಾವತಿ. ಎಂ.ಎ., ಬಿ.ಎಡ್. ಪದವೀಧರರು.

ಕೃತಿಗಳು: ಬೀಜ ಹಸಿರಾಗುವ ಗಳಿಗೆ (ಕವನ ಸಂಕಲನ-2009), ’ಪಪ್ಪು ನಾಯಿಯ ಪ್ರೀತಿ ( ಮಕ್ಕಳ ಸಾಹಿತ್ಯ ವಿಭಾಗದ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015 ರ ಪುಸ್ತಕ ಬಹುಮಾನ) ,

ಪ್ರಶಸ್ತಿ-ಪುರಸ್ಕಾರಗಳು: ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, (ಹಸ್ತಪ್ರತಿಗೆ-2007) , ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ. 2023ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪ್ರಶಸ್ತಿ ಲಭಿಸಿದೆ. 

 

More About Author