Poem

ಹೆಂಗಸರೆಂದರೇ

‘ಹೆಂಗಸರೆಂದರೇ ಹೀಗೆ
ಒಟ್ಟು ಸೇರಿದರೆ ಸಾಕು
ವಸ್ತು ಒಡವೆ ಉಡುಗೆ ತೊಡುಗೆ
ಇವುಗಳದೇ ಸಮಾಚಾರ’

ಅವರಿವರ ತೀರ್ಮಾನ ನಿರಾಕರಿಸಲು
ಮೈ ಕೈ ಕತ್ತೆಲ್ಲ ಬೋಳುಬೋಳು
ಅವರಿವರು ಕೊಟ್ಟ
ಇಲ್ಲಾ ತಾವೇ ಮರುಳಾಗಿ ಕೊಂಡ
ಅದ್ದೂರಿ ಸೀರೆಗಳು
ಬೀರುವಿನಲೇ ಭದ್ರ
ಯಾರದೋ ಜರತಾರಿಯ ಸರಭರ ಸದ್ದು
ಕಣ್ತುಂಬುವ ಬಣ್ಣ
ಮನಸೂರೆಗೊಂಡಾಗ
ಬೀರುವಿನಿಂದೆತ್ತಿ ನೇವರಿಸಿ
ಉಟ್ಟು ಕನ್ನಡಿ ಮುಂದೆ ಗಳಿಗೆ ಕಟ್ಟುವಿಕೆ

‘ಹೆಂಗಸರೆಂದರೇ ಹೀಗೆ
ಒಟ್ಟು ಸೇರಿದರೆ ಸಾಕು
ಮಾತು ಮಾತು ಮಾತು ಬಿಟ್ಟರಿನ್ನಿಲ್ಲ’

ಸುಳ್ಳಾಗಿಸಲು ನಿರ್ಮಿಸಿಕೊಂಡಿದ್ದಾರೆ ಬಂದೀಖಾನೆ
ಇಷ್ಟಿಷ್ಟೇ ನಗು ಕೇಳಿದ್ದಕ್ಕಷ್ಟೇ ಉತ್ತರ
ಚುಟುಕಾಗಿ ಚುರುಕಾಗಿ
ಮುಕ್ಕಾಲುಪಾಲು ಮಾತು ಗಂಟಲೊಳಗೇ ಹೂತಿವೆ
ತೊಟ್ಟಿಲು ತುಂಬುವ, ಬಸಿರು ಬಾಣಂತನದ,
ಅರಿಶಿನ ಕುಂಕುಮದ ಆಮಂತ್ರಣಗಳಿಗೆಲ್ಲ
ಕನಿಕರ ಉಪೇಕ್ಷೆ ತಿರಸ್ಕಾರ!

‘ಹೆಂಗಸರೆಂದರೇ ಹೀಗೆ
ಒಟ್ಟು ಸೇರಿದರೆ ಸಾಕು
ಊಟ ತಿಂಡಿ ಅಡುಗೆಯದೇ ಸುದ್ದಿ’

ಪಥ್ಯವಾಗದ್ದಕ್ಕೆ ಅವರೀಗ ಅರೆಬಾಣಸಗಿತ್ತಿಯರು
ಏನೋ ಒಂದಿಷ್ಟು ಬೇಯಿಸಿ
ಹಸಿಬಿಸಿ ತಾವುಂಡು ಅವರಿವರಿಗೂ ಇಕ್ಕಿ
ಇಡುತ್ತಾರೆ ಪೂರ್ಣವಿರಾಮ !

ದಿನಕ್ಕೊಂದು ಬಗೆ; ಹತ್ತಾರು ಪಾಕ ವೈವಿಧ್ಯ,
ಬಡಿಸುವುದಕೂ ವ್ಯಾಕರಣ
ಕಂಡು ಬೆರಳು ಕಚ್ಚುತ್ತಾರೆ
ಒಳಗೊಳಗೇ ಮರುಗುತ್ತಾರೆ.

‘ಹೆಂಗಸರೆಂದರೇ ಹೀಗೆ
ಬೌದ್ಧಿಕತೆಗಿಂತ ಭಾವುಕತೆಗೆ ವಾಲುವವರು’

ತಿರಸ್ಕರಿಸಲೆಂದೇ ಆರಂಭ ಈ ಕಸರತ್ತು
ಹಾವ ಭಾವ ಭಂಗಿ ಪದಸಂಪತ್ತು ಗಾಂಭೀರ್ಯ
ಎಲ್ಲ ಎರವಲು !
ಪುರುಷ ಮಾದರಿಗಳ ಅನುಕರಣೆಯ ತರಬೇತಿ
ವೇದಿಕೆ ಮೇಲಿನ ಮುಖವಾಡ
ಬರಬರುತ್ತ ಕ್ಷಣಕ್ಷಣಕೂ ಅನ್ವಯ

‘ಹೆಂಗಸರೆಂದರೇ ಹೀಗೆ
ಒಟ್ಟು ಸೇರಿದರೆ ಸಾಕು . . . .’

ನೇತಿ ನೇತಿಯ ಓಟ ಮುಗಿದು
ಕಣ್ಪಟ್ಟಿ ತೆರೆದರೆ ಕಂಡದ್ದು
ವ್ಯಾಖ್ಯಾನಕಾರ ಲೋಕದ ಕುಹಕ;
ಹೆಣ್ಣು ಲೋಕದ ಕನಿಕರ!

ಹೌದು, ನಾವು ಹೆಂಗಸರೇ ಹೀಗೆ
ಕುಹಕದದೊಳಗಿನ ಕಿತಾಪತಿ
ದಿಗಿಲು ಆತಂಕಗಳ ಅರಿತೂ
ಅರಿಯದಂತಿರುವವರು
ಕನಿಕರದ ಕಣ್ಣುಗಳಿಗೆ ಸುಲೋಚನ
ನೀಡಬಯಸುವವರು
ರೆಕ್ಕೆ ಕಟ್ಟಿಕೊಂಡು ಹಾರುವ ಸುಖ
ಕಲಿಸ ಬಯಸುವವರು
ಗೆರೆಗಳ ದಾಟುತ್ತ ಕೋಶಗಳ ಕೆಡವುತ್ತ
ಗೂಡು ದಿಗಂತಗಳ ಜೋಡಿಸುತ್ತ
ಪಡೆದಿಹೆವು ನಮ್ಮದೇ ಬಯಲು

-ಸಬಿಹಾ ಭೂಮಿಗೌಡ

 

ವಿಡಿಯೋ
ವಿಡಿಯೋ

ಸಬಿಹಾ ಭೂಮಿಗೌಡ

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು.  ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ (ಮಹಿಳಾ ಅಧ್ಯಯನ) 2006, ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಹಲೇಖಕರೊಂದಿಗೆ) 2006, ಲೀಲಾ ಬಾಯಿ ಕಾಮತ್ ಬದುಕು ಬರೆಹ (ವ್ಯಕ್ತಿಚಿತ್ರ) 2008, ಒಂದಾಣೆ ಮಾಲೆಯ ಸಾಹಸಿ: ಕುಟ್ಟಿ ವಾಸುದೇವ ಶೆಣೈ (ವ್ಯಕ್ತಿಚಿತ್ರ) 2008, ಲಿಂಗತ್ವ ಸಮನ್ಯಾಯದೆಡೆಗೆ 2008, ಅವಿವಾಹಿತ ಮಹಿಳೆ: ಸಮಾಜೋ ಸಾಂಸ್ಕೃತಿಕ ಅಧ್ಯಯನ 2008 (ಸಹಲೇಖಕರೊಂದಿಗೆ), ಕಡಲತಡಿಯ ಮನೆ (ಸಣ್ಣಕಥೆ) 2009, ನುಡಿಹೊನಲು (ಚಿಂತನ ಲೇಖನಗಳು) 2010 ಪ್ರಕಟಿತ ಕೃತಿಗಳು.

ಸರಸ್ವತಿಬಾಯಿ ರಾಜವಾಡೆ ಅವರ ಆಯ್ದ ಕತೆಗಳು 1994, ಪ್ರಬಂಧ 1999 (2000) ನಾವು ಮತ್ತು ನಮ್ಮ ಪರಿಸರ 2004, ಕರಾವಳಿಯ ಕಥೆಗಳು 2006, ಕನ್ನಡ ಸಾಹಿತ್ಯ ಮತ್ತು ಮಹಿಳೆ 2007, ಮಹಿಳಾ ಸಾಹಿತ್ಯ 2018, ಕನ್ನಡ ಸಾಹಿತ್ಯ ಮೀಮಾಂಸೆ 2008, ಸಂಸ್ಕೃತಿ ಮಹಿಳಾ ಮಾಲಿಕೆ ಸಂಪುಟ-1 2008 ಮಹಿಳಾ ಆತ್ಮಕಥೆಗಳು : ಅನುಸಂಧಾನ 2008, ಮಹಿಳೆ ಸಂಘಟನೆ ಹೋರಾಟ 2008, ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಸಾಹಿತ್ಯ 2009, ನಾವು ಮತ್ತು ನಮ್ಮ ಪರಿಸರ ಭಾಗ-2 2009, ಕುವೆಂಪು: ಶತಮಾನೋತ್ತರ ನೋಟ 20009, ಚಂದ್ರಗಿರಿ (ಸಾರಾ ಅಬೂಬಕ್ಕರ್‌ ಅಭಿನಂದನ ಗ್ರಂಥ; 2009) ಸಂಪಾದಿತ ಕೃತಿಗಳನ್ನು ಹೊರತಂದಿದ್ಧಾರೆ.

 

 

 

 

More About Author