ನಿನಗಿಷ್ಟವಾಗಲಿ ಎಂದೇ ಕುಣಿದೆ ಚಿಂತಾಮಣಿ,
ಮನದಣಿಯೆ ನರ್ತಿಸಿದೆ
ಆಗಲಿ ಚಿತ್ತ ಸತ್ಯ ಸದಮಲ,
ಗೆಳೆಯ ಗೆಳತಿಯರ ಕಟಕಿ ವ್ಯಂಗ್ಯ
ಅಸೂಯೆ ಸಹಿಸಿದೆ ನಿತ್ಯ
ಹೀಗಳೆದದ್ದು ಆಡಿಕೊಂಡದ್ದು ಕೇಳಿಯೂ ನಂಬದಾದೆ,
ಸಮರ್ಪಣೆಯ ಅಂತರ ಅರಿಯದಜ್ಞಾನ ಸಂಕುಲಕೆ
ಧಿಕ್ಕಾರವೆಂದೆ
ಕುಣಿದೆ ಈಗಲೂ ಕುಣಿವೆ
ನೀನೆ ಕರುಣಿಸಿದ ಈ ವಯಸ್ಸಿನಲ್ಲೂ ಇಲ್ಲ ಬೇಸರವಿಲ್ಲ
ಸೋಮನಾಥನಿಗೆರಗಿ ಕುಣಿವೆ ಪ್ರಭಾಸದಲಿ
ಹಿರಣ್ಯ ಕಪಿಲಾ ಸರಸ್ವತೀ ಸಂಗಮದಿ,
ವೇರಾವಲ ತಟದಿ, ನಿನ್ನಮರ ಅಶ್ವತ್ಥ ವೃಕ್ಷ
ಅಂತಿಮ ಪತ್ರ ಧರೆಗೆ ಕರುಣಿಸುವನಕ ಕುಣಿವೆ.
*
ಗತ್ತು ತಾಳ ಲಯ
ಗೊತ್ತಿಲ್ಲ ಯಾವುದೂ ಭಯ
ಕಾನನದ ನಿನ್ನ ದನ ಕರು ಮನೆ ಕಡೆಗೆ
ಹೆಜ್ಜೆ ಹಾಕುವ ಹೊತ್ತು
ಕಾಡು ಮೇಡುಗಳಲ್ಲಿ
ಹುಡುಕಿ ತಡಕಾಡಿ ಸುತ್ತಾಡಿ ನಿನಗಾಗಿ
ಈಗ ದಣಿದಿವೆ ಕಾಲು ಗೆಜ್ಜೆ
ಕಳಚಿವೆ ಕೆಲವು ಕಳೆದಿವೆ
ಯಾರಿಗೆ ಹೇಳಲಿ ಶ್ಯಾಮಸಖ?
*
ಆಚೆ ಬದಿಯ ಕೊಳದ ತಳದೊಳಗಿಂದ
ಕೇಳುತಿದೆ ಮಂದ ಮಂದ್ರ
ದಿನಾ ರಾತ್ರಿ ಹೊತ್ತು ನಿನ್ನ ಕೊರಳ ಕೊಳಲು
ನನ್ನದೇ ಅಳಲು
ಈ ಧಾರಾಪುರದ ಸಕಲ ಗೊಲ್ಲರಿಗೂ ಗೊತ್ತು
ಆಡಿಕೊಳ್ಳುವುದು
ತಿಳಿದಿಲ್ಲ ಅರ್ಥವಾಗಿಲ್ಲ
ಎದೆಗಳಾಚೀಚೆ ಅಡಗಿ ಅರಿವಿಗೆ ಮೀರಿ
ಕೊರಗುವುದು ಕೊನರುವುದು
ಕೊನೆಗೆ ವೃಂದಾವನವಾಗುವುದು
ಹೇಗೆ ಗೋಳಿಡಲಿ ಒರಳಲಿ ದೊರೆಯೆ?
*
ನೆನಪಿದೆಯೆ ನಿಮ್ಮಾ ಕಾಡಿನರಮನೆ ಕಡೆಗೆ ಬಂದಿದ್ದೆ
ಕವಿನೆರಳಲ್ಲಿ ಕಾದಿದ್ದೆ ಹಲವು ಜನ್ಮ
ಹಂಬಲಿಸಿ ಕಾತರಿಸಿದ್ದ ಕೃಷ್ಣಹಾಸಮುಖ ಕಾಣಿಸುವುದೇ
ಮೌನ ಭೈರವಿಯಲ್ಲಿ ಪ್ರಾರ್ಥಿಸಿದ್ದೆ
ಈಗಲೂ ಬದಲಾಗಿಲ್ಲ ಸ್ಥಿತಿ ಗತಿ
ಹೇಗೆ ಅರುಹಲಿ ನಿನಗೆ.
*
ದಣಿದ ಕಿಂಕಿಣಿ ದನಿ ನುಡಿದಿವೆ ಕ್ಷೀಣ
ಕುಣಿಕುಣಿ ಕುಣಿದು
ಯಾವ ದಿಕ್ಕಿನ ಕುಣಿಯಾದರೂ ಸರಿ
ಸೇರಿ ತಂಗುವ ನಿರ್ವಿಣ್ಣ ನಿರ್ಧರದ ವಯಸು ಮೆತ್ತಿದೆ
ಹಳಿತು ಬಿರುಮುನಿದ ಮನಸಿಗೆ
ಹಳಹಳಿಸಿ ಹಳಸಿದ ಕನಸಿಗೆ
ತುಸುತುಸುವೆ ಕುಸಿಯುತಿಹ ಕಳಿತ ತನುವಿಗೆ
ಈಗಲಾದರೂ ಹೇಳು
ನೇರ ಇಲ್ಲ ನಿನ್ನ ಮಧುವೇಣುವಾದನದಲ್ಲಿ;
ತಪ್ಪಾಯಿತೇ ನಿನ್ನ ಮೆಚ್ಚಿದ್ದು, ಪ್ರೀತಿಸಿದ್ದು,
ಬದುಕೆಲ್ಲ ನಿನ್ನನ್ನೆ ಗೀತಿಸಿದ್ದು,
ನೆನೆದೆನ್ನ ಕಂಬನಿಯೆ ಯಮುನೆಯಾದದ್ದು
ಸ್ವಯಂಭೂ ಕೃಷ್ಣಗೀತೆಯಾದದ್ದು...
*
ಎಲ್ಲ ನೆನಪಾಗುತಿದೆ
ಮತ್ತೆ ಆಸರೆ ನೆನಪೆ ಕೈಗೋಲು
ಗಂಟು ಬಿಚ್ಚುತಿದೆ ನಂಟು
ಮೊದಲ ಸಲ ಸುರಿದ ಮಳೆ ಲೇಪಿಸಿದ ಅಂಟು
ಕರಗುತಿದೆ ಮೆಲುವಾಗಿ
ನಿನ್ನನ್ನು ಕಂಡದ್ದು
ಬಿರುಮುಗುಳ ಬೆಳ್ಳಕ್ಕಿ ಕೋಲ್ಮಿಂಚ ಬೆಳಗಿದ್ದು
ನಯನದಲಿ ಅಧರದಲಿ ಮದಿರ ನಡೆ ನುಡಿಯಲ್ಲಿ
ಮೋಹನ ಮುರಳಿ ಮೈತಳೆದು ಮೀಯಿಸಿದ್ದು
ನೀನೊಮ್ಮೆ ನೋಡಿದಡೆ ಮೈ ಬೆಚ್ಚಗಾದದ್ದು
ಆ ಕ್ಷಣವೆ ಸಕಲ ಬದುಕಿನ ವೆಚ್ಚಕಾದದ್ದು
ಎಲ್ಲ ನೆನಪಾಗುತಿದೆ ಮೊದಲ ಸಲ
ಸಾಹಸವ ಸಂಕಲಿಸಿ ಸಂಭ್ರಮಿಸಿ
ನಿನ್ನ ಏನನ್ನೊ ಹುಡುಹುಡುಕಿ ಮೂಲೆಯಲಿ ನಿಂತು
ತಡೆತಡೆದು ಹೇಗೊ ತೊದಲುತ್ತ ಮಾತಾಡಿಸಿದ್ದು
ಬಹಳ ಹೊತ್ತಿನ ತನಕ ಸುಮ್ಮನೇ ಕೆಳಮುಖ ಕುಳಿತು
ಒಮ್ಮೆ ಬಿರುನೋಡಿ ನೀ ಸುಮ್ಮನೇ ಹೋದದ್ದು
ಎಲ್ಲ ನೆನಪಾಗುತಿದೆ...
*
ಆ ಪುರಾಪ್ರಾಚೀನಗಾಧ ಕಂದರದ ದಡದಲ್ಲಿ
ಕಾಡಂಚ ಬಿದಿರ ಹಂಚಿನ ಶಿಥಿಲ ಮನೆಯಲ್ಲಿ
ನಿನ್ನ ಘನ ಮೌನಕ್ಕೆ ಸೋತೆ,
ಮಾತಿರದ ಮಾತಿಗತಿ ಶರಣಾದೆ ಅರ್ಪಿತಳಾದೆ
ತಪತಪಿಸಿ ಸೋತ ವನವಾಸಿ ಸಂನ್ಯಾಸಿ
ದಿಕ್ಕಿರದ ಬಿಕನಾಸಿ ಅಲೆದ ಅಡವಿಯ ತುಂಬ
ಹುಡುಕಾಡಿದೆ.
ಸಂಗಾತಿಗಳು ಗತಿಸಿ ಏಕಾಕಿ ಉಳಿದು
ಗೆದ್ದ ಕೋಟೆಯ ತುದಿಗೆ ಏರಿ
ಕಾಯುತ್ತಿರುವ ಮರುಳ ಸೇನಾನಿ ಹಾಗೆ
ಸೊರಗಿದ್ದೆ ಬಿಮ್ಮನೇ
ಮೈಮರೆತು ನಿಂತಿದ್ದೆ.
*
ಒಂದು ದಿನ ಮುಚ್ಚಂಜೆ ಹೊತ್ತು
ಕರುಣಾಳು ಪಾವನ ಪ್ರಾಣ ನೀ
ನನ್ನ ಗುಡಿಸಲ ಮುರುಕು ಬಾಗಿಲು ಸರಿಸಿ ಮೆಲುವಾಗಿ
ಒಳಬಂದಿ ದಿಟ್ಟಿಸಿದಿ ಸಮ್ಮೋಹಿಸಿದಿ
ಹೃಲ್ಲೋಕ ಬೆಳಗಿದುವು ವೇದ ಹಾಡಿದುವು ನಿನ್ನ
ನನ್ನ ಚೈತನ್ಯ ಧನ್ಯ.
ನೋಡುತ್ತಲೇ ನಿಂತೆ
ಮುಂದೆ ನರ್ತಿಸುತಿದ್ದ ಮುಗ್ಧ ಮಧುರ ನಗೆ
ಕಂಡು ಕಕ್ಕಾವಿಕ್ಕಿ ಗಲಿಬಿಲಿಗೊಂಡೆ,
ರಮಿಸಿದಿ ಮೊದಲು ನಮಿಸಿದಿ
ಬಳಿಕ ಬಳಿ ಬಂದಿ ಒಳಬಂದಿ
ನಾನನಾಯಾಸ ಬಂದಿ,
ಮುದ್ರಿಸಿದಿ ನಿನ್ನುಸಿರ ನಿರ್ಮಲ ಗಂಧ.
ನನ್ನ ಸಕಲ ಸಘನ ಘನಶ್ಯಾಮ
ಸುಸ್ವಾದು ನೈವೇದ್ಯ ನಿನಗೆ ಎಡೆ.
ನಾ ನಿನ್ನ ತೋಳಬಂದಿ.
ಯುಗಯುಗಾಂತ ಕಲ್ಪಗಳಲ್ಲಿ
ನಂತರದ ಯುಗಯುಗದಿ
ನಿರ್ಗಮಿತ ವೇಣು ಚಿಂತಾಮಣಿ ಯಾರು?
ಪರಮ ಪಾವನೆ ಚಿತ್ತಾಪಹಾರಿಣಿ ಯಾರು?
*
ನೆನಪು ಕೈಕೊಡುತಿದೆ
ಕಳೆದ ಹಲವು ಯುಗಗಳ ಕೇಳಿ ಬಿನ್ನವಿಸುತಿದ್ದೇನೆ
ನೀನೆಲ್ಲಿ ನಾನೆಲ್ಲಿ ಗಂಡೆಲ್ಲಿ ಹೆಣ್ಣೆಲ್ಲಿ
ನಮ್ಮುಸಿರ ಸೇವಿಸಿದ ಭುಂಜಿಸಿದ
ಕಾಲಮಹಿಮನು ಎಲ್ಲಿ?
ಈಗಲೂ ಕಾಯುತ್ತಿರುವೆ ಬೇಯುತ್ತಿರುವೆ
ಎಲ್ಲಿ ತಪ್ಪಿತು ಏನು ತೊಡಕಾಯಿತು?
ನಿನ್ನ ಕಾಡಿದೆನೆ ಬೇಡಿ?
ಬೇಡಿಯಾಯಿತೆ ನನ್ನಪೇಕ್ಷೆಯೆ ನಿನಗೆ?
*
ಕಣ್ಣಲ್ಲಿ ಕಣ್ಣಿಟ್ಟೆ ಜಗವೆಲ್ಲ ನಾನೇ
ವಿಮಲ ಹರಿ ನಯನಜಲ
ನದಿಯಲ್ಲಿ ನಿರ್ಮಲ ನೀರು ನಿತ್ಯವೂ ಹರಿಯುತಿದೆ
ನಾನೂ ಹರಿಯಬೇಕು ಹರಿ
ಹರಿ ಹರಿದು ಹರಿಯಾಗುವೆನು ನಿನ್ನಂತೆ
ಹರಿಯ ಬಿಡು ಹರಿದು ಬಿಡು ಪರಿ
ಹರಿಸಿ ಬಿಡು ತಡೆಯದಾಗಿದೆ ಭೂತದ ಬಾಧೆ
ಹೆಗಲೇರಿ ಹೀಗೆ ಹೆಡೆಯೆತ್ತಿ ಕಾಡುವುದ
ಕಲ್ಪಿಸಿರಲಿಲ್ಲ ಹರಿ ನಾನು
ನೀನು
ಈಗ ಸಕಲ ಬುವಿ ಬಾನು
ಭೈರವಿಯ ಗುಂಗು ಆವರಿಸಿರುವ
ವೇಣು ನಾದ ನೀನು.
*
ಓಹ್, ಕೇಳುತಿದೆ ಈಗ ನಿಖರ
ಇದು ನಿನ್ನದೇ ಕೊರಳ ಅಳಲು
ಕೊಳಲ ವೇದನೆ
ನನ್ನದೆ ನಿವೇದನೆ
ನನ್ನ ನಿನ್ನ ಎದೆ ಹಾಡು ಮತ್ತೆ
ಕನಲಿದೆ:
*
’ಎಲ್ಲಿ ನನ್ನ ಮಲ್ಲಿಕಾ
ನಾನು ಕಳೆದ ನಾನೆ ಬೆಳೆದ ನಾವು ಉಳಿದ ಮಲ್ಲಿಕಾ
ನಾನು ಗಳಿಸಿ ಕಳೆದ
ಅವಳು ಬೆಳೆದು ಕಳೆದ
ನಾವು ಕೂಡಿ ಕೂಡಿ ಕೂಡಿ ಕಳೆದ ಮಲ್ಲಿಕಾ
ಎಲ್ಲಿ ನಿನ್ನ ನನ್ನ ನಮ್ಮ ಮಲ್ಲಿಕಾ
ಎಲ್ಲಿ ನಮ್ಮ ಸುಖ ವಸಂತ ಆಷಾಢದ ಮಧುರ ಗ್ರೀಷ್ಮ ಗೀತ
ಬೆಳಕಿನಂಥ ಬಿಳಿಯ ಮಲ್ಲಿಗೆ ಮೂರ್ತಿವೆತ್ತ ಕಲ್ಲಿಗೆ
ನಾವು ಹೆಸರು ಕೊಟ್ಟ ಹೂವಿಗೆ ಕವಿತೆ ಬರೆದ ಭೂಮಿಗೆ
ಹಸಿರು ಕೊಟ್ಟು ಮೆಲ್ಲ ಮೆಲ್ಲನುಸಿರಿ ಸುರಿದ ಮಲ್ಲಿಗೆ
ಎಲ್ಲಿ ನಮ್ಮ ಮಲ್ಲಿಗೆ
ಬರಿಯೆ
ವಜಾಬಾಕಿ ಬೇರೀಜು ಗುಣಾಜಮಾಖರ್ಚು
ಅಜವಿಲಾಪ ರಚನೆ
ಅಂದು. ಇಂದು
ಗಜವಿಲಾಪ ಭಜನೆ
ನನ್ನ ಹಾಗೆ ಹೀಗೆ
ಕಣ್ಣು ಕುಕ್ಕುವಂಥ ಹೊಟ್ಟೆಕಿಚ್ಚಿನಂಥ
ನನ್ನ ಬಿರುಕು ಬಿರುಸು ಬಿಸುಪು ಬೆಳಕಿನಲ್ಲಿ ಚೆಲ್ಲಿ
ಎಲ್ಲಿ ಹೋದಿ ಮಲ್ಲಿ
ಕಾ ಕಾ ಕಾ ಕಾ ಕರೆಯುತಿರುವೆ ಕೂಗಿ
ಬಾರೆ ಕೂಡಿ ತುತ್ತು ತಿನ್ನಲು
ಉಳಿದ ಕೆಲವೆ ಚಕಿತ ಚಣಗಳಾದರೂ
ಕೂಡಿ ಮತ್ತೆ ಮುತ್ತು ಹವಳ ಚಾಚಬೇಕು
ನಿನ್ನ ತಬ್ಬಿ ಬಾಚಬೇಕು...
ಎಲ್ಲಿ ನನ್ನ ಮಲ್ಲಿಕಾಮಣಿ...’
*
ಎಂಥ ಮಧುರ ನೋವಿದು? ಯಾರ ಹಾಡಿದು?
ಮಥಿಸುತಿರುವ ಎಂಥ ಪಾಡಿದು? ಯಾವ ಘೋರ ಕಾಡಿದು?
ಇದು ವಿಷಾದ ಯಾ ಪ್ರಮಾದ ಯಾ ನಿನಾದ
ಭೂತ ಭೂತ ಕಾಲಮಾನವೆಲ್ಲ ಸೇರಿ ಸಿದ್ಧವಾದ ಪಾಕ
ನನ್ನ ಕೃಷ್ಣ ನನ್ನ ಶ್ಯಾಮ ನನ್ನ ಮೋಹನಾಂಗದತ್ತ ನಾಕ
ಸದಾ ಇಲ್ಲಿ ಹಲುಬುತಿರುವ ನನ್ನ ನಿಖಿಲ ಹೃನ್ಮನ
ಕೃಷ್ಣೆಯನ್ನು ಅರಸುತಿರುವ ಮುರಳಿಕೃಷ್ಣ ಗರಳಕಂಠನಾದನೇ
ಬಂದೆ ಕೃಷ್ಣ ಬಂದೆ, ನನ್ನ ಬಂಧಿ ನಲ್ಲ ಬಂದೆ
ಇಲ್ಲೆ ಇಹಳು ಮಲ್ಲಿಕಾ
ನಿನ್ನನುಳಿದು ಬೇರೆ ಎಲ್ಲಿ ಮಲ್ಲಿಕಾ ನಿನ್ನ ಮಲ್ಲಿಕಾ
ನಿನ್ನ ಉಸಿರಿನಲ್ಲಿ ಕರಗಿ ಗೀತ ಗಂಧವಾಗಿ ಚಿಮ್ಮಿ
ಹೂವು ಚಿಗುರು ಪತ್ರ ಪತ್ರವಾಗಿ ಹೊಮ್ಮಿ
ಭೂಮಿಯಾದ ಗಾಳಿಯಾದ ಯಮುನೆಯಾದ
ವಿಶ್ವವಾದ ಶ್ವಾಸವಾದ ನನ್ನ ಶ್ರೀಹರಿ,
ಅಳಲು ಬೇಡ ತೊಳಲಬೇಡ ಕನಲಬೇಡ ಈ ಪರಿ
ಈಗ ನಾನು ನೀನು ಬೇರೆಯಲ್ಲ ಅನ್ಯರಲ್ಲ
ನಾನೆ ನಿನ್ನ ಮಲ್ಲಿಕಾ ನೀನು ವಿಮಲ ಮಾಧವ
ನಾನು ಬಲ್ಲೆ ಪ್ರಿಯತಮ,
ಹೃದಯದಲ್ಲಿ ಶ್ವಾಸವಾಗಿ ನನ್ನ ಬಂಧಿಸಿರುವಿ
ಈಗ ಹೊರಗೆ ಅರಸುತಿರುವಿ ಅರಸನೇ ಎಂದು ನಾನು
ಅರಿಯದಾಗಿ ಹುಡುಕುತಿರುವೆ
ನಾನಾಗಿ ನನ್ನೊಳಗೆ ಅಡಗಿದ್ದಿ ಹೇಗೆ ಇಷ್ಟು ಕಾಲ
ಎಂದು ತಿಳಿಯದಾದೆ ನಾನು,
ನೀನು?
ನೀನು ಕೂಡ ತಿಳಿಯದಾದೆ ದೇವಗಾನ ಮೋಹನ
ಯಾವ ರಾಗವಾಗಿ ಒಳಗೆ ಹೇಗೆ ಹಾಡುತಿದ್ದಿ?
ಸುಖಾಸುಮ್ಮ ಮೌನವಾಗಿ ಗಾನವಾಗಿ ಬೀಗುತಿದ್ದಿ?
ಅರಿಯದಾದೆ ಹೊಳೆಯದಾದೆ ಹಿಡಿಯದಾದೆ
ಅಪ್ಪಿ ಮಿಡಿಯದಾದೆ ಹಿಗ್ಗಿ ಮುದ್ದಿಸಿ
ನಾನೆ ನಿನ್ನ ಚಿತ್ತಪಾವನೆ ಸಕಲ ಸಾಧನೆ
ರಾಧೆ ಕ್ಷಣಿಕ ಮೋಹಬಾಧೆ ಚಿಂತಾಕುಲ ಚಿದ್ಘನೆ
ಯಾಕೆ ಹುಡುಕಿದಿ?
ಯಾಕೆ ಕನಲಿ ಹಾಡಿದಿ? ಯಾಕೆ ಕೊಳಲು ನುಡಿಸಿದಿ?
ಯಾಕೆ ಯಾಕೆ ನಾನು ಕಳೆದೆ ಇಲ್ಲವಲ್ಲ ಕೃಷ್ಣ,
ನಿನ್ನ ಒಳಗೆ ಒಳಗೆ ಒಮ್ಮೆ ಅರಸಬಾರದೇ?
ಮಿಡಿದು ನನ್ನ ಸಕಲವನ್ನು ನುಡಿಸಬಾರದೇ?
ನಾನು ಎಲ್ಲಿ? ಎಲ್ಲಿಯೂ ಹೋಗಲಿಲ್ಲ ನಿನ್ನನಗಲಿ
ನಾನು ಇಲ್ಲೆ ನಿನ್ನಲಿ, ನೀನು ಇಲ್ಲೆ ನನ್ನಲಿ
ನೀನೆ ನನ್ನ ಹಂಬಲ
ಹಾಗೆ ನೀನೆ ಸಂಬಲ
ನಿನ್ನ ಅಳಲು ನನ್ನದೇ ನಿನ್ನದೇ
ನಾವು ಬೇರೆ ಬೇರೆ ಅಲ್ಲವಲ್ಲ ನಲ್ಲ
ನಾನು ಭೂಮಿ ನೀನು ಗಗನ
ಮಧ್ಯದಲ್ಲಿ ವಾಯು ವೇಣುಗಾನದುಸಿರು
ಒಮ್ಮೆ ನಾನು ಒಮ್ಮೆ ನೀನು
ನಾವನನ್ಯರು ನಾವದಮ್ಯರು ನಾವಲೋಕರು
ಜಗಕೆ ಜನಕೆ ಕಣ್ಣುಗಳಿಗೆ ನಾವತೀತರು
ನಿನ್ನ ತೊರೆದು ನಾನು ನಿನ್ನ ಹೊರತು ನಾನು
ಹೇಗೆ ಸಾಧ್ಯ ಈ ಜಗ?
ಇಲ್ಲೆ ಇರುವೆ ಚಿದ್ಘನ,
ನೀನು ಕೊಳಲು ಮಧುರ
ನಾನು ಕೊರಳು ಸುಚಿರ,
ಬಂದೆ ಸಖನೆ ಬಂದೆ ಬಂದೆ
ಈಗ ನಾನು ನಿನ್ನ ಮುಂದೆ
ನೀನು ನನ್ನ ಮುಂದೆ
ಇದೋ ನಾನು ಮೋಹನ
ನೀನು ನನ್ನ ಹೃದ್ಘನ ಚಿಂತಾಮಣಿ
ಸುರಿಯಲೇ ಕುಣಿಯಲೇ ಸುರಿದು ಸುರಿದು
ಸುರಿದು ತಣಿಯಲೇ...
ನನ್ನ ನಿನ್ನ ಎದೆಯ ಗಣಿತದೆಮ್ಮ ಹಾಡು
ಮತ್ತೆ ಕನಲಿದೆ
ವೇಣು ವನದಿ ಸಿಲುಕಿ ಕರೆವ ಮೋಹವೀಗ
ಬರಿ ನಿನಾದವಲ್ಲ, ಹರಿಯ ಗೀತವಾಗಿದೆ
ರಾಧೆ ಯಾರು ಕೃಷ್ಣ ಯಾರು
ನಾವು ಬರಿಯೆ ದೇವಗೀತ
ನಾನು ಹರಿಯ ಕೊಳಲು
ನೀನು ಧರೆಯ ಕೊರಳು
*
ಶ್ರೀಹರಿಯೆ, ನರಹರಿಯೆ,
ನಿನಗೆ ಜಗವು ಸಂಭ್ರಮ ಸಹಜ ಮೆಟ್ಟಿಲು,
ನನಗೆ ನಿನ್ನ ದರ್ಶನ ನಿತ್ಯ ವಿಭ್ರಮ
ಯಾಕೆ ಹೀಗೆ ಬದುಕು ತೂಗು ತೊಟ್ಟಿಲು
ನೀನು ನಡೆದ, ನನಗೆ ಕಂಡ ಹಾದಿಬೀದಿಯಲ್ಲಿ
ಸುಂಕವಿಲ್ಲ ಸತ್ಯ, ಬರಿಯೆ ಸಂಕ ಸಂಕ;
ನನ್ನ ಸ್ವಂತದ ಕಾಲು ಕಟ್ಟಿರುವಿ, ನಿನ್ನ ಹಕ್ಕೆಯಲ್ಲಿ,
ತಿಳಿದಿರದ ಸಂಕದ ಮೇಲೆ ನಡೆ ಎನ್ನುತಿರುವಿ.
ನಿನ್ನತ್ತ ನಿನ್ನನ್ನೆ ದಿಟ್ಟಿಸುತ್ತ ನಡೆವ ಮನಸಿದೆ ಸತ್ಯ,
ಆದರೆ ನೋಡು, ಸಖ, ನೇರ
ನಡೆಯ ತಿಳಿದಿರದ ನಿನ್ನ ಸಂಗಡ
ಕೊನೆಯ ವರೆಗೆ ನಡೆಯಲೆ ಎಡವಲೆ
ಜಾರಿ ಸುಮ್ಮನೆ ಸರಿದು ಕೆಳಗೆ
ಹರಿವ ಹಳ್ಳ ಕೊಳ್ಳಗಳ ಸೇರಿ
ವೃಂದಾವನದಿ ಮಥುರಾಪುರದಿ
ದ್ವಾರಿಕಾಪುರ ಪ್ರಭಾಸದಲ್ಲಿ
ಸಾಗರ ದಡದ ಕಾನಿನಲ್ಲಿ
ಕೃಷ್ಣ ಛಾಯೆ ಕಾಣುವನಕ
ಸುಮ್ಮನೇ ನನ್ನಷ್ಟಕ್ಕೆ ಅರ್ಥವಾಗದ ಹಾಗೆ
ಹರಿಯಲೆ ಹರಿ ಹರರ ವರಹರವು ಸಿಗುವನಕ
ಹರಿ ಹರಿ ಬರಿಯೆ ಹರಿ ಹರಿ ಹರಿ ಹರಿ
ಪರಿಪರಿಯಾಗಿ
ಹರಿಯ ಸೇರುವ ತನಕ ಹರಿ ಹರಿಯಲೇ
ಚಿಂತಾಮಣಿಯ ನಿಶ್ಚಿಂತ ಬೆಳಕು ಒಳಗೊಳ್ಳುವನಕ
ಕತ್ತಲೆಯ ಸೀಳುದಾರಿಗಳಲ್ಲಿ ಸುತ್ತಾಡಲೆ,
ವೇರಾವಲ ತಟದಿ, ನಿನ್ನಮರ ಅಶ್ವತ್ಥ ಪುರಾಪ್ರಾಚೀನ ತರು
ಅಂತಿಮ ಪತ್ರ ಧರೆಗೆ ಬೀಳಿಸುವನಕ ಕುಣಿಯಲೆ...
ಕಲಾಕೃತಿಗಳು: ಎಂ.ಬಿ. ಪಾಟೀಲ್
ಸಿದ್ಧಲಿಂಗ ಪಟ್ಟಣಶೆಟ್ಟಿ
ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ಕಾಲೇಜಿನಲ್ಲಿ ಹಿಂದೀ ಅಧ್ಯಾಪಕರಾಗಿ, ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ಬಾಲ್ಯದಲ್ಲಿ ನೋಡಿದ ಸಣ್ಣಾಟ, ದೊಡ್ಡಾಟಗಳಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ನಂತರದಲ್ಲಿ ಇಂಗ್ಲಿಷ್, ಹಿಂದೀ, ಸಂಸ್ಕೃತ ಸಾಹಿತ್ಯಗಳ ನಿರಂತರ ಅಧ್ಯಯನ, ಅನುಸಂಧಾನಗಳು ಸಿಪ ಅವರ ಭಾವಲೋಕ, ವೈಚಾರಿಕತೆ ಮತ್ತು ಕವಿ ವ್ಯಕ್ತಿತ್ವಗಳನ್ನು ನಿರ್ಮಿಸಿದವು. ಸಮಕಾಲೀನ ಸಂದರ್ಭದ ಮಹತ್ವದ ಕವಿ, ಅಂಕಣಕಾರ, ಸೃಜನಶೀಲ ಅನುವಾದಕ ಎಂದು ಗುರುತಿಸಲಾಗುವ ಪಟ್ಟಣಶೆಟ್ಟರು ಹಿಂದಿಯಲ್ಲೂ ಕೃತಿಗಳನ್ನು ರಚಿಸಿದ್ದಾರೆ.
ನೀನಾ, ಮತ್ತೆ ಬಂದಿದ್ದಾಳ, ಅಪರಂಪಾರ, ಕುಲಾಯಿ ಇರಲಿ ನನ್ನಲ್ಲಿಯೇ ಮೊದಲಾದವು ಇವರ ಮುಖ್ಯ ಕಾವ್ಯಕೃತಿಗಳು. ಆಷಾಢದ ಒಂದು ದಿನ, ಸೂಯ್ಯಾಸ್ತದಿಂದ ಸೂಯ್ಯೋದಯದ ವರೆಗೆ, ಚೋರ ಚರಣದಾಸ, ಮುದ್ರಾರಾಕ್ಷಸ ಮುಖ್ಯ ಅನುವಾದಿತ ನಾಟಕಗಳು. ಆಧುನಿಕ ಕನ್ನಡ ಹಿಂದೀ ಕಾವ್ಯ ರಂಗಾಯಣ, ಪರಿಭಾವನ, ಅನಿಮಿತ್ತ ಮುಂ. ವೈಚಾರಿಕ ಪ್ರಬಂಧ ಸಂಕಲನಗಳು. ಪ್ರಜಾವಾಣಿಯ ಚಹಾದ ಜೋಡಿ ಚೂಡಾದ್ದಾಂಗ ಅಂಕಣದಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಸಮಸ್ತ ಕನ್ನಡಿಗರಿಗೆ ತಲುಪಿಸುವ ಮೂಲಕ ಇವರು ಜನಪ್ರಿಯರು.
ಕನ್ನಡ ಕಾವ್ಯಮಾರ್ಗದಲ್ಲಿ ಪಟ್ಟಣಶೆಟ್ಟರಷ್ಟು ಪ್ರತಿಮೆಗಳನ್ನು ಬಳಸಿದ ಕವಿ ಬಹುಷ: ಇನ್ನೊಬ್ಬರಿಲ್ಲ ಎಂಬ ಮಾತು ಅತಿಶಯವೇನಲ್ಲ, ಸಮುದ್ರದ ಅಲೆಗಳಂತೆ ಒಂದರ ಮೇಲೊಂದು ಬಂದು ಅಪ್ಪಳಿಸುವ ಪ್ರತಿಮೆಗಳು ನಮ್ಮನ್ನು ಸಮ್ಮೋಹಿಸಿ ಸಂಭ್ರಾತಗೊಳಿಸುತ್ತವೆ. ಅದೇ ಸಮಯದಲ್ಲಿ ಲಯದ ತೂಗುಯ್ಯಾಲೆಯ ಮೇಲೆ ಜೀಕುವ ಭಾವಗಳು ಸಂಭ್ರಮಿಸುತ್ತವೆ. ಕಣ್ಣುಗುಡ್ಡೆಗಳ ಹಿಲಾಲಿನ ಬೆಳಕಿನಲ್ಲಿ ಬರೆಯುವ ಈ ಕವಿಯ ಭಾವತೀವ್ರತೆ ಒಂದಿನಿತೂ ಮುಕ್ಕಾಗಿಲ್ಲ. ಬಹಿರಂಗದ ಬದುಕಿಗೆ ಒಳಲೋಕದ ಉದಕವನ್ನು ಸಾರಿಸಿ ಭಾಷೆಯ ಮೃತ್ತಿಕೆಯನ್ನು ಹದವಾಗಿ ಮಿಡಿಯುತ್ತ ಹೊಸ ಕಲಾಕೃತಿಗಳನ್ನು ನಿರ್ಮಿಸುವ ಶೆಟ್ಟರು ಕಾವ್ಯನಿರ್ಮಿತಿಯನ್ನು ಕಾಯಕನಿಷ್ಠೆಯಿಂದ ಸಾಧಿಸುತ್ತ ಬಂದವರು. ಒಳ ಹೊರಗಿನ ಸತ್ಯಗಳನ್ನು ಹುಡುಕುತ್ತ, ಪಡೆದುಕೊಳ್ಳುತ್ತ, ವಿಭ್ರಮಿಸುತ್ತ, ಸಂಭ್ರಮಿಸುತ್ತ, ಕುದಿಯುತ್ತ, ಆರುತ್ತ, ಶೋಕಿಸುತ್ತ, ಸಂತೈಸಿಕೊಳ್ಳುತ್ತ, ಕಾಣದುದಕ್ಕೆ ಹಂಬಲಿಸುತ್ತ ಸಾಗುವ ಈ ಕಾವ್ಯ ತನ್ನ ಭಾವತೀವ್ರತೆಯಿಂದ, ನಾಟಕೀಯ ತಿರುವುಗಳಿಂದ ಸಹೃದಯರನ್ನು ಆವರಿಸಿಕೊಂಡು ಬಿಡುತ್ತದೆ. ಹೀಗಾಗಿಯೇ ಪಟ್ಟಣಶೆಟ್ಟಿ ಕಾವ್ಯ ಮಾರ್ಗ ಕನ್ನಡಕ್ಕೆ ಒಂದು ವಿಭಿನ್ನ ಕಾಣಿಕೆಯಾಗಿದೆ.
1964 ರಿಂದ 11 ವರ್ಷ ಮಿತ್ರರೊಂದಿಗೆ ಸಂಕ್ರಮಣ ಪತ್ರಿಕೆ ಸಂಪಾದಿಸಿದ್ದ ಪಟ್ಟಣಶೆಟ್ಟಿ, ನಂತರ 2002ರಿಂದ 7 ವರ್ಷ ಸಂಕಲನ ಎಂಬ ಸಾಹಿತ್ಯ ಪತ್ರಿಕೆಯನ್ನು ಸಂಪಾದಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೊಶಿಪ್, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಇವರಿಗೆ ಸಂದಿವೆ.
More About Author