ಉತ್ತರ ಪ್ರದೇಶದ ಸುಲ್ತಾನಪುರದ ಏರಿ ಫಿರೋಜ್‌ಪುರ್ ನಲ್ಲಿ 1957ರಲ್ಲಿ ಜನಿಸಿದ ರಮಾಕಾಂತ್ ಯಾದವ್ 1980ರಲ್ಲಿ ಜೆಎನ್ಯೂವಿಗೆ ಓದಲೆಂದು ಬಂದವರು. ತಮ್ಮ ವಿದ್ರೋಹಿ ಕಾವ್ಯನಾಮದಂತೆ ವ್ಯವಸ್ಥೆಯ ವಿರುದ್ಧ ಆಂದೋಲನಗಳಲ್ಲಿ ಘೋಷಣೆ ಕೂಗುತ್ತ, ಅನ್ಯಾಯ, ಅವ್ಯವಸ್ಥೆ ಪ್ರತಿಭಟಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತ ಕೊನೆ ಉಸಿರಿನತನಕವೂ ಜೆಎನ್ಯೂವಿನ ವಿದ್ಯಾರ್ಥಿಯಾಗಿ ಕ್ಯಾಂಪಸ್ಸಿನಲ್ಲೇ ಉಳಿದಿದ್ದರು. 2015ರಲ್ಲಿ ಕೊನೆಯುಸಿರೆಳೆದರು. ಮನೆ ಮಕ್ಕಳು ಎಂಬ ಸಂಸಾರವಿದ್ದರೂ ಅವರು ಇರುತ್ತಿದ್ದುದು ಜೆಎನ್‌ಯು ಕ್ಯಾಂಪಸ್ಸಿನ ಯಾವುದೋ ಡಾಬಾದಲ್ಲೋ, ಯಾರದೋ ಹಾಸ್ಟೆಲಿನಲ್ಲೋ, ಇನ್ನೆಲ್ಲೋ. ಅವರಿವರು ಪ್ರೀತಿಯಿಂದ ಕೊಟ್ಟ ಬಟ್ಟೆಗಳನ್ನು ತೊಟ್ಟುಕೊಂಡು ತಮ್ಮ ಕವಿತೆಗಳನ್ನು ವಾಚಿಸುತ್ತ ಅಪಾರವಾದ ವಿದ್ಯಾರ್ಥಿ ಬಳಗ ಹೊಂದಿದ್ದ ವಿದ್ರೋಹಿಯನ್ನು ಮೆಚ್ಚದವರಿಲ್ಲ. ಅವರ ಕ್ರಾಂತಿ ಕವಿತೆಗಳನ್ನು ಈಗಲೂ ವಿದ್ಯಾರ್ಥಿಗಳು ಹಾಡುತ್ತಾರೆ. ವಿದ್ರೋಹಿ ಈಗಲೂ ಜೆಎನ್‌ಯುವಿನ ಗೋಡೆ ಗೋಡೆ, ಕಲ್ಲು ಕಲ್ಲುಗಳಲ್ಲಿ ಕ್ರಾಂತಿಯ ದನಿಯಾಗಿರುವ ಅವರ ಎರಡು ಕವಿತೆಗಳನ್ನು ರೇಣುಕಾ ನಿಡಗುಂದಿ ಕನ್ನಡೀಕರಿಸಿದ್ದಾರೆ.
ಗುಲಾಮ -1
ಅದಂತೂ ದೇವಯಾನಿಯದೇ ಪಟ್ಟಾಗಿತ್ತು
ಕಟುಸತ್ಯವನ್ನೂ ಸಹಿಸಿದಳು
ಇಲ್ಲವೆಂದರೆ ಯಯಾತಿಯ ಮೂಗೂ ಏನು ಕಡಿಮೆಯಿದ್ದಿಲ್ಲ..!
ಮೂಗಿನಲ್ಲಿ ಹುಣ್ಣಿದೆ, ಮೂಗಿನಲ್ಲಿ ಬುಸುಗುಡುವಿಕೆಯೂ ಇದೆ
’ವಿದ್ರೋಹಿ’ಯ ಮೂಗೂ ಕೂಡ ಕತ್ತಿಯಂತೆ, ತಲವಾರಿನಂತೆ
ಸಂವೇದನೆಗಳು ಹೇಗೆಂದರೆ ಏಳು ಸಮುದ್ರದಾಚೆಗಿದ್ದಂತೆ ಅಷ್ಟೇ
ಇದು ತಲೆಯಲ್ಲ ಯಾವುದೋ ಗುಂಬಜ್, ಪೀಸಾ ಟವರು !
ಆದರೆ ಇದು ಉರುಳಿದರೆ ಮನುಷ್ಯತ್ವದ ಶಿರವೇ ಉರುಳಿ ಬಿದ್ದಂತೆ
ಇದು ಉರುಳಿದರೆ ಕೀರ್ತಿಯ ಪತಾಕೆಯೇ ಉರುಳಿ ಬಿದ್ದಂತೆ
ಇದು ಉರುಳಿದರೆ ಪ್ರೇಮದ ಗೂಡೂ ಉರುಳಿ ಬಿದ್ದಂತೆ
ಪ್ರೇಮ ಮತ್ತು ಸೌಂದರ್ಯ ಇವೆರಡರ ಮಿಲನವೇ ಅರ್ಥ ಹೀನವಾಗುವುದು
ಅದಕ್ಕಾಗಿಯೇ ಜೀವಂತವಾಗಿದ್ದೇನೆ
ಇಲ್ಲವೆಂದರೆ ಯಾವಾಗಲೋ ಸತ್ತಿರುತ್ತಿದ್ದೆ
ನಾನು ಬರೀ ಕಾಶಿಯಲ್ಲಷ್ಟೇ ಅಲ್ಲ, ರುಮಾನಿಯಾದಲ್ಲೂ ಬಿಕರಿಯಾಗಿದ್ದೇನೆ !
ಎಲ್ಲಾ ಕಡೆಗೂ ಇಂಥದೇ ಅವಮಾನ
ಎಲ್ಲಾ ಕಡೆಗೂ ಇಂಥದೇ ಅಜ್ಞಾನ
ಎಲ್ಲಾ ಕಡೆಗೂ ಪೋಲಿಸರಿದ್ದಾರೆ
ಎಲ್ಲಾ ಕಡೆಗೂ ನ್ಯಾಯಾಲಯಗಳಿವೆ
ಎಲ್ಲಾ ಕಡೆಗೂ ಪುರೋಹಿತರಿದ್ದಾರೆ
ಎಲ್ಲಾ ಕಡೆಗೂ ನರಮೇಧ
ಎಲ್ಲೆಡೆಗೂ ದುರ್ಬಲರೇ ತುಳಿಯಲ್ಪಡುತ್ತಿದ್ದಾರೆ.......ಖೇದವಿದೆ !
ನೇಣುಗಂಬಗಳೇ ಎಲ್ಲೆಡೆ, ನಿಜಾಮನ ನಿಶಾನೆಗಳು
ಎಲ್ಲೆಡೆಗೂ ಶೂಲಕ್ಕೇರುವವರು ಗುಲಾಮರೇ
ಎಲ್ಲಾ ಕಡೆಗೂ ಹೆಂಗಸರನ್ನು ಹೊಡೆದು ಬಡಿಯಲಾಗುತ್ತಿದೆ
ಜೀವಂತ ದಹಿಸಲಾಗುತ್ತಿದೆ
ಅಗೆದು ಹುಗಿಯಲಾಗುತ್ತಿದೆ
ಎಲ್ಲೆಡೆಗೂ ರಕ್ತವಿದೆ, ಎಲ್ಲೆಡೆಗೂ ಕಂಬನಿಯೇ ಹರಿದಿದೆ
ಲೇಖನಿಯಿದು…... ಸರಹದ್ದಿನ ಆಚೆಗೂ ಕವಿತೆ ಬರೆಯಲಾಗಿವೆ.....!
***
ಗುಲಾಮ – 2
ನಾ ನಿಮಗೆ ಹೇಳಲೇ ಇತಿಹಾಸದ ಶುರುವಾದನ್ನು !
ಹಾಗೂ ಯಾತಕ್ಕಾಗಿ ದಿಬ್ಬಣ ಬಾಗಿಲಿಗೆ ಬಂತು ಇರುಳಲ್ಲಿ
ಮತ್ತೆ ಮಂಟಪವನ್ನು ಉರುಳಿಸಿ
ಮದುವಣಗಿತ್ತಿಯನ್ನು ಹೊತ್ತೊಯ್ದದ್ದನ್ನು
ಒಬ್ಬ ಮದುಮಗಳಿಗಾಗಿ ಎಷ್ಟೋ ವರಗಳು ಬಂದರು ಹೊಂದಿಕೊಂಡು
ಮತ್ತು ಎಂಥಾ ಯುದ್ದ ಶುರುವಿಟ್ಟಿತೆಂದರೆ ಲೋಕವೇ ಬೇಸತ್ತಿತು
ಸತ್ತವರ ಚಿತೆಯ ಮೇಲೆ ಜೀವಂತ ಹೆಂಗಸರು ಮಲಗಿದರು !
ಆಗ ಗಂಟೆ ಬಾರಿಸಿತು
ಬಿದ್ದ ಶಂಖ-ಗಂಟೆಗಳು ಘಣಘಣಿಸಿದವು
ಸೈನಿಕರೂ ಸೈರನ್ ಮೊಳಗಿಸಿದರು,
ಪೋಲಿಸರೂ ಕಹಳೆಯೂದಿದರು…
ಈ ಮಂಗಲದ್ವನಿಯಲ್ಲೇ ಹೆಣ್ಣಿನ ಸೃಷ್ಟಿಯಾಗಿಬಿಡಬೇಕು
ಹಾಗೆ ಮಂತ್ರೋಚ್ಛಾರಣೆಗಳಾದವು
ಜೀವಂತವಾಗಿಯೇ ಸುಡುತ್ತಿರಬೇಕು ಹೆಣ್ಣು
ಪತಿ ಯಾರೇ ಆಗಿರಲಿ !
ಕಲಾಕೃತಿ - ಎಸ್.ವಿ. ಹೂಗಾರ
ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿಯವರು ಮೂಲತಹ ಧಾರವಾಡದವರು. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ, ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ, ದೆಹಲಿ ಕರ್ನಾಟಕ ಸಂಘದ 'ಮುಖವಾಣಿ 'ಅಭಿಮತ' ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ, ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ " ರಾಜಧಾನಿಯಲ್ಲಿ ಕರ್ನಾಟಕ" ಪುಸ್ತಕವನ್ನು ಸಂಪಾದಿಸಿದ್ದು ಅನೇಕ, ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಮಾಸಿಕಗಳಲ್ಲಿ ಪ್ರಕಟಗೊಂಡಿವೆ.
'ಓ ಮನಸೇ' ದೈಮಾಸಿಕ ಪತ್ರಿಕೆಯಲ್ಲಿ 'ರಾಜಧಾನಿ ಮೇಲ್' ಅಂಕಣ ಬರೆಹ ಬರೆಯುತ್ತಿದ್ದರು. ಬಿಡುಗಡೆಯಾದ ಕೃತಿಗಳು - ಮೊದಲ ಕವನ ಸಂಕಲನ " ಕಣ್ಣ ಕಣಿವೆ" 2008 ( ಪ್ರಗತಿ ಗ್ರಾಫಿಕ್ಸ್), “ದಿಲ್ಲಿ ಡೈರಿಯ ಪುಟಗಳು-2014 ( 'ಕೆಂಡಸಂಪಿಗೆ'ಯಲ್ಲಿನ ಪ್ರಬಂಧ ಬರೆಹಗಳು), " "ಅಮೃತ ನೆನಪುಗಳು" ಅಮೃತಾ ಪ್ರೀತ್‌ಂರ ಜೀವನಗಾಥೆ ಇಮೋಜ್ ಕಂಡಂತೆ (ಅಹರ್ನಿಶಿ ಪ್ರಕಾಶನ- 2015)”, “ನಮ್ಮಿಬ್ಬರ ನಡುವೆ” ಕವನ ಸಂಕಲನ ( ದೆಹಲಿ ಕರ್ನಾಟಕ ಸಂಘ-2017). 2018ರ ಪ್ರಜಾವಾಣಿ ಸಂಕ್ರಾಂತಿ ಪ್ರಬಂಧ ಸ್ಪರ್ಧೆಯಲ್ಲಿ ಎರಡನೆ ಬಹುಮಾನ, ಪ್ರೇಮಪತ್ರ ಸ್ಪರ್ಧೆಯಲ್ಲಿ - ಮೊದಲ ಬಹುಮಾನ, ಪ್ರಸ್ತುತ ಪ್ರಜಾವಾಣಿಯಲ್ಲಿ ಮಾಸಿಕ 'ಸ್ಪಂದನ' ಅಂಕಣ ಬರೆಯುತ್ತಿದ್ದಾರೆ. ಇವರ ಹಲವಾರು ಬರಹಗಳು ಕನ್ನಡದ ದಿನಪತ್ರಿಕೆಗಲ್ಲಿ ಪ್ರಕಟವಾಗಿವೆ.
More About Author