ಅಲ್ಲಿಂದ ಸ್ವಲ್ಪ ಮುಂದೆ
ಮೊಲೆಗಳ ಭೂಮಿ ಇದೆ.
ಎಲ್ಲೆಲ್ಲೂ ಸೊಕ್ಕಿ ನಿಂತ ಪರ್ವತಗಳು ಬೆಟ್ಟ ಗುಡ್ಡಗಳು ಮಲೆಗಳು
ಅವುಗಳೆಡೆಯಿಂದ ಹುಟ್ಟುವ ನದಿಗಳು
ಅಲ್ಲೆಲ್ಲ ಹರಿವ ನೀರು ನೀರಲ್ಲ .
ಬ್ರಾಹ್ಮಣ ರಲ್ಲದ ಹೆಂಗಸರು ಮೊಲೆ ತೋರಿಸಿ
ಗಾತ್ರಕ್ಕೆ ತಕ್ಕ ತೆರಿಗೆ
ಕಟ್ಟಬೇಕಾಗಿದ್ದ ಕಾಲ.
ಈಳವ ಮಹಿಳೆ ನಂಗೆಲಿ
ಮೊಲೆಗಳ ತೋರಿಸಿದಳು ಅವರಿಗೆ
ತೆರಿಗೆ ಕೊಟ್ಟಳು
ಕತ್ತ ರಿಸಿ ಮೊಲೆಗಳ
ಮೂಲೆಗಳಿಂದ ಚಿಮ್ಮಿದ್ದು ರಕ್ತವಲ್ಲ.
ನಂಗೆಲಿಯ ಮಕ್ಕಳ ಮಕ್ಕಳ ಮಕ್ಕಳು
ಮೊಮ್ಮಕ್ಕಳು ಮರಿಮಕ್ಕಳಿಗೆ ನಮಗೆ
ನಾಚಿಕೆಯಾಗಬೇಕು.
ಅಲ್ಲಿ ಪವಿತ್ರ ದೇವರ ನಾಡಿನಲ್ಲಿ
ಒಳಗೆ ಹೋಗದಂತೆ ಹೊರಗೆ
ಸಾವಿರಾರು ಮೊಲೆಗಳು
ಅಡ್ಡಡ್ಡ ಮಲಗಿದ್ದಾವೆ.
ದೇವರು ಅವುಗಳನ್ನು ನೋಡಬಾರದಂತೆ !
ದೇವರೇ...ಮೊಲೆಗಳನ್ನೇನು ಎಲ್ಲವನ್ನೂ ಎಲ್ಲೆಲ್ಲಿಯೂ ನೋಡುವವನು
ನೀನು !
ನಂಗೆಲಿಯ ಸ್ವಾಭಿಮಾನಕ್ಕೆ ತಲೆಬಾಗಿ
ಯಾರು ಯಾರೊಬ್ಬ ಹೆಂಗಸರೂ
ಹೋಗಬಾರದು ನಾವು
ಕಳಿಸಬಾರದು ನಮ್ಮ ಮಕ್ಕಳನು
ಮುಟ್ಟಬಾರದು ಹತ್ತಬಾರದು ಮೆಟ್ಟಬಾರದು ಗುಡಿಯ
ಹದಿನೆಂಟು ಮೆಟ್ಟಿಲನು.
ಬೇಕಾಗಿಲ್ಲ ನಮಗೆ ನಿಮ್ಮ ದೇವರು
ನೀವೇ ಇಟ್ಟುಕೊಳ್ಳಿ ಬರಿಯ ಕಲ್ಲು
ನಮ್ಮ ಗರ್ಭದೊಳಗೆ ಜೀವಂತ ಶಿಶು
ಹುಟ್ಟಿದರೆ ಹುಟ್ಟಬೇಕು ದೇವರು
ಮಗುವಾಗಿ ನಮ್ಮ
ಮೊಲೆ ಉಣ್ಣಲು.
- ಸಂಧ್ಯಾದೇವಿ
ಸಂಧ್ಯಾದೇವಿ
ಕವಯಿತ್ರಿ ಸಂಧ್ಯಾದೇವಿ ಮೂಲತಃ ಪುತ್ತೂರಿನವರು. `ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ' ಅವರ ಮೊದಲ ಕವನ ಸಂಕಲನ. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಹಲವಾರು ಕವಿತೆಗಳು ಮಯೂರ, ಸುಧಾ, ಹೊಸ ಮನುಷ್ಯ ಮುಂತಾದ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝಳಕ್ಕೆ ಮುಖ ಬೆಳಗುತ್ತದೆ ಮತ್ತು ‘ನೆನಪಿನ ಬೂದಿಗೆ ಜೀವ ಬರಲಿ’ ಅವರ ಮತ್ತೆರಡು ಕವನ ಸಂಕಲನ.
More About Author