Story

ಗಂಟಿನ ನಂಟು !

ಲೇಖಕ, ಕತೆಗಾರ ಶರಣಗೌಡ ಬಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ತಿಳಗೂಳದವರು. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಶರಣಗೌಡ ಬಿ. ಪಾಟೀಲ ಅವರ ‘ಗಂಟಿನ ನಂಟು !’ ಕತೆ ನಿಮ್ಮ ಓದಿಗಾಗಿ..

ಅನಿವಾರ್ಯವೊ ಅವಶ್ಯಕತೆಯೋ ಗೊತ್ತಿಲ್ಲ ಲಕ್ಷ್ಮೀಪುರದ ನೂರಪ್ಪ ಆಗಲೇ ಸಾವೀರಪ್ಪ ಆಗಿ ಬದಲಾಗಿ ಹೋಗಿದ್ದ. ಆತನ ಬಗ್ಗೆ ಹೇಳಬೇಕೆಂದರೆ ಪದಗಳೇ ಸಾಲುವದಿಲ್ಲ. ಆ ಊರಲ್ಲಿ ಎಲ್ಲರಿಗಿಂತ ಅವನೇ ಹೆಚ್ಚು ಸುದ್ದಿಯಲ್ಲಿರುತಿದ್ದ. ಅವನ ಬಗ್ಗೆ ಹೊಗಳಿಕೆಯ ಬದಲಿಗೆ ಬರೀ ಟೀಕೆ ಟಿಪ್ಪಣಿಗಳೇ ಕೇಳಿ ಬರುತಿದ್ದವು. ಆದರೂ ಆತ ಮಾತ್ರ ಯಾರ ಮಾತಿಗೂ ತಲೆಕೆಡಿಸಿಕೊಳ್ಳದ ಭಂಡ ಧೈರ್ಯದ ಆಸಾಮಿ,

ಜನ ಏನೇ ಮಾತಾಡಲಿ ತಕರಾರಿಲ್ಲ ಆದರೆ ಇವನ ಹೆಸರಿನ ಜೊತೆ ಲಕ್ಷ್ಮೀಪುರ ಸೇರಿಕೊಂಡಿದ್ದು ಕೆಲವರಿಗೆ ಬೇಸರ ತರಿಸುತಿತ್ತು.

ನೂರಪ್ಪ ಹೇಗಿದ್ದಾನೆ? ಮತ್ತೇನಾದರು ಅವನ ಹೊಸ ಹೊಸ ಸುದ್ದಿಗಳಿವೆಯೇ? ಅಂತ ಜನ ಬೇರೆ ಕಡೆ ಹೋದಾಗ ಪ್ರಶ್ನಿಸುತಿದ್ದರು ಆಗ ಜನ ಮುಜುಗರ ಎದುರಿಸುತಿದ್ದರು.

ನೂರಪ್ಪ ಓದು ಬರಹ ಕಲಿತವನಲ್ಲ. ಸಹಿ ಮಾಡುವದಿದ್ದರೆ ನೀಲಿ ಶಾಯಿ ಹಚ್ಚಿಕೊಂಡು ಹೆಬ್ಬೆಟ್ಟೊತ್ತುತಿದ್ದ . ಇತ್ತೀಚಿಗೆ ಮೂರಕ್ಛರದ ಸಹಿ ಪ್ರೈಮರಿ ಶಾಲೆಗೆ ಹೋಗುವ ಮೊಮ್ಮಗಳಿಂದ ಕಲಿತು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ.

ಅಂದು ನೂರಪ್ಪ ಇಸ್ತ್ರೀ ಬಟ್ಟೆ ತೊಟ್ಟು ಅತ್ತಾರೆಣ್ಣೆ ಕಿವಿಗಿಟ್ಕೊಂಡು ಹೊರಗೆ ಕಾಲಿಟ್ಟಾಗ ಹೆಂಡತಿ ಸೂರವ್ವ ಹಸನ್ಮುಖಿಯಾಗಿ ಬೀಳ್ಕೊಟ್ಟಳು. ಹೆಂಡತಿಯ ಮಂದಹಾಸ ಇವನಿಗೆ ಮತ್ತಷ್ಟು ಸ್ಫೂರ್ತಿ ನೀಡಿತು. ಘಮಘಮಿಸುವ ಸುವಾಸನೆ ದಾರಿಯುದ್ದಕ್ಕೂ ಪಸರಿಸುತ್ತಾ ಅನೇಕರ ಮೂಗರಳಿಸುವಂತೆ ಮಾಡಿದ. " ಯಾರ ಕಿವಿಗೆ ಹೂವಿಡಲು ಹೊರಟಿದ್ದಾನೊ ಏನೋ ಗೊತ್ತಿಲ್ಲ " ಅಂತ ಕಿರಾಣಿ ಅಂಗಡಿ ಮುಂದೆ ಕುಳಿತ ಲಿಂಗಪ್ಪ ಇತರರ ಮುಂದೆ ಅನುಮಾನ ಹೊರ ಹಾಕಿದ.

" ಯಾವುದೋ ಹೊಸ ಗಿರಾಕಿ ಸಿಕ್ಕಿರಬೇಕು ಅದಕ್ಕೆ ಇಷ್ಟೊಂದು ಠೀವಿಯಿಂದ ಹೊರಟಿದ್ದಾನೆ ಹೇಗಾದರು ಮಾಡಿ ಸಂಸಾರ ಸಾಗಿಸಬೇಕಲ್ಲ " ಅಂತ ಚಿದಾನಂದ ವ್ಯಂಗ್ಯವಾಗಿ ಹೇಳಿದ.

"ಆಸೆಬುರುಕತನದಿಂದ ರೊಕ್ಕಾ ಗಳಿಸೋದು ದೊಡ್ಡದಲ್ಲ ನಮ್ಮಂಗ ಮೈಮುರಿದು ದುಡಿದರೆ ಗೊತ್ತಾಗ್ತದೆ " ಅಂತ ಮಹಾಂತಪ್ಪ ಕೂಡ ಅಭಿಪ್ರಾಯ ಹೊರ ಹಾಕಿ ದನಿಗೂಡಿಸಿದ.

" ದುಡಿದು ದುಡ್ಡು ಮಾಡೋದು ಇವನಿಗೆ ಗೊತ್ತೇ ಇಲ್ಲ, ಗೊತ್ತಿದ್ದರೆ ಹಿಂಗ್ಯಾಕ ಮಾಡತಿದ್ದ ಅಂತ ಲಿಂಗಪ್ಪ ಹೇಳಿದಾಗ " ನಾಚಿಕೆ ಬಿಟ್ಟವನು ಏನು ಮಾಡಿದರು ನಡೀತಾದೆ" ಅಂತ ಚಿದಾನಂದ ಮಾತು ಮುಂದುವರೆಸಿದ.

"ಇವನಂಥ ಮನುಷ್ಯರು ಎಲ್ಲ ಕಡೆ ಇದ್ದೇ ಇರ್ತಾರೆ ಏನು ಮಾಡೋದು" ಅಂತ ಮಾಂತಪ್ಪ ಹೇಳಿದಾಗ ಹೌದು ಅಂತ ಕೆಲವರು ತಲೆಯಾಡಿಸಿದರು.

ನೂರಪ್ಪನ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡಿ ಮಾತಿನ ಚಾಟಿ ಬೀಸಿದರು.

ಅವರಾಡಿದ ಮಾತು ಕೇಳಿಸಿಕೊಳ್ಳದೆ ನೂರಪ್ಪ ಹಾಗೇ ಹೊರಟು ಹೋದ.

ಆದೇ ಸಮಯ ಬಾವಿಯಿಂದ ನೀರು ತರುತಿದ್ದ ಸೂರವ್ವಳ ಕಿವಿಗೆ ಅವರ ಮಾತು ಕೇಳಿಸಿತು. ತಕ್ಷಣ ಅವಳು ನೀರಿನ ಕೊಡ ರಸ್ತೆ ಪಕ್ಕಕ್ಕಿಟ್ಟು ಸೊಂಟಕ್ಕೆ ಸೆರಗು ಬಿಗಿದು, ನನ್ನ ಗಂಡನ ಬಗ್ಗೆ ಟೀಕೆ ಮಾಡ್ತೀರೇನೊ? ಎಷ್ಟು ಧೈರ್ಯ ನಿಮಗೆ ಅಂತ ತರಾಟೆಗೆ ತೆಗೆದುಕೊಂಡಳು . ಅವಳ ಮಾತು ಎಲ್ಲರಿಗೂ ಬೆವರಿಳಿಸಿತು.

ಸೂರವ್ವಳ ಏರು ದನಿ ಕೇಳಿ ಜನ ಜಮಾವಣೆಗೊಂಡು ಅವಳಿಗೆ ಸಮಾಧಾನ ಮಾಡಿ ಕಳಿಸಲು ಹರ ಸಹಾಸ ಪಡಬೇಕಾಯಿತು. ಅವಳು ಮನೆಗೆ ವಾಪಸ್ ಹೋಗುವ ತನಕ ತನ್ನ ಬೈಗುಳ ಹಾಗೇ ಮುಂದುವರೆಸಿದಳು. ಬೇವಿನಕಾಯಿಗೆ ಹಾಗಲಕಾಯಿ ಸಾಕ್ಛಿ ಅನ್ನುವಂತೆ ನೂರಪ್ಪನಿಗೆ ಅವಳು ಹೇಳಿ ಮಾಡಿಸಿದ ಜೋಡಿ ಯಾರಾದ್ರು ತಮ್ಮ ಬಗ್ಗೆ ಮಾತಾಡಿದ್ದು ಕಿವಿಗೆ ಬಿದ್ದರೆ ಅವರಿಗೆ ಬುದ್ಧಿ ಕಲಿಸದೇ ಬಿಡುತಿರಲಿಲ್ಲ.

ನೂರಪ್ಪ ನೇರವಾಗಿ ಮಹಾದೇವನ ಹೋಟಲಿಗೆ ಬಂದು ನಿನಗೆ ಬ್ಯಾಂಕಿನಿಂದ ಲೋನ ಕೊಡಸ್ತೀನಿ ಬರೀ ಚಹಾ ಮಾರಿ ಹಣ ಗಳಿಸೋದು ಆಗೋದಿಲ್ಲ ಖಾನಾವಳಿನೂ ಚಾಲು ಮಾಡು ವರ್ಷದಾಗೇ ಲಕಪತಿ ಆಗತಿ ಅಂತ ಸಲಹೆ ನೀಡಿದ. ಅವನ ಮಾತಿಗೆ ಮಹಾದೇವ ತಲೆದೂಗಿ, ಇವನಿಗೆ ಒಂದು ಪುಕ್ಕಟೆ ಚಹಾ ಕುಡಿಸಿ . ಆದಷ್ಟು ಬೇಗ ಲೋನ ಮಾಡಿಸು ಮಾರಾಯ ಅಂತ ಇನ್ನೂರು ರೂಪಾಯಿ ಕೈಗಿಟ್ಟು ಕಳಿಸಿದ ಆಗ ಇವನ ಮುಖ ಅರಳಿ ಮುಗ್ಳನಗೆ ಬೀರಿದ.

ಕಿರಾಣಿ ಅಂಗಡಿ ರಾಘಣ್ಣನ ಹತ್ತಿರ ಬಂದು ತೋಟದ ಮನೆ ಸಂಗಪ್ಪ ಮನೆ ಮಾರುವವನಿದ್ದಾನೆ ಕಟ್ಟಿಸಿ ವರ್ಷವೂ ಕಳೆದಿಲ್ಲ ಆ ಮನೆ ಕಡಿಮೆ ರೇಟಿಗೆ ನಿನಗೇ ಕೊಡಸ್ತೀನಿ ಅಂತ ಆತನಿಗೆ ಹೇಳಿದ. ಇವನ ಮಾತಿಗೆ ರಾಘಣ್ಣ ಖುಷಿಗೊಂಡು ಅಂಗಡಿ ಗದ್ದಿಗೆ ಮೇಲೆ ಕೂಡಿಸಿ ಸೋಂಪು ಸುಪಾರಿ ಕೊಟ್ಟು ಜಲ್ದಿ ಕೊಡಿಸು ಮಾರಾಯ ನನಗೂ ಮನೆ ಇಲ್ಲ ಅಂತ ಇನ್ನೂರು ರುಪಾಯಿ ಕೈಗಿಟ್ಟು ಮುಗ್ಳನಗೆ ಬೀರಿದ.

ಅಲ್ಲಿಂದ ಸೀದಾ ನೂರಪ್ಪ ಅಗಸಿ ಮನಿ ಅಂಬಾಬಾಯಿ ಹತ್ತಿರ ಬಂದು ನಿನಗ ಪ್ರತಿ ತಿಂಗಳು ಪೆನ್ಶನ್ ರೊಕ್ಕಾ ಬರುವಂಗ ಮಾಡಸ್ತೀನಿ ಆಫೀಸಿನ್ಯಾಗ ನನಗೆ ಪರಿಚಯದವರಿದ್ದಾರೆ ಅಂತ ನಂಬಿಕೆ ಬರುವಂತೆ ಹೇಳಿದ. ಇವನ ಮೇಲೆ ಅವಳಿಗೆ ಭರವಸೆ ಮೂಡಿ " ಹಂಗ ಮಾಡಿ ಪುಣ್ಯ ಕಟ್ಟೆಕೊ ಮಾರಾಯ ನನಗೂ ವಯಸ್ಸಾಯಿತು ದುಡಿಯೋದು ಆಗೋದಿಲ್ಲ ಅಂತ ನೂರು ರುಪಾಯಿ ಕೊಟ್ಟು ಕೈ ಜೋಡಿಸಿದಳು.

ತಾನು ಅಂದುಕೊಂಡಂತೆ ಅವತ್ತಿನ ಕಮೀಷನ ಹಣ ಜಮೆ ಆಗಿದ್ದು ತುಂಬಾನೇ ಖುಷಿ ಆಯಿತು ಹಣ ಜೇಬಿಗಿಳಿಸಿಕೊಂಡು ಸೀದಾ ಮನೆಗೆ ಬಂದ.

ನೂರಪ್ಪನ ಕುಟುಂಬ ತುಂಬಾ ದೊಡ್ಡದು . ಮೂರು ಜನ ಮಕ್ಕಳು ಒಂಭತ್ತು ಜನ ಮೊಮ್ಮಕ್ಕಳು ಸೊಸೆಯಂದಿರರು ಎಲ್ಲರೂ ಸೇರಿ ಸರಿ ಸುಮಾರು ಹದಿನಾರು ಹದಿನೇಳು ಜನ ವಾಸವಾಗಿದ್ದರು . ಮನೆಯಲ್ಲಿ ಸದಾ ಗದ್ದಲ ಗೊಂದಲ ಇದ್ದೇ ಇರುತಿತ್ತು . ಅಂದು ಮನೆಯವರೆಲ್ಲ ಕೆಲಸಾ ಮಾಡದೆ ಪರಸ್ಪರ ಮಾತುಕತೆಯಲ್ಲಿ ಕಾಲ ಹರಣ ಮಾಡೋದು ನೋಡಿ ಇವನ ಪಿತ್ತ ನೆತ್ತಿಗೇರಿತು. ನೀವು ಕೆಲಸ ಮಾಡದೆ ಸುಮ್ಮನೆ ಕಾಲ ಕಳೆದರೆ ನನ್ನ ಮನೆಯಲ್ಲಿ ಜಾಗಾ ಇಲ್ಲ ಅಂತ ಅಂಗಳದಲ್ಲಿ ನಿಂತು ಒಂದೇ ಸವನೆ ಕೋಪ ತಾಪ ಹೊರ ಹಾಕಿದ. ಇವನ ಮಾತಿಗೆ ಎಲ್ಲರೂ ಬೆದರಿ ಹೋದರು.

"ಅಪ್ಪ ಹೊರ ಹಾಕಿದರೆ ನಾವು ಹೆಂಡತಿ ಮಕ್ಕಳ ಜೊತೆ ಎಲ್ಲಿಗೆ ಹೋಗಬೇಕು? " ಅಂತ ಮಕ್ಕಳು ಪರಸ್ಪರ ಚಿಂತಾಕ್ರಾಂತರಾಗಿ ಚರ್ಚಿಸಿದರು . ಕೊನೆಗೆ ಎಲ್ಲರೂ ಇವನ ಹತ್ತಿರ ಬಂದು ಕೈಕಾಲು ಬಿದ್ದು ಕ್ಛಮಾಪಣೆ ಕೇಳಿದಾಗಲೇ ವಾತಾವರಣ ತಿಳಿಯಾಯಿತು. ಮನೆಯಲ್ಲಿ ಯಾರೋಬ್ಬರು ಇವನಿಗೆ ಎದಿರು ಹಾಕಿಕೊಳ್ಳುವ ಧೈರ್ಯ ತೋರುತಿರಲಿಲ್ಲ.

ನೂರಪ್ಪ ದಿನಾಲೂ ಮನೆಗೆ ಬರುವಾಗ ತನ್ನ ಕಿಸೆ ಭರ್ತಿ ಮಾಡಿಕೊಂಡೇ ಬರುತಿದ್ದ. ಇವನು ಮಾತಿನ ಮೋಡಿಯಿಂದಲೇ ಮರಳು ಮಾಡುತಿದ್ದ ಕಮೀಷನ ಹಣ ಯಾರಾದರು ಕಡಿಮೆ ಕೊಡಲು ಬಂದರೆ ಮುಲಾಜಿಲ್ಲದೆ ತಿರಸ್ಕರಿಸುತಿದ್ದ. ಇವನ ವರ್ತನೆ ಅನೇಕರಿಗೆ ಬೇಸರವೂ ತರಿಸುತಿತ್ತು.

ಅಂದು ನೂರಪ್ಪ ಹೊಸ ಗಿರಾಕಿ ಹುಡುಕುತ್ತ ಬಸವರಾಜನ ಹತ್ತಿರ ಬಂದು ಪಕ್ಕದ ಊರು ಧರ್ಮಶೆಟ್ಟಿಯ ಮಗನ ಜೊತೆ ನಿನ್ನ ಮಗಳ ನೆಂಟಸ್ಥನ ಮಾಡಸ್ತೀನಿ ಅವರು ಅನುಕೂಲಸ್ಥ ಮನೆತನದವರು. ನಿನ್ನ ಕಡೆಯಿಂದ ಜಾಸ್ತಿ ಕಮಿಷನ್ ತೊಗೊಳ್ಳೊದಿಲ್ಲ ಬರೀ ಸಾವಿರ ಅಂತ ಮನವರಿಕೆ ಮಾಡಿ ಹೇಳಿದ.

ಇವನ ಮಾತಿಗೆ ಬಸವರಾಜ ತಕ್ಷಣ ಒಪ್ಪಿಗೆ ಸೂಚಿಸಿ ಆದಷ್ಟು ಬೇಗ ನೆಂಟಸ್ಥನ ಮಾಡಿಸು ಇಂತಹ ನೆಂಟಸ್ಥನ ಸಿಗೋದೇ ಅಪರೂಪ ಅಂತ ಸಾವೀರ ರುಪಾಯಿ ಕೈಗಿಟ್ಟು ಕಳಿಸಿದ. ಸುಮಾರು ದಿನ ಹಾಗೇ ಕಳೆದು ಹೋದವು ನೂರಪ್ಪ ವರನನ್ನು ಕರೆದುಕೊಂಡು ಬಂದು ತೋರಿಸಲಿಲ್ಲ ಇದರಿಂದ ಬಸವರಾಜನಿಗೆ ಬೇಸರವಾಗಿ ಪುನಃ ನೂರಪ್ಪನ ಹತ್ತಿರ ಬಂದು ನೆಂಟಸ್ಥನದ ಬಗ್ಗೆ ವಿಚಾರಿಸಿದ.

"ನಾನು ನೆಂಟಸ್ಥನ ಮಾಡಿಸುವ ಪ್ರಯತ್ನ ಮಾಡಿದೆ ಆದರೆ ಧರ್ಮಶೆಟ್ಟಿ ತನ್ನ ಮಗನ ಮದುವೆ ಆಗಲೇ ಬೇರೆ ಹುಡುಗಿಯ ಜೊತೆ ಮಾಡಿ ಮುಗಿಸಿದ್ದಾನೆ ಏನು ಮಾಡೋದು ? ಅಂತ ಅಸಹಾಯಕತೆ ತೋರ್ಪಡಿ ಅದಕ್ಕಿಂತಲೂ ಛೊಲೊ ನೆಂಟಸ್ಥನ ಮಾಡಸ್ತೀನಿ ನೀನೇನೂ ಯೋಚನೆ ಮಾಡಬ್ಯಾಡ ಅಂತ ಸಮಾಧಾನ ಹೇಳಿ ಕಳಿಸಿದ.

ಅವತ್ತು ಬಸವರಾಜ ತನ್ನ ಕೆಲಸದ ನಿಮಿತ್ಯ ಊರಿಗೆ ಹೋದಾಗ ಧರ್ಮಶೆಟ್ಟಿ ಭೇಟಿಯಾಗಿದ್ದ ಇಬ್ಬರೂ ಸೇರಿ ಚಹಾ ಕುಡಿದರು. ನಮ್ಮ ಮಗನಿಗೆ ಕನ್ಯಾ ಹುಡುಕುತಿದ್ದೇವೆ ನಿಮ್ಮ ಕಡೆ ಯಾರಾದರೂ ಇದ್ದರೆ ತಿಳಿಸು ಅಂತ ಹೇಳಿದ . "ನಿಮ್ಮ ಮಗನ ಮದುವೆ ಆಗಿಲ್ಲವೇ ? ನೆಂಟಸ್ಥನ ಸಲುವಾಗಿ ನೂರಪ್ಪನ ಕಡೆಯಿಂದ ಹೇಳಿ ಕಳಿಸಿದ್ದೆ " ಅಂತ ಬಸವರಾಜ ಗಾಬರಿಯಾಗಿ ಪ್ರಶ್ನಿಸಿದ.

ಆತ ನನಗೆ ಭೇಟಿಯೇ ಆಗಿಲ್ಲ ಅಂತ ಧರ್ಮಶೆಟ್ಟಿ ಹೇಳಿದಾಗ ಬಸವರಾಜನಿಗೆ ಕೋಪ ಬಂದಿತು. ಊರಿಗೆ ಬಂದು ನೂರಪ್ಪ ಮಾಡಿದ ಕಿತಾಪತಿಯ ಬಗ್ಗೆ ಎಲ್ಲರ ಮುಂದೆ ಹೇಳಿದ. ಅವನ ಸ್ವಭಾವ ಗೊತ್ತೇ ಇದೆ ಹಾಗಿದ್ದರೂ ಯಾಕೆ ನಂಬಿದೆ ? ರಾತ್ರಿ ಕಂಡ ಬಾವಿ ಹಗಲು ಬಿದ್ದಂತಾಯಿತು" ಅಂತ ಹೇಳಿದರು. ಬಸವರಾಜನಿಗೆ ಆಗಲೇ ತನ್ನ ತಪ್ಪಿನ ಅರಿವಾಗಿ ಮೌನವಾದ. ಅಂದಿನಿಂದಲೇ ನೂರಪ್ಪ ಸಾವೀರಪ್ಪ ಆಗಿ ಬದಲಾಗಿ ಹೋದ .

ನೂರಪ್ಪ ಯಾರೇನೆ ಹೇಳಲಿ ತನ್ನ ಕಾಯಕ ಮುಂದುವರೆಸಿದ. ನೂರಾರು ರುಪಾಯಿಗೆ ಆಸೆಪಡುತಿದ್ದ ಅವನು ದಿನಕಳೆದಂತೆ ಸಾವಿರಾರು ರುಪಾಯಿಗೆ ಆಸೆ ಪಡಲು ಶುರು ಮಾಡಿದ. ನೂರೋ ಇನ್ನೂರೋ ಕೊಡಲು ಬಂದರೆ ಖಡಾಖಂಡಿತ ತಿರಸ್ಕರಿಸಿ ಈ ಚಿಲ್ಲರೆ ರೊಕ್ಕಕ್ಕೆ ಏನು ಬರ್ತಾದೆ ಅಂತ ಪ್ರಶ್ನಿಸುತಿದ್ದ. ಜೀವನ ನಡೆಸಲು ಹಣ ಬೇಕು. ಹಣವಿಲ್ಲದೆ ಯಾವ ಕೆಲಸವೂ ಸಾಗುವದಿಲ್ಲ ಆದರೆ ಹಣ ಗಳಿಸುವ ಮಾರ್ಗ ಸರಿಯಾಗಿದ್ದರೆ ಯಾರಿಂದಲೂ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ಇರುವದಿಲ್ಲ ಆದರೆ ನೂರಪ್ಪ ಇದಕ್ಕೆ ಹೊರತಾಗಿದ್ದ . ಹಣವೆಂದರೆ ಸಾಕು ಅವನಿಗೆ ಎಲ್ಲಿಲ್ಲದ ವ್ಯಾಮೋಹ. ಹಣಕ್ಕಾಗಿ ರಕ್ತ ಸಂಬಂಧಗಳಿಗೂ ಬೆಲೆ ಕೊಡ್ತಿರಲಿಲ್ಲ ಹಣದ ವಿಷಯದಲ್ಲಿ ಅನೇಕ ಸಂಬಂಧಗಳೂ ಕಡೆದಕೊಂಡಿದ್ದ.

ಸತ್ತರೆ ರೊಕ್ಕಾ ರುಪಾಯಿ ಜೊತೆಗೆ ತೊಗೊಂಡು ಹೋಗ್ತಾನಾ? ಅಂತ ಬೀಗರು ನೆಂಟರು ಕೂಡ ಶಪಿಸುತಿದ್ದರು. ನೂರಪ್ಪ ತನ್ನ ಮೂವರು ಮಕ್ಕಳಿಗೂ ಒಬ್ಬರಿಗಿಂತ ಒಬ್ಬರಿಗೆ ಹೆಚ್ಚಿನ ವರದಕ್ಷಿಣೆ ವರೋಪಚಾರ ಪಡೆದುಕೊಂಡು ಮದುವೆ ಮಾಡಿದ್ದ ತನ್ನ ಕೈಯಿಂದ ಒಂದೇ ಒಂದು ಪೈಸೆ ಕೂಡ ಖರ್ಚು ಮಾಡಿಕೊಳ್ಳಲಿಲ್ಲ . ಸೊಸೆಯಂದಿರರು ಬಂದ ಮೇಲೂ ಕುಪ್ಪಸ ಕಾರಣ , ತೊಟ್ಟಿಲು , ಜಾವುಳ, ಮುಂಜಿ ಅದು ಇದು ಅಂತ ನಿರಂತರ ಬೀಗರ ಕಡೆಯಿಂದ ವಸೂಲಿ ಮಾಡುತ್ತಲೇ ಇರುತಿದ್ದ. ಬೀಗರು ನೆಂಟರ ಪಾಲಿಗೆ ಇವನು ಬಿಸಿತುಪ್ಪವಾಗೇ ಪರಿಣಮಿಸಿದ. ಆದರೆ ಏನು ಮಾಡೋದು ಇವನ ಜೊತೆ ಮನಸ್ತಾಪ ಮಾಡಿಕೊಂಡರೆ ಸಂಬಂಧ ಕೆಡುತ್ತದೆ ಅಂತ ಬೀಗರು ನೆಂಟರು ಮಜಬೂರಾಗಿ ಸುಮ್ಮನಾಗುತಿದ್ದರು.

ನೂರಪ್ಪ ತಾನು ಕೂಡಿಟ್ಟ ಹಣ ತಾನೇ ಖರ್ಚು ಮಾಡುತಿರಲಿಲ್ಲ. ಅದು ಯಾರ ಕಣ್ಣಿಗೂ ಬೀಳದಂತ ಮುಚ್ಚಿಡುತಿದ್ದ. ಹಣ ಎಲ್ಲಿಡುತ್ತಾನೆ ಅನ್ನುವ ವಿಷಯ ಮನೆಯಲ್ಲಿ ಯಾರಿಗೂ ಗೊತ್ತು ಮಾಡಿರಲಿಲ್ಲ. ಇವನ ಕೂಡಿಟ್ಟ ಆ ಹಣದ ಗಂಟಿನ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು ಆದರೆ ಅದು ಎಲ್ಲರ ಪಾಲಿಗೆ ಕನ್ನಡಿಯೊಳಗಿನ ಗಂಟಾಗಿತ್ತು .

ಮನೆಯವರೆಲ್ಲಾ ಒಳಗೊಳಗೆ ಇವನ ಮೇಲೆ ಕುದಿಯುತಿದ್ದರು. ಎಷ್ಟು ದಿನಾ ಅಂತ ಗಂಟು ಮುಚ್ಚಿಡುತ್ತಾನೆ ಅವನ ಅವಸಾನದ ನಂತರ ಆ ಗಂಟು ನಮಗೇ ಸೇರುತ್ತದೆ ಅಲ್ಲಿಯ ತನಕ ಕಾಯೋಣ ಅಂತ ಪರಸ್ಪರ ಯೋಚಿಸುತಿದ್ದರು.

ಹುಟ್ಟು ಆಕಸ್ಮಿಕ ಸಾವು ಖಚಿತ ಅನ್ನುವಂತೆ ಅವತ್ತು ನೂರಪ್ಪ ಆಕಸ್ಮಿಕವಾಗಿ ನಿಧನ ಹೊಂದಿದ. ಆ ಸುದ್ದಿ ಕೇಳಿ ಊರ ಜನ ದಂಗಾದರು. ನೂರಪ್ಪ ಹೇಗೇ ಇರಲಿ ಇನ್ನೂ ಸ್ವಲ್ಪ ದಿನ ಬದುಕಿದ್ದರೆ ಛೊಲೊ ಆಗ್ತಿತ್ತು ಅಂತ ಹಳಹಳಿಸಿದರು. ಊರವರೆಲ್ಲ ಸೇರಿ ಸಾಯಂಕಾಲ ಇವನ ಅಂತಿಮ ಸಂಸ್ಕಾರವೂ ಮಾಡಿ ಮುಗಿಸಿದರು. ನೂರಪ್ಪನಿಲ್ಲದ ಮನೆ, ಊರು, ಕೇರಿ ಎಲ್ಲವೂ ಭಣಗೊಡತೊಡಗಿತು. ಇವನು ಹಣ ಎಲ್ಲಿ ಬಚ್ಚಿಟ್ಟಿದ್ದಾನೆ ಅನ್ನುವ ವಿಷಯ ಮಾತ್ರ ಯಾರಿಗು ಗೊತ್ತಾಗದೇ ಪ್ರಶ್ನೆಯಾಗೇ ಉಳಿಯಿತು.

ನೂರಪ್ಪನ ಆ ಹಣದ ಗಂಟಿಗಾಗಿ ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರರು ಮನೆಯಲ್ಲಿ ಎಲ್ಲ ಕಡೆಗೆ ಹುಡುಕಿದರು. ಆದರೆ ಅದು ಯಾರ ಕೈಗೂ ದಕ್ಕಲಿಲ್ಲ. ಮಾವ ಆಸೆಬುರುಕನದಿಂದ ಗಳಿಸಿದ ಹಣ ಪರರ ಪಾಲಾಗಿ ಹೋಗಿರಬೇಕು. ನಮ್ಮೂರಿನ ಯಾರ ಹತ್ತಿರ ಇಲ್ಲದಷ್ಟು ಹಣ ಇವನ ಹತ್ತಿರ ಇತ್ತು ಅಂತ ಸೊಸೆಯಂದಿರರು ಮಾತಾಡಿ ಮುಖ ಸಪ್ಪಗೆ ಮಾಡಿದರು.

"ಮಾವನೇ ತೀರ ಹೋದ ಮೇಲೆ ಆತ ಬಳಸುತಿದ್ದ ಹಾಸಿಗೆ ಹೊಚ್ಚಿಗೆ ದಿಂಬು ಅವೆಲ್ಲ ಮನೆಯಲ್ಲಿಟ್ಟುಕೊಳ್ಳೋದು ಸರಿಯಲ್ಲ" ಅಂತ ಹಿರಿ ಸೊಸೆ ಮೀನಾಕ್ಷಿ ಅವತ್ತು ರೂಮ ಸ್ವಚ್ಛ ಮಾಡಲು ಬಂದು ಅವುಗಳನ್ನು ತೆಗೆದು ದೂರ ಎಸೆಯಲು ಮುಂದಾದಳು. ಆಗ ಇದ್ದಕ್ಕಿದ್ದಂತೆ ಮಾವನ ದಿಂಬಿನಿಂದ ಹಣದ ಬಂಡಲ್ ಒಂದೊಂದಾಗಿ ಕೆಳಗೆ ಬೀಳತೊಡಗಿದವು . ಮೀನಾಕ್ಷಿಗೆ ತನ್ನ ಕಣ್ಣು ತಾನೇ ನಂಬದಂತಾಯಿತು. ಮಾವನ ಗಂಟು ಸಿಕ್ಕಿತು ಬರ್ರಿ ಬರ್ರಿ ಅಂತ ಎಲ್ಲರಿಗೂ ಜೋರಾಗಿ ಕೂಗಲು ಆರಂಭಿಸಿದಳು.!

- ಶರಣಗೌಡ ಬಿ ಪಾಟೀಲ ತಿಳಗೂಳ

 

ಶರಣಗೌಡ ಬಿ.ಪಾಟೀಲ ತಿಳಗೂಳ

ಲೇಖಕ ಶರಣಗೌಡ ಪಾಟೀಲ ಅವರು  ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಹಿಟ್ಟಿನ ಗಿರಣಿ ಕಿಟ್ಟಪ್ಪ (ಲಲಿತ ಪ್ರಬಂಧಗಳ ಸಂಕಲನ)’, ತೊರೆದ ’ಗೂಡು (ಕಾದಂಬರಿ), ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು (ಕಥಾ ಸಂಕಲನ), ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ (ಕಾದಂಬರಿಗಳು)  

ಪ್ರಶಸ್ತಿ-ಪುರಸ್ಕಾರಗಳು:  ಇವರ ‘ಹಿಟ್ಟಿನ ಗಿರಣಿ ಕಿಟ್ಟಪ್ಪ  ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ. ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಮಟ್ಟದ ಪ್ರಬಂಧ  ಸ್ಪರ್ಧೆಯ ಪ್ರಶಸ್ತಿ. ಸಾಧಕ ಶಿಕ್ಷಕ ಪ್ರಶಸ್ತಿ, ಕನ್ನಡ ನಾಡು ಲೇಖಕರ ಓದುಗರ ಸ ಸಂಘದಿಂದ ಯಶೋದಮ್ಮ ಸಿದ್ದಬಟ್ಟೆ ಸ್ಮಾರಕ ಪುಸ್ತಕ  ಪ್ರಶಸ್ತಿ  ಗುರುಕುಲ ಪ್ರತಿಷ್ಠಾನದಿಂದ ಸಾಹಿತ್ಯ ಶರಭ ಪ್ರಶಸ್ತಿಗಳು ಲಭಿಸಿವೆ. 
 

More About Author