ನಾನು ದಲಿತ ;ಆತ್ಮವಿಲ್ಲದವನು
ಹೃದಯ ಹೊತ್ತ ಅಲೆಮಾರಿ
ಚಾತುರ್ವರ್ಣಕ್ಕೆ ಸಿಲುಕದ ಅವರ್ಣೀಯ
ನಿಮ್ಮನುಭವಕ್ಕೆ ನಿಲುಕದ ಮಳೆಬಿಲ್ಲು
ಬಾಯಿ ಭುಜ ತೊಡೆ ಪಾದಗಳಲ್ಲ
ಯೋನಿ ನನ್ನ ಜನ್ಮಸ್ಥಳ
ಪುರುಷನ ಸೂಕ್ತಕ್ಕೆ ಬಲಿಯಾಗದೆ
ಅವ್ವನೊಂದಿಗೆ ಉಸಿರಾಡಿದವನು
ಆ ಭಿಕ್ಕು ಅಪ್ಪಿದ ಘಮಲು
ದಾಸಿಯ ಮಗನ ಮಂಟಪ
ಸಾಹೇಬ ತುಂಬಿದ ಸ್ವಾಭಿಮಾನ
ಇವಿಷ್ಟೇ ನನ್ನದೊಬ್ಬನಲ್ಲದ ಆಸ್ತಿ
ಹೂವಿನಂತವನು
ಊದುಬತ್ತಿಯ ಗಬ್ಬುನಾಥಕೆ ಹೆದರಿ
ಮಂತ್ರ ತಂತ್ರ ಘಂಟೆಗೆ ಬೇಸತ್ತು
ಊರು ಬಿಟ್ಟವನು
ಭಾರತದ ಮೈತುಂಬ ಅರಳಿ
ಅಸೆಡ್ಡೆಗೆ ಕೆರಳಿ
ವಿಷವಿಕ್ಕಿದರೂ ಬಾಡದೆ ಉಳಿದ
ಅರಳೀ ಮರ
ಹೌದು,
ನಾನು ದಲಿತ
ನನ್ನದೇ ಹಣೆ ಬರಹ ಬರೆದುಕೊಳ್ಳುವವನು
ನನ್ನ ಮುಟ್ಟಿ ಮನುಷ್ಯರಾಗಬಹುದು
ಸಂಕರ ಸೃಷ್ಠಿಸಿ ಮನುಷ್ಯತ್ವ ಕಲಿಯಬಹುದು
ಆಡಿಯೋ
ವಿಡಿಯೋ
ಸಮಾಧಿಗೂ ಗೋಡೆಗಳಿರುವಾಗ!
ಸಾವು!
ಶಾಂತಿ, ನೆಮ್ಮದಿ ದೊರಕುವ ಖಚಿತ ವಿಳಾಸವಂತೆ
ಸ್ವರ್ಗ ಕಾಣುವ ರಹದಾರಿಯಂತೆ
ಮುಕ್ತಿ ಹೊಂದುವ ವಿದಾಯವಂತೆ
ಬದುಕಿದ್ದಾಗ
ತಿನ್ನಲು ಉಣ್ಣಲು ಬೆರೆಯಲು
ಕುಡಿಯಲು ಕುಟುಕಲು ಕೈ ಕುಲುಕಲು
ವಿವಾಹವಾಗಿ ಮೈ ಮರೆಯಲು
ಪ್ರಾರ್ಥಿಸಿ ಓ ದೇವರೇ ಎನ್ನಲು
ಹೀಗೆ
ಹೆಜ್ಜೆ ಹೆಜ್ಜೆಗೂ ಗೆರೆ ಗೀಚಿಕೊಂಡು
ನಂಟು ಸುಟ್ಟು ಹಾಕಿ
ಶವವಾದಾಗ ಯಾವ ನೆಮ್ಮದಿ ಬೇಕು?
ಧರ್ಮಕ್ಕೊಂದು, ಜಾತಿಗೊಂದು, ಪಂಥಕ್ಕೊಂದು
ಸಮಾಧಿಗಳಿಗೆ ಗೋಡೆ ಕಟ್ಟಿಕೊಂಡಿರುವಾಗ
ಚಿರಶಾಂತಿಯೆನ್ನುವುದು
ಆ ಸಮಾಧಿಯ ಹೆಬ್ಬಾಗಿಲಿಗೆ ಕೆತ್ತಿಟ್ಟ
ಕಲ್ಲಿನ ಅಕ್ಷರಗಳು ಮಾತ್ರವಲ್ಲವೆ?
ಆಡಿಯೋ
ವಿಡಿಯೋ
ವಿಕಾಸ್ ಆರ್ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಹಳ್ಳಿ. ಬೆಳೆದದ್ದು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳ ಸಂಗ್ರಹ ‘ಚಮ್ಮಟಿಕೆ’ ಕೃತಿಯನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಜೊತೆಗೆ ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಕಪ್ಪು ಕುಲುಮೆ'ಯನ್ನೂ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಹಾಗೇ 'ನೀಲವ್ವ' ಎಂಬ ಕತಾಸಂಕಲನ ಹಾಗೂ 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು' ಎಂಬ ಅನುವಾದಿತ ಕೃತಿ ಹಾಗೂ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯನ್ನು 'ಅಂಬೇಡ್ಕರ್ ಜಗತ್ತು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಜೀರುಂಡೆ ಪುಸ್ತಕ ಪ್ರಕಾಶನ ಪ್ರಕಟಿಸಿದೆ. ಇವರ ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಬರೆದ ಬುದ್ಧಬೆಳಕು ನಾಟಕ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಕರ್ನಾಟಕದಲ್ಲಿ ಕೋಮವಾದದ ವಿರುದ್ಧ ನಡೆದ ಬಹುಮುಖ್ಯ ಚಳುವಳಿ ಚಲೋ ಉಡುಪಿಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ದಲಿತ ಸಂವೇದನೆಯನ್ನು ಅಕ್ಷರಮುಖಿ ನಿರ್ವಚನದ ಆಚೆಗೂ ಪಡಿಮೂಡಿಸುತ್ತಿದ್ದಾರೆ.