Poem

ದಂಡಿನ ದಾರಿಯಲ್ಲಿ

1

ಗುಡ್ಡ ಕಣಿವೆಗಳಲ್ಲಿ, ದಟ್ಟಾರಣ್ಯಗಳ ನಡುವೆ,

ಕತ್ತಲ ಗುಹೆ ಗಹ್ವರಗಳ ಅಡಗು ತಾಣಗಳಲ್ಲಿ,

ಬಿಗಿ ಹಿಡಿದ ಉಸಿರುಗಳಲ್ಲಿ, ಕೊನೆಯಿರದ

ಓಟಗಳಲ್ಲಿ, ಬೆನ್ನಟ್ಟಿ ಬರುವ ಕತ್ತಿ ಹಿಡಿದವರ

ಭಯಾನಕ ನೆರಳಲ್ಲಿ ಸಾಗಿತ್ತು ದಂಡಿನ ದಾರಿ,

ಹಸಿವು ಬಾಯಾರಿಕೆಗಳು ಇಂಗಿದ ಜಾಡಿನಲ್ಲಿ,

ಜೀವಗಳ ಉಳಿಸಿ ಕನಸುಗಳ ಕಟ್ಟುವ ಹಟದಲ್ಲಿ

ವಚನಗಳ ಕಟ್ಟು ಹಿಡಿದು, ಎದೆಯಲಿ ನೆಟ್ಟ

ನಂಬಿಕೆಯ ಗಟ್ಟಿತನದಲ್ಲಿ ಓಡಿದರು ಅವರು

ಹಗಲು ರಾತ್ರಿಗಳ, ಹುಟ್ಟು-ಸಾವುಗಳ ಧಿಕ್ಕರಿಸಿ

ಕಟ್ಟಿದ ಕನಸುಗಳ ಪೊರೆಯುತ್ತ ನೆಟ್ಟ ನಂಬಿಕೆಗಳಿಗೆ

ನೀರೆರೆಯುತ್ತ, ಹರಿಯುತ್ತ ಬತ್ತದ ತೊರೆಯಾಗಿ

ಸುರಿವ ಮಳೆಯಲ್ಲಿ ಮೋಡಗಳಾಗಿ, ಭೋರೆನುವ

ಬಿರುಗಾಳಿಯಲ್ಲಿ ಪ್ರಚಂಡ ಶಕ್ತಿಯಾಗಿ, ಅಡ್ಡವಾದ

ನದಿಗಳನು ನದರಿಲ್ಲದೆ ದಾಟುತ್ತ, ಜೀವಗಳ ಫಣವಾಗಿಟ್ಟು

ಹುಲಿ ಸಿಂಹಗಳಿಗೆ ಎದುರಾಗಿ ಓಡಿದರು ಅವರು, ಉರಿಯುತ್ತಿದ್ದ

ಕಲ್ಯಾಣ ಅವರ ಕಣ್ಣುಗಳಲ್ಲಿತ್ತು, ಸಮಸಮ ಕಲ್ಯಾಣ ಅವರ ಎದೆ-

ಗಳಲ್ಲಿತ್ತು, ದಂಡಿನ ದಾರಿ ಎಂಬುದು ಅವರ ನಿಲುಗಡೆ ಇಲ್ಲದ

ನಡೆಯಾಗಿತ್ತು; ಹೊತ್ತ ವಚನ ಕಟ್ಟುಗಳನ್ನವರು ಇಳಿಸುವಂತಿರಲಿಲ್ಲ,

ಹರಿವ ನೆತ್ತರನು, ಉರಿವ ಗಾಯಗಳನವರು ಲೆಕ್ಕಿಸುವಂತಿರಲಿಲ್ಲ

ನಡೆದ ಹೆಜ್ಜೆ ಗುರುತನು ಬಿಡುವಂತಿರಲಿಲ್ಲ, ಬೆನ್ನ ಹಿಂದೆಯೇ ಇತ್ತು

ಮೃತ್ಯು; ಕಟ್ಟಿದ ಕನಸುಗಳಿನ್ನೂ ಕಮರಲಿಲ್ಲ, ನೆಟ್ಟ ನಂಬಿಕೆಗಳು

ಅಲ್ಲಾಡಿರಲಿಲ್ಲ, ಹಗಲು ರಾತ್ರಿಗಳ ಚಕ್ರ ನಿಲ್ಲದೆ ತಿರುಗುತ್ತಲೇ ಇತ್ತು

2

ಒಡೆದಿತ್ತು ಕಲ್ಯಾಣದ ಕನ್ನಡಿ ಸಾವಿರ ಚೂರಾಗಿ,

ಒಂದೊಂದು ಚೂರಲ್ಲೂ ನಗೆ ಮಾಸದ ಮುಖಗಳು:

ಬಸವ, ಅಲ್ಲಮ, ಅಕ್ಕ, ಸಿದ್ಧರಾಮ, ಚನ್ನಬಸವಣ್ಣ,

ಮಾಚಯ್ಯ, ಹರಳಯ್ಯ, ನಾಗಿದೇವ, ರೇಚಕ್ಕ, ಅಕ್ಕಮ್ಮ

ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ, ಕದಿರ ರೆಮ್ಮವ್ವೆ, ರಾಯಮ್ಮ

ಕೊನೆಯಿಲ್ಲ ಕನ್ನಡಿಗೆ, ಬರವಿಲ್ಲ ಮುಖಗಳಿಗೆ, ಹಿಡಿದ

ಕಾಯಕಗಳಿಗೆ, ದುಡಿಮೆ ಎಂಬುದು ಬೆವರ ತೊರೆಯಾಗಿ

ಹರಿದಿತ್ತು ಕಲ್ಯಾಣದ ಉದ್ದಗಲ, ತುಂಬುತ್ತ ಎಲ್ಲ ತಗ್ಗು-

ತೆವರುಗಳ; ಆಗಸದ ತುಂಬ ರೆಕ್ಕೆಬಿಚ್ಚಿದ ಹಕ್ಕಿಗಳಿಗೆ

ಇರಲಿಲ್ಲ ಯಾವುದೇ ಕಟ್ಟು ನಿಟ್ಟುಗಳು ಮುಟ್ಟು ಚಟ್ಟುಗಳು

ನಿಗಿನಿಗಿ ಹೊಳೆಯುವ ಶತಕೋಟಿ ಸೂರ್ಯರ ಬೆಳಕಲ್ಲಿ

3

ತೊಟ್ಟಿಕ್ಕುತ್ತಿದೆ ನೆತ್ತರು ಹನಿ ಹನಿಯಾಗಿ, ಧಾರೆ

ಧಾರೆಯಾಗಿ, ತುಂಬಿ ಹರಿವ ತೊರೆಯಾಗಿ

ಮರಣವೇ ಮಹಾನವಮಿ ಎಂದವರ ಶಿರತರಿದು

ಕಲ್ಯಾಣದ ತುಂಬ ಕಟ್ಟಿದ್ದಾರೆ ತೋರಣ, ಅಹಂಕಾರದ

ಹಬ್ಬ ಮಾಡಿದವರು ಬೀಗುತ್ತ ಗೆಲುವ ಕಂಡವರಂತೆ

ಆಡುತ್ತಿದ್ದಾರೆ ರಕ್ತದೋಕುಳಿಯ ಬೀದಿಬೀದಿಗಳಲ್ಲಿ

4

ಮುಳುಗಬಾರದಿತ್ತು ಬಿಜ್ಜಳ, ಮುಳುಗಿದ್ದ

ಚಾಡಿಕೋರರ ಕೊಳದಲ್ಲಿ, ಸಿಂಹಾಸನದ

ಸುತ್ತ ಸಂಚುಗಳ ಹುತ್ತ, ಎತ್ತ ಹೆಜ್ಜೆ ಇಟ್ಟರೂ

ಆಳದಾಳದ ಪ್ರಪಾತ, ಕಂಗೆಟ್ಟ ಬಿಜ್ಜಳ ಹುಚ್ಚಾಗಿ

ಪೆಚ್ಚಾಗಿ ಕುರುಡಾಗಿ ಕೀಳಿಸಿದ ಹರಳಯ್ಯ

ಮಧುವರಸರ ಬೆಳಕಿನ ಕಣ್ಣುಗಳ; ಬೆಳಕಿಲ್ಲದ

ಕಲ್ಯಾಣದಲ್ಲಿ ಸತ್ಯದ ಮುಖಗಳು ಮುಚ್ಚಿ

ಕುಣಿದವು ಕತ್ತಿ ಹಿಡಿದ ಪ್ರೇತಗಳು ಹುಚ್ಚಾಗಿ

5

ಕೇಡಿಗರು, ಕನಸಿಗರು, ಶರಣರು,

ವಂಚಕರು, ಸಂಚುಕೋರರು

ಮುಖದ ಹಿಂದೆ ಮುಖವಾಡ

ಬಣ್ಣಗಳೆ ತಿಳಿಯುತ್ತಿಲ್ಲ ಬಿಳುಪೊ

ಕೆಂಪೊ ಹತ್ತಿರದಲ್ಲಿರುವುದೂ ಕಾಣುತ್ತಿಲ್ಲ

ತಿಳಿಯುತ್ತಿಲ್ಲ ಮುಖ ಚಹರೆ, ನಿಜ ರೂಪ

ಬಿಜ್ಜಳನಲ್ಲಿ ಬಸವನೂ ಬಸವನಲ್ಲಿ ಬಿಜ್ಜಳನೂ

ಕಂಡಂತಾಗಿ ಕತ್ತಿಹಿರಿದವರು ಕಂಗೆಟ್ಟರು,

ಅಲೆದಲೆದು ಅಲ್ಲಮನ ಹುಡುಕಿದರೂ ಸಿಕ್ಕಲಿಲ್ಲ

ಅವನು, ಕಲ್ಯಾಣ ನೆಲೆಯಲ್ಲ ಅಲ್ಲಮನಿಗೆ

ಅದೊಂದು ನಿಲ್ದಾಣ, ಶೂನ್ಯ ಸಿಂಹಾಸನದ

ಅರ್ಥ ಯಾರಿಗೂ ತಿಳಿದಂತೆ ಕಾಣಲಿಲ್ಲ,

ಅಕ್ಕ ಬೇರೆಯಲ್ಲ, ಅವಳ ಹೆಜ್ಜೆ ಗುರುತುಗಳು

ಎಲ್ಲೂ ಕಾಣಲಿಲ್ಲ ಕತ್ತಿ ಹಿಡಿದು ಹೊರಟವರಿಗೆ

ಅರಮನೆಯ ಬಿರುಕುಗಳಲ್ಲಿ ಯಾರ

ಯಾರವೊ ಮುಖಗಳು ಮುಖವಾಡಗಳು

ಇರಿದು ಕೊಂದರೂ ಕೊನೆಯಾಗಲಿಲ್ಲ

ಜನ ನುಡಿಯುವ ಮಾತೆಲ್ಲ ಜ್ಯೋತಿರ್ಲಿಂಗ

ಸ್ಥಾವರ ಜಂಗಮಗಳ ಗೋಜಲೇ ಬೇಡವೆಂದು

ಕಂಡ ಶಿರಗಳ ತರಿಯುತ್ತ ನಡೆದರೂ ತೀರಲಿಲ್ಲ ಗಣ

6

ಎಲ್ಲಿ ಹೋದನು ಬಸವ, ಕನಸ ಕುದುರೆಯನೇರಿ

ಕಲ್ಯಾಣಕ್ಕೆ ಬಂದವನು, ಪ್ರೀತಿ ಹೊಳೆಯ ಹರಿಸಿ

ಎಲ್ಲೆಲ್ಲು ಹಸಿರ ಕಾಣಿಸಿದವನು, ವಚನ ಕೊಟ್ಟು

ವಚನವಿಟ್ಟು, ಸಕಲರ ಸಮನೆಲಕೆ ತಂದವನು

ಎದೆಎದೆಯ ಹದಮಾಡಿ ಬಿತ್ತಿಬೆಳೆದವನು

ಬಿಜ್ಜಳನ ಭಂಡಾರವನು ಸರ್ಪವಾಗಿ ಕಾದವನು

7

ಎಲ್ಲೆಂದು ಹುಡುಕುವುದು ನೆಲೆಯ

ದಟ್ಟ ಕಾನನಗಳಲ್ಲಿ ಅಡಗಿರುವುದೇನೋ

ಯಾರೋ, ನೆಲೆ ನಿಂತರೆ ತಲೆ ತೆಗೆಯಲು

ಕಾದಿದ್ದಾರೆ, ಉಳವಿಯ ಗೊಂಡಾರಣ್ಯದಲ್ಲಿ

ಉಳಿದವರು ಯಾರೊ, ಅಳಿದವರು ಯಾರೊ

ಉಸಿರು ಬಿಗಿಹಿಡಿದು ಓಡಿದವರು ಯಾರೊ

ಉತ್ತರವೊ ದಕ್ಷಿಣವೊ ಪೂರ್ವ ಪಶ್ಚಿಮವೊ

ತಿಳಿಯುತ್ತಿಲ್ಲ ಯಾವುದೂ ದಿಕ್ಕೆಟ್ಟವರಿಗೆ

8

ಸುರಿವ ನೆತ್ತರನು, ಉರಿವ ಗಾಯಗಳನು

ಕಡಿದುಬಿದ್ದ ಶಿರಗಳನು ಕಡೆಗಣಿಸಿ

ನಡೆದರವರು ಮುಂದೆ ಮುಂದೆ, ಅವರ

ಮುಂದೆ ತೆರೆದಿತ್ತೊಂದು ದಾರಿ, ತೆರೆ-

ದಿತ್ತೊಂದು ಗುರಿ, ಅವರ ನೋಟ ಅಲ್ಲಿಯೇ

ನೆಟ್ಟು ಸಾಗಿದರವರು ಗುರಿಯ ಕಡೆಗೆ

9

ಆಗಾಗ ಕಲ್ಯಾಣ ಭೂಮಿ ಕಾಣುವುದು

ಕೆಲವರಿಗೆ, ಗೋರಿಯಿಂದ ಮೇಲೇಳುವವು

ಕನಸುಗಳು, ಮಿಸುಕಾಡುವವು ಹಂಬಲಗಳು

ಸಿಂಹಾಸನಗಳು ಮೆರೆದು ಕರಗುವುದು,

ಗಂಗೆಯೊ ತುಂಗೆಯೊ ಕಾವೇರಿಯೊ

ಹುಟ್ಟುವುದು ಹರಿಯುವುದು ಸಾಗರ

ಸೇರುವುದು ಕಾಲ ನಿಯಮ; ನಡುನಡುವೆ

ನದಿಗಳು ಪಾತ್ರ ಬದಲಿಸುವುವು; ಬರಡು

ನೆಲದಲ್ಲೂ ಹಸಿರು ಹೊಮ್ಮುವುದು, ಒಣಮರ

ಚಿಗುರಿ ಕರೆಯುವುದು ಹಕ್ಕಿ ಹಿಂಡು, ಹಾಡು

ಹೊಮ್ಮುವುದು ನೆಲ-ಮುಗಿಲುಗಳ ಒಂದುಮಾಡಿ

ಆ ಹಾಡಿನಲ್ಲಿ ಕಲ್ಯಾಣ ಕ್ರಾಂತಿಯ ಸೊಲ್ಲು ಮತ್ತೆ

ಮತ್ತೆ ಮೈದಳೆದು ಕರೆಯುವುದು ಧೀರರನು

(* ಕಲ್ಯಾಣದಿಂದ ತಲೆತಪ್ಪಿಸಿಕೊಂಡ ಶರಣರು ಉಳಿವೆಗೆ ಬಂದ ದಾರಿಯನ್ನು ‘ದಂಡಿನ ದಾರಿ’ ಎಂದು ಜನ ನೆನಪಿನಲ್ಲಿ ಉಳಿಸಿಕೊಂಡಿದ್ದಾರೆ-ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ )

 

ಜಿ.ಪಿ. ಬಸವರಾಜು

ಹಿರಿಯ ಪತ್ರಕರ್ತ, ಸಾಹಿತಿ ಜಿ.ಪಿ ಬಸವರಾಜು ಅವರು ಹುಟ್ಟಿದ್ದು 1952 ಆಗಸ್ಟ್ 3ರಂದು. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಜಿ.ಪಿ. ಬಸವರಾಜು ಅವರು ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇವರ ಪ್ರಮುಖ ಕೃತಿಗಳೆಂದರೆ ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ. ಅವರಿಗೆ ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

More About Author