ಕಾದಂಬರಿಗಾರ್ತಿ, ಕತೆಗಾರ್ತಿ ಆಶಾ ರಘು ಅವರು ಮೂಲತಃ ಬೆಂಗಳೂರಿನವರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. 'ಆವರ್ತ', 'ಗತ', 'ಮಾಯೆ', 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು', 'ಚೂಡಾಮಣಿ' ಹೀಗೆ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿರುವ ಅವರ ‘ಅಪರೂಪದ ಪುರಾಣ ಕಥೆಗಳು’ ಸಂಕಲದಿಂದ ಆಯ್ದ ಕತೆ ‘ ಚೂಡಾಮಣಿಯ ಮಾಯೆ’ (ಪುರಾಣ ಕಥೆಯ ಮರುನಿರೂಪಣೆ)ನಿಮ್ಮ ಓದಿಗಾಗಿ...
ರಾಮನಿಂದ ಕಳುಹಿಸಲ್ಪಟ್ಟ ದೂತನೆಂಬುದಕ್ಕೆ ಕುರುಹಾಗಿ ರಾಮನ ಉಂಗುರವನ್ನು ಸೀತೆಗೆ ಕೊಂಡೊಯ್ದು ತೋರಿದಂತೆ, ಸೀತಾದೇವಿಯನ್ನು ಕಂಡು ಬಂದುದಕ್ಕೆ ಕುರುಹಾಗಿ ಆಕೆಯಿಂದ ಚೂಡಾಮಣಿಯನ್ನು ಪಡೆದು ತಂದನಲ್ಲವೇ ಹನುಮಂತ ರಾಮನಿಗೆ ತೋರಲು? ಆ ಚೂಡಾಮಣಿಯ ಹಿನ್ನೆಲೆ ಮುನ್ನೆಲೆಗಳೂ, ದಂಪತಿಗಳ ಪ್ರೇಮ, ಪ್ರಣಯ, ಕನವರಿಕೆ, ಕಣ್ಣೀರು ಮುಂತಾದ ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಪರಿಯೂ ರಾಮಾಯಣದ ಸುಂದರಕಾಂಡದಲ್ಲಿನ ಸುಂದರವೂ, ಸ್ವಾರಸ್ಯವೂ ಆದ ಹೃದಯಂಗಮ ಆಖ್ಯಾನ!
ಸಾಗರೋಲ್ಲಂಘನ ಮಾಡಿ, ಲಂಕಾಪುರವನ್ನು ಪ್ರವೇಶಿಸಿ, ಸೀತಾಮಾತೆಯನ್ನು ಅಶೋಕವನದಲ್ಲಿ ಸಂಧಿಸಿ ರಾಮನ ಉಂಗುರದೊಂದಿಗೆ ಅವನ ಸಂದೇಶವನ್ನು ಸೀತೆಗೆ ತಲುಪಿಸಿ, ಅವಳಿಂದ ಚೂಡಾಮಣಿಯನ್ನು ಪಡೆದು ಲಂಕಾದಹನ ಮಾಡಿ ರಾಮನಲ್ಲಿಗೆ ಬರುವ ಹನುಮಂತ ಹೀಗೆನ್ನುತ್ತಾನೆ, ‘ತಾಯಿ ಸೀತಾಮಾತೆ ಕುಶಲವಾಗಿದ್ದಾರೆ. ಆದರೆ ಆಕೆಗೆ ಹಗಲಿರುಳು ತಮ್ಮದೇ ಧ್ಯಾನ! ಕಣ್ಣುಗಳಿಂದ ಕಾರಂಜಿಯಂತೆ ನೀರು ಸುರಿದೂ ಸುರಿದೂ, ಅವು ತಮ್ಮ ಕಾಂತಿ ಕಳೆದುಕೊಂಡಿವೆ. ತಲೆಯನ್ನು ಕೋದುಕೊಳ್ಳದೆ, ಹಳೆಯ ಮಾಸಲು ಸೀರೆಯಲ್ಲಿ ತೀರ ಬಡಕಲಾಗಿ ಕಾಣುತ್ತಾರೆ. ನನ್ನ ಭೇಟಿ ಅವರಲ್ಲಿ ಆಶಾಭಾವನೆ ಮೂಡಿಸಿದ್ದು ನಿಜ. ‘ನನ್ನ ಹೆಗಲನ್ನೇರಿದರೆ, ಇನ್ನು ಕೆಲವೇ ಕ್ಷಣಗಳಲ್ಲಿ ತಾವು ತಮ್ಮ ಪ್ರಿಯದೇವರ ಸಮ್ಮುಖದಲ್ಲಿರಬಹುದು’ ಎಂದುಬಿಟ್ಟೆ ಬಾಯಿತಪ್ಪಿ., ಉದ್ವೇಗದಿಂದ! ತಾಯಿ ಕರುಣೆಯಿಂದ ನೋಡಿ ಮುಗುಳುನಕ್ಕರು. ‘ಯತಿಗಳ ಸಂರಕ್ಷಕ, ಪ್ರಜಾಪಾಲಕ, ಮಹಾಕ್ಷತ್ರಿಯ ನನ್ನ ದೇವರಿಗೆ ತಮ್ಮ ಪತ್ನಿಯನ್ನು ಸೆರೆಯಿಂದ ಬಿಡಿಸಿಕೊಂಡು ಹೋಗಲು ಅಶಕ್ಯವೇ?’ ಎಂದಾಗ ನಾನು ತಲೆತಗ್ಗಿಸಿದೆ. ಅದು ನಾನು ಮಾತೆಯ ದುರವಸ್ಥೆಯನ್ನು ನೋಡಿ, ಸ್ವಪ್ರೇರಣೆಯಿಂದ ಆಡಿದ ಮಾತೆಂದು ಒಪ್ಪಿಕೊಂಡೆ. ಆದಷ್ಟು ಶೀಘ್ರವಾಗಿ ತಮ್ಮನ್ನು ಸೆರೆಯಿಂದ ಬಿಡಿಸಿಕೊಂಡು ಹೋಗಬೇಕೆಂದು ಹೇಳಿದರು. ತಮ್ಮ ಸ್ಮರಣೆಯ ಉಂಗುರ ಅವರಿಗೆ ಕುರುಹಾಗಿ ನೀಡಿದೆ. ಅಂತೆಯೇ ಅವರನ್ನು ಕಂಡು ಬಂದದ್ದಕ್ಕೆ ಕುರುಹಾಗಿ ಈ ಚೂಡಾಮಣಿಯನ್ನು ಪಡೆದು ತಂದಿದ್ದೇನೆ. ಸ್ವೀಕರಿಸಬೇಕು.’
ರಾಮ ಚೂಡಾಮಣಿಯನ್ನು ತನ್ನೆರಡು ಕೈಗಳಲ್ಲಿಡಿದು ನೋಡಿದ. ಯಜ್ಞದಿಂದ ಸಂತೃಪ್ತನಾದ ಇಂದ್ರನು ಜನಕರಾಜನಿಗೆ ಕೈಯಾರೆ ನೀಡಿದ್ದ ಆಭರಣವದು ಒಂದು ಕಾಲಕ್ಕೆ! ಮಗಳ ವಿವಾಹದ ಸಂದರ್ಭದಲ್ಲಿ ಸರ್ವರ ಸಮ್ಮುಖದಲ್ಲಿ ಅದನ್ನು ಅವಳಿಗೆ ಬಳುವಳಿಯಾಗಿ ಕೊಟ್ಟಿದ್ದನಾತ. ಸೀತೆಯ ಶಿರೋಭಾಗದಲ್ಲಿ ಶೋಭಿಸುತ್ತಿದ್ದ ಆಭರಣವಲ್ಲವೇ ಇದೆಂದು ರಾಮ ಮತ್ತೊಮ್ಮೆ ಮಗದೊಮ್ಮೆ ತಡವಿ ತಡವಿ ನೆತ್ತಿಗೆ ಮುಟ್ಟಿಸಿಕೊಂಡ. ಮೂಗಿನ ಹತ್ತಿರಕ್ಕೆ ತಂದು ಅದರ ವಾಸನೆಯನ್ನು ಆಘ್ರಾಣಿಸಿದ. ಅವಳ ಹೆರಳಿನ ವಾಸನೆ ಮೂಗಿಗೆ ಬಡಿದು ಮತ್ತನಾದ. ತನ್ನ ಪತ್ನಿಯ ವಿಯೋಗವನ್ನೇ ಮರೆತು ತನ್ನೆದುರಿನಲ್ಲಿಯೇ ಆಕೆಯಿರುವಳೇನೋ ಎನ್ನಿಸಿತು ಆ ಚೂಡಾಮಣಿಯ ಮುತ್ತುಗಳನ್ನು ನೋಡುತ್ತಾ ಒಂದು ಕ್ಷಣ! ಅದನ್ನರಿತ ಲಕ್ಷಣನೂ, ಹನುಮನೂ, ಉಳಿದ ಕಪಿಸೇನೆಯೂ ಅಲ್ಲಿಂದ ಚದುರಿತು. ಜಾನಕಿ.. ವಲ್ಲಭೆ.. ಎನ್ನುತ್ತ ಒಮ್ಮೆ ಆಲಂಗಿಸಿಕೊಳ್ಳುವಾಗ ಗಲ್ಲಕ್ಕೆ ಅದರ ಬಂಗಾರದ ಚೂಪುತುದಿಯು ತಾಕಿ ಗಾಯವಾಗಿತ್ತು ರಾಮನಿಗೆ! ಚೂಡಾಮಣಿಯ ಮೇಲೆ ಕೋಪಗೊಂಡ ಸೀತೆ ಅದನ್ನು ಕಿತ್ತು ಎಸೆದುಬಿಟ್ಟಿದ್ದಳು! ಸಮಾಧಾನವಾದ ಮೇಲೆ ರಾಮನೇ ಚೂಡಾಮಣಿಯನ್ನು ಮುಡಿಗೆ ಪೋಣಿಸಿ, ಹೆರಳು ಹೆಣೆದಿದ್ದ! ಈ ನೆನಪಿನ ಬೆನ್ನಿಗೆ, ಕೆದರಿದ ಕೂದಲಿನ ಸೀತೆಯ ಕಲ್ಪನೆ ಬಂದು ರಾಮನ ಕಣ್ಣುಗಳು ತುಂಬಿಕೊಂಡವು. ಅದರ ಹಿಂದೆಯೇ ‘ತನ್ನ ಪತ್ನಿಯನ್ನು ಸೆರೆಯಿಂದ ಬಿಡಿಸಿಕೊಂಡು ಹೋಗಲು ನನ್ನ ದೇವರಿಗೆ ಅಶಕ್ಯವೇ?’ ಎಂದ ಆಕೆಯ ಮಾತಿನ ಹಿಂದಿನ ಧ್ವನಿಯ ಅರಿವಾಗಿ ಮುಗುಳುನಕ್ಕ ಚೂಡಾಮಣಿಯ ಮಿನುಗುತ್ತಿದ್ದ ಹರಳನ್ನು ನೋಡುತ್ತ!
***
(ಇದು ನನ್ನ ‘ಅಪರೂಪದ ಪುರಾಣ ಕಥೆಗಳು’ ಸಂಕಲದಿಂದ ಆಯ್ದ ಕತೆ -ಆಶಾ ರಘು)
ಆಶಾ ರಘು
ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಇವರು ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಗಳ ಹಿರಿಯ ಮಗಳಾಗಿ 1979ರ ಜೂನ್ 18 ನೇ ತಾರೀಖಿನಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.
'ಆವರ್ತ', 'ಗತ', 'ಮಾಯೆ', 'ಚಿತ್ತರಂಗ' ಮೊದಲಾದ ಕಾದಂಬರಿಗಳನ್ನೂ, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು' 'ಪೂತನಿ ಮತ್ತಿತರ ನಾಟಕಗಳು' ಮೊದಲಾದ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇವರ 'ಆವರ್ತ' ಕಾದಂಬರಿಯ ಕುರಿತ ಕೃತಿ 'ಆವರ್ತ-ಮಂಥನ' ಕೂಡಾ ಪ್ರಕಟಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2014), ಸೂರ್ಯನಾರಾಯಣ ಚಡಗ ಪ್ರಶಸ್ತಿ (2014), ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ (2019), ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ (2020), ಸೇಡಂನ ಅಮ್ಮ (2021), ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ (2023)ಗಳನ್ನು ಪಡೆದಿದ್ದಾರೆ. ಮಂಡ್ಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2023 ರಲ್ಲಿ ಇವರಿಗೆ 'ಸಾಹಿತ್ಯಾಮೃತ ಸರಸ್ವತಿ' ಎಂಬ ಬಿರುದು ನೀಡಿ ಗೌರವಿಸಿದೆ.
More About Author