Poem

ಬುದ್ಧ -ಬೆಳದಿಂಗಳು

ಬುದ್ಧನ ಹಾಗಿದೆ
ಈ ಬೆಳದಿಂಗಳು
ಬಗೆ ಬಗೆ ನೋವಿನ
ಭಾವವ ಬಸಿದು
ಬುದ್ಧಿ ಭಾವಗಳ ಸೋಸುತಿದೆ!

ಅರಮನೆ ಬಂಧನ ತೊರೆದು
ಸೆರೆಮನೆ ಜೀವಿಯ ಪೊರೆದು
ಕತ್ತಲ ಕೂಸಿಗೆ ಬೆಳದಿಂಗಳ
ಹಾಲನು ಉಣಿಸುತಿದೆ.

ಬುದ್ಧನ ಹಾಗಿದೆ
ಈ ಬೆಳದಿಂಗಳು
ಕೆಂಗೆಟ್ಟವರ ಕಾಡಿನ ಇರುಳಿಗೆ
ಬೆಳದಿಂಗಳು ಭಾಷ್ಯವ ಬರೆಯುತಿದೆ
ಮಾನವ ಜನುಮದ
ಸಾವಿಗೆ ನೋವಿಗೆ
ರೋಗಕೆ ರುಜಿನಕೆ
ಮುಪ್ಪಿಗೆ ತಪ್ಪಿಗೆ
ಮನುಷ್ಯತ್ವದ ಔಷಧಿ ಹುಡುಕುತಿದೆ

ಸದ್ದೇ ಇಲ್ಲದೆ
ಯುದ್ಧನ ಸಾರದೆ
ಶುದ್ಧೋದನನ ಅರಮನೆ ಬೆಳಕು
ಜಗದ ಕತ್ತಲ ಕೊಳೆಯನು
ತೊಳೆಯುತಾ
ಬುದ್ಧಪೂರ್ಣಿಮೆ ಆಗುತಿದೆ
ದೀಕ್ಷೆಯ ಪರಮಾತ್ಮನು ಎನ್ನುತ
ಧರೆಯನು ಬೆಳಗುವ
ಬುದ್ಧನ ಹಾಗಿದೆ ಈ ಬೆಳದಿಂಗಳು

ಬದುಕಿನ ಬೆನ್ನಿಗೆ ನೆರಳಾಗಿರುವ
ಸಾವಿನ ಭೀತಿಗೆ ಸಾಸಿವೆಯಾಗುವ
ಬುದ್ಧನ ಹಾಗಿದೆ ಈ ಬೆಳದಿಂಗಳು

ಬೆಂದ ಮನಸುಗಳ
ನೊಂದ ಗಾಯಗಳ
ಮಂದಸ್ಮಿತದಲೆ ಮಾಯಿಸಿಬಿಡುವ
ದುಃಖ ದುಗುಡಗಳ ದೂರ ಮಾಡುವ ಅಮೃತವಾಹಿನಿ ಹರಿಯುತಿದೆ

ಬಗೆ ಬಗೆ ನೋವಿನ
ಭಾವವ ಬಸಿದು
ಬುದ್ಧಿ ಭಾವಗಳ ಸೋಸುತಿದೆ

ಅವರ ಪಾದಗಳ ಬಿರುಕಲ್ಲಿ
ಕೀವುಗಟ್ಟಿ ಹೆಪ್ಪಾಗಿರುವ
ಕಪ್ಪು ನೆತ್ತರಿನಲ್ಲಿ
ಅದ್ಧಿ ತೆಗೆದಿರುವ
ನೋವಿನ ಕವಿತೆಯನ್ನು ಬರೆಯಬೇಕು

ಕಾಡಿಗೆ ಇರದ
ಆ ಕೂಲಿ ಹೆಣ್ಣುಗಳ
ಕಣ್ಣ ಕನಸುಗಳು
ಜೀವ ಸಮಾಧಿಯಾದ ವ್ಯಥೆಯನ್ನು
ಕಥೆಯಾಗಿ ಬರೆಯಬೇಕು.

- ಟಿ. ಯಲ್ಲಪ್ಪ

ಟಿ. ಯಲ್ಲಪ್ಪ

ಟಿ. ಯಲ್ಲಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣಪುರದಲ್ಲಿ  02-10-1970 ರಂದು ಜನಿಸಿದರು. ಕೃಷಿ ಕಾರ್ಮಿಕರ ಮನೆಯಲ್ಲಿ ಹುಟ್ಟಿದ ಯಲ್ಲಪ್ಪನವರು ಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಶಾಲಾ ಕಾಲೇಜುಗಳ ಅನೇಕ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತರು. ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇಪ್ಪತ್ತೆರಡರ ಅಳಲು(ಲಲಿತಾ ಪ್ರಬಂಧ), ಕಡಲಿಗೆ ಕಲಿಸಿದ ದೀಪ ಚಿಟ್ಟೆಮತ್ತು ಜೀವಯಾನ, ನವಿಲಿಗೆ ಬಿದ್ದ ಕತ್ತಲ ಕನಸು, ಇವರ ಕಡಲಿಗೆ ಕಳಿಸಿದ ದೀಪ ಕೃತಿಯು ANKLETS ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೆ ಭಾಷಾಂತರಗೊಂಡಿದೆ, ಕಣ್ಣ ಪಾಪೆಯ ಬೆಳಕು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರ ಸಾಹಿತ್ಯ ಸೇವೆಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿ, ವೀಚಿ ಕಾವ್ಯ ಪುರಸ್ಕಾರ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಲಭಿಸಿವೆ. 

More About Author