Poem

ಬೇಂದ್ರೆ ಅಜ್ಜನಿಗೆ.....

ನೀ ಬಡವ ಅಂದ್ರ
ನಾ ನಂಬೋದಿಲ್ಲ ಅಜ್ಜಾ....
ವಾಲೆ ಮುತ್ತು ನತ್ತು ಗತ್ತು
ಪದಗೋಳ ಖಜಾನೆ
ಅದಾವಲ್ಲೋ ಎಲ್ಲಾ ನಿಂದೈತಿ..

ನೀ ಬಡವ ಅಂದ್ರ
ನಾ ನಂಬೋದಿಲ್ಲ ಅಜ್ಜಾ....
ಗಿಡ ಮರ ಹಸಿರು ಹೂವು
ಹಕ್ಕಿ ಚುಕ್ಕಿ ಬಳಗ ಎಲ್ಲಾ ನಿಂದೈತಿ...

ನೀ ಬಡವ ಅಂದ್ರ
ನಾ ನಂಬೋದಿಲ್ಲ ಅಜ್ಜಾ...
ಕೊರಳಾಗ ಹಾಡಿನ ಹಕ್ಕಿ ಕುಂತೈತಿ
ನಡೆಯಾಗ ನವಿಲು ಕುಣಿತೈತಿ

ನೀ ಬಡವ ಅಂದ್ರ
ನಾ ನಂಬೋದಿಲ್ಲ ಅಜ್ಜಾ
ಇಡೀ ಸಾಧೂನ ಕೆರೆ ನಿಂದೈತಿ!
ಜನುಮದ ಜಾತ್ರಿ ನಿನಗ ಹಬ್ಬ
ಎದೆ ತುಂಬಿ ನುಡಿದದ್ದೆಲ್ಲ ಕಬ್ಬ!

-ಸವಿತಾ ನಾಗಭೂಷಣ

ಸವಿತಾ ನಾಗಭೂಷಣ

ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್‍ ಪ್ರಶಸ್ತಿ ಸಂದಿವೆ.ಕೆಲ ಕಾಲ ’ಸಾಹಿತ್ಯ ಸಂವಾದ’ ಸಾಂಸ್ಕೃತಿಕ ದ್ವೈಮಾಸಿಕದ ಸಂಪಾದಕರಾಗಿದ್ದ ಅವರು ಅಕಾಡೆಮಿ ಪ್ರಕಟಿಸಿದ ’ಸುವರ್ಣ ಕಾವ್ಯ’ ಸಂಪಾದಕರಲ್ಲಿ ಒಬ್ಬರಾಗಿದ್ದರು. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸವಿತಾ, ತಮ್ಮ ಪತಿ ಡಿ.ಎಸ್. ನಾಗಭೂಷಣ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.

More About Author