ನಿಲ್ಲು ಬುದ್ಧ...!
ಆಲಯದ ಸಹವಾಸ ಸಾಕಿನ್ನು
ಪಡೆದದೆಲ್ಲವ ತ್ಯಜಿಸಿ
ಬಯಸಿದ್ದೆಲ್ಲವ ಬೂದಿಯಾಗಿಸಿ
ನೀ ನಡೆವ ಬಯಲಿಗೆ
ನಿನ್ನ ನೆರಳ ಕೂಡಿ
ನಾನು ನಿನ್ನೊಂದಿಗೆ ಬರುವೆ
ನಿನಗೆ ದಕ್ಕಿದ ಶಾಂತಿಯನು
ನನಗೂ ಕರುಣಿಸು
ನಿನಗೆ ಪ್ರಾಪ್ತಿಯಾದ ಜ್ಞಾನವನು
ನನಗೂ ಭೋದಿಸು
ಭರವಸೆಯಿಲ್ಲದ ಭವದ ಬದುಕಿದು
ಅನುಭವದಿ ಮಾಗಿಸು
ಬೆರಳ ಹಿಡಿದು ಮುನ್ನಡೆಸು
ಇರುವುದೆಲ್ಲವ ಕಳೆದುಕೊಳ್ಳುವುದು
ಕಳೆದು ಎಲ್ಲವ ಖಾಲಿಯಾಗುವುದು
ಸುಲಭವಲ್ಲ ನಿನಗೆ ಗೊತ್ತು
ಬಯಕೆಗಳಿಗೆ ಬೆನ್ನು ಮಾಡಿ
ಹೊರಡುವುದು
ಆಲಯದ ಸುಖ ಭೋಗಾದಿಗಳನ್ನು
ಕ್ಷುಲ್ಲಕ ಎಂದು ಕಡೆಗಣಿಸಿ
ಬರಿಗೈಗಳ ಬೀಸುತಲಿ ನಡೆಯುವುದು
ನಿನ್ನಂತೆ ಎಲ್ಲರಿಂದಾಗದು ನಂಬು
ಮೊದಲು ಅದನ್ನು ಕಲಿಸು
ನೋವನು ಗೆದ್ದು ನಗುವುದನ್ನು ಬಲ್ಲೆ ನೀನು
ನನ್ನ ದುಃಖವನ್ನೊಮ್ಮೆ ಆಲಿಸು
ಮನವನ್ನು ಓಲೈಸಿ ಸಂಸ್ಕರಿಸು
ನನ್ನ ಅಹವಾಲು ಸ್ವೀಕರಿಸು
ಆಹಂಕಾರವನ್ನು ದಮನಿಸು
ನಿನ್ನೊಂದಿಗೆ ನನ್ನ ಸಾಗಿಸು
ನೀ ನಡೆವ ದಾರಿಯಲ್ಲಿ ಲೆಕ್ಕವಿಲ್ಲದಷ್ಟು
ಅನಾಮಿಕ ಹೆಜ್ಜೆ ಗುರುತುಗಳು
ಮುಖವಾಡವಿಲ್ಲದ ಬರೀ ನಗುಮುಖಗಳು
ಜಪಸ್ವರಗಳು
ಚಾಚಿದ ಖಾಲಿ ಕರಗಳು
ಮತ್ತು ಜೋಳಿಗೆಗಳು
ಇಗೋ..., ನೋಡಿಲ್ಲಿ!
ಈಗಲೇ ಬಯಲಲ್ಲಿ
ಸುರಿದು ಖಾಲಿಯಾಗಿಸುವೆ
ಇಹದ ಆಸೆ, ಹಸಿವು ತುಂಬಿದ
ಈ ನನ್ನ ಮನವೆಂಬ ಜೋಳಿಗೆಯನ್ನ
ನಿಲ್ಲು ಬುದ್ಧ...!
ನಾನು ನಿನ್ನೊಂದಿಗೆ ಬರುವೆ
ಅನವರತ ಶುದ್ಧ
◼️ ಜಬೀವುಲ್ಲಾ ಎಮ್. ಅಸದ್
ಜಬೀವುಲ್ಲಾ ಎಂ. ಅಸದ್
ಕವಿ ಜಬೀವುಲ್ಲಾ ಎಂ. ಅಸದ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನವರು. ತಂದೆ ಮಹಮ್ಮದ್ ಬಾಷ,ತಾಯಿ ಪ್ಯಾರಿ ಜಾನ್. ಪದವಿಪೂರ್ವವರೆಗಿನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಮುಗಿಸಿ, ನಂತರ ಪದವಿ ಶಿಕ್ಷಣವನ್ನು ಜಿಲ್ಲಾಕೇಂದ್ರವಾದ ಚಿತ್ರದುರ್ಗ ದಲ್ಲಿ ಆಂಗ್ಲ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಅಧ್ಯಾನಿಸಿ ನಂತರ ಹೊಸ ವೈದ್ಯಕೀಯ ವಿಷಯಗಳೆಡೆಗೆ ಆಸಕ್ತಿ ಹರಿದು, ಬಳ್ಳಾರಿಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮಿಡ್ವೈಫ್ರಿ ಮುಗಿಸಿ, ಅಲ್ಲಿಯೇ ಕೆಲವು ವರ್ಷಗಳ ಕಾಲ ಸಹಾಯಕ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಕರುಣಾ ಟ್ರಸ್ಟ್ ಎಂಬ ವೈದ್ಯಕೀಯ NGO ನಲ್ಲಿ ಕಳೆದ ಆರು ವರುಷಗಳಿಂದ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ.
ಚೊಚ್ಚಲ ಕೃತಿ: ‘ಏಕಾಂಗಿಯ ಕನವರಿಕೆಗಳು’- ಕವನ ಸಂಕಲನ. ಈ ಸಂಕಲನಕ್ಕೆ 2020 ರಲ್ಲಿ ಪ್ರಸ್ತುತ ಕೃತಿಗೆ, ಕರುನಾಡ ಕವಿ ಹಣತೆ ಬಳಗ(ರಿ)ದ ವಾರ್ಷಿಕ ಸಮ್ಮೇಳನದಲ್ಲಿ ವಿಮರ್ಶಕರರಿಂದ ಆಯ್ಕೆಯಾಗಿ ಉತ್ತಮ ಕೃತಿಯೆಂದು ಸಾಹಿತ್ಯ ಸಿರಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.
ಇತರೆ ಪುರಸ್ಕಾರಗಳು:2020ರಲ್ಲಿ ಡಾ. ಅಶೋಕ್ ಪೈ ಸ್ಮರಣಾರ್ಥ ಆಯೋಜಿಸಲಾಗಿದ್ದ ಮನೋವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಗುರುಕುಲ ಕಲಾ ಕುಸುಮ ಪ್ರಶಸ್ತಿ, ಮೈಸೂರಿನ ಫಿನಿಕ್ಸ್ ಬುಕ್ ಹೌಸ್ ನ ವತಿಯಿಂದ ಏರ್ಪಡಿಸಲಾದ, ರಾಜ್ಯಮಟ್ಟದ ನ್ಯಾನೋ ಕಥಾ ಸ್ಪರ್ಧೆಯಲ್ಲಿ, ತಮ್ಮ ಖಾಲಿ ಜೋಳಿಗೆ ಎಂಬ ಕಥೆಗಾಗಿ, ಫಿನಿಕ್ಸ್ ಪುರಸ್ಕಾರ ಕ್ಕೆ ಭಾಜನರಾಗಿದ್ದಾರೆ. ತಮ್ಮ ಚೊಚ್ಚಲ ಕವನ ಸಂಕಲವಾದ ಏಕಾಂಗಿಯ ಕನವರಿಕೆಗಳು ಕೃತಿಗೆ 2021 ರ ಸಾಹಿತ್ಯ ಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗುರುಕುಲ ಕಲಾ ಪ್ರತಿಷ್ಠಾನದವತಿಯಿಂದ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಗುರುಕುಲ ಶಿರೋಮಣಿ ಪ್ರಶಸ್ತಿ ಯನ್ನು ಪಡೆದಿರುತ್ತಾರೆ.2021 ರ ಕನ್ನಡ ಸಾಹಿತ್ಯ ಪರಿಚಾರಿಕೆ ಹಾಗೂ ಸೇವೆಯನ್ನು ಗಮನಿಸಿ, ಕನ್ನಡ ನಗರ ಸಾಹಿತ್ಯ ಪರಿಷತ್, ಬೆಂಗಳೂರು ಇವರು ಕನ್ನಡ ಸೇವಾ ರತ್ನ ಪುರಸ್ಕಾರ ಪಡೆದಿದ್ದಾರೆ. ಈ ತನಕ ತತ್ವಜ್ಞಾನ ಎಂಬ ಅಪ್ರಕಟಿತ ತಾತ್ವಿಕ ಚಿಂತನೆಯ ಕವನ ಸಂಕಲನದ ಹಸ್ತಪ್ರತಿಗೆ 2021 ನೇ ಸಾಲಿನ, ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
More About Author