Poem

ಅಂತಃಪುರ ಗೀತೆ

ಓಹ್! ಅಂತೂ ಬಂದಿರಲ್ಲಾ , ಬನ್ನಿ
ಬಡಪಾಯಿಯ ನೆನಪಾಯಿತಲ್ಲಾ ಪುಣ್ಯ!

ಬನ್ನಿ ಬನ್ನಿ ಬನ್ನಿ ದೊರೆ ಒಳಗೆ
ನೀವು ಬರುವ ಹೆಜ್ಜೆ ಸಪ್ಪಳಕ್ಕೆ
ನೆಲಹಾಸು ಕಂಪಿಸಿದವಲ್ಲಾ
ಹೊರಬಾಗಿಲಿನ ತೋರಣದ ಎಲೆಗಳು,
ಕಮಾನಿಗೆ ಹಬ್ಬಿಕೊಂಡ ಬಳ್ಳಿಗಳು,
ಕೊಳದ ತಾವರೆಗಳು ಮೊಗವರಳಿಸಿಕೊಂಡು
ಸಣ್ಣಗೆ ತೊನೆದಾಡಿದವಲ್ಲಾ...
ನಿಮ್ಮ ಬರುವ ಹೇಳುವಂತೆ.

ಬನ್ನಿ ಬನ್ನಿ ದೊರೆ ಒಳಗೆ
ಕ್ಷಣ ನಿಲ್ಲಿ...ಹಾವುಗೆಗಳ ಕಳಚಿಡುವೆ
ಪಾದಗಳ ತೊಳೆವೆ ಎದೆಯಮೃತದಲ್ಲಿ
ತೊಳೆದ ಪಾದ ಒರೆಸಲೇ ಸೆರಗಿನಲ್ಲಿ?

ಬಿಲ್ಲು ಬಾಣ ಬತ್ತಳಿಕೆ ಮೂಲೆಗಿಡಿ ಅಲ್ಲೇ
ಖಡ್ಗ ಭುಜಕೀರ್ತಿಗಳನ್ನು ನೇತು ಹಾಕಿ
ಗೋಡೆಯೊಂದಿಗೆ ಅವು ಮಾತಾಡಿಕೊಳ್ಳಲಿ
ದೇಶಾಂತರ ಸುತ್ತಿ ಬಂದ
ಬೆವರ ವಸ್ತ್ರಗಳನ್ನು ವೇಷಗಳನ್ನು
ತೆಗೆದಿರಿಸುವಿರಾ?

ಆಯಾಸಗೊಂಡಿದ್ದೀರಿ
ಮುಖಮೈ ತೊಳೆದುಕೊಳ್ಳಿ.
ಹಸಿವೆಯೇ?
ಬೆಳ್ಳಿಗಿಂಡಿಯ ತುಂಬಾ ಬಿಸಿಹಾಲಿದೆ
ಕಳಿತಹಣ್ಣು ಕಮ್ಮನೆ ಘಮ್ಮೆನುತಿದೆ
ಇದೀಗ ಆರಾಮವಲ್ಲವೇ?

ಓಹ್! ಎದೆಗವಚ ಇನ್ನು ಯಾಕೆ?
ನಾನಿಲ್ಲವೇ?
ನಿಮ್ಮ ತುಂಟನಗು ಆಸೆಗಣ್ಣು
ಅರ್ಥವಾಗುವುದೆನಗೆ
ಅದಕ್ಕೂ ...ಮೊದಲು...
ನಿಮ್ಮ ರತ್ನಖಚಿತ ' ಕಿರೀಟ '
ಕೊಂಚ...ತೆಗೆದಿರಿಸಿ ದೂರ...
ನನ್ನ ದೊರೆ
ನಂತರ ಸಗ್ಗ ಸೆರೆ.

- ಡಾ.ಕೆ.ಎನ್.ಲಾವಣ್ಯ ಪ್ರಭಾ

 

 

 

 

ಕೆ.ಎನ್. ಲಾವಣ್ಯ ಪ್ರಭಾ

ಕವಯತ್ರಿ ಕೆ.ಎನ್.ಲಾವಣ್ಯ ಪ್ರಭಾ ನವೆಂಬರ್ 2 ,1971 ರಂದು ಕನಕಪುರದಲ್ಲಿ ಜನನ.ಅಲ್ಲಿಯ ರೂರಲ್ ಕಾಲೇಜಿನಲ್ಲಿ ಬಿಎಸ್ಸಿ ವರೆಗೆ ವ್ಯಾಸಂಗ. ಇಂಗ್ಲಿಷ್ ಅಧ್ಯಾಪಕರಾಗಿದ್ದ ಹೆಸರಾಂತ ಕವಿ ವೇಣುಗೋಪಾಲ ಸೊರಬರು ,ಇತರ ಕನ್ನಡ ಅಧ್ಯಾಪಕರುಗಳು, ಎಲ್ಲೇಗೌಡ ಬೆಸಗರಹಳ್ಳಿ ಅವರ ಮತ್ತು ಕುಟುಂಬದ ಆತ್ಮೀಯ ಮಿತ್ರರಾಗಿದ್ದ ಪ್ರಸಿದ್ಧ ಕವಿ ಡಾ.ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಪ್ರೋತ್ಸಾಹ ,ಮಾರ್ಗರ್ಶನದಿಂದ ಪಿಯುಸಿಯಿಂದಲೇ ಅಂದರೆ ಹದಿನೆಂಟನೇ ವಯಸ್ಸಿನಿಂದ ಕಾವ್ಯ ರಚನೆ ಆರಂಭವಾಗಿ ಅಂತರಕಾಲೇಜು ಕವಿಗೋಷ್ಟಿಗಳಲ್ಲಿ ನಿರಂತರ ಭಾಗವಹಿಸುವಿಕೆಯಿಂದಾಗಿ ಮುಂದೆ ಕ್ರೈಸ್ಟ್ ಕಾಲೇಜಿನ ಚಿ.ಶ್ರೀನಿವಾಸರಾಜು ಅವರಿಂದ ಗುರುತಿಸಲ್ಪಟ್ಟು ಬೆಳಕಿಗೆ ಬಂದ ಅನೇಕ ಪ್ರಮುಖ ಕವಿಗಳಲ್ಲಿ ಇವರೂ ಸಹಾ ಒಬ್ಬರು. ವಿವಾಹವಾಗಿ ಮೈಸೂರಿಗೆ ಬಂದು ಇಪ್ಪತ್ತು ವರ್ಷಗಳ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಮತ್ತು ಪಿಎಚ್ ಡಿ ಪದವಿ ಗಳಿಸಿದರು. 

2004 ರಲ್ಲಿ "ಹುಟ್ಟಲಿರುವ ನಾಳೆಗಾಗಿ",  2010 ರಲ್ಲಿ "ಗೋಡೆ ಗಿಡ", 2013 ರಲ್ಲಿ "ನದಿ ಧ್ಯಾನದಲ್ಲಿದೆ", ಇದೀಗ 2022 ರಲ್ಲಿ "ಸ್ಪರ್ಶ ಶಿಲೆ" ಕವನ ಸಂಕಲನಗಳು ಪ್ರಕಟಗೊಂಡಿವೆ. ಅನೇಕ ಕವಿತೆಗಳೊಂದಿಗೆ ಹಲವಾರು ಪ್ರಬಂಧಗಳು ಪ್ರಜಾವಾಣಿ, ಕನ್ನಡ ಪ್ರಭ, ವಿಜಯಕರ್ನಾಟಕ, ಸುಧಾ, ತರಂಗ, ಮಯೂರ, ತುಷಾರ ಮೊದಲಾದ ಕನ್ನಡ ಪತ್ರಿಕೆಗಳಲ್ಲಿ ಮತ್ತು ಅಂಕಣ ಲೇಖನಗಳು ಕೀಹೋಲ್ ಆನ್ ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಎರಡು ಬಾರಿ "ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ", ಮುಂಬೈನ ಡೊಂಬಿವಿಲಿ ಕರ್ನಾಟಕ ಸಂಘದ ಬಹುಮಾನ, ಸಂಕ್ರಮಣ ಸಾಹಿತ್ಯ ಸ್ಪರ್ಧೆ ಬಹುಮಾನ, ಕ್ರೈಸ್ಟ್ ಕಾಲೇಜಿನ "ದ.ರಾ.ಬೇಂದ್ರೆ ಸ್ಮೃತಿ ಸ್ಮಾರಕ ಬಹುಮಾನ", 2017 ರಲ್ಲಿ ಎರಡನೇ ಸಂಕಲನ "ನದಿ ಧ್ಯಾನದಲ್ಲಿದೆ" ಸಂಕಲನಕ್ಕೆ "ಡಾ.ಲತಾ ರಾಜಶೇಖರ ದತ್ತಿನಿಧಿ ಪ್ರಶಸ್ತಿ", 2019 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ "ಡಾ.ಸಿ.ಎಚ್. ಮರಿದೇವರು ದತ್ತಿನಿಧಿ" ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ

ಮೈಸೂರಿನ ದಸರಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಸಂಚಯದ ಸಾಹಿತ್ಯ ಸಂಜೆ, ಸುಚಿತ್ರಾ ಫಿಲ್ಮ್ ಸೊಸೈಟಿಯ ನವರಾತ್ರಿ ಕವಿಗೋಷ್ಠಿ, ಸಿರಿಗೆರೆ ಮಠದ ಬೆಳದಿಂಗಳ ಕವಿಗೋಷ್ಠಿ ಗಳಲ್ಲಿ ಮತ್ತು ಮೈಸೂರು ಆಕಾಶವಾಣಿ, ಚಂದನ ದೂರದರ್ಶನ ವಾಹಿನಿಯ ಪ್ರಮುಖ ಕವಿಗೋಷ್ಟಿಗಳಲ್ಲದೆ ಅನೇಕ ಕಡೆ ಕವಿತೆ ವಾಚಿಸಿದ್ದಾರೆ.

2019 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, 2020 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕವಿತೆಗಳ ಹಸ್ತಪ್ರತಿಗೆ ನೀಡುವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, 2021 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ನವಕವಿಗಳ ಪ್ರಥಮ ಕವನ ಸಂಕಲನಕ್ಕಾಗಿ ನೀಡುವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಾಹಿತ್ಯ, ಸಂಗೀತ, ಅಧ್ಯಾತ್ಮ, ಅಡುಗೆ ಮೊದಲಾದ ಹವ್ಯಾಸಗಳ ಜೊತೆಗೆ "Dr.K.N.Lavanya Prabha " ಎನ್ನುವ ಲಿಂಕ್ ನ ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ಇತರ ಕವಿಗಳ ಉತ್ತಮ ಕವಿತೆಗಳನ್ನು ಕನ್ನಡದ ಮನಸ್ಸುಗಳಿಗೆ ತಲುಪಿಸುತ್ತಿದ್ದು ಸದ್ಯ ಪತಿ ಹಾಗೂ ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸವಾಗಿದ್ದಾರೆ.

More About Author