Poem

ಅಮೃತಾ ಪ್ರೀತಂರ ಎರಡು ಕವಿತೆಗಳು

ಖ್ಯಾತ ಪಂಜಾಬಿ ಕವಯಿತ್ರಿ ಅಮೃತಾ ಪ್ರೀತಂರ ಬದುಕೇ ಒಂದು ಅನನ್ಯ ಕಾವ್ಯ. ಪ್ರೇಮಕವಿತೆಗಳು, ಕಾದಂಬರಿಗಳ ಮೂಲಕ ಜಗತ್ತಿನ ಗಮನ ಸೆಳೆದ ಅವರ ಎರಡು ಕವಿತೆಗಳನ್ನು ರೇಣುಕಾ ನಿಡಗುಂದಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕರೆ
ವರುಷಗಳ ಹಾದಿಯನ್ನು ಸೀಳಿ
ನಿನ್ನ ಕರೆ ಕೇಳಿತು
ಸಸ್ಸಿಯ ಕಾಲುಗಳಿಗೆ ಯಾರೋ
ಮುಲಾಮು ಸವರಿದಂತೆ…

ಇಂದು ಯಾರದೋ ತಲೆಮೇಲಿಂದ
ಅದೃಷ್ಟದ ಹಕ್ಕಿಯೊಂದು ಹಾರಿಹೋದಂತೆ
ಚಂದ್ರ ರಾತ್ರಿಯ ಕೂದಲಲ್ಲಿ
ಹೂ ಮುಡಿಸಿದ

ನಿದಿರೆಯ ಅಧರಗಳಿಂದ
ಕನಸಿನ ಸುಗಂಧ ಬಂದಹಾಗೆ
ಮೊದಲ ಕಿರಣ ರಾತ್ರಿಯ
ಬೈತಲೆಗೆ ಸಿಂಧೂರ ತೀಡುತ್ತದೆ

ಪ್ರತಿಯೊಂದು ಅಕ್ಷರದ ಮೈಯಲ್ಲಿ
ನಿನ್ನ ಪರಿಮಳ ಸೂಸುತ್ತಿದೆ
ಪ್ರೇಮದ ಮೊದಲ ಹಾಡಿನ
ಮೊದಲ ಪಲ್ಲವಿ ಹಾಡುತ್ತಲಿದ್ದೆ.

ಅಪೇಕ್ಷೆಗಳ ದಾರ ಜೋಡಿಸಿ
ನಾವು ಸೆರಗನ್ನು ಹೆಣೆಯುತ್ತಿದ್ದೆವು
ವಿರಹದ ಬಿಕ್ಕಳಿಕೆಯಲ್ಲೂ ನಾವು
ಶಹನಾಯಿಯ ನಾದ ಕೇಳುತ್ತಿದ್ದೆವು...

<<<<<<<<<<<<<<<<<<
ಚಳಿ

ನನ್ನ ಜೀವ ನಡಗುತ್ತಿದೆ
ತುಟಿಗಳು ನೀಲಿಯಾಗಿವೆ
ಆತ್ಮದ ಕಾಲುಗಳು
ಕಂಪಿಸುತ್ತಿವೆ

ಈ ಆಯುಷ್ಯದ ಬಾನಿನಲ್ಲಿ
ವರುಷಗಳ ಮೇಘಗಳು ಗರ್ಜಿಸುತ್ತಿವೆ
ಕಾನೂನಿನ ಆಲಿಕಲ್ಲು
ನನ್ನ ಅಂಗಳದಲ್ಲಿ ಬೀಳುತ್ತಿವೆ

ಕೊಳಚೆಯ ಓಣಿ ದಾಟಿ
ನೀ ಎಲ್ಲಾದರೂ ಬಂದರೆ
ನಿನ್ನ ಪಾದತೊಳೆವೆ ನಾ…

ನಿನ್ನ ಸೂರ್ಯನಂಥ ಮೊಗಕೆ
ಕಂಬಳಿಯ ಚುಂಗಿನಿಂದ
ಕೈ-ಕಾಲಿಗೆ ಶಾಖಕೊಡುವೆ ನಾ..

ಒಂದು ಬಟ್ಟಲು ಬಿಸಿಲನ್ನು
ಒಂದೇ ಗುಟುಕಿನಲ್ಲಿ ಕುಡಿವೆ
ಹಾಗೂ ಒಂದು ತುಂಡು ಬಿಸಿಲನ್ನು
ನನ್ನ ಗರ್ಭದಲ್ಲಡಗಿಸಿಕೊಳ್ಳುವೆ..

ಮತ್ತು ಹೀಗೆಯೇ
ಜನ್ಮ ಜನ್ಮದ ಚಳಿ ಕಳೆದುಬಿಡುತ್ತದೆ..

ರೇಣುಕಾ ನಿಡಗುಂದಿ

ರೇಣುಕಾ ನಿಡಗುಂದಿಯವರು ಮೂಲತಹ ಧಾರವಾಡದವರು. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ, ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ, ದೆಹಲಿ ಕರ್ನಾಟಕ ಸಂಘದ 'ಮುಖವಾಣಿ 'ಅಭಿಮತ' ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ, ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ " ರಾಜಧಾನಿಯಲ್ಲಿ ಕರ್ನಾಟಕ" ಪುಸ್ತಕವನ್ನು ಸಂಪಾದಿಸಿದ್ದು ಅನೇಕ, ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಮಾಸಿಕಗಳಲ್ಲಿ ಪ್ರಕಟಗೊಂಡಿವೆ.

'ಓ ಮನಸೇ' ದೈಮಾಸಿಕ ಪತ್ರಿಕೆಯಲ್ಲಿ 'ರಾಜಧಾನಿ ಮೇಲ್' ಅಂಕಣ ಬರೆಹ ಬರೆಯುತ್ತಿದ್ದರು. ಬಿಡುಗಡೆಯಾದ ಕೃತಿಗಳು - ಮೊದಲ ಕವನ ಸಂಕಲನ " ಕಣ್ಣ ಕಣಿವೆ" 2008 ( ಪ್ರಗತಿ ಗ್ರಾಫಿಕ್ಸ್), “ದಿಲ್ಲಿ ಡೈರಿಯ ಪುಟಗಳು-2014 ( 'ಕೆಂಡಸಂಪಿಗೆ'ಯಲ್ಲಿನ ಪ್ರಬಂಧ ಬರೆಹಗಳು), " "ಅಮೃತ ನೆನಪುಗಳು" ಅಮೃತಾ ಪ್ರೀತ್‌ಂರ ಜೀವನಗಾಥೆ ಇಮೋಜ್ ಕಂಡಂತೆ (ಅಹರ್ನಿಶಿ ಪ್ರಕಾಶನ- 2015)”, “ನಮ್ಮಿಬ್ಬರ ನಡುವೆ” ಕವನ ಸಂಕಲನ ( ದೆಹಲಿ ಕರ್ನಾಟಕ ಸಂಘ-2017). 2018ರ ಪ್ರಜಾವಾಣಿ ಸಂಕ್ರಾಂತಿ ಪ್ರಬಂಧ ಸ್ಪರ್ಧೆಯಲ್ಲಿ ಎರಡನೆ ಬಹುಮಾನ, ಪ್ರೇಮಪತ್ರ ಸ್ಪರ್ಧೆಯಲ್ಲಿ - ಮೊದಲ ಬಹುಮಾನ, ಪ್ರಸ್ತುತ ಪ್ರಜಾವಾಣಿಯಲ್ಲಿ ಮಾಸಿಕ 'ಸ್ಪಂದನ' ಅಂಕಣ ಬರೆಯುತ್ತಿದ್ದಾರೆ. ಇವರ ಹಲವಾರು ಬರಹಗಳು ಕನ್ನಡದ ದಿನಪತ್ರಿಕೆಗಲ್ಲಿ ಪ್ರಕಟವಾಗಿವೆ.  

More About Author