Story

ಅಳಿಲು ಮನುಷ್ಯ


ಈಕೀ ಒಂದೇ ಸಮನೆ ಹೊಲಕ ಹೋಗಿ ನಮ್ಮಪ್ಪನ ಗುಟ್ಟಿಗೆ ಕಾಯಿಕೊಟ್ಟು ಸಣಮಾಡಿ ಬರಣಾ ಅಂತ ಕಿರಿಕಿರಿ ಹಚ್ಚಿದ್ದಳು. ನಮ್ಮ ಮಾವ ಸತ್ತು ಒಂದು-ಒಂದೂವರೆ ವರ್ಷ ಆತು. ಕೊನೆ ಮಗಳಾದ ಈಕೀಗೆ ನಮ್ ಮಾವ ಬಾಳ್ ಜೀವ ಇದ್ದ. ಆಯಿತು ನಡೀ ಹೋಗಾಣ ಅಂತ ಕರಕೊಂಡು ಹೊರಟೆ. ನಮ್ ಬಾಮೈದನೂ ಜೊತೆಗೆ ಬಂದ. ಹೊಲದಲ್ಲಿ ಜೋಳದ ತೆನೆ ಮುಗಿಲೆತ್ತರಕ್ಕೆ ಬೆಳೆದು ನಿಂತಿತ್ತು. ಜೋಳದ ಹೊಲದಲ್ಲಿ ಹೋದ ಮನುಷ್ಯರು ಕಾಣಲಾರದಷ್ಟು. ಒಂದೊಂದು ಬಿಳಿಜೋಳದ ತೆನೆಗಳು ಸೂರ್ಯನ ಕಿರಣಗಳಿಗೆ ಬಂಗಾರದಂತೆ ಪಳಪಳ ಹೊಳೆಯುತ್ತಿದ್ದವು. ನಾನು ಇನ್ನೂ ಕೆಲ ಜೋಳವಾಗದ ಹಸಿ ತೆನೆಗಳನ್ನು ಕಿತ್ತುಕೊಂಡು ಕಚಪಚ ಅಂತ ತಿನ್ನತೊಡಗಿದೆ. ನನ್ನ ಮಗಳಿಗೂ ಕೊಟ್ಟೆ ಮೊದಲು ಬೇಡವೆಂದವಳು ಅಮೇಲೆ ಆ ಹಸಿ ಜೋಳದ ರುಚಿಗೆ ಅವಳು ನನ್ ಜೊತೆ ಸ್ಪರ್ಧೆಗೆ ಬಿದ್ದವಳಂತೆ ತಿನ್ನತೊಡಗಿದಳು. ಈ ಜೋಳದ ತೆನೆಗಳನ್ನು ಸುಟ್ಟುಕೊಂಡು ತಿಂದರೆ ಇನ್ನೂ ರುಚಿಯಾಗಿರುತ್ತೆ ಅಮ್ಮ ಹೇಳಿದ ನೆನಪು. ಪಕ್ಕದಲ್ಲೆ ಎರಡೆಕರೆ ಹತ್ತಿ ಹೊಲ. ಹೊಲದ ತುಂಬೆಲ್ಲಾ ಹಸಿರು ಹತ್ತಿಗಿಡದ ತುಂಬಾ ಬಿಳಿ ಗುಲಾಬಿಯಂತ ಹತ್ತಿ , ಮೊಸರಲ್ಲಿ ಕಡೆದ ಬೆಣ್ಣೆಯಂತೆ ಕುಳಿತಿತ್ತು. ಹತ್ತಿ ಬಿಡಿಸುವುದಕ್ಕೆ ಬಂದ ಹೆಣ್ಮಕ್ಕಳು ಪದ ಹಾಡುತ್ತಾ ಒಂದೊಂದೆ ಹತ್ತಿ ತೊಳೆಯನ್ನು ಬಿಡಿಸಿ ಚೀಲದೊಳಗೆ ಹಾಕಿಕೊಳ್ಳುತ್ತಿದ್ದರು. ‘ರ್ರೀ ಈ ಕಡೆ ನೋಡಿ’ ಅಂದಳು. ನಾನು ಹೀ... ಅಂತಾ ಹಲ್ಲು ಕಿರಿದೆ. ಅವಳು ಕ್ಲಿಕ್ ಅಂತ ಒಂದೆರಡು ಸೆಲ್ಫಿ ತೆಗೆದಳು. ಅವುಗಳನ್ನು ನನ್ನ ಅಕ್ಕನ ವಾಟ್ಸಪ್‍ಗೆ ಕಳಿಸಿದೆ. ಆ ಕಡೆಯಿಂದ ಸೂಪರ್ ಅಂತ ಮೇಸೆಜ್ ಬಂತು. ಬಹುಶಃ ಇದು ಅಕ್ಕನ ಮಗಳು ಕಳಿಸಿರುತ್ತಾಳೆ. ಅಕ್ಕಗೆ ಈ ಪೋನ್ ಎಲ್ಲಾ ತಿಳ್ಯಾಕಿಲ್ಲ. ನನ್ನಕ್ಕನ ಮದುವೆ ಸಮಯದಲ್ಲಿ ನಮ್ಮಪ್ಪ ಹತ್ತಿ ಇಟ್ಟಿದ್ದನಂತೆ. ನನಗೂ ಮಸಕು ಮಸಕು ನೆನಪು. ಆ ವರ್ಷ ಹತ್ತಿ ಚೋಲೊ ಬಂದಿತಂತೆ ಆದರೆ ಹತ್ತಿರೇಟ್ ಇಲ್ಲದೆ ಅಕ್ಕನ ಮದುವಿ ಸಲುವಾಗಿ ಹೋದ ರೇಟಿಗೆ ಮಾರಿ ಅಕ್ಕನ ಮದುವಿ ಮಾಡಿದ್ವಿ ಅದೇ ಕೊನೆ ಮತ್ತೆಂದೂ ನಾನು ನಿಮ್ಮಮ್ಮ ಹೊಲ ಮಾಡುವ ತಂಟೆಗೆ ಹೊಗ್ಲಿಲ್ಲ ಅಂತ ಅಪ್ಪ ಹೇಳುತ್ತಿದ್ದ.

ಪಟ್ ಅಂತ ಕಾಯಿ ಹೊಡೆದ ಇವಳು ‘ಸಣಮಾಡ್ ಬರ್ರಿ ಹಂಗ್ಯಾಕ ನಿಂತಿರಿ ಗರಬಡದವರಂಗ ’ ಅಂದಳು. ನಾನು ಬಗ್ಗಿ ಸಣಮಾಡಿ ‘ಇಲ್ಲೆ ನಮ್ಮಪ್ಪನ ಗುಟ್ಟೆ ಐತೆ ಅಲ್ಲಿಗೂ ಹೋಗಿ ಬರಣಾ ಬಾ ‘ ಅಂದೆ. ಒಮ್ಮೆ ದುರುಗುಟ್ಟಿ ನೋಡಿ ‘ನೀವು ಬೇಕಾರ ಹೋಗಿ ಬನ್ನಿ ನಾನು ನಮ್ಮಣ್ಣ ಇಲ್ಲೇ ಜೋಳ ತಿನಕಂತಾ ಕುಂತಕಂಡಿರಿತಿವಿ. ನಿಮ್ಮಪ್ಪನ ಗುಟ್ಟೆ ಹತ್ತಿರ ಇರುವ ಹುಣಸೆಮರದಾಗ ಮೊನ್ನೆ ಯಾರಾ ಉರಲು ಹಾಕಿಕೊಂಡು ಸತ್ತಾರಂತ ದೆವ್ವ ಐತಾಂತ ಮಂದಿ ಮಾತಾಡ್ತಾರ ನೀನು ನಿನ್ನ ಮಗಳು ಬೇಕಾರ ಹೋಗಿ’ ಅಂತ ಸರ್ರನೆ ಸೆಟಕಂಡು ಸೆರಗು ಬೀಸಿಕಂತಾ ಅವರಣ್ಣನಲ್ಲಿಗೆ ಹೋದಳು. ನಮ್ಮ ದೊಡಪ್ಪನ ಹೊಲ ಅದು. ಅಲ್ಲೆ ನಮ್ಮಪ,್ಪ ನಮ್ಮದೊಡಪ್ಪ ನಮ್ಮತಾತ, ಅವ್ವ, ನಮ್ಮ ದೊಡಪ್ಪನ ಹೆಂಡತಿ ತಂದೆ ತಾಯಿ ಹಿಂಗೆ ಸುಮಾರೂ ಹತ್ತು ಹನ್ನೆರಡು ಗುಟ್ಟೆ ಇದಾವಾ. ಮೊನ್ನೆ ಇವಳಪ್ಪ ಸತ್ತಾಗ ಅಲ್ಲೆ ಇಡಾಣ ಅಂತ ಮಾತಾಡಿದಾಗ ನಮ್ಮ ದೊಡಪ್ಪನ ಹೆಂಡತಿ ತಂಗಿ ‘ಎಲ್ಲಾರು ಅದೇ ಹೊಲದಾಗ ಮಣ್ಣು ಮಾಡಿ ಹೊಲಅಂಬಾ ಹೊಲನ ಸುಡುಗಾಡ ಮಾಡ್ಯಾರ ನಾನು ಮಾತ್ರ ಈ ಸಲ ಬಿಡಲ್ಲ ಅವರಿಗೇನ್ ಹೊಲ ಇಲ್ಲೇನು’ ಅಂತ ಜಗಳಕ್ಕೆ ಬಿದ್ದಿದ್ದಳು. ಅದ್ಕೆ ಇವಳಿಗೆ ಆ ಹೊಲದ ಮ್ಯಾಲೆ ಸಿಟ್ಟು ತಂದಿಗಿ ಮಣ್ಣು ಮಾಡಾಕ ಜಾಗ ಕೊಟ್ಟಿಲ್ಲಂತ. ಮಗಳನ್ನು ಭುಜದ ಮ್ಯಾಲೆ ಎತ್ತಿಕೊಂಡು ನಡೆದೆ. ಸುಮಾರು ದಿನ ಆಗಿತ್ತು ಅಪ್ಪನ ಗುಟ್ಟೆಗೆ ಬಂದು. ಅಪ್ಪನ ಗುಟ್ಟೆ ಸುತ್ತ ಹುಲ್ಲು ಬೆಳೆದು ಗುಟ್ಟೆಯೆಲ್ಲಾ ಮುಚ್ಚಿಹೋಗಿ ಬರೀ ಹುಲ್ಲು ಬೆಳೆದಿತ್ತು. ಬರಿಗೈಯಲ್ಲಿ ಪಸಪಸಂತ ಹುಲ್ಲು ಕಿತ್ತಿ ಸಾಪು ಮಾಡಿದೆ. ಭಕ್ತಿಯಿಂದ ಕೈಮುಗಿದು ಕಣ್ಣಲ್ಲಿ ನೀರು ತಂದುಕೊಂಡು ನಿಂತೆ. ‘ಯಾಕಪ್ಪಾ ಅಳ್ತಿದ್ದೀಯಾ ಇದು ಯಾರು’ ಅಂತ ಮಗಳು ಕೇಳಿದಳು. ಇದು ನಿಮ್ಮ ತಾತ ಅಂದ್ರೆ ನಮ್ಮಪ್ಪನಮ್ಮ ಅಂತ ಕಣ್ಣೋರಿಸಿಕೊಂಡು ಹೇಳಿದೆ. ‘ಅಪ್ಪ ತಾತ ಹೇಂಗಿದ್ದಪ್ಪ ? ಅಂತ ಮಗಳು ಕೇಳಿದಳು ‘ನಿಮ್ಮ ತಾತ ಏನಮ್ಮ ರಾಜ ರಾಜ ಇದ್ದಂಗ ಇದ್ದ. ಗುಂಗುರು ಕೂದಲು ಇಟುದ್ದ ಮೂಗು ಕೆಂಬಣ್ಣ ಹುಲಿಮೀಸೆ ಊರಲ್ಲಿ ನಡೆದುಕಂಡು ಹೋಗುತ್ತಿದ್ದರೆ ಹೇ ಲೋಲಪ್ಪ ಮಾವ ಬಂದ ಅಂತ ಹೊರಗಿದ್ದ ಹೆಣ್ಮಕ್ಕಳೆಲ್ಲಾ ತಲೆತುಂಬಾ ಸೆರಗು ಹಾಕಿಕೊಂಡು ತಲಿಬಗ್ಗಿಸೊರಂತೆ ಅಂತ ಅಪ್ಪನ ಗುಣಗಾನ ಮಾಡಿ ಹೇಳಿದೆ.

ಸ್ವಲ್ಪಹೊತ್ತು ಮಗಳನ್ನು ತೊಡೆಮ್ಯಾಲೆ ಹಾಕಿಕೊಂಡು ಕುಳಿತೆ. ಅವಳು ಹಾಗೆ ನಿದ್ದೆ ಹೋದಳು. ನನಗೂ ಜೊಂಪು ಹತ್ತಿದಂಗಾಗಿ ಹಾಗೆ ಮಲಗಿಬಿಟ್ಟೆ. ಕನಸಲಿ ಅಪ್ಪ ಬಂದ. ಅಪ್ಪ ಅಂತ ನಿಂತಲ್ಲೆ ಚೀರುತ್ತಾ ಅಳತೊಡಗಿದೆ. ‘ಅಳಬಾರದಲೇ ಹೆಂಗಿರಬೇಕು ಹುಲಿ ಹುಲಿ ಇದ್ದಂಗಾ ಅಂದ’. ‘ನೀನೇನು ಸತ್ತುಹೊಗತಾ ಸತ್ತು ಹೋದಿ. ಆಮೇಲೆ ನಮ್ ಗತಿ ಪರಮಾತ್ಮಗ ಗೊತು’್ತ ಅಂದೆ. ‘ಎಲ್ಲಾ ಅವರವರ ಹಣೆಬರಹ ಸಾಯೋದು ನನ್ನ ಕೈಯಾಗಿಲ್ಲ ಇರೋದು ನನ್ನ ಕೈಯಾಗಿಲ್ಲ’ ಅಂದ. ’ ನೀ ಸತ್ತಾಗ ನಾ ಸಾಲಿ ಓದಾಕ ಹೋಗಿದ್ದೆ, ನಿಜ ಹೇಳು ನೀ ಹೆಂಗ ಸತ್ತಿ ? ನಿನ್ನ ಎರಡನೆ ಹೆಂಡ್ತಿ ನೀ ಸತ್ ಮ್ಯಾಲೆ ನನ್ನ ಅಮ್ಮನ ಮ್ಯಾಲಾ ಕೇಸ್ ಹಾಕಿದ್ಲು ನಾವೇ ನಿನ್ನ ಕೊಲ್ಲಿವಂತ ಅಲ್ಲಿಂದ ಪಾರಾಗಾಕ ಅಮ್ಮ ಪಡಬಾರದ ಕಷ್ಟ ಪಟ್ಲು. ನಮಗ ಬರ ಆಸ್ತಿ ಅವರಿಗೂ ಬರ ಆಸ್ತಿ ಎಲ್ಲಾ ನಿನ್ನ ಎರಡನೆ ಹೆಂಡ್ತಿಗೆ ಬರೆದುಕೊಟ್ಟು ಆ ಕೇಸಿಂದ ಪಾರಾಗಿ ಆಮ್ಯಾಲೆ ಬೀದಿಗಿ ಬಿದ್ದು ಎಂಥಾ ಕಷ್ಟದ ಜೀವನ ನಡಿಸಿವಂತ ನಿನಗೇನ್ ಗೊತ್ತಾದ ’ ಅಂದೆ. ‘ ನಾ ನಿನಗ ಹೇಳಿದ್ನಲ್ಲಾ ಎಲ್ಲಾ ಅವರವರ ಹಣೆಬರಹದಗಾ ಬರಿದಿದ್ದು ಆಗ್ತಾದಂತ’. ನೀ ಯಾಕ್ ಎರಡನೆ ಮದ್ವಿ ಆದಿ ನಮ್ ಹಣೆಬರಹ ಹಾಳಾಗಕ ಅದುನೂ ಕಾರಣ ಅಲ್ಲೇನ್ ಅಂದೆ. ‘ನೀ ನಿನ್ನಷ್ಟದಂತೆ ಒಂದೆ ಮದುವಿ ಆಗಿದ್ದಿ ನೀ ನಿಜ ಹೇಳು ಸುಖವಾಗಿದ್ಯಾ ನೀನು ?‘ ಅಂದ. ಅದು ಅದು ಅಂತ ನಾ ರಾಗ ತೆಗೆದೆ. ನಾ ಇನ್ನೇನು ಕೇಳಬೇಕಂದೆ ಅಷ್ಟರಲ್ಲಿ ಅಪ್ಪ ಮಿಂಚಿನಂತೆ ಮಾಯವಾದ. ಅಪ್ಪ ಅಪ್ಪ ಎಲ್ಲಿಗೋದಿ ನಾ ನಿನ್ ಜೊತೆ ಇನ್ನೂ ಏನೋನೋ ಹೇಳಬೇಕು ಬಾ ಅಪ್ಪ ಬಾ ಅಪ್ಪ ಕೀರಚತೊಡಗಿದೆ. ಮುಖದ ಮೇಲೆ ಯಾರೋ ನೀರು ಎರಚಿದಂಗಾಗಿ ದಡಬಡಿಸಿ ಎದ್ದು ಕುಳಿತೆ. ದೂರದಲ್ಲಿ ನನ್ನ ಹೆಂಡತಿ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು ನನ್ನ ಮಗಳು ಅಳುತ್ತಿದ್ದಳು. ‘ನಿನಗಾ ಅದ್ಕೆ ಹೇಳ್ದೆ ಇಲ್ಲಿಗೆ ಬರಬ್ಯಾಡ ಇಲ್ಲಿ ದೆವ್ವ ಇದಾವ ಅಂತ ಕೂಸು ಎಷ್ಟು ಅಂಜಿಕಂಡಾದ ನೋಡು ಅಂತ ಬೈಯ್ಯತೊಡಗಿದಳು. ನಾನು ದಿಕ್ಕಮುಕ್ಕ ನೋಡುತ್ತಾ ಕಂಗಾಲಾಗಿ ಕುಳಿತು ಅಪ್ಪನ ಸಮಾದಿಯನ್ನು ದಿಟ್ಟಿಸತೊಡಗಿದೆ. ‘ನನ್ನ ತಂಗಿ ಗಂಡಗಾ ದೆವ್ವ ಹಿಡಿದದಾ ಆ ಮುಲ್ಲಾರ ತಾತನ ಕರಕಂಡು ನಮ್ಮ ಸೀಳುಗಾಲೇವು ಹೊಲಕ ಜಲ್ದಿ ಕರಕಂಡು ಬರ್ರಿ ಅಂತ ನನ್ನ ಬಾಮೈದ ಹೇಳೋದು ಕಿವಿಗಿ ಬಿದ್ದಿದ್ದೆ ತಡ, ನಾ ಎದ್ದು ಬಿದ್ದು ಓಡತೊಡಗಿದೆ. ಹಿಂದುಗಡೆಯಿಂದ ನನ್ನ ಬಾಮೈದ ಅಷೇ ಶರಾವೇಗದಲ್ಲಿ ನನ್ನ ಅಟ್ಟಿಸಿಕೊಂಡು ಬರುತ್ತಿದ್ದ.

ನಾ ಎಷ್ಟೇ ಸೆಟೆ ಸೆಟೆದು ಎಗರಾಡಿದರೂ ಗಟ್ಟಿಯಾಗಿ ಹಿಡಿದಕೊಂಡಿದ್ದ ಅವರ ಒಳಗಡೆ ಪುಕುಪುಕು ಅನ್ನುತ್ತಿತ್ತು. ಅಷ್ಟರಲ್ಲಿ ಮುಲ್ಲಾಸಾಬ್ ತಾತಾ ಬಂದು ಕೈಯಲ್ಲಿನ ಮಾಲೆ ಎಣಿಸುತ್ತಾ ಬಾಯಲ್ಲಿ ಮಂತ್ರ ಎಣಿಸುತ್ತಾ ‘ಖೋನ್ ಹೈ ಬೇ ಸೈತಾನ್ ತೂ ಇದರ್ಸೆ ನಿಕಲ್ ಜಾ’ ಅಂತ ನವಿಲುಗರಿ ನನ್ನ ತಲೆ ಮೇಲಿಟ್ಟ. ತಾತಾ ನಂಗೇನ್ ಆಗಿಲ್ಲ ಏನೋ ಅಪ್ಪ ಕನಸಲ್ಲಿ ಬಂದಿದ್ದ ಬಡಬಡಿಸುತ್ತಿದ್ದೆ ಅಷ್ಟೇ ಅಂತ ಪರಿಪರಿಯಾಗಿ ಹೇಳಿದೆ. ನಾ ಏನೇ ಹೇಳಿದರೂ ಅವರು ಕೇಳುವ ಮೂಡಿನಲ್ಲಿ ಇರಲಿಲ್ಲ. ಇವಳು ಬಂದು ಸೊರಾಬರಾ ಅಳುತ್ತಾ ‘ನಾ ಅಲ್ಲಿಗಿ ಹೋಗಬ್ಯಾಡ ಅಂದ್ರೆ ಹೋಗಿ ದೆವ್ವ ಹಿಡಿಸಿಕೊಂಡು ಬಂದಾನ ಇವ್ನು ಜಿಟ್ಟ್ಯಾ? ಅಂತ ಅಳತೊಡಗಿದಳು. ‘ಯಾರಮ್ಮ ನೀನು ತಲೆಗಿಲೆ ಕೆಟ್ಟತೆನ್ ಹೊರಗ ಕರಕೊಂಡು ಹೋಗಿ ಇಕೀನಾ’ ಅಂತ ತಾತಾ ಬೈದಗಾ ಅವಳು ಗಪ್ಪನಾದಳು. ಎಲ್ಲಾರು ಹೊರಗೆ ಹೋದರು. ‘ತಮ್ಮ ಅಂಜಿಕಾ ಬ್ಯಾಡಾ ನೀ, ನಾ ಏನು ಮಾಡಂಗಿಲ್ಲ. ನನಗಾ ನೀನೂ ಗೊತ್ತು ನಿಮ್ಮ ತಂದಿನೂ ಗೊತ್ತು ಬಾಳಾ ಚೋಲೋ ಮನುಷ ಇದ್ದ ದೇವರು ಒಮ್ಮೇಲೆ ಕರೆದುಕಂಡು ಬಿಟ್ಟ, ನಾವುನೂ ಒಂದಿನ ಹೋಗೊರೆ ಯಾಕ್ ಚಿಂತಿ ಮಾಡ್ತಿ. ಈ ಮಂದಿಗಿ ದೆವ್ವದ ದೆವ್ವ ಬಡಿದದಾ ನನ್ನೋಳಗೂ ಒಂದು ದೆವ್ವ ಆದ, ನಿನ್ನೋಳಗೂ ಆದ ಈ ಜಗತ್ತಿನ ಎಲ್ಲಾರೊಳಗೂ ಒಂದು ದೆವ್ವ ಆದ, ಆದ್ರ ಯಾರ್ಯರ್ನೋ ಕರಕಂಡು ಬಂದು ದೆವ್ವ ಬಿಡಿಸು ಅಂತರಾ ನಾ ಅವರ ಸಮಾಧಾನಕ ದೆವ್ವ ಬಿಡಿಸಿ ಕಳಿಸ್ತೀನಿ. ನಿನಗೂ ಅಂಥದೆ ದೆವ್ವ ಆದ ಏನೂ ಆಗಕಿಲ್ಲ ಮನಿಗೆ ಹೋಗ್ ಆರಾಮ್ ಇರು ಮಗನೆ ಎಂದು ತಲೆ ಮೇಲೆ ಕೈ ಇಟ್ಟ. ನಾನು ಒಂದು ಕ್ಷಣ ದಿಂಗ್ಭ್ರಾಂತನಾದೆ. ಹಾಗೆ ದಿಟ್ಟಿಸುತ್ತಾ ಕುಳಿತೆ ನನ್ನೊಳಗೆ ಎಂಥಹದೋ ಆದಮ್ಯ ಶಕ್ತಿ ವಕ್ಕಂತಾಯಿತು. ಇವರೆಲ್ಲಾ ಒಳಬಂದರು. ನಾನು ಹಾಗೆ ಕುಂತೆ ಇದ್ದೆ. ತಾತಾ ಏನೇನೋ ಮಂತ್ರ ಹೇಳಿ, ಊದಿನ ಕಡ್ಡಿಯ ಹಾದರ ನೀರಲ್ಲಿ ಹಾಕಿ ಕುಡಿಸಿ ಹಸಿರು ತಾಯಿತ ಕಟ್ಟಿ ಮೂರು ನಿಂಬೆ ಹಣ್ಣು ಕೊಟ್ಟು ಇದನ್ನು ನೀರಲ್ಲಿ ಹಾಕಿ ಕುಡಿಸಿ ಅಂತ ಕಳಿಸಿದ. ಇವಳು ಮನಿಗೆ ಬರುತ್ತಲೇ ವಟವಟ ಶುರುವಿಟ್ಟಿದ್ದಳು, ನಿಮ್ಮ ಅಪ್ಪ ಹಂಗೆ ನಿಮ್ಮ ವಂಶನೇ ಕೆಟ್ಟದು ನಿಮ್ಮ ಮನಿಗಿ ನನ್ನ ಕೊಡಬಾರದಿತ್ತು ಅಂತ ಬಾಯಿಗೆ ಬಂದಂಗೆ ಹೇಳತೊಡಗಿದಳು. ‘ಇವಾಗ ಏನ್ ಆಗಿದೆ ಅಂತಾ ವದರಕತಿದಿ ಎಲ್ಲಾ ನಿನ್ನಿಂದ ಆಗಿದ್ದು ಅಲ್ಲಿ ದೆವ್ವ ಇಲ್ಲ ನಮ್ಮಪ್ಪನ ಜೊತೆ ಮಾತನಾಡುತ್ತಿದ್ದೆ ಆ ಮುಲ್ಲಾರ ತಾತಾನಲ್ಲಿ ನನ್ನ ಕರಕಂಡು ಹೋಗಿ ಊರಮಂದಿ ಮುಂದಾ ನನ್ ಮಾನ ಮಾರ್ಯದೆ ಕಳಿದಿ’ಅಂದೆ. ಅವಳು ಜೋರ್ ಜೋರಾಗಿ ‘ನಿಮ್ಮಪ್ಪನ ಜೊತೆ ಮಾತಾಡ್ತಿದ್ದೆ ಅಂದ್ರೆ ಅದು ದೆವ್ವ ಅಲ್ವೇನು? ಅಂತ ಕಣ್ಣಗಲಿಸಿದಳು. ನನಗೆ ಉರಿದುಹೋಯಿತು. ‘ನಿಂಗೆ ಹೆಂಗ್ ಹೇಳೋದು ಅದು ಕನಸು ಕನಸಲ್ಲಿ ಅಪ್ಪ.. ಅಂತ ಹೇಳೋಕೆ ಹೋದೆ. ‘ಸಾಕು ಸಾಕು ಮುಚ್ಚು ಬಾಯಿ ಏನೂ ಹೇಳಬೇಡಾ ನಿನಗೆ ಹಿಡಿದ ದೆವ್ವ ಇನ್ನೂ ಬಿಟ್ಟಿಲ್ಲ. ಈ ಹಾಳಾದ ನಿಂಬೆಹಣ್ಣಿನ ರಸ ಕುಡಿದು ಸಾಯಿ ಅಂತ ನನ್ನ ಕೈಗೆ ಕುಟುಕಿದಳು. ನಾನು ಅಮಾಯಕ ಮುಖಹೊತ್ತು ಗ್ಲಾಸನ್ನು ಎತ್ತಿ ಗಟಗಟ ಕುಡಿಯತೊಡಗಿದೆ. ಕೊನೆಯ ಹನಿಯನ್ನು ಬಿಡದೆ ಕುಡಿದೆ. ಯಾಕೋ ತಲೆ ಗಿರ್ರ್ ಅಂತ ತಿರಗತೊಡಗಿತು ತಲೆಯಲ್ಲಿ ಸಾವಿರ ಬಿರುಗಾಳಿ ಎದ್ದಾಂಗಾಗಿ ದೊಪ್ಪನೆ ಕೆಳಗೆ ಬಿದ್ದೆ.

ಕಲೆ : ಕಂದನ್ ಜಿ. ಮಂಗಳೂರು

ಮುದಿರಾಜ್ ಬಾಣದ್

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಗುಡದಿನ್ನಿಯಲ್ಲಿ ಜನಿಸಿದ ಮುದಿರಾಜ್ ಬಾಣದ್ ಅವರು ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ರಾಯಚೂರಿನಲ್ಲಿ ಅಂಚೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ 2011ರಲ್ಲಿ ಮತ್ತು 2019 (ಹೇನು ಕತೆಗೆ)ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕತಾಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ.

 

More About Author